ಕೋರಮಂಗಲ ಗ್ರಾಮದಿಂದ ಕೆಂಪೇಗೌಡರ ಮನೆಗೆ ಸೊಸೆಯಾಗಿ ಬಂದ ‘ಲಕ್ಷ್ಮೀದೇವಿ’ ಎಂಬ ವೀರವನಿತೆಯ ಆತ್ಮಾರ್ಪಣೆ ಹಲವಾರು ಜನರಿಗೆ ತಿಳಿದಿಲ್ಲ.ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಕೋಟೆಯನ್ನು ಕಟ್ಟಲು ಪ್ರಾರಂಭಿಸಿದಾಗ ಒಂದು ಸಮಸ್ಯೆ ಕೆಂಪೇಗೌಡರನ್ನು ಕಾಡಿತು. ಅದೆನೆಂದರೆ ಕೋಟೆಯ ‘ದಿಡ್ಡಿ ಬಾಗಿಲನ್ನು’ ಎಷ್ಟು ಬಾರಿ ಗಟ್ಟಿಯಾಗಿ ನಿಲ್ಲಿಸಿದರೂ, ಮರುದಿನ ಬೆಳಿಗ್ಗೆ ಅದು ಕುಸಿದು ಬಿದ್ದಿರುತ್ತಿತ್ತು.

ಕೆಂಪೇಗೌಡರು ಜ್ಯೋತಿಷಿಗಳ ಬಳಿ ಕೇಳಿದಾಗ, ಯಾವುದಾದರೂ ಗರ್ಭಿಣಿ ಹೆಣ್ಣನ್ನು ಬಲಿ ಕೊಟ್ಟರೆ ಮಾತ್ರ ಈ ದಿಡ್ಡಿ ಬಾಗಿಲು ನಿಲ್ಲಲು ಸಾಧ್ಯ’ ಎಂದು ಜ್ಯೋತಿಷಿ ಹೇಳಿದರು.ಒಂದು ಬಾಗಿಲಿಗಾಗಿ ಹೆಣ್ಣಿನ ಪ್ರಾಣ ತೆಗೆಯಲು ಸಾಧ್ಯವಿಲ್ಲ’ ಎಂದು ಈ ಸಲಹೆಯನ್ನು ಕೆಂಪೇಗೌಡರು ತಿರಸ್ಕರಿಸಿದರು. ಅದೇ ಸಂದರ್ಭದಲ್ಲಿ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿ ಗರ್ಭಿಣಿಯಾಗಿದ್ದರು. ಲಕ್ಷ್ಮಿದೇವಿ ಇದನ್ನು ತಿಳಿದು ತಾನೇ ಸ್ಚಯಂ ಆಸಕ್ತಿಯಿಂದ ಬೆಂಗಳೂರಿನ ಜನರಿಗೆ ಒಳಿತಾಗಲಿ ಎಂದು ಹಾಗೂ ತನ್ನ ಮಾವ ನಿರ್ಮಿಸುತ್ತಿರುವ ಕೋಟೆ ಬಾಗಿಲು ಭದ್ರವಾಗಿರಲಿ ಎಂದು ರಾತ್ರಿ ಕೋಟೆ ಬಾಗಿಲ ಬಳಿ ಹೋಗಿ ಆತ್ಮತ್ಯಾಗ ಮಾಡಿಕೊಂಡಳು.

ಕೆಂಪೇಗೌಡ ಬೆಳಗ್ಗೆ ಕೋಟೆಗೆ ಹೋಗಿ ನೋಡಿದಾಗ ದಿಡ್ಡಿ ಬಾಗಿಲು ಬಿಳದಂತೆ ನಿಂತಿತ್ತು, ಆಶ್ಚರ್ಯನಾಗಿ ನೋಡಿದಾಗ ಪಕ್ಕದಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೊಸೆಯನ್ನು ನೋಡಿ ಕಣ್ಣೀರು ಸುರಿಸಿದನು.ಲಕ್ಷ್ಮೀದೇವಿಯವರ ಈ ತ್ಯಾಗಕ್ಕೆ ಗೌರವ ಸಲ್ಲಿಸಲು ಕೋರಮಂಗಲದ ಜನ ಆಕೆಗಾಗಿ ಒಂದು ದೇಗುಲವನ್ನು ನಿರ್ಮಿಸಿದರು. ಇಂದಿಗೂ ಬೆಂಗಳೂರಿನ ಕೋರಮಂಗಲದ 8ನೇ ಬ್ಲಾಕ್ನಲ್ಲಿ ಲಕ್ಷ್ಮೀದೇವಿಯವರ ಸಮಾಧಿ ಮತ್ತು ಸ್ಮಾರಕವಿದೆ. ಅಲ್ಲಿರುವ ಶಿಲಾಶಾಸನಗಳಲ್ಲಿ ಈ ತ್ಯಾಗದ ಸಾರಾಂಶವನ್ನು ಉಲ್ಲೇಖಿಸಲಾಗಿದೆ.






