ನವದೆಹಲಿ:
ದಿನನಿತ್ಯ ಬಳಕೆಯ ಸರಳ ವಸ್ತುವಾದ ಟಾಯ್ಲೆಟ್ ಕ್ಲೀನರ್ ಬಾಟಲಿ ಇದೀಗ ದೊಡ್ಡ ಕಾನೂನು ವಿವಾದಕ್ಕೆ ಕಾರಣವಾಗಿದ್ದು, ಜನಪ್ರಿಯ ಬ್ರ್ಯಾಂಡ್‌ಗಳಾದ ಹಾರ್ಪಿಕ್ (Harpic) ಮತ್ತು ಗೊದ್ರೇಜ್ (Godrej) ನಡುವೆ ತೀವ್ರ ಹಕ್ಕುಸ್ವಾಮ್ಯ ಸಮರ ನಡೆಯುತ್ತಿದೆ. ಈ ವಿವಾದ ಹೈಕೋರ್ಟ್ ಹಂತವನ್ನು ದಾಟಿ ಈಗ ಸುಪ್ರೀಂ ಕೋರ್ಟ್ ಅಂಗಳಕ್ಕೆ ತಲುಪಿದೆ.

ಹಾರ್ಪಿಕ್ ಕಂಪನಿ ತನ್ನ ಟಾಯ್ಲೆಟ್ ಕ್ಲೀನರ್ ಬಾಟಲಿಯ ವಿಶಿಷ್ಟ ವಿನ್ಯಾಸವನ್ನು ತನ್ನ ಬ್ರ್ಯಾಂಡ್ ಗುರುತು ಎಂದು ವಾದಿಸುತ್ತಿದೆ. ವಿಶೇಷವಾಗಿ ಬಾಗಿದ ಕುತ್ತಿಗೆಯ ಆಕಾರ ಹಾಗೂ ಕೆಂಪು ಮುಚ್ಚಳ ಹೊಂದಿರುವ ಈ ಬಾಟಲಿ ವಿನ್ಯಾಸವನ್ನು 1984ರಿಂದ ಬಳಸಿ ಬರುತ್ತಿದ್ದು, 2002ರಲ್ಲಿ ಅಧಿಕೃತವಾಗಿ ನೋಂದಣಿ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಇದೀಗ ಗೋದ್ರೇಜ್ ಸಂಸ್ಥೆ ‘ಸ್ಪಿಕ್’ ಹೆಸರಿನಲ್ಲಿ ಅದೇ ರೀತಿಯ ಬಾಟಲಿ ವಿನ್ಯಾಸ ಬಳಸಿ ಉತ್ಪನ್ನವನ್ನು ಮಾರುಕಟ್ಟೆಗೆ ತಂದಿರುವುದರಿಂದ ಗ್ರಾಹಕರಲ್ಲಿ ಗೊಂದಲ ಉಂಟಾಗುತ್ತಿದೆ ಎಂದು ಹಾರ್ಪಿಕ್ ಆಕ್ಷೇಪಿಸಿದೆ.

ಇದಕ್ಕೆ ಪ್ರತಿಯಾಗಿ ಗೋದ್ರೇಜ್ ಕಂಪನಿ, ಹಾರ್ಪಿಕ್‌ನ ವಿನ್ಯಾಸ ನೋಂದಣಿಯ ಅವಧಿ ಈಗಾಗಲೇ ಮುಗಿದಿದ್ದು, ಆ ವಿನ್ಯಾಸದ ಮೇಲೆ ಕಂಪನಿಗೆ ಏಕಸ್ವಾಮ್ಯ ಉಳಿದಿಲ್ಲ ಎಂದು ವಾದಿಸಿದೆ. ಹೀಗಾಗಿ ಅದೇ ವಿನ್ಯಾಸವನ್ನು ಬಳಸುವುದರಲ್ಲಿ ಯಾವುದೇ ಕಾನೂನು ಉಲ್ಲಂಘನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.ಈ ಪ್ರಕರಣದ ಮೂಲಕ ಟ್ರೇಡ್‌ಮಾರ್ಕ್ ಮತ್ತು ವಿನ್ಯಾಸ ಹಕ್ಕುಗಳ ಮಹತ್ವ ಮತ್ತೆ ಬೆಳಕಿಗೆ ಬಂದಿದೆ.

ಟ್ರೇಡ್‌ಮಾರ್ಕ್ ಕಾನೂನುಗಳು ಬ್ರ್ಯಾಂಡ್ ಹೆಸರು, ಲೋಗೋ ಮತ್ತು ವಿಶಿಷ್ಟ ಗುರುತುಗಳನ್ನು ರಕ್ಷಿಸುತ್ತವೆ. ನೋಂದಣಿ ಮಾಡಿದ ನಂತರ ಸಾಮಾನ್ಯವಾಗಿ 10 ವರ್ಷಗಳವರೆಗೆ ಮಾನ್ಯತೆ ಇರುತ್ತದೆ. ವಿನ್ಯಾಸ ಹಕ್ಕುಗಳು ಉತ್ಪನ್ನದ ಹೊರಗಿನ ಆಕಾರ ಮತ್ತು ರೂಪವನ್ನು ರಕ್ಷಿಸುತ್ತವೆ, ಇದರ ಮಾನ್ಯತೆ ಗರಿಷ್ಠ 15 ವರ್ಷಗಳವರೆಗೆ ಮಾತ್ರ ಇರುತ್ತದೆ.ಇನ್ನೊಂದೆಡೆ, ಕಾಪಿರೈಟ್ ಕಾನೂನುಗಳು ಸೃಜನಾತ್ಮಕ ಕೃತಿಗಳನ್ನು ರಕ್ಷಿಸುವುದಕ್ಕೆ ಬಳಸಲಾಗುತ್ತದೆ ಮತ್ತು ಕೃತಿ ಸೃಷ್ಟಿಯಾದ ಕ್ಷಣದಿಂದಲೇ ಜಾರಿಯಾಗುತ್ತದೆ.ಸಣ್ಣದಾಗಿ ಕಾಣುವ ಟಾಯ್ಲೆಟ್ ಕ್ಲೀನರ್ ಬಾಟಲಿಯ ವಿನ್ಯಾಸವೇ ಇಷ್ಟೊಂದು ದೊಡ್ಡ ಕಾನೂನು ಹೋರಾಟಕ್ಕೆ ಕಾರಣವಾಗಿರುವುದು, ವ್ಯಾಪಾರದಲ್ಲಿ ಬ್ರ್ಯಾಂಡ್ ನೋಂದಣಿ ಮತ್ತು ಬೌದ್ಧಿಕ ಹಕ್ಕುಗಳ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳಿದೆ.






