ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರು ಶುಕ್ರವಾರ ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ TMC ಪಕ್ಷಕ್ಕೆ ಸೇರ್ಪಡೆಗೊಂಡರು.
2022ರ ಗೋವಾ ವಿಧಾನಸಭೆ ಚುನಾವಣೆ ಹಿನ್ನೆಯಲ್ಲಿ ಮೂರು ದಿನಗಳ ಭೇಟಿಗಾಗಿ ಗೋವಾ ರಾಜ್ಯಕ್ಕೆ ಬಂದಿರುವ ಬ್ಯಾನರ್ಜಿ ಸಮ್ಮುಖದಲ್ಲಿ ಲಿಯಾಂಡರ್ ಪೇಸ್ ಅವರು ಶುಕ್ರವಾರ ಟಿಎಂಸಿಗೆ ಸೇರಿದ್ದಾರೆ.
2004 ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕೋಲ್ಕತ್ತಾದಿಂದ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿದ್ದ ಹಿರಿಯ ನಟಿ ನಫೀಸಾ ಅಲಿ ಕೂಡ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
48ರ ಹರೆಯದ ಲಿಯಾಂಡರ್ ಪೇಸ್ ಎಂಟು ಡಬಲ್ಸ್ ಮತ್ತು 10 ಮಿಶ್ರ ಡಬಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು 1996-1997ರಲ್ಲಿ ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, 1990 ರಲ್ಲಿ ಅರ್ಜುನ ಪ್ರಶಸ್ತಿ, 2001 ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಜನವರಿ 2014 ರಲ್ಲಿ ಸ್ವೀಕರಿಸಿದ್ದಾರೆ. 2020ರಲ್ಲಿ ಟೆನ್ನಿಸ್ನಿಂದ ನಿವೃತ್ತಿ ಹೊಂದಿದ್ದಾರೆ.
ಗೋವಾದ ಬಿಜೆಪಿ ಕಾರ್ಯಕರ್ತರು ಆಕೆಯನ್ನು ಹಿಂದೂ ವಿರೋಧಿ ಎಂದು ಕರೆದಿದ್ದು, ತಿರುಗೇಟು ನೀಡಿರುವ ದೀದಿ , ಅವರಿಗೆ “ಕ್ಯಾರೆಕ್ಟರ್ ಸರ್ಟಿಫಿಕೇಟ್” ನೀಡುವ ಅಧಿಕಾರ ಯಾರು ಕೊಟ್ಟಿದ್ದು? ಆ ಅಧಿಕಾರ ಅವರಿಗಿಲ್ಲ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮೊದಲಕ್ಷರವಾದ ‘ಟಿಎಂಸಿ’ ಎಂದರೆ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಎಂದಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಕ್ಕೆ ಮೂರು ದಿನಗಳ ಭೇಟಿಯ ಭಾಗವಾಗಿ ಗುರುವಾರ ಸಂಜೆ ಗೋವಾಕ್ಕೆ ಆಗಮಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, “ತಮ್ಮ ಪಕ್ಷವು ಇಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದು ಮತಗಳನ್ನು ವಿಭಜಿಸಲು ಅಲ್ಲ ಮತ್ತು ನಾನು ಇಲ್ಲಿ ನಿಮ್ಮ ಅಧಿಕಾರ ಕಸಿದುಕೊಳ್ಳಲು ಬಂದಿಲ್ಲ, ನಿಮಗೆ ಸಹಾಯ ಮಾಡಲು ಬಂದಿದ್ದೇನೆ. ಗೋವಾದ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಲು ಸಂಪೂರ್ಣ ಸುರಕ್ಷೆ ನೀಡಬೇಕಿದೆ. ನಾವು ಅಭಿಮಾನದಿಂದ ಬದುಕಬೇಕು. ನನ್ನ ಧರ್ಮದ ಚಾರಿತ್ರ್ಯ ಪ್ರಮಾಣಪತ್ರ ನೀಡಲು ಬಿಜೆಪಿ ಯಾರು? ನಾನು ಹಿಂದೂ ಎಂಬ ಅಭಿಮಾನವಿದೆ” ಎಂದರು.
”ನಾವು ಪ್ರಜಾಪ್ರಭುತ್ವದ ಪದ್ಧತಿಯಲ್ಲಿಯೇ ಚುನಾವಣೆ ಎದುರಿಸುತ್ತೇವೆ, ಆದರೆ ಬಿಜೆಪಿಯು ಚುನಾವಣೆಯ ಸಂದರ್ಭದಲ್ಲಿ ದಂಗೆ ಎಬ್ಬಿಸಲು ನೋಡುತ್ತಿದೆ. ಗೋವಾದ ಯುವಕರಿಗೆ ನಾವು ಮುಂಬರುವ ದಿನಗಳಲ್ಲಿ ಹೊಸ ಅವಕಾಶವನ್ನು ಸೃಷ್ಠಿಸಿಕೊಡಲಿದ್ದೇವೆ” ಎಂದು ಮಮತಾ ಬ್ಯಾನರ್ಜಿ ನುಡಿದರು.
ಟಿಎಂಸಿ ಸೇರ್ಪಡೆಯಾದ ಬಳಿಕ ಮಾತನಾಡಿದ ಲಿಯಾಂಡರ್ ಪೇಸ್, ನಾನು ಟೆನ್ನಿಸ್ನಿಂದ ನಿವೃತ್ತನಾಗಿದ್ದೇನೆ. ಇನ್ನು ಮುಂದೆ ರಾಜಕೀಯ ಎಂಬ ವಾಹನವನ್ನೇರಿ ಜನ ಸೇವೆ ಮಾಡಲು ನಿರ್ಧಾರ ಮಾಡಿದ್ದೇನೆ. ಮಮತಾ ಬ್ಯಾನರ್ಜಿ ನಿಜಕ್ಕೂ ಒಬ್ಬ ಚಾಂಪಿಯನ್ ಎಂದು ಹೇಳಿದ್ದಾರೆ.
ಅಕ್ಟೋಬರ್ 24 ರಂದು ಗೋವಾದಲ್ಲಿ ಸುಮಾರು 300 ಜನರು ತೃಣಮೂಲ ಕಾಂಗ್ರೆಸ್ ಅನ್ನು ಸೇರ್ಪಡೆಗೊಂಡಿದ್ದಾರೆ. ಪಣಜಿ, ನಾವೆಲಿಮ್ ಮತ್ತು ಸಾಂಗೇಮ್ನಲ್ಲಿ ಕಾರ್ಯಕ್ರಮಗಳು ನಡೆದಿದ್ದು 300 ರಷ್ಟು ಜನರು ತೃಣಮೂಲ ಕಾಂಗ್ರೆಸ್ ಜೊತೆಯಾಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಲಿಯಾಂಡರ್ ಪೇಸ್ ಇಂದು ನಮ್ಮೊಂದಿಗೆ ಸೇರಿಕೊಂಡಿದ್ದಾರೆ ಎಂದು ಹೇಳಲು ತುಂಬಾ ಸಂತೋಷವಾಗುತ್ತಿದೆ ಎಂದು ಟಿಎಂಸಿ ಟ್ವೀಟ್ ಮಾಡಿದೆ.