ತಂಬಾಕು ಸೇವನೆ ಮತ್ತು ಕೋವಿಡ್ ಸೋಂಕು: ವ್ಯಕ್ತಿಯ ಮೇಲಾಗುವ ಪರಿಣಾಮ

ಮೇ 31 ವಿಶ್ವ ತಂಬಾಕು ರಹಿತ ದಿನ. ಪ್ರತಿ ವರ್ಷ ವಿಶ್ವದಾದ್ಯಂತ ಈ ದಿನದಂದು ತಂಬಾಕು ಸೇವನೆಯಿಂದಾಗುವ ಅಪಾಯಗಳನ್ನು ಜನರಿಗೆ ತಿಳಿಹೇಳಲಾಗುತ್ತದೆ. ಕೋವಿಡ್ ಮೊದಲ ಬಾರಿಗೆ ಪ್ರಪಂಚಕ್ಕೆ ಕಾಲಿಟ್ಟಾಗ ಮದ್ಯಪಾನ, ಧೂಮಪಾನ ಮಾಡುವುದರಿಂದ ವೈರಸ್ ತಾಗುವುದಿಲ್ಲ ಎಂಬ ಮೌಢ್ಯತೆ ಜನರಲ್ಲಿ ಹಬ್ಬಿತ್ತು. ಇದಕ್ಕೆ ಪುಷ್ಟಿಯಾಗಿ ಯೂರೋಪಿಯನ್ ರೆಸ್ಪಿರೇಟರಿ ಜರ್ನಲ್ ಎಂಬ ನಿಯತಕಾಲಿಕೆಯು 2020 ಜುಲೈನಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ಧೂಮಪಾನಿಗಳು ಕೋವಿಡ್ ಸೋಂಕಿಗೆ ಒಳಗಾಗುವುದು ಕಡಿಮೆ ಒಂದೊಮ್ಮೆ ಸೋಂಕು ತಗುಲಿದರೆ ಸಾವಾಗುವುದು ಕಡಿಮೆ.

ಈ ವರದಿ ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸಿತ್ತು. ಯಾಕೆಂದರೆ ಧೂಪಮಾನ ಮಾಡುವುದರಿಂದ ಉಸಿರಾಟದ ಸಮಸ್ಯೆ, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಬರುವುದು ಹೆಚ್ಚು. ಧೂಮಪಾನ ವ್ಯಸನಿಗಳಿಗೆ ಕೋವಿಡ್ ತಗುಲಿದರೆ ಹೆಚ್ಚು ಸಮಸ್ಯೆ ಉಂಟಾಗುತ್ತದೆಂದು ವೈದ್ಯಲೋಕವು ನಂಬಿತ್ತು. ಆದರೆ ಯೂರೋಪಿಯನ್ ರೆಸ್ಪಿರೇಟರಿ ಜರ್ನಲ್ ನ ವರದಿ ಅಚ್ಚರಿ ಮೂಡಿಸಿತ್ತು. ಜೊತೆಗೆ ವಿವಾದಕ್ಕೂ ಗುರಿಯಾಗಿತ್ತು. ಮತ್ತೆ ಅದೇ ನಿಯತಕಾಲಿಕೆ ತಪ್ಪೊಪ್ಪಿಗೆ ಲೇಖನ ಪ್ರಕಟಿಸಿತ್ತು. ಅದು ಜನರ ಗಮನ ಸೆಳೆದಿದ್ದು ಕಡಿಮೆಯೇ.

WHO ನಿಂದ ಅಭಿಯಾನ ಆರಂಭ
ಕೋವಿಡ್ ಸಾಂಕ್ರಾಮಿಕ ರೋಗದಿಂದ ಲಕ್ಷಾಂತರ ಜನರು ತಂಬಾಕು ಬಳಕೆಯನ್ನು ತ್ಯಜಿಸಲು ಬಯಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ವಿಶೇಷ ಅಭಿಯಾನ ಆರಂಭಿಸಿದ್ದು, ವಿಶ್ವದಾದ್ಯಂತ ಶೇಕಡಾ 60 ರಷ್ಟು ಜನ ತಂಬಾಕು ಸೇವನೆ ತಿರಸ್ಕರಿಸಿದ್ದು, ಇವರಲ್ಲಿ 30 ರಷ್ಟು ಜನ ಮಾತ್ರ ಉತ್ತಮ ಗುಣಮಟ್ಟದ ತಂಬಾಕು ಸೇವೆಸುತ್ತಿದ್ದರೆಂದು WHO ತಿಳಿಸಿದೆ. ಈ ಬಾರಿ ತ್ಯಜಿಸಲು ಬದ್ಧರಾಗಿರಿ (Commit to Quit) ಎಂಬ ಘೋಷವಾಕ್ಯದೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಅಭಿಯಾನ ಪ್ರಾರಂಭಿಸಿದೆ. ಇದು 100 ಮಿಲಿಯನ್ ಜನರು ತಂಬಾಕು ತ್ಯಜಿಸಲು ಸಹಾಯ ಮಾಡುವ ಉದ್ದೇಶ, ತಂಬಾಕು ನಿಯಂತ್ರಣಕ್ಕೆ ಉತ್ತೇಜನ, ಉತ್ತಮ ಆರೋಗ್ಯಕರ ಪರಿಸ್ಥಿತಿ ಸೃಷ್ಟಿಗೆ ಸಹಾಯಕವಾಗಿದೆ.

ಸರ್ಕಾರದ ಆದಾಯದ ಮೂಲ
ತಂಬಾಕು ಯುಕ್ತ ವಸ್ತುಗಳ ಪ್ಯಾಕೆಟ್ ಮೇಲೆ ಇದು ಆರೋಗ್ಯಕ್ಕೆ ಹಾನಿಕಾರ. ಸೇವನೆಯಿಂದ ಉಸಿರಾಟ, ಹೃದಯ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಉಲ್ಬಣಗೊಂಡು ಸಾವು ಸಂಭವಿಸುವ ಸಾಧ್ಯತೆ ಹೆಚ್ಚು ಎಂಬ ಸಂದೇಶವಿದ್ದರು, ಬಳಕೆಯಾಗುವುದು ತಪ್ಪಿಲ್ಲ, ಬೊಕ್ಕಸ ತುಂಬುವ ಸಲುವಾಗಿ ಸರ್ಕಾರ ಬೆಂಬಲಿಸುವುದು ತಪ್ಪಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಕರೋನಾ ಮಧ್ಯೆಯೂ ರಾಜಸ್ಥಾನ ಸರ್ಕಾರ ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಿಸಲು ನಿರ್ಧರಿಸಿದ್ದು, ತಂಬಾಕು ಉತ್ಪನ್ನಗಳ (Tobacco Products) ಮೇಲೆ ಸಂಚಾರ ಶುಲ್ಕ ವಿಧಿಸುವ ಮೂಲಕ ಸುಮಾರು 400 ಕೋಟಿಗಳಿಸುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ. ಕರೋನಾ ಲಾಕ್ಡೌನಿಂದಾಗಿ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಇದರಿಂದ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ತಂಬಾಕು ರಹಿತ ದಿನದ ಇತಿಹಾಸ
ಪ್ರತಿ ವರ್ಷ ಮೇ 31 ರಂದು ತಂಬಾಕು ರಹಿತ ದಿನ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು 1987 ರಲ್ಲಿ ತಂಬಾಕು ಸೇವನೆಯಿಂದ ವ್ಯಕ್ತಿಯ ಆರೋಗ್ಯದ ಮೇಲಾಗುವ ಪರಿಣಾಮ ಮತ್ತು ಸಾವು ನೋವುಗಳನ್ನು ಬಗ್ಗೆ ಅರಿವು ಮೂಡಿಸಲು ವಿಶ್ವ ತಂಬಾಕು ನಿಷೇಧ ದಿನವನ್ನು ಆಯೋಜಿಸಲಾಗಿತ್ತು. ನಂತರ ವಿಶ್ವ ಸಂಸ್ಥೆ ಮೇ 1988 ರಂದು ವಿಶ್ವ ತಂಬಾಕು ರಹಿತ ದಿನವನ್ನು ಅಧಿಕೃತವಾಗಿ ಜಾರಿಗೆ ತರುವ ಮೂಲಕ ಮೇ 31 ರಂದು ಪ್ರತಿವರ್ಷ ಆಚರಣೆಗೆ ಕರೆ ನೀಡಿತು. 2008ರಲ್ಲಿ ತಂಬಾಕಿನ ಕುರಿತಾದ ಜಾಹಿರಾತುಗಳನ್ನು ನಿಷೇಧಿಸಲಾಗಿದೆ.

ಈಗಿನ ಪರಿಸ್ಥಿತಿಗೆ ಈ ದಿನ ಹೆಚ್ಚು ಪಾಮುಖ್ಯವುಳ್ಳದ್ದು
ಕಣ್ಣಿಗೆ ಕಾಣದ ಕರೋನಾ ಮಾಹಾಮಾರಿ ಇಡೀ ಜಗತ್ತನ್ನೇ ಸಮಸ್ಯೆಗೆ ಸಿಲುಕಿಸಿದ್ದು, ಆರೋಗ್ಯದ ಕಡೆ ಜನ ಹೆಚ್ಚು ಗಮನಹರಿಸುತ್ತಿದ್ದಾರೆ. Senior Interventional Cardiologist, Asian Heart Institute ನ ಡಾ. ತಿಲಕ್ ಸುವರ್ಣ ಅವರ ಪ್ರಕಾರ ಕೋವಿಡ್ ವೈರಸ್ ವ್ಯಕ್ತಿಯ ದೇಹ ಸೇರಿದಾಗ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇತ್ತ ಧೂಮಪಾನವು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ. ಧೂಮಪಾನ ಮಾಡದೆ ಇರುವವರಿಗೆ ಹೋಲಿಸಿದರೆ, ಧೂಮಪಾನ ಮಾಡುವವರಿಗೆ ತೀವ್ರವಾದ ಶ್ವಾಸಕೋಶದ ತೊಂದರೆಗಳು ಕಂಡುಬರುತ್ತವೆ, ಇಂತವರಿಗೆ ಕೋವಿಡ್ ತಗುಲಿದರೆ ಸಾವಿನ ಅಪಾಯವನ್ನು ಎದುರಿಸುತ್ತಾರೆಂದು ವಿಶ್ವವ್ಯಾಪಿ ಸಂಶೋಧನೆಗಳು ತಿಳಿಸಿವೆ. ಜೊತೆಗೆ ಸಾಂಪ್ರದಾಯಿಕ ಸೋಂಕುಗಳಾದ ಜ್ವರ, ನ್ಯುಮೋನಿಯಾ, ಕ್ಷಯ, ಉಸಿರಾಟದಂತಹ ಸಮಸ್ಯೆ , ಪಾರ್ಶ್ವವಾಯು, ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಮಧುಮೇಹದಿಂದ ಬಳುತ್ತಾರೆ.

ಕೋವಿಡ್ ಹರಡುವಿಕೆ ಮತ್ತು ಧೂಮಪಾನ
ತಂಬಾಕು ಹೊಗೆಯಲ್ಲಿ ವಿಷಕಾರಿ ರಾಸಾಯನಿಕಗಳಿವೆ, ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡುತ್ತದೆ. ತಂಬಾಕು ಹೊಗೆಯಲ್ಲಿನ ರಾಸಾಯನಿಕಗಳು ದೇಹದ ವಿವಿಧ ರೀತಿಯ ರೋಗನಿರೋಧಕ ಕೋಶಗಳ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ದುರ್ಬಲಗೊಂಡು ಕೋವಿಡ್ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ತಂಬಾಕು ಉತ್ಪನ್ನಗಳನ್ನು ನಿರಂತರವಾಗಿ ಜಗಿಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕೂಡ ಹೆಚ್ಚು ಅಪಾಯಕಾರಿ ಎನ್ನಲಾಗಿದೆ.

2021 ರ ವಿಶ್ವ ತಂಬಾಕು ರಹಿತ ದಿನದ ಥೀಮ್ “ಕಮಿಟ್ಸ್ ಟು ಕ್ವಿಟ್” ಅಂದರೆ ತ್ಯಜಿಸಲು ಬದ್ಧರಾಗಿರಿ ಎಂಬ ಅರ್ಥವನ್ನು ನೀಡುತ್ತದೆ. ಕರೋನಾ ಸೋಂಕು ಹರಡುವಿಕೆಯಿಂದಾಗಿ ಲಕ್ಷಾಂತರ ಜನರು ಧೂಮಪಾನ ಮತ್ತು ತಂಬಾಕು ಸೇವನೆಯನ್ನು ತ್ಯಜಿಸಲು ಬದ್ಧರಾಗಿದ್ದಾರೆಂದು ಸೂಚಿಸುತ್ತದೆ. ಇದಲ್ಲದೆ ಜನ ತಂಬಾಕು ಸೇವನೆಯಿಂದ ಮುಕ್ತರಾಗಲು WHO ನ ಕ್ವಿಟ್ ಚಾಲೆಂಜ್ 6 ತಿಂಗಳವರೆಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿದಿನ ಸಲಹೆ ಮತ್ತು ಪ್ರೋತ್ಸಾಹ ನೀಡುತ್ತದೆ. ಇದು ವಾಟ್ಸಾಪ್, ಫೇಸ್ಬುಕ್ ವೀಚಾಟ್ನಲ್ಲಿ ಉಚಿತವಾಗಿ ಲಭ್ಯವಿದೆ ಎಂದು ವರದಿ ತಿಳಿಸಿದೆ. ಒಟ್ಟಿನಲ್ಲಿ ಕರೋನಾದಂತಹ ಅಪಾಯಕಾರಿ ಸೋಂಕುಗಳು ಜಗತ್ತನ್ನು ಕಾಡುತ್ತಿರುವಾಗ ಮಧ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಹೆಚ್ಚು ಬಲಿಯಾಗದೆ ಜೀವ, ಜೀವನ ರಕ್ಷಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...