ಕೋಲಾರ: ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ, ಇಲ್ಲಿ ಸ್ಪರ್ಧಿಸುತ್ತಾರೆ ಎಂಬೆಲ್ಲ ಊಹಾಪೋಹಗಳಿಗೆ ಕಡಿವಾಣಗಳನ್ನು ಹಾಕಿ, ಸಿದ್ದರಾಮಯ್ಯ ಅಲ್ಲ ಸ್ವತಹ ರಾಹುಲ್ ಗಾಂಧಿಯೇ ಇಲ್ಲಿ ಸ್ಪರ್ಧಿಸಿದರೂ ಸರಿ, ಈ ಬಾರಿ ನಮ್ಮ ಬಿಜೆಪಿ ಅಭ್ಯರ್ಥಿ ಇಲ್ಲಿ ಗೆಲ್ಲುವುದು ಶತಸ್ಸಿದ್ದ ಎಂದು ಸಂಸದ ಎಸ್.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ವಕ್ಕಲೇರಿ ಗ್ರಾಮದಲ್ಲಿ ಆಯೋಜಿಸಿದ್ದ ಬೃಹತ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಹತ್ತು ವರ್ಷಗಳ ಕಾಲ ವರ್ತೂರು ಪ್ರಕಾಶ್ ರವರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳು ಅವರಿಗೆ ಶ್ರೀರಕ್ಷೆ ಆಗಲಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಅವರು ಖಂಡಿತ ಗೆಲುವನ್ನು ಸಾಧಿಸುತ್ತಾರೆ. ಸಿದ್ದರಾಮಯ್ಯನವರು ತಮ್ಮ ಕ್ಷೇತ್ರದಲ್ಲಿ ಸೋತು ಸುಣ್ಣವಾಗಿ ಈಗ ಕೋಲಾರಕ್ಕೆ ಬರುತ್ತಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ದಲಿತ ನಾಯಕರಾದ ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕಿತ್ತು ಅವರನ್ನು ಸಿದ್ದರಾಮಯ್ಯ ಅವರೇ ಸೋಲಿಸಿದರು. ಮಲ್ಲಿಕಾರ್ಜುನ ಖರ್ಗೆ ರವರನ್ನು ಸೋಲಿಸಿದರು ಎಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಇವರನ್ನೆಲ್ಲ ಹಾಳು ಮಾಡಿ ಬರುತ್ತಿರುವ ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಕೋಲಾರದ ಜನ ನಿಮ್ಮನ್ನು ಸೋಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಅಹಿಂದಪರ ಮತ್ತು ದಲಿತಪರ ಆಡಳಿತ ನೀಡುತ್ತಿದ್ದು, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಆಗಮನದಿಂದ ಆನೆ ಬಲ ಬಂದಂತಾಗಿದ್ದು ಮುಂಬರುವ ದಿನಗಳಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ಖಚಿತ ಎಂದು ಅಭಿಪ್ರಾಯಿಸಿದರು.