ಮತದಾರರ ದತ್ತಾಂಶ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ಅಧಿಕಾರಿಗಳಿಗೆ ಗುರುತಿನ ಚೀಟಿ ಒದಗಿಸಿದ ಆರೋಪದ ಮೇಲೆ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳನ್ನು ಬಿಬಿಎಂಪಿ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.
ಸುಹೇಲ್ ಅಹ್ಮದ್, ಚಂದ್ರಶೇಕರ್ ಹಾಗೂ ಭೀಮಾಶಂಕರ ಅಮಾನತ್ತಾದ ಅಧಿಕಾರಿಗಳು ಎಂದು ತಿಳಿದು ಬಂದಿದೆ.
ಶಿವಾಜಿನಗರದ ಕಂದಾಯ ಅಧಿಕಾರಿ ಸುಹೇಲ್ ಅಹ್ಮದ್ ನಿಯಮ ಮೀರಿ ಖಾಸಗಿ ವ್ಯಕ್ತಿಗಳಿಗೆ ಗುರುತಿನ ಚೀಟಿ ನೀಡಿದ ಆರೋಪದ ಮೇಲೆ ಸೇವೆಯಿಂದ ಅಮಾನತು ಮಾಡಲಾಗಿದೆ.
ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಕಂದಾಯ ಅಧಿಕಾರಿಯಾಗಿರುವ ಚಂದ್ರಶೇಖರ್ ಚಿಲುಮೆ ಸಂಸ್ಥೆಯ ಲೋಕೇಶ್ಗೆ ಮತಗಟ್ಟೆ ಮಟ್ಟದ ಅಧಿಕಾರಿ ಎಂದು ಗುರುತಿನ ಚೀಟಿ ನೀಡಲಾಗಿತ್ತು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಆದ್ದರಿಂದ ಚಂದ್ರಶೇಖರರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಚಿಕ್ಕಪೇಟೆ, ಉಪ ಕಂದಾಯ ಅಧಿಕಾರಿಯಾಗಿರುವ ಭೀಮಾಶಂಕರ್ ಚಿಲುಮೆ ಸಂಸ್ಥೆಯ ಗುರುಬಸ್ಸು ಹಾಗೂ ವಿನಾಯಕ ಎಂಬುವವರಿಗೆ ಗುರುತಿನ ಚೀಟಿ ನೀಡಿರುವ ಬಗ್ಗೆ ಪುರಾವೆ ಲಭ್ಯವಾಗಿದ್ದು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಲಾಗಿದೆ.