ದೇಶದಲ್ಲಿ ಕಲ್ಲಿದ್ದಲು ಪೂರೈಕೆಯನ್ನು ಸರಾಗಗೊಳಿಸುವ ಸಲುವಾಗಿ ರೈಲ್ವೆಯು ಕಳೆದ ಎರಡು ವಾರಗಳಲ್ಲಿ ಪ್ರತಿದಿನ 16 ಮೇಲ್ ಮತ್ತು ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದೆ. ಮೇ 24 ರವರೆಗೆ ಒಟ್ಡು 670 ಪ್ಯಾಸೆಂಜರ್ ರೈಲುಗಳ ಟ್ರಿಪ್‌ಗಳನ್ನು ಮೊಟಕುಗೊಳಿಸಲಾಗುತ್ತದೆ ಎಂದೂ ವರದಿಯಾಗಿವೆ. ಇನ್ನೊಂದೆಡೆ ಭಾರತವು ಪ್ರಸ್ತುತ ಆರು ವರ್ಷಗಳಲ್ಲಿ ಅತ್ಯಂತ ಕೆಟ್ಟ ವಿದ್ಯುತ್ ಕೊರತೆಯನ್ನೂ ಎದುರಿಸುತ್ತಿದೆ. ಮತ್ತೊಂದೆಡೆ ರಷ್ಯಾ ಯುಕ್ರೇನ್ ಯುದ್ಧವು ತೈಲ ಬೆಲೆಯ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ.
ಇಂಧನ ಬಿಕ್ಕಟ್ಟಿನ ಬಗ್ಗೆ ಹೆಚ್ಚುತ್ತಿರುವ ಈ ಕಳವಳಗಳ ಮಧ್ಯೆ, ದೇಶದ ಅಗ್ರಗಣ್ಯ ಸಂಶೋಧನಾ ಸಂಸ್ಥೆಯಾದ ಸೆಂಟ್ರಲ್ ಟ್ಯೂಬರ್ ರಿಸರ್ಚ್ ಇನ್ಸ್ಟಿಟ್ಯೂಟ್ ಟಪಿಯೋಕಾ ಎಲೆಗಳಿಂದ ವಿದ್ಯುತ್ ಉತ್ಪಾದಿಸುವ ಮೂಲಕ ಪ್ರಾಯೋಗಿಕ ಯಶಸ್ಸನ್ನು ಸಾಧಿಸಿದೆ ಎಂದು ಹೇಳಿಕೊಂಡಿದೆ.
ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಅಡಿಯಲ್ಲಿ ತಿರುವನಂತಪುರಂನಲ್ಲಿರುವ ಸೆಂಟ್ರಲ್ ಟ್ಯೂಬರ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಟಿಸಿಆರ್ಐ) ಹೊಸ ಆವಿಷ್ಕಾರದೊಂದಿಗೆ ಬಂದಿದ್ದು, ಇದು ಶುದ್ಧ ಇಂಧನ ಮೂಲಗಳ ಆವಿಷ್ಕಾರದಲ್ಲಿ ತೊಡಗಿರುವ ಭಾರತಕ್ಕೆ ಸಿಕ್ಕ ಯಶಸ್ಸು ಎಂದೇ ಪರಿಗಣಿಸಲಾಗುತ್ತಿದೆ. ಅಣುಶಕ್ತಿ ಇಲಾಖೆಯಿಂದ ಅನುದಾನಿತ ಯೋಜನೆಯಡಿಯಲ್ಲಿ ಸಿಟಿಸಿಆರ್‌ಐನ ಪ್ರಧಾನ ವಿಜ್ಞಾನಿ ಡಾ.ಸಿ.ಎ.ಜಯಪ್ರಕಾಶ್ ನೇತೃತ್ವದಲ್ಲಿ ಈ ಸಂಶೋಧನೆಯನ್ನು ಕೈಗೊಳ್ಳಲಾಗಿತ್ತು.
‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಯೋಜನೆಯಡಿ ಪ್ರೆಸ್ ಇನ್‌ಫರ್ಮೇಶನ್ ಬ್ಯೂರೋದ ಆಶ್ರಯದಲ್ಲಿ ಶುಕ್ರವಾರ ಸಿಟಿಸಿಆರ್‌ಐಗೆ ಭೇಟಿ ನೀಡಿದ ಹಿಮಾಚಲ ಪ್ರದೇಶದ ಪತ್ರಕರ್ತರ ಗುಂಪಿನ ಮುಂದೆ ಈ ಪ್ರಯೋಗವನ್ನು ಪ್ರಸ್ತುತಪಡಿಸಲಾಗಿದೆ ಎಂದು ಸಂಶೋಧನಾ ಕೇಂದ್ರದ ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.

“ಟ್ಯಾಪಿಯೋಕಾ ಎಲೆಗಳಿಂದ ಕೀಟನಾಶಕ ಅಣುಗಳನ್ನು ಯಾಂತ್ರಿಕವಾಗಿ ಹೊರತೆಗೆದ ನಂತರದ ತ್ಯಾಜ್ಯವನ್ನು ಮೆಥನೋಜೆನೆಸಿಸ್ಗೆ ಒಳಪಡಿಸಲಾಯಿತು. ತರುವಾಯ, ಅನಪೇಕ್ಷಿತ ಅನಿಲಗಳನ್ನು ಸ್ಕ್ರಬ್ ಮಾಡುವ ಮೂಲಕ ಅನಿಲ ಸಂಕೀರ್ಣದಿಂದ ಶುದ್ಧ ಮೀಥೇನ್ ಅನ್ನು ಪ್ರತ್ಯೇಕಿಸಲಾಯಿತು. ಅಂತಿಮವಾಗಿ, ಮಿಥೇನ್ ಅನ್ನು ಬಲೂನ್‌ಗಳಲ್ಲಿ ಸಂಗ್ರಹಿಸಲಾಯಿತು ಮತ್ತು ಪವರ್ ಹಾಕ್ ಬಯೋಗ್ಯಾಸ್ ಜನರೇಟರ್‌ಗಳ ತ್ರಿಶೂರ್ ಮೂಲದ ಟೆಕ್ನೋಪ್ರೆನಿಯರ್ ಫ್ರಾನ್ಸಿಸ್ ಒದಗಿಸಿದ ಕಸ್ಟಮೈಸ್ ಮಾಡಿದ ಜನರೇಟರ್‌ನ ಸಹಾಯದಿಂದ ವಿದ್ಯುತ್ ಉತ್ಪಾದನೆಗೆ ಬಳಸಲಾಯಿತು.” ಎಂದು ಅದು ಹೇಳಿದೆ. ಮರಗೆಣಸಿನಿಂದ (ಟಪಿಯೋಕಾ) ವಿದ್ಯುತ್ ಉತ್ಪಾದಿಸಲ್ಪಟ್ಟ ಕಾರಣ, ಅಂತಿಮ ಉತ್ಪನ್ನವನ್ನು CASSA DIPAH ಎಂದು ನಾಮಕರಣ ಮಾಡಲಾಗಿದೆ. “ಪ್ರತಿ ಹೆಕ್ಟೇರ್‌ಗೆ ಸುಮಾರು 5 ಟನ್ ಎಲೆಗಳು ಮತ್ತು ಕೊಂಬೆಗಳಷ್ಟು ಟಪಿಯೋಕಾ ಕೊಯ್ಲನ್ನು ಬಳಸಲಾಗಿದೆ. ಈ ಪ್ರಯೋಗದ ಯಶಸ್ಸಿನಿಂದ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಇದು ತೋರಿಸುತ್ತದೆ ”ಎಂದೂ ಅದು ಹೇಳಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ, 7 ಕೆಜಿ ಕೆಸುವಿನ ಎಲೆಗಳ ತ್ಯಾಜ್ಯದಿಂದ 1kwa ವಿದ್ಯುತ್ ಉತ್ಪಾದಿಸಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಅನ್ವೇಷಣೆಗಳು ನಡೆದರೆ ಟಪಿಯೋಕಾ ರೈತರಿಗೆ ಇದು ಮತ್ತೊಂದು ಆದಾಯದ ಮೂಲಕ್ಕೆ ಕಾರಣವಾಗಬಹುದು ಎಂದು ಜಯಪ್ರಕಾಶ್ ಹೇಳುತ್ತಾರೆ. ಇದರ ಜೊತೆಗೆ ಇಂಧನ ಮೂಲವಾಗಿಯೂ ಉಪಯೋಗವಾದರೆ ದೇಶದ ಇಂಧನ ಬಿಕ್ಕಟ್ಟಿಗೆ ಅತಿ ದೊಡ್ಡ ಪರಿಹಾರವಾಗಲಿದೆ.