
ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡರೂ ಅದು ಖಂಡಿತ ನ್ಯಾಯಾಲಯದ ಅಂಗಳಕ್ಕೆ ಹೋಗಲಿದೆ. ಅಲ್ಲಿ ಏನು ತೀರ್ಮಾನವಾಗುತ್ತೋ ಗೊತ್ತಿಲ್ಲ. ಅದೊಂದು ದೀರ್ಘಕಾಲೀನ ಹೋರಾಟ.
ಸದ್ಯಕ್ಕೆ ಶೀಘ್ರದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿಯಂತ್ರಿಸಲು ಸುಲಭದ ಮಾರ್ಗವಿದೆ. ಮೊದಲು ರಾಜ್ಯದ ಕಾಂಗ್ರೆಸ್ ನಾಯಕರು ಸ್ವಯಂಪ್ರೇರಣೆಯಿಂದ ತಮ್ಮ ಒಡೆತನದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಆರ್ ಎಸ್.ಎಸ್. ಒಳಗೊಂಡಂತೆ ಸಂಘ ಪರಿವಾರದ ಚಟುವಟಿಕೆಗಳನ್ನು ನಿಷೇಧಿಸಬೇಕು.
ಇದು ಸಾಧ್ಯ ಎಂದು ಅನಿಸುತ್ತಾ?
ಮಂಗಳೂರಿನ ಒಂದು ಶಿಕ್ಷಣ ಸಂಸ್ಥೆಯಲ್ಲಿ ದೊಡ್ಡಮಟ್ಟದ ಎಬಿವಿಪಿ ಸಮ್ಮೇಳನ ನಡೆಯುತ್ತದೆ, ಅದರ ನಂತರ ಆ ಸಂಸ್ಥೆಯ ಒಡೆಯರು ವಿಧಾನಪರಿಷತ್ ಸದಸ್ಯರಾಗುತ್ತಾರೆ. ಕಲ್ಲಡ್ಕದ ಭಟ್ರ ಜೊತೆಯಲ್ಲಿಯೇ ಚಕ್ಕಂದವಾಡುತ್ತಾ ಶಾಸಕರು, ಸಚಿವರು,,ಇನ್ನು ಏನೇನೋ ಆಗುತ್ತಾರೆ, ಚುನಾವಣೆ ಬಂದಾಗ ಹಿಂದಿನ ದಿನದ ವರೆಗೆ ಆರ್ ಎಸ್ ಎಸ್ ನ ಬೈಠಕ್ ನಲ್ಲಿದ್ದವರನ್ನು ರಾಜಮರ್ಯಾದೆಯಿಂದ ಕರೆತಂದು ಟಿಕೆಟ್ ಕೊಡುತ್ತಾರೆ.
ಇಂತಹ ಅಪ್ಪಟ ‘’ಜಾತ್ಯತೀತರು’’ ಸೇರಿಕೊಂಡು ‘’ ಆ ಮಟ್ಟುನಾ? ಅವನು ಒಂದಾನೊಂದು ಕಾಲದಲ್ಲಿ ಇಂದಿರಾಗಾಂಧಿ ವಿರುದ್ದ ಮಾತನಾಡಿದ್ದಾನೆ, ಸೋನಿಯಾಗಾಂಧಿ ವಿರುದ್ದ ಬರೆದಿದ್ದಾನೆ, ಅಂತಹವನನ್ನು ವಿಧಾನಪರಿಷತ್ ಗೆ ಕಳುಹಿಸುವುದಾ? ಛೇ…ಛೇ.. ಕಾಂಗ್ರೆಸ್ ನ ಮಾನ ಏನು? ಮರ್ಯಾದೆ ಏನು? ಎಂದು ಇಲ್ಲಿಂದ ದಿಲ್ಲಿಯ ವರೆಗೆ ದೂರು ತಗೊಂಡು ಹೋಗುತ್ತಾರೆ.
ಹೇಳುವುದು ಇನ್ನೂ ಬಾಕಿ ಇದೆ,
ಮುಂದೆ ಪುರುಸೊತ್ತಿನಲ್ಲಿ ನೋಡೋಣ
ಈ ನಡುವೆ…

‘’….ಆರ್ ಎಸ್ ಎಸ್ ಗೆ ಹೆದರುವವರು, ಅದರ ಜೊತೆ ಸಂಬಂಧ ಇಟ್ಟುಕೊಂಡವರು ಪಕ್ಷ ಬಿಟ್ಟು ತೊಲಗಿ…’’ ಎಂದು ನಮ್ಮೆಲ್ಲರ ಪ್ರೀತಿಯ ರಾಹುಲ್ ಗಾಂಧಿಯವರು ಹೇಳಿಕೆಗಳನ್ನು ಕೊಡುತ್ತಾ ನಮಗೆ ರೋಮಾಂಚನವನ್ನುಂಟು ಮಾಡುತ್ತಾರೆ.
ಸಂಘ ಪರಿವಾರದ ವಿರುದ್ದ ಮಾತನಾಡುತ್ತಿರುವ ನಮ್ಮಂತಹವರಿಗೆ ಕೊಲೆ-ಹಲ್ಲೆ ಬೆದರಿಕೆ, ತಂದೆ-ತಾಯಿ, ಅಕ್ಕ-ತಂಗಿ ಎನ್ನದೆ ಎಲ್ಲರ ಹೆಸರು ತೆಗೆದು ವಾಚಾಮಗೋಚರ ಬೈಗುಳ ಸುರಿಮಳೆ ಎಲ್ಲವೂ ನಡೆಯುತ್ತಲೇ ಇರುತ್ತದೆ.
ಈಗ ನೋಡಿ ಸಚಿವ ಪ್ರಿಯಾಂಕ ಖರ್ಗೆಯವರು ಧೈರ್ಯ ಮಾಡಿ ಆರ್ ಎಸ್ ಎಸ್ ವಿರುದ್ದ ಮಾತನಾಡಿದ ತಪ್ಪಿಗೆ ಅವರು ಎಲ್ಲ ಬಗೆಯ ಬೆದರಿಕೆ, ಬೈಗುಳಗಳನ್ನು ಅನುಭವಿಸುವಂತಾಗಿದೆ. ಒಬ್ಬಿಬ್ಬರನ್ನು ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷದ ಯಾವ ನಾಯಕರೂ ಖರ್ಗೆಯವರ ಪರವಾಗಿ ದನಿ ಎತ್ತುತ್ತಿಲ್ಲ.

ಪ್ರಿಯಾಂಕ ಖರ್ಗೆಯವರು ಕೂಡಾ ತಮ್ಮ ಅಕ್ಕಪಕ್ಕದಲ್ಲಿ ಯಾರು ಇದ್ದಾರೆ ಎನ್ನುವುದನ್ನು ನೋಡಿಕೊಳ್ಳಲು ಇದು ಸಕಾಲ.
ನಾವಂತೂ ನಿಮ್ಮ ಜೊತೆಗೆ ಇರುತ್ತೇವೆ.




