ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ನಡೆಯುತ್ತಿರುವ ‘ಕಾನೂನು ಬಾಹಿರ’ ಕೊಲೆಗಳ ಕುರಿತು ಆಘಾತಕಾರಿ ವರದಿ ಪ್ರಕಟವಾಗಿದೆ. ಎಲ್ಲಾ ಕೊಲೆಗಳನ್ನು ಕಾನೂನು ಬಾಹಿರವೆಂದೇ ಪರಿಗಣಿಸಲಾಗುತ್ತದೆಯಾದರೂ, ಪ್ರಭುತ್ವವೇ ಜನರನ್ನು ಬಲಿ ಪಡೆದಾಗ ನ್ಯಾಯ ಮರೀಚಿಕೆಯಾಗುವುದು ಸಾಮಾನ್ಯವೆಂಬಂತೆ ಆಗಿದೆ.
2017ರ ಮಾರ್ಚ್ ಬಳಿಕ ಉತ್ತರ ಪ್ರದೇಶದಲ್ಲಿ ಪೊಲೀಸರಿಂದ ಗುಂಡು ಹಾರಿಸಲಾದ ಸುಮಾರು 8,472 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 146 ಮೃತಪಟ್ಟರೆ,
3,302ಕ್ಕೂ ಹೆಚ್ಚು ಜನ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಈ ಕಾನೂನು ಬಾಹಿರ ಸಾವುಗಳ ತನಿಖೆಯೂ ಹಳ್ಳ ಹಿಡಿದಿದ್ದು, ಹಲವು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯೇ ಆಗಿಲ್ಲ.
ಕಳೆದ ಸುಮಾರು ಒಂದು ದಶಕದಿಂದ ಕೇವಲ ಉತ್ತರ ಪ್ರದೇಶ ಮಾತ್ರವಲ್ಲದೇ ದೇಶದ ಹಲವು ರಾಜ್ಯಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಉದಾಹರಣೆಗೆ ಮಂಗಳೂರಿನಲ್ಲಿ ಸಿಎಎ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದರು. ಘಟನೆ ನಡೆದ ಸುಮಾರು ಎರಡು ವರ್ಷದ ಬಳಿಕ ಸರ್ಕಾರವು ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ. ಆದರೆ, ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.
ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರವು ಇಂತಹ ಘಟನೆಗಳಿಗೆ ಬಹಿರಂಗವಾಗಿ ಬೆಂಬಲ ನೀಡಿರುವುದು ಕೂಡಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಪ್ರಭುತ್ವವೇ ಬೆಂಬಲಕ್ಕೆ ನಿಂತು ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದರಿಂದ ಅಧಿಕಾರಿಗಳು ಕೂಡಾ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ.

ಈ ಎಲ್ಲಾ ಅಂಶಗಳು ಮೂರು ಸಾಮಾಜಿಕ ಸಂಸ್ಥೆಗಳು ನಡೆಸಿದ ಅಧ್ಯಯನದಿಂದ ಬಹಿರಂಗಗೊಂಡಿವೆ. Youth for Human Rights Documentation, Citizens Against Hate ಮತ್ತು People’s Watch ಎಂಬ ಮೂರು ಸಂಸ್ಥೆಗಳು ಜತೆ ಸೇರಿ ‘Extinguishing Law and Life: Police Killings and Cover Up in the state of Uttar Pradesh’ ಎಂಬ ವರದಿಯನ್ನು ನೀಡಿದ್ದಾರೆ. ಈ ವರದಿಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ 17 ಪ್ರಕರಣಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಯಾವುದರಲ್ಲಿಯೂ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗಿಲ್ಲ. ಮಾರ್ಚ್ 2017ರಿಂದ ಮಾರ್ಚ್ 2018ರವರೆಗೆ ನಡೆದ 17 ಪ್ರಕರಣಗಳಲ್ಲಿ ಒಟ್ಟು 18 ಜನ ಮೃತಪಟ್ಟಿದ್ದಾರೆ. ಈ ಪ್ರಕರಣಗಳ ತನಿಖೆಯೂ ನಡೆದಿದೆ. ಪೊಲೀಸರಿಗೆ ಕ್ಲೀನ್ ಚಿಟ್ ಕೂಡಾ ನೀಡಲಾಗಿದೆ. ಆದರೆ, ಎಲ್ಲಾ ಪ್ರಕರಣಗಳ ತನಿಖೆಯು ದೋಷಪೂರಿತವಾಗಿರುವುದು ಹಾಗು ತನಿಖೆ ನಡೆಸಿದ ರೀತಿಯೂ ತಪ್ಪಾಗಿರುವುದು ಕಂಡು ಬಂದಿದೆ.
ಪ್ರಕರಣಗಳು ಯಾವ ಮಟ್ಟಿಗೆ ಹಾದಿ ತಪ್ಪಿವೆ ಎಂದರೆ, ಯಾವೊಬ್ಬ ಪೊಲೀಸ್ ಅಧಿಕಾರಿಯ ವಿರುದ್ದವೂ ಕನಿಷ್ಟ ಎಫ್ಐಆರ್ ಕೂಡಾ ದಾಖಲಾಗಿಲ್ಲ. ಎಲ್ಲಾ ಪ್ರಕರಣಗಳಲ್ಲಿಯೂ ಮೃತಪಟ್ಟ ವ್ಯಕ್ತಿಯ ವಿರುದ್ದವೇ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಈ ರೀತಿ ತಿರುಚಿದ ಎಫ್ಐಆರ್ ಬಳಸಿ, ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ತನಿಖೆಯನ್ನು ಅಂತ್ಯಗೊಳಿಸಲಾಗಿದೆ.
ಈ ರೀತಿಯ ಪ್ರಕರಣಗಳ ತನಿಖೆಗೆ ಸುಪ್ರಿಂಕೋರ್ಟ್ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸ್ಪಷ್ಟವಾದ ನಿಯಮಾವಳಿಗಳನ್ನು ರೂಪಿಸಿದೆ. ಆದರೆ, ಒಂದು ವರ್ಷದ ಅವಧಿಯಲ್ಲಿ ನಡೆದ 17 ಪ್ರಕರಣಗಳಲ್ಲಿಯೂ ಆ ನಿಯಮಾವಳಿಗಳನ್ನು ಪಾಲಿಸಲಾಗಿಲ್ಲ.
ಪೊಲೀಸರು ಗುಂಡು ಹಾರಿಸಿ ಕೊಂದ ಬಳಿಕ, ಅದೇ ಠಾಣೆಯ ಮತ್ತೊಬ್ಬ ಅಧಿಕಾರಿ ಪ್ರಾಥಮಿಕ ತನಿಖೆಯನ್ನು ನಡೆಸಿದ್ದಾರೆ. ಇದರಿಂದಾಗಿ ಮೊದಲ ಹಂತದಲ್ಲಿಯೇ, ತನಿಖೆಯ ಪಾರದರ್ಶಕತೆಯ ಮೇಲೆ ಸಂದೇಹ ಬೀರುವಂತೆ ಮಾಡಿದೆ. ಪ್ರಾಥಮಿಕ ತನಿಖೆ ನಡೆಸಿದ ಬಳಿಕ, ಆ ಪ್ರಕರಣವನ್ನು ‘ಸ್ವತಂತ್ರ ತನಿಖೆ’ ಎಂಬ ಹೆಸರಿನಡಿ ಮತ್ತೊಂದು ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ. ಅವರು ಪ್ರಾಥಮಿಕ ವರದಿಯ ಆಧಾರದ ಮೇಲೆಯೇ ತಮ್ಮ ತನಿಖೆ ಮುಂದುವರೆಸುತ್ತಾರೆ. ಇದು ಕೇವಲ ಮಾಧ್ಯಮ ಹಾಗೂ ಮಾನವ ಹಕ್ಕುಗಳ ಆಯೋಗದ ಕಣ್ಣಿಗೆ ಮಣ್ಣೆರಚಲು ಮಾಡುವ ತಂತ್ರದಂತೆ ಕಾಣಿಸುತ್ತಿದೆ.

ಈ ರೀತಿಯ ಹಲವು ವಾಸ್ತಾವಿಕ ದೋಷಗಳನ್ನು ವರದಿಯು ಬಹಿರಂಗಪಡಿಸಿದೆ. ಯೋಗಿಯ ಜಂಗಲ್ ರಾಜ್’ನಲ್ಲಿ ಪೊಲೀಸ್ ಅಧಿಕಾರಿಗಳ ಮಿತಿ ಮೀರಿದ ದೌರ್ಜನ್ಯ, ಎನ್ಕೌಂಟರ್ ಎಂಬ ಹೆಸರಿನಲ್ಲಿ ಪ್ರಕರಣಗಳನ್ನು ಮುಚ್ಚಿ ಹಾಕುವ ತಂತ್ರ ಅವಿರತವಾಗಿ ನಡೆಯುತ್ತಲೇ ಬಂದಿದೆ.
11 ಪ್ರಕರಣಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪೊಲೀಸರು ನೀಡಿರುವ ವರದಿಯನ್ನು ಯಾವುದೇ ಪ್ರಶ್ನೆಯಿಲ್ಲದೇ ಊರ್ಜಿತಗೊಳಿಸಿದ್ದಾರೆ. ಈ ಎಲ್ಲಾ ಪ್ರಕರಣಗಳಲ್ಲಿ ಮೃತಪಟ್ಟವರನ್ನು ಆರೋಪಿಯೆಂದೇ ಪರಿಗಣಿಸಲಾಗಿದೆ. ಪ್ರಕರಣ ಮುಚ್ಚುವ ಮುನ್ನ ಮೃತರ ಕುಟುಂಬಕ್ಕೆ ವರದಿಯಿಂದ ತಕಾರರು ಇದೆಯೇ ಎಂದು ಪರಿಶೀಲಿಸುವ ಬದಲು, ವರದಿ ನೀಡಿದ ಪೊಲೀಸ್ ಅಧಿಕಾರಿಗಳಲ್ಲಿ ಹಾಗೂ ದೂರು ನೀಡಿದವರಲ್ಲಿ ತಕರಾರು ಇದೆಯೇ ಎಂದು ಪ್ರಶ್ನಿಸಲಾಗಿದೆ. ಈ ಸಣ್ಣ ಪ್ರಕ್ರಿಯೆ ನಡೆಸಿದ ಬಳಿಕ ಮ್ಯಾಜಿಸ್ಟ್ರೇಟರು ಪ್ರಕರಣವನ್ನು ಮುಚ್ಚಲು ಅನುಮತಿ ನೀಡಿದ್ದಾರೆ.
17 ಪ್ರಕರಣಗಳ ಕುರಿತಾಗಿಯೂ ಮಾನವ ಹಕ್ಕುಗಳ ಆಯೋಗ ತನಿಖೆ ನಡೆಸಿದೆ. ಅವುಗಳಲ್ಲಿ 12 ಪ್ರಕರಣಗಳಲ್ಲಿ ಪೊಲೀಸರಿಗೆ ನೇರವಾಗಿ ಕ್ಲೀನ್ ಚಿಟ್ ನೀಡಿದೆ. ಒಂದು ಪ್ರಕರಣವನ್ನು ಮಾತ್ರ ಉತ್ತರ ಪ್ರದೇಶದ ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾಯಿಸಿದೆ. ಎರಡು ಪ್ರಕರಣಗಳ ತನಿಖೆ ಇನ್ನೂ ಚಾಲ್ತಿಯಲ್ಲಿದೆ. ಒಂದು ಪ್ರಕರಣದ ಕುರಿತು ಅಧ್ಯಯನಕಾರರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಒಂದು ಪ್ರಕರಣದಲ್ಲಿ ಪೊಲೀಸರ ತಪ್ಪಿರುವುದು ಕಂಡು ಬಂದಿದ್ದು, ಅದರಲ್ಲಿ ಸಂತ್ರಸ್ಥರ ಕುಟುಂಬಕ್ಕೆ ಪರಿಹಾರ ನೀಡಲು ಆಯೋಗ ಆದೇಶಿಸಿದೆ. ಇಲ್ಲಿಯೂ, ತಪ್ಪಿತಸ್ಥ ಪೊಲೀಸರ ವಿರುದ್ದ ಎಫ್ಐಆರ್ ದಾಖಲಿಸುವ ಕುರಿತು ಆಯೋಗ ಚಕಾರವೆತ್ತಿಲ್ಲ.

ಉತ್ತರ ಪ್ರದೇಶದ ಯೋಗಿಯ ಜಂಗಲ್ ರಾಜ್’ನಲ್ಲಿ ನಡೆಯುತ್ತಿರುವ ಪೊಲೀಸ್ ದೌರ್ಜನ್ಯದ ಹುಳುಕುಗಳನ್ನು ಈ ವರದಿ ಬಹಿರಂಗಪಡಿಸಿದೆ.