ಭಾರತದ ಮುಖ್ಯ ನ್ಯಾಯಾಧೀಶರಾದ ಎನ್.ವಿ. ರಮಣ ಅವರು ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾಲಯದ ಗಣ್ಯ ಹಳೆಯ ವಿದ್ಯಾರ್ಥಿಯಾದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿ, ಗ್ರಂಥಾಲಯ ಕಟ್ಟಡದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ರಮಣ ಮಾತನಾಡಿ, “ಬಹಳ ವರ್ಷಗಳ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಮಹಾನ್ ಕಲಿಕಾ ಪೀಠದ ಪಡಸಾಲೆಯಲ್ಲಿ ನಡೆದಿದ್ದಾರೆ. ಇಂದು ಅವರ ಹಾದಿಯಲ್ಲಿ ನಡೆಯುವ ಗೌರವ ನನಗೆ ಸಿಕ್ಕಿದೆ. ಇದು ನನಗೆ ಭಾವನಾತ್ಮಕ ಕ್ಷಣ. ನನ್ನದು ಅಂತಹ ಅನುಕೂಲಸ್ಥ ಹಿನ್ನೆಲೆಯೇನಲ್ಲ. ನಾನು ಒಬ್ಬ ಸಾಮಾನ್ಯ ರೈತನ ಮಗ, ವಿಶ್ವವಿದ್ಯಾನಿಲಯ ಶಿಕ್ಷಣವನ್ನು ಪಡೆದ ಕುಟುಂಬದಲ್ಲಿ ನಾನು ಮೊದಲಿಗ, ಇಂದು ನಾನು ಇಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನಿಂತಿದ್ದೇನೆ, ಇದಕ್ಕೆ ಮುಖ್ಯ ಕಾರಣ ಡಾ.ಅಂಬೇಡ್ಕರ್ ರವರು ಬರೆದ ಪ್ರಗತಿಪರ ಸಂವಿಧಾನ, ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ದಾರ್ಶನಿಕರಿಗೆ ಎಂದೆಂದಿಗೂ ಋಣಿಯಾಗಿರುತ್ತೇವೆ ಎಂದು ಹೇಳಿದ್ದಾರೆ.
ಡಾ.ಅಂಬೇಡ್ಕರ್ ಸೇರಿದಂತೆ ಅನೇಕ ವಿಶ್ವ ನಾಯಕರನ್ನು ರೂಪಿಸಿದ ಈ ಸಂಸ್ಥೆಯಲ್ಲಿ ಇಂದು ಇಲ್ಲಿ ನಿಂತಿರುವುದು ನನ್ನ ಗೌರವ. ಅವರು ಆಧುನಿಕ ಭಾರತದ ಸಂಸ್ಥಾಪಕರಲ್ಲಿ ಒಬ್ಬರು. ಅವರ ಜೀವನವು ಭಾರತೀಯರ ತಲೆಮಾರುಗಳಿಗೆ ಗವರವ, ಘನತೆ ತಂದುಕೊಟ್ಟಿದೆ ಎಂದು ಹೇಳಿದ್ದಾರೆ.
ನನ್ನ ದೇಶದ ಇದುವರೆಗಿನ 75 ವರ್ಷಗಳ ಸುದೀರ್ಘ ಪಯಣ ಪ್ರಜಾಪ್ರಭುತ್ವದ ಶಕ್ತಿಗೆ ಸಾಕ್ಷಿಯಾಗಿದೆ. ಜನರು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಜನರು ಪ್ರಜಾಪ್ರಭುತ್ವದ ಮಹತ್ವವನ್ನು ಅರಿತುಕೊಳ್ಳುವುದು ಅತ್ಯಗತ್ಯ. ನಿಮ್ಮ ಸಕ್ರಿಯ ಭಾಗವಹಿಸುವಿಕೆಯಿಂದ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಮತ್ತು ಬಲಪಡಿಸಲು ಸಾಧ್ಯ. ನಿಜವಾದ ಪ್ರಜಾಸತ್ತಾತ್ಮಕ ವ್ಯವಸ್ಥೆ ಮಾತ್ರ ಜಗತ್ತಿನಲ್ಲಿ ಶಾಶ್ವತ ಶಾಂತಿಗೆ ಅಡಿಪಾಯವಾಗಬಹುದು ಎಂದು ಹೇಳಿದ್ದಾರೆ.