
ಉಡುಪಿ: ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ ವೀರಪ್ಪಮೊಯ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಕಾರ್ಕಳದಲ್ಲಿ ನಡೆದ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಭಾಗಿಯಾಗಿದ್ದ ಮೊಯ್ಲಿ, ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲೇ ಈ ಹೇಳಿಕೆ ನೀಡಿದ್ದಾರೆ.

ಡಿ.ಕೆ ಶಿವಕುಮಾರ್ಗೆ ಪ್ರಥಮ ಬಾರಿ ವಿಧಾನಸಭಾ ಕ್ಷೇತ್ರದ ಸ್ಪರ್ಧೆಗೆ ಟಿಕೆಟ್ ಕೊಡಿಸಿದವ ನಾನು. ಇವತ್ತು ಯಶಸ್ವಿ ನಾಯಕರಾಗಿ ಕರ್ನಾಟಕದಲ್ಲಿ ಮೂಡಿ ಬಂದಿದ್ದಾರೆ. ಅವರು ಸದ್ಯದಲ್ಲೇ ಮುಖ್ಯಮಂತ್ರಿ ಆಗಬೇಕು. ಕಾರ್ಕಳದ ಗೊಮ್ಮಟೇಶ್ವರನ ಪುಣ್ಯಭೂಮಿ ಇದು. ಅವರು ಗೊಮ್ಮಟೇಶ್ವರನ ರೀತಿಯಲ್ಲೇ ಬೆಳೆಯಲಿ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಕಷ್ಟದಲ್ಲಿ ಇರುವಾಗ ಸಂಚಲನ ಮೂಡಿಸಿದ್ದಾರೆ. ರಾಷ್ಟ್ರದ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೋರಾಟ ಮಾಡಿದ ಧೀಮಂತ ನಾಯಕ ಡಿ.ಕೆ ಶಿವಕುಮಾರ್ ಎಂದು ಬಣ್ಣಿಸಿದ್ದಾರೆ.

ಪಕ್ಷಕ್ಕೆ ಒಳ್ಳೆಯ ನಾಯಕತ್ವ ಕೊಟ್ಟಿದ್ದೀರಿ, ಸಂಘಟನೆ ಮಾಡಿದ್ದೀರಿ. ಕೆಲವು ಹೇಳಿಕೆಗಳು ಬರಬಹುದು, ಹೋಗಬಹುದು. ನೀವು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರು ಕೂಡ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಟೀಕೆ ಮಾಡುವವರು ವಯಕ್ತಿಕ ತೃಪ್ತಿಗೆ ಟೀಕೆ ಮಾಡಬಹುದು. ಮುಖ್ಯಮಂತ್ರಿ ಹುದ್ದೆ ಯಾರು ಕೊಡುವ ವರ ಅಲ್ಲ. ಅದು ಅವರು ಸಂಪಾದನೆ ಮಾಡಿರುವ ಶಕ್ತಿ. ಸಂಪಾದನೆ ಮಾಡಿರುವ ಶಕ್ತಿಯೇ ಮುಖ್ಯಮಂತ್ರಿ ಪದವಿ. ಕಾರ್ಕಳದ ಈ ಪುಣ್ಯ ಭೂವಿಯಲ್ಲಿ ಆಡಿದ ಈ ಮಾತು ನೂರಕ್ಕೆ ನೂರು ಸತ್ಯ. ಆದರೆ ಡಿ.ಕೆ ಶಿವಕುಮಾರ್ ಅವರೇ, ನೀವು ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ಕೊಡಬಾರದು ಎಂದು ಕಿವಿ ಮಾತನ್ನೂ ಹೇಳಿದ್ದಾರೆ.

ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಈಗಾಗಲೇ ಸೆಟಲ್ಡ್ ಆಗಿರುವ ಮ್ಯಾಟರ್. ಇದು ತೀರ್ಮಾನ ಆಗಿರುವ ವಿಷಯ. ಜನರ ಮನಸ್ಸಿನಲ್ಲಿ ತೀರ್ಮಾನ ಆಗಿದೆ. ಇತಿಹಾಸ ತೀರ್ಮಾನ ಮಾಡಿದೆ. ಮ್ಯಾಟರ್ ಆಫ್ ಟೈಮ್ ಅಷ್ಟೇ. ಅವರ ಬೆಂಬಲಿಗರು ಕೂಡ ನಾವೇ ಮಾಡಿಸಿದ್ದೇವೆ ಎಂದು ಹೇಳಿಕೊಳ್ಳಬೇಕಾಗಿಲ್ಲ. ಕೋಟಿ ಕೋಟಿ ಪ್ರಯತ್ನ ಮಾಡಿದರೂ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಸಾಧ್ಯವಿಲ್ಲ ಅನ್ನೋದು ಶತಸಿದ್ಧ. ನೀವು ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪಿಲ್ಲ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ದೇವರ ಭೂಮಿ. ಆದರೆ ಬಿಜೆಪಿ ದೇವರ ಭೂಮಿಯನ್ನು ಋಣ ಭೂಮಿ ಮಾಡಿದೆ ಎಂದು ಟೀಕಿಸಿದ್ದಾರೆ.