ನಾಳೆ ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಇಲೆವೆನ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಫೈನಲ್ ಪಂದ್ಯ ನಡೆಯಲಿದೆ. 2025 ರ ಫೈನಲ್ ಕದನದಲ್ಲಿ RCB ತಂಡ ಗೆದ್ದು ಮೊದಲ ಬಾರಿಗೆ ಕಪ್ ಪಡೆಯಲಿ ಅನ್ನೋದು ಕರುನಾಡಿನ ಜನರ ಆಶಯ. ಇದಕ್ಕಾಗಿ ಈಗಾಗಲೇ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಆರ್ಸಿಬಿ ಫೈನಲ್ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟಿನ್ಗಳಲ್ಲೂ ಉಚಿತವಾಗಿ ಹೋಳಿಗೆ ಊಟ ನೀಡುವುದಾಗಿ ಮೈಸೂರಿನಲ್ಲಿ ಆರ್ಸಿಬಿ ಅಭಿಮಾನಿ ಬಸವರಾಜ ಬಸಪ್ಪ ಎಂಬುವವರು ಘೋಷಣೆ ಮಾಡಿದ್ದಾರೆ. ಗನ್ ಹೌಸ್ ವೃತ್ತದಲ್ಲಿ ಈಗಾಗಲೇ ಉಚಿತವಾಗಿ ಹೋಳಿಗೆ ಊಟ ಹಂಚಿಕೆ ಮಾಡಲಾಗಿದೆ. ನಾಳೆ ಮೈಸೂರಿನ 16 ಇಂದಿರಾ ಕ್ಯಾಂಟಿನ್ಗಳಲ್ಲಿ ಉಚಿತ ಹೋಳಿಗೆ ಊಟ ಹಾಕಿಸುವಂತೆ ಸಿಎಂ ಸಿದ್ದರಾಮಯ್ಯಗೆ ಆರ್ಸಿಬಿ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.
ನಾಳೆ ಐಪಿಎಲ್ ಫೈನಲ್ ಪಂದ್ಯಾವಳಿ ಹಿನ್ನೆಲೆ, ಆರ್ಸಿಬಿ ಗೆಲ್ಲಲಿ ಎಂದು ಎಲ್ಕೆಜಿ ಓದುವ ಬಾಲಕ ವಿಶೇಷ ಪೂಜೆ ಮಾಡಿದ್ದಾನೆ. ಗಂಗಾವತಿಯ ಚೈತನ್ಯ ಟೆಕ್ನೋ ಶಾಲೆ ವಿದ್ಯಾರ್ಥಿ ಕೆ ಸಮೃದ್ಧ ಎಂಬ ಬಾಲಕ ಅಂಜನೇಯನಿಗೆ ಪೂಜೆ ಮಾಡಿಸಿದ್ದಾರೆ. ಪಾಲಕರೊಂದಿಗೆ ಬೆಟ್ಟ ಏರಿ ಆರ್ಸಿಬಿ ಗೆಲುವಿಗಾಗಿ ಪೂಜೆ ಮಾಡಿದ್ದಾನೆ.
ನಾಳೆ ಐಪಿಎಲ್ ಫೈನಲ್ ಪಂದ್ಯ ಹಿನ್ನೆಲೆ, ಆರ್ಸಿಬಿಗೆ ಡಿಸಿಎಂ ಡಿಕೆ ಶಿವಕುಮಾರ್ ಶುಭ ಕೋರಿದ್ದಾರೆ. ನಾಳೆ ಗುಜರಾತ್ನಲ್ಲಿ ಆರ್ಸಿಬಿ ಪಂದ್ಯ ಗೆದ್ದೆ ಗೆಲ್ಲುತ್ತದೆ.. ಅವರು ಗೆದ್ದು ಇಡೀ ರಾಜ್ಯದ ಮರ್ಯಾದೆ ಉಳಿಸಲಿ.. ನನಗೆ ಗೆದ್ದೆ ಗೆಲ್ತಾರೆ ಎಂಬ ವಿಶ್ವಾಸವಿದೆ.. ಆರ್ಸಿಬಿಗೆ ಶುಭವಾಗಲಿ ಎಂದಿದ್ದಾರೆ.
ಇನ್ನು ಮೈಸೂರಿನಲ್ಲಿ ಮಾತನಾಡಿರುವ ಹೋರಾಟಗಾರ ವಾಟಾಳ್ ನಾಗರಾಜ್, ಈ ಬಾರಿ ಆರ್ಸಿಬಿ ಕಪ್ ಗೆಲ್ಲಲಿದೆ. ಆರ್ಸಿಬಿ ಕಪ್ ಗೆಲ್ಲಲ್ಲೇಬೇಕು.. ಇದು ನಮ್ಮೆಲ್ಲರ ಶುಭ ಹಾರೈಕೆ ಎಂದಿದ್ದಾರೆ. ಇನ್ನು ವಿಪಕ್ಷ ನಾಯಕ ಆರ್. ಅಶೋಕ್, ಸಚಿವ ಶಿವರಾಜ್ ತಂಗಡಗಿ, ಅರವಿಂದ್ ಬೆಲ್ಲದ್, ಗಣಿಗ ರವಿಕುಮಾರ್ ಕೂಡ ಶುಭ ಹಾರೈಸಿದ್ದಾರೆ.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ RCB ತಂಡ ಈ ಬಾರಿ ನೇರವಾಗಿಯೇ ಫೈನಲ್ ಪ್ರವೇಶ ಮಾಡಿತ್ತು. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿಯಾಗಿಯೇ ಗೆದ್ದು ಬೀಗಿರುವ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡ ಫೈನಲ್ಗೆ ಅರ್ಹತೆ ಪಡೆದಿದೆ. ನಾಳೆ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ RCB ಹಾಗೂ ಪಂಜಾಬ್ ಮುಖಾಮುಖಿಯಾಗಲಿದ್ದ, ಬರೋಬ್ಬರಿ 11 ವರ್ಷದ ಬಳಿಕ ಪಂಜಾಬ್ ತಂಡ ಫೈನಲ್ ಪ್ರವೇಶಿಸಿದೆ.

ಐಪಿಎಲ್ ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಬೃಹತ್ ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ. 24 ಅಡಿ ಎತ್ತರ.. 60 ಅಡಿ ಉದ್ದದ LED ವಾಲ್ ನಲ್ಲಿ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಜೊತೆಗೆ 10 ರಿಂದ 15 ಅಡಿಯ 2 ಪ್ರತ್ಯೇಕ ಸ್ಕ್ರೀನ್ಗಳನ್ನ ಹಾಕಿದ್ದಾರೆ. ನಾಗರಭಾವಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಎಲ್ಇಡಿ ವಾಲ್ ರೆಡಿ ಮಾಡಿದ್ದು, ಒಟ್ಟು 25 ಸಾವಿರ ಪಾಸ್ ಗಳನ್ನು ಈಗಾಗಲೇ ಉಚಿತವಾಗಿ ಆಯೋಜಕರು ನೀಡಿದ್ದಾರೆ. ಒಟ್ಟು 40 ಸಾವಿರ ಜನರಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ನಾಳೆ RCB ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಫೈನಲ್ ಪಂದ್ಯ ನಡೆಯಲಿದ್ದು, ಈ ಬಾರಿ RCB ಕಪ್ ಗೆದ್ದರೇ ಒನ್ ಡೇ ಫ್ರೀ ಚಾಟ್ಸ್ ವಿತರಣೆ ಮಾಡುವುದಾಗಿ ಚಾಟ್ಸ್ ಅಂಗಡಿ ಮಾಲೀಕ ಘೋಷಣೆ ಮಾಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮಸಾಲ ಪುರಿ, ಪಾನಿ ಪುರಿ, ಬೇಲ್ ಪುರಿ ಸಿಗಲಿದೆ. ಈ ಸಲ ಕಪ್ ನಮ್ದು.. ಒನ್ ಡೇ ಪಾನಿಪುರಿ ನಿಮ್ದು ಅಂತ ಅನಿಲ್ ಚಾಟ್ಸ್ ಸೆಂಟರ್‌ನ ಮಾಲೀಕ ಬೋರ್ಡ್ ಹಾಕಿದ್ದಾರೆ. RCB ಕಪ್ ಗೆದ್ರೆ ಜೂನ್ 4ರಂದು ಸಂಜೆ ಫ್ರೀ ಚಾಟ್ಸ್ ಸಿಗಲಿದೆ.
