ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಹಾಲಿ ಸಿಎಂ ನಿಂತಿದ್ದ ಎರಡೆರಡು ಕ್ಷೇತ್ರವನ್ನೂ ಪಂಜಾಬಿನಲ್ಲಿ ಕಳೆದುಕೊಂಡು ಮುಜುಗರಕ್ಕೀಡಾಗಿದೆ. ಇಂತಹ ಕಾಂಗ್ರೆಸ್ ಬಿಜೆಪಿಯನ್ನು ಮಣಿಸುತ್ತದೆ ಎಂಬ ವಿಶ್ವಾಸವನ್ನು ಬಹುತೇಕರು ಕಳೆದುಕೊಂಡಿದ್ದಾರೆ. ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕೂಡಾ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಅನ್ನು ಅವಲಂಬಿಸಿ ಕೂರುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, ಬಿಜೆಪಿಯನ್ನು ಮಣಿಸಲು ಪ್ರಾದೇಶಿಕ ಪಕ್ಷಗಳ ಒಕ್ಕೂಟವನ್ನು ರಚಿಸುವುದಾಗಿ ಹೇಳಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯ ಕುರಿತು ಮಾತನಾಡಿದ ಬ್ಯಾನರ್ಜಿ, “2024ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಬಯಸುವ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ನಾನು ಹೇಳುತ್ತೇನೆ, ಆದರೆ, ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಅನ್ನು ಅವಲಂಬಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಕಾಂಗ್ರೆಸ್ ಮೊದಲು ತಮ್ಮ ಸಂಘಟನೆಯ ಮೂಲಕ ಇಡೀ ದೇಶವನ್ನು ಆವರಿಸಿತ್ತು, ಆದರೆ ಅವರಿಗೆ ಇನ್ನು ಆ ಆಸಕ್ತಿ ಇಲ್ಲ, ಇದೀಗ ಅವರು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹಲವಾರು ಪ್ರಬಲ ಪ್ರಾದೇಶಿಕ ರಾಜಕೀಯ ಪಕ್ಷಗಳಿವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು” ಎಂದು ಅವರು ಹೇಳಿದ್ದಾರೆ.
ಇವಿಎಂ, ಕೇಂದ್ರೀಯ ಏಜೆನ್ಸಿಗಳನ್ನು ಬಳಸಿ ಬಿಜೆಪಿ ಗೆದ್ದಿದೆ
ಉತ್ತರ ಪ್ರದೇಶ ಹಾಗೂ ಇತರೆ ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಮತಾ ಬ್ಯಾನರ್ಜಿ ಸಂದೇಹ ಎತ್ತಿದ್ದು, ʼಇದು ಜನಾದೇಶದ ಗೆಲುವಲ್ಲ, ಮತಯಂತ್ರ ಹಾಗೂ ಕೇಂದ್ರ ಸಂಸ್ಥೆಗಳನ್ನು ಬಳಸಿಕೊಂಡು ಪಡೆದ ಗೆಲುವು ಎಂದು ಹೇಳಿದ್ದಾರೆ.
ಇವಿಎಂ ಸಾಗಾಟದ ಕುರಿತು ಸಮಾಜವಾದಿ ಆರೋಪದ ಬಗ್ಗೆ ಮಾತನಾಡಿದ ಮಮತಾ ಬ್ಯಾನರ್ಜಿ, “ಇವಿಎಂ ಸಾಗಾಟಕ್ಕಾಗಿ ವಾರಣಾಸಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಾನತುಗೊಂಡಿದ್ದರೆ ಅದು ಸಣ್ಣ ವಿಷಯವಲ್ಲ. ಇದು ಕೊಳ್ಳೆಯಾಗಿದೆ. ಅಖಿಲೇಶ್ ಸೋಲುವಂತೆ ಮಾಡಲಾಯಿತು ಎಂದು ನನಗೆ ಅನ್ನಿಸುತ್ತದೆ. ಅಖಿಲೇಶ್ ಭ್ರಮನಿರಸನರಾಗಬಾರದು, ಹತಾಶರಾಗಬಾರದು. ಅವರು ಜನರ ಬಳಿಗೆ ಹೋಗಿ ಇದನ್ನು ಪ್ರಶ್ನಿಸಬೇಕು” ಎಂದು ಹೇಳಿದ್ದಾರೆ.
“ಎಲ್ಲಾ ಇವಿಎಂಗಳು ವಿಧಿವಿಜ್ಞಾನ ಪರೀಕ್ಷೆಗೆ ಒಳಗಾಗಬೇಕು, ಜನರು ಮತ ಚಲಾಯಿಸಿದ ಹಾಗೂ ಎಣಿಕೆಗೆ ತಂದ ಯಂತ್ರಗಳು ಒಂದೇ ಎಂಬುದನ್ನು ಪರಿಶೀಳಿಸಬೇಕು, ಬಿಜೆಪಿ ಗೆದ್ದಿದ್ದರೆ, ಅದು ಜನಮತದಿಂದ ಬಂದ ಗೆಲುವಲ್ಲ ಯಂತ್ರೋಪಕರಣಗಳ ಗೆಲುವು” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ನಮ್ಮೊಂದಿಗೆ ವಿಲೀನವಾಗಲು ಇದು ಸೂಕ್ತ ಸಮಯ: ಟಿಎಂಸಿ ನಾಯಕ
ಈ ನಡುವೆ, ಕಾಂಗ್ರೆಸ್ ಟಿಎಂಸಿಯಲ್ಲಿ ವಿಲೀನವಾಗಲಿ ಎಂದು ಟಿಎಂಸಿ ನಾಯಕರು ಕಾಂಗ್ರೆಸ್ಗೆ ಆಹ್ವಾನ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ಎದುರಿಸುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಅನ್ನು ಟಿಎಂಸಿಯೊಂದಿಗೆ ವಿಲೀನಗೊಳಿಸಿ ಬಿಜೆಪಿಯನ್ನು ಸೋಲಿಸುವ ಏಕೈಕ ವ್ಯಕ್ತಿ ಮಮತಾ ಬ್ಯಾನರ್ಜಿ ನೇತೃತ್ವದಡಿಯಲ್ಲಿ ಕೈಜೋಡಿಸುವಂತೆ ಕಾಂಗ್ರೆಸ್ ನಾಯಕರಿಗೆ ಟಿಎಂಸಿ ನಾಯಕ, ಸಚಿವ ಫಿರ್ಹಾದ್ ಹಕೀಮ್ ಕರೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ರಾಜ್ಯ ಸಾರಿಗೆ ಮತ್ತು ನಗರಾಭಿವೃದ್ಧಿ ಸಚಿವರೂ ಆಗಿರುವ ಫಿರ್ಹಾದ್ ಹಕೀಮ್ ಮಾತನಾಡಿ, “ಕಾಂಗ್ರೆಸ್ನಂತಹ ಹಳೆಯ ಪಕ್ಷ ಏಕೆ ಅಪ್ರಸ್ತುತವಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾವು ಕೂಡ ಈ ಪಕ್ಷದ ಭಾಗವಾಗಿದ್ದೆವು. ಕಾಂಗ್ರೆಸ್, ಟಿಎಂಸಿ ಜೊತೆ ವಿಲೀನವಾಗಬೇಕು. ಇದೇ ಸರಿಯಾದ ಸಮಯ. ನಂತರ ರಾಷ್ಟ್ರಮಟ್ಟದಲ್ಲಿ ಮಹಾತ್ಮ ಗಾಂಧಿ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ತತ್ವಗಳ ಮೇಲೆ ನಾವು ನಾಥೂರಾಂ ಗೋಡ್ಸೆಯ ತತ್ವಗಳ ವಿರುದ್ಧ ಹೋರಾಡಬಹುದು’’ ಎಂದು ಹೇಳಿದ್ದಾರೆ.