ಕನ್ನಡ ಭಾಷೆ ಬಗ್ಗೆ ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ನಟ ಕಮಲ್ ಹಾಸನ್ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲ್ಲ ಎಂದಿದ್ದಾರೆ. ಕ್ಷಮೆ ಕೇಳದ ಹೊರತು ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ಕೊಡಲ್ಲ ಎಂದು ಕನ್ನಡಿಗರು ಪಟ್ಟು ಹಿಡಿದ ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಜನರ ಭಾವನೆಗೆ ನೋವು ಮಾಡುವುದು ಸರಿಯಲ್ಲ, ಮೊದಲು ಕ್ಷಮೆಯಾಚಿಸುವಂತೆ ಕೋರ್ಟ್ ಸೂಚನೆ ಕೊಟ್ಟಿತ್ತು. ಕ್ಷಮೆ ಕೇಳದೆ ಮೊಂಡುತನ ಪ್ರದರ್ಶನ ಮಾಡಿದ ನಟ ಕಮಲ್ ಹಾಸನ್ ವಿರುದ್ಧ ಹೈಕೋರ್ಟ್ ಚಾಟಿ ಬೀಸಿತ್ತು. ಕಮಲ್ ಹಾಸನ್ ವಿವರಣೆ ಪತ್ರ ನೋಡಿದ ನ್ಯಾಯಮೂರ್ತಿ ನಾಗಪ್ರಸನ್ನ ಕಮಲ್ ಹಾಸನ್‌ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಒಂದು ವಾರ ಕಾಲಾವಕಾಶ ಕೊಡುವಂತೆ ಕಮಲ್ ಪರ ವಕೀಲರು ಕೇಳಿಕೊಂಡಿದ್ದಾರೆ.

ಹೈಕೋರ್ಟ್ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಎಲ್ಲವೂ ಸರಿಯಾಗಿದೆ. ಆದ್ರೆ, ಪತ್ರದಲ್ಲಿ ಕ್ಷಮೆಯ ಬಗ್ಗೆ ಎಲ್ಲಿಯೂ ಇಲ್ಲ ಎಂದಿದ್ದಾರೆ. ಈ ವೇಳೆ ವಕೀಲ ಧ್ಯಾನ್ ಚಿನ್ನಪ್ಪ, ಕ್ಷಮೆಯಾಚಿಸಿದರೆ ಎಲ್ಲ ಸರಿಹೋಗಲಿದೆ ನಿಜ. ಆದರೆ ಕಮಲ್ ಹಾಸನ್‌ಗೆ ಯಾವುದೇ ದುರುದ್ದೇಶವಿರಲಿಲ್ಲ. ಕನ್ನಡದ ಬಗ್ಗೆ ಅವರ ನಿಲುವನ್ನು ಪತ್ರದಲ್ಲಿ ತಿಳಿಸಿದ್ದಾರೆ ಎಂದಿದ್ದಾರೆ. ಈ ವೇಳೆ ಜಡ್ಜ್ ಕರ್ನಾಟಕ ಬಿಟ್ಟು ಬೇರೆ ಕಡೆ ಚಿತ್ರ ರಿಲೀಸ್ ಮಾಡಿ. ಕ್ಷಮೆ ಕೇಳೋವರೆಗೂ ಕರ್ನಾಟಕದಲ್ಲಿ ಬಿಡುಗಡೆ ಇಲ್ಲ ಎಂದಿದ್ದಾರೆ.. ಅವರಿಗೆ ಇಗೋ ಅಡ್ಡ ಬರ್ತಿರಬಹುದು. ಆದ್ರೆ ಯಾರೇ ಆದ್ರೂ ಜನರ ಭಾವನೆ ನೋಯಿಸಬಾರದು ಎಂದು ಕಮಲ್ ಪರ ವಕೀಲರಿಗೆ ಕ್ಲಾಸ್ ತೆಗೆದುಕೊಂಡಿದೆ.

ಇನ್ನು ಕರ್ನಾಟಕದಲ್ಲಿ ಒಂದು ವಾರ ಥಗ್ ಲೈಫ್ ಚಿತ್ರ ಬಿಡುಗಡೆಗೆ ಅವಕಾಶವಿಲ್ಲ. ಒಂದು ವಾರದ ಒಳಗೆ ವಿವಾದ ಇತ್ಯರ್ಥ ಮಾಡಿಕೊಳ್ಳುವಂತೆ ಕೋರ್ಟ್ ಆದೇಶ ನೀಡಿದೆ. ವಿಚಾರಣೆಯನ್ನ ಜೂನ್ 10ಕ್ಕೆ ಮುಂದೂಡಿದೆ. ಅಲ್ಲದೆ ರಾಜ್ಯ ಸರ್ಕಾರದ ಎಜಿಗೆ ಕೋರ್ಟ್ ನೋಟಿಸ್ ನೀಡಿದೆ. ಕೋರ್ಟ್ನಿಂದ ಕರ್ನಾಟಕದದಲ್ಲಿ ಥಗ್ ಲೈಫ್ ಬಿಡುಗಡೆಗೆ ನಕಾರ ಹಿನ್ನೆಲೆ, ಫಿಲ್ಮ್ ಚೇಂಬರ್ನಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಕಮಲ್ ಹಾಸನ್ ಕ್ಷಮೆ ಕೇಳೋವರೆಗೂ ಚಿತ್ರ ಬಿಡುಗಡೆ ಮಾಡಲ್ಲ ಎಂದು ಫಿಲ್ಮ್ ಚೇಂಬರ್ನಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕಮಲ್ ಹಾಸನ್ ಕೋರ್ಟ್ ಆದೇಶ ಪಾಲಿಸಲಿ, ಅಲ್ಲಿಯವರೆಗೂ ಥಗ್ ಲೈಫ್ ಚಿತ್ರ ಬಿಡುಗಡೆ ಇಲ್ಲ ಎಂದು ಫಿಲ್ಮ್ ಚೇಂಬರ್ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.

ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಲು ಮತ್ತೆ ಹಿಂದೇಟು ಹಾಕ್ತಿರೋದ್ಯಾಕೆ..? ಒಂದೇ ಕುಟುಂಬ ಅನ್ನೋದಾದ್ರೆ ಭಾಷೆಗಳೂ ಒಂದೇ ಅಲ್ಲವೇ. ಕನ್ನಡ ಹೇಗೆ ತಮಿಳಿನಿಂದ ಹುಟ್ಟಿದ ಭಾಷೆ ಆಗುತ್ತೆ. ಕನ್ನಡದ ಬಗ್ಗೆ ಗೌರವವಿದ್ದರೆ ಅಪಮಾನ ಮಾಡಿದ್ದು ಯಾಕೆ..? ಸಿನಿಮಾ ಭಾಷೆ ಮಾತನಾಡೋರು ಇತಿಹಾಸ ಕೆಣಕಿದ್ದು, ಸರಿನಾ..? ಒಂದೇ ಕಾರ್ಯಕ್ರಮದಲ್ಲಿ ಇದ್ದಾಗ ಶಿವಣ್ಣರಿಗೆ ಮುಜುಗರ ಆಗೋ ರೀತಿ ಮಾತನಾಡಿದ್ದು ಸರಿನಾ..? ಸಿನಿಮಾ ಸಂಪರ್ಕ ಸೇತುವೆ ಎನ್ನುವ ನೀವು ಈಗ್ಯಾಕೆ ಗೋಡೆ ಕಟ್ಟಿದ್ರೀ..? ಈಗಲೂ ನಿಮ್ಮ ತಪ್ಪಿನ ಅರಿವು ಆಗಿಲ್ವಾ..? ಅನ್ನೋ ಪ್ರಶ್ನೆಗಳು ಕಮಲ್ ಹಾಸನ್ ಪತ್ರದ ಬಳಿಕ ಕನ್ನಡಿಗರಲ್ಲಿ ಮೂಡುತ್ತಿದೆ.