ನೀರಜ್ ಚೋಪ್ರಾ ಅವರ ಐತಿಹಾಸಿಕ ಚಿನ್ನದ ಪದಕದೊಂದಿಗೆ ಟೋಕಿಯೋ ಒಲಿಂಪಿಕ್ಸ್’ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಹಲವು ಸಾಧನೆಗಳಿಗೆ ಸಾಕ್ಷಿಯಾಗಿರುವ ಈ ಬಾರಿಯ ಒಲಿಂಪಿಕ್ಸ್ ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ತೋರುವತ್ತ ಗಮನ ಹರಿಸಲು ದಾರಿ ಮಾಡಿಕೊಟ್ಟಿದೆ.
ಈ ಬಾರಿಯ ಒಲಿಂಪಿಕ್ಸ್’ನಲ್ಲಿ ಭಾರತ ತನ್ನ ಸರ್ವಶ್ರೇಷ್ಟ ಪ್ರದರ್ಶನವನ್ನು ನೀಡಿದೆ. ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕದೊಂದಿಗೆ ಭಾರತೀಯ ಆಟಗಾರರು ಒಟ್ಟು ಏಳು ಪದಕಗಳನ್ನು ಗೆದ್ದಿದ್ದಾರೆ. ಇದು ಈವರೆಗಿನ ಗರಿಷ್ಠ ಸಾಧನೆ. ಇದಕ್ಕೂ ಮುಂಚಿನ ರಿಯೋ ಒಲಿಂಪಿಕ್ಸ್ 2016ರಲ್ಲಿ ಭಾರತ ಕೇವಲ ಎರಡು ಪದಕಗಳನ್ನು ಜಯಿಸಿತ್ತು. 2012ರ ಲಂಡನ್ ಒಲಿಂಪಿಕ್ಸ್’ನಲ್ಲಿ ಆರು ಪದಕಗಳನ್ನು ಗೆದ್ದಿರುವುದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಟೋಕಿಯೋ ಒಲಿಂಪಿಕ್ಸ್’ನಲ್ಲಿ ಭಾರತ ಈ ದಾಖಲೆಯನ್ನು ಮುರಿದಿದೆ.

ಟೋಕಿಯೋ ಒಲಿಂಪಿಕ್ಸ್’ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಏಕೈಕ ಚಿನ್ನದ ಪದಕ ಅಡಗಿತ್ತು. ಭಾರತದ ಚಿನ್ನದ ಆಸೆಯ ಕೊನೆಯ ಭರವಸೆಯಾಗಿದ್ದ ನೀರಜ್ ಚೋಪ್ರಾ ಆ ಭರವಸೆ ಹುಸಿಯಾಗಲು ಬಿಡಲಿಲ್ಲ. ಅಥ್ಲೆಟಿಕ್ಸ್’ನಲ್ಲಿ ಪದಕ ಪಡೆಯುವುದು ಭಾರತೀಯ ಕ್ರೀಡಾಪಟುಗಳ ಕನಸಾಗಿತ್ತು. ಪಿ ಟಿ ಉಷಾ, ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಖಾ ಸಿಂಗ್ ಅವರು ಪ್ರಯತ್ನಿಸಿದರಾದರೂ ಯಶಸ್ವಿಯಾಗಿರಲಿಲ್ಲ. ಇವರೆಲ್ಲರ ಕನಸನ್ನು ನನಸು ಮಾಡಿದ್ದು ನೀರಜ್ ಚೋಪ್ರ.
ತಮ್ಮ ಒಲಿಂಪಿಕ್ಸ್ ಜಯವನ್ನು ನೀರಜ್ ಚೋಪ್ರ ಮಿಲ್ಖಾ ಸಿಂಗ್ ಅವರಿಗೆ ಅರ್ಪಿಸಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್’ನಲ್ಲಿ ಅಭಿನವ್ ಬಿಂದ್ರಾ ಅವರು ಶೂಟಿಂಗ್ ವಿಭಾಗದಲ್ಲಿ ಪಡೆದ ಚಿನ್ನದ ಪದಕ ಭಾರತದ ಕೊನೆಯ ಚಿನ್ನದ ಪದಕವಾಗಿತ್ತು. ಆ ನಂತರ ಯಾವುದೇ ವಿಭಾಗದಲ್ಲಿ ಚಿನ್ನ ಪಡೆಯಲು ಭಾರತ ವಿಫಲವಾಗಿತ್ತು. ಟೋಕಿಯೋ ಒಲಿಂಪಿಕ್ಸ್’ನಲ್ಲಿ ಚಿನ್ನದ ಪದಕದ ಬರಗಾಲವನ್ನು ನೀರಜ್ ಅವರು ನೀಗಿಸಿದ್ದಾರೆ.
ಭಾರತದಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಕ್ರೀಡೆ ಗಾಲ್ಫ್. ಒಲಿಂಪಿಕ್ಸ್ ಕ್ರೀಡಾಕೂಟದ ಗಾಲ್ಫ್ ವಿಭಾಗದಲ್ಲಿ ಭಾರತದ ಪ್ರತಿನಿಧಿತ್ವವನ್ನು ಗಮನಿಸುವವರಿರಲಿಲ್ಲ. ಆದರೆ, ಅದಿತಿ ಅಶೋಕ್ ಅವರು ಸಂಪೂರ್ಣ ವಿಶ್ವವೇ ಭಾರತವನ್ನು ಗುರುತಿಸುವಂತೆ ಮಾಡಿದರು. ಕೂದಲೆಳೆಯ ಅಂತರದಲ್ಲಿ ಪದಕ ವಂಚಿತರಾದ ಅದಿತಿ ಅಶೋಕ್ ಅವರು, ಗಾಲ್ಫ್ ವಿಭಾಗದಲ್ಲಿ ಭಾರತದ ಈವರೆಗಿನ ಸರ್ವಶ್ರೇಷ್ಟ ಸಾಧನೆಯನ್ನು ದಾಖಲಿಸಿದ್ದಾರೆ. ಕೊನೆಯ ಹಂತದವರೆಗೂ ಬೆಳ್ಳಿ ಪದಕಕ್ಕೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಅದಿತಿ, ಕೊನೆಯ ಕ್ಷಣದಲ್ಲಿ ನಾಲ್ಕನೇ ಸ್ಥಾನಕ್ಕೆ ಸಮಾಧಾನ ಪಡಬೇಕಾಯಿತು.

4×400 ರಿಲೇಯಲ್ಲಿ ಭಾರತವು ಏಷ್ಯಾ ಮಟ್ಟದ ದಾಖಲೆಯನ್ನು ಬರೆಯಿತು. ಭಾರತದ ಮುಹಮ್ಮದ್ ಅನಾಸ್ ಯಾಹಿಯಾ, ನೋಹಾ ನಿರ್ಮಲ್ ಟಾಮ್, ಅರೋಕಿಯಾ ರಾಜಿವ್ ಮತ್ತು ಅಮೋಜ್ ಜೇಕಬ್ ಅವರ ತಂಡವು 3:00:25 ನಿಮಿಷದಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಖ ಏಷ್ಯಾ ದಾಖಲೆಯನ್ನು ಬರೆದು ಸಂಚಲನ ಮೂಡಿಸಿತ್ತು. ಆದರೆ, ಒಲಿಂಪಿಕ್ಸ್ ಪೈನಲ್ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ತಂಡ ವಿಫಲವಾಗಿತ್ತು.
ದೇಶದಲ್ಲಿ ಸಂಚಲನ ಮೂಡಿಸಿದ ಮತ್ತೊಂದು ಕ್ರೀಡೆಯೆಂದರೆ ಅದು ಹಾಕಿ. ಒಂದು ಕಾಲದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡವು ಸಾರ್ವಭೌಮತೆಯನ್ನು ಸಾಧಿಸಿತ್ತು. ತದನಂತರ ಆಟದಲ್ಲಿ ತನ್ನ ಮೊಣಚು ಕಳೆದುಕೊಮಡಿದ್ದ ತಂಡವು ಈ ಬಾರಿಯ ಪಂದ್ಯಾವಳಿಯಲ್ಲಿ ಮಹತ್ತರವಾದ ಸಾಧನೆ ಮಾಡಿದೆ.
ಹಾಖಿಯ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಐತಿಹಾಸಿಕ ಸಾಧನೆಗೆ ಭಾರತ ಸಾಕ್ಷಿಯಾಗಿದೆ. ಹಾಕಿಯಲ್ಲಿ ಭಾರತ ಪದಕವನ್ನು ಪಡೆಯಲು ಬರೋಬ್ಬರಿ 41 ವರ್ಷ ಕಾದಿತ್ತು. ಈ ಬಾರಿ ಕಂಚಿನ ಪದಕ ಗೆಲ್ಲುವ ಮೂಲಕ ಪುರುಷರ ಹಾಕಿ ತಂಡವು ಸಾಧನೆ ಮೆರೆದಿದೆ. ಮಹಿಳೆಯರ ವಿಭಾಗದಲ್ಲಿ ಮೊತ್ತಮೊದಲ ಬಾರಿಗೆ ಸೆಮಿಫೈನಲ್ ಸುತ್ತಿಗೆ ಏರಿದ ಸಾಧನೆಯೂ ಇದೇ ವರ್ಷ ನಡೆದಿದೆ. ಸಂಪೂರ್ಣ ದೇಶವೇ ಭಾರತದ ಎರಡೂ ಹಾಕಿ ತಂಡಗಳ ಸಾಧನೆಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದೆ.
ಇನ್ನು ಈ ಬಾರಿಯ ಒಲಿಂಪಿಕ್ಸ್’ನಲ್ಲಿ ಕಂಚಿಗೆ ಮುತ್ತಿಟ್ಟ ಪಿ ವಿ ಸಿಂಧು, ಒಲಿಂಪಿಕ್ಸ್’ನಲ್ಲಿ ಕ್ರೀಡಾಕೂಟದಲ್ಲಿ ಎರಡು ಪದಕ ಪಡೆದ ಏಕೈಕ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಪುರುಷ ಮತ್ತು ಮಹಿಳೆಯರ ವಿಭಾಗ ಸೇರಿದರೆ, ಎರಡು ಒಲಿಂಪಿಕ್ಸ್ ಪದಕ ಪಡೆದ ಭಾರತದ ಎರಡನೇ ಕ್ರೀಡಾಪಟು ಸಿಂಧು. ಈ ಹಿಂದೆ ಕುಸ್ತಿಪಟು ಸುಶೀಲ್ ಕುಮಾರ್ ಅವರು ಈ ಸಾಧನೆ ಮಾಡಿದ್ದರು. ಇದರೊಂದಿಗೆ, ಸತತ ಎರಡು ಒಲಿಂಪಿಕ್ಸ್’ನಲ್ಲಿ ಪದಕ ಪಡೆದ ವಿಶ್ವದ ನಾಲ್ಕನೇ ಸಿಂಗಲ್ಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಈ ಬಾರಿಯ ಒಲಿಂಪಿಕ್ಸ್’ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ಭರವಸೆಯ ಆಟಗಾರರಾದ ಮೇರಿ ಕೋಮ್ ಹಾಗೂ ದೀಪಕ್ ಪೂನಿಯಾ ಅವರು ಬರಿಗೈಯಲ್ಲಿ ಮರಳಿದ್ದು ನಿಜಕ್ಕೂ ದೇಶದ ಕ್ರೀಡಾಭಿಮಾನಿಗಳಲ್ಲಿ ನೋವು ತಂದಿದೆ.






