ಡೆಲ್ಟಾದೊಂದಿಗೆ ಪ್ರಾರಂಭವಾಗಿ ಆಕ್ಸಿಜನ್ ಕೊರತೆ, ಆಸ್ಪತ್ರೆಗಳಲ್ಲಿನ ಬೆಡ್‌ಗಳ ಕೊರತೆ, ಸಾವಿರಾರು ಪ್ರಾಣ ಬಲಿ ಎಲ್ಲಾ ಮುಗಿದು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗ ವರ್ಷದ ಕೊನೆಯಲ್ಲಿ ಮತ್ತೆ ಒಮಿಕ್ರಾನ್ ಭೀತಿ…2021 ರ ಅತ್ಯುತ್ತಮ ವಿಷಯವೆಂದರೆ ಅದು ಮುಗಿದೇ ಹೋಯಿತು ಅನ್ನುವುದು ಎಂದವರಿದ್ದಾರೆ. ಆದರೆ 2021ರ ಕೆಲವು ಧನಾತ್ಮಕ ಅಂಶಗಳನ್ನು ನಿರ್ಲಕ್ಷಿಸಿದರೆ ತಪ್ಪಾಗುತ್ತದೆ.
ವಿಶೇಷವಾಗಿ ಕ್ರೀಡೆಯಲ್ಲಿ ಭಾರತಕ್ಕೆ ಹಲವು ಹೆಮ್ಮೆಯ ಕ್ಷಣಗಳನ್ನು ನೀಡಿದ ವರ್ಷವದು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಅತ್ಯಂತ ಭರವಸೆಯ ಪ್ರದರ್ಶನ ನೀಡಿತ್ತು. ಪದಕ ಪಟ್ಟಿಯಲ್ಲಿ ನಾವು ಅಗ್ರಸ್ಥಾನದಲ್ಲಿ ಇರದಿದ್ದರೂ ಕಳೆದ ವರ್ಷ ಭಾರತದ ಕ್ರೀಡೆಗೆ ಹೊಸ ಕಾಯಕಲ್ಪ ಸಿಕ್ಕಿದೆ ಎಂದರೆ ತಪ್ಪಾಗಲಾರದು. ಹಾಕಿಯಲ್ಲಿನ ಸಾಧನೆ, ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಪ್ರಗತಿ, ಬ್ಯಾಡ್ಮಿಂಟನ್‌ನಲ್ಲಿ ನಿರಂತರ ಸಾಮರ್ಥ್ಯ ವೃದ್ಧಿ ಮತ್ತು ಕುಸ್ತಿ, ವೇಟ್‌ಲಿಫ್ಟಿಂಗ್, ಶೂಟಿಂಗ್, ಬಿಲ್ಲುಗಾರಿಕೆ, ಓಟ ಮತ್ತು ಗಾಲ್ಫ್‌ನಲ್ಲಿ ಭರವಸೆ ಮೂಡಿಸುವ ಸಾಧನೆ ಮಾಡಿದೆ. ಹೆಚ್ಚಿನ ಶಕ್ತಿ ಮತ್ತು ವೇಗ ಬಯಸುವ ಫುಟ್ಬಾಲ್‌ನಲ್ಲೂ ಭಾರತ ವಿಶೇಷ ಸಾಧನೆ ಮಾಡಿದೆ.
ಭಾರತದ ಮಟ್ಟಿಗೆ ಭರವಸೆ ಮೂಡಿಸಿದ ಮತ್ತೊಂದು ಕ್ಷೇತ್ರ ಷೇರು ಮಾರುಕಟ್ಟೆ. ‘ಫೈನಾನ್ಶಿಯಲ್ ಟೈಮ್ಸ್’ನ ಎಂಎಸ್‌ಸಿಐ ಸೂಚ್ಯಂಕಗಳನ್ನು ಉಲ್ಲೇಖಿಸಿ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಸ್ಟಾಕ್ ಮಾರುಕಟ್ಟೆಗಳಿಂದ ಕಳಪೆ ಪ್ರದರ್ಶನ ಕಂಡುಬಂದಿದೆ ಎಂದಿತ್ತು. ಆದರೆ ಭಾರತದಲ್ಲಿ, ಕಳೆದ ಮೂರು ವರ್ಷಗಳಿಂದ ಸೆನ್ಸೆಕ್ಸ್ ಮೌಲ್ಯಗಳಲ್ಲಿ ಎರಡು-ಅಂಕಿಯ ಹೆಚ್ಚಳ ಕಂಡುಬಂದಿದೆ.
ಮೂರನೆಯ ಸ್ಪಷ್ಟವಾದ ಸಕಾರಾತ್ಮಕ ಅಂಶವೆಂದರೆ ದೇಶದ ಉದ್ಯಮಶೀಲ ಪ್ರತಿಭೆಗಳ ಸಂಪತ್ತು. ಭಾರತಕ್ಕೆ ಇದೇನು ಹೊಸದಲ್ಲ. ಭಾರತವು ಕಳೆದ ಮೂರು ದಶಕಗಳಲ್ಲಿ, ಭಾರತವು ಮೊದಲ ತಲೆಮಾರಿನ ಸುನಿಲ್ ಮಿತ್ತಲ್ ಮತ್ತು ಉದಯ್ ಕೋಟಕ್‌ರಂತಹ ಉದ್ಯಮಿಗಳನ್ನು, ಸಾಫ್ಟ್‌ವೇರ್ ಸೇವೆ ಮತ್ತು ಫಾರ್ಮಾ ವಲಯಗಳಲ್ಲಿ ಅನೇಕ ಪ್ರಮುಖ ಉದ್ದಿಮೆಗಳನ್ನು ಮತ್ತು ಮುಂಜಾಲ್‌ಗಳಂತಹ ಸ್ವದೇಶಿ ಸ್ವಯಂ ಉದ್ಯಮಿಗಳನ್ನು ತಯಾರಿಸಿದೆ. ಕರೋನಾ ಮತ್ತದು ಸೃಷ್ಡಿಸಿದ ಆರ್ಥಿಕ ಅನಾಹುತಗಳು ಇಂತಹ ಪ್ರತಿಭೆಗಳನ್ನು ಮಟ್ಟಹಾಕಲಿಲ್ಲ ಎನ್ನುವುದು 2021ರ ಅತಿದೊಡ್ಡ ಸಕಾರಾತ್ಮಕ ಅಂಶವಾಗಿದೆ.
ನಾಲ್ಕನೆಯದಾಗಿ ಮತ್ತು ಮುಖ್ಯವಾಗಿ ತಂತ್ರಜ್ಞಾನದ ಸದುಪಯೋಗ. ಡಿಜಿಟಲ್ ಇಂಡಿಯಾವನ್ನು ಮುನ್ನಡೆಸಿದ ಸಾಫ್ಟ್‌ವೇರ್ ತಂತ್ರಜ್ಞರು, ಟೆಕ್ ಉದ್ಯಮಿಗಳು ತಂತ್ರಜ್ಞಾನದ ಪ್ರಯೋಜನಗಳು ಬಹುತೇಕ ಭಾರತೀಯರನ್ನು ತಲುಪುವಂತೆ ಮಾಡಿದ್ದಾರೆ.
ಐದನೆಯದಾಗಿ ಭದ್ರತಾ ಸವಾಲುಗಳು ಪ್ರತಿನಿತ್ಯ ಹೆಚ್ಚುತ್ತಿರುವ ದೇಶದಲ್ಲಿ ರಕ್ಷಣಾ ಉತ್ಪಾದನಾ ನೆಲೆಯನ್ನು ಅಭಿವೃದ್ಧಿ ಪಡಿಸುವ ದಶಕಗಳ ಪ್ರಯತ್ನವು ಒಂದು ಹಂತಕ್ಕೆ ಯಶಸ್ಸಿನ ದಾರಿಗೆ ಬಂದಿದೆ. ಭಾರತವು ತನ್ನ ಮೊದಲ ದೇಶೀಯವಾಗಿ ನಿರ್ಮಿಸಿದ ವಿಮಾನವಾಹಕ ನೌಕೆಯನ್ನು ಹೊರತಂದಿದೆ, ತನ್ನ ಎರಡನೇ ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಯನ್ನು ನಿಯೋಜಿಸಲಿದೆ ಮತ್ತು ಕ್ಷಿಪಣಿಗಳ ಪೂರ್ಣ-ಸ್ಪೆಕ್ಟ್ರಮ್ ಶ್ರೇಣಿಯನ್ನು ಅಭಿವೃದ್ಧಿಪಡಿಸಿದೆ. ರಕ್ಷಣಾ ಉಪಕರಣಗಳ ವಿಶ್ವದ ಎರಡನೇ ಅತಿ ದೊಡ್ಡ ಆಮದುದಾರ ದೇಶವು ಈಗ ಗಮನಾರ್ಹ ಉತ್ಪಾದಕನಾಗಿಯೂ ಪ್ರಗತಿ ಸಾಧಿಸುತ್ತಿದೆ.
ಆರನೆಯದಾಗಿ, ಮುಂದಿನ ಎರಡು ವರ್ಷಗಳಲ್ಲಿ ನಾವು ದೇಶದ ಭೌತಿಕ ಮೂಲಸೌಕರ್ಯದಲ್ಲಿ ದೀರ್ಘಾವಧಿಯ ಹೂಡಿಕೆಗಳ ಫಲಿತಾಂಶಗಳನ್ನು ನೋಡಬಹುದು. ಪಶ್ಚಿಮ ಹೈಸ್ಪೀಡ್ ರೈಲ್ವೇ ಸರಕು ಸಾಗಣೆ ಕಾರಿಡಾರ್ ಮತ್ತು ಹೊಸ ಎಕ್ಸ್‌ಪ್ರೆಸ್‌ವೇಗಳು ಮತ್ತು ಹೆದ್ದಾರಿಗಳೊಂದಿಗೆ ಉತ್ತಮ ಮೂಲಸೌಕರ್ಯ ವ್ಯವಸ್ಥೆ ರೂಪುಗೊಳ್ಳಬಹುದು. ದೂರಸಂಪರ್ಕ ಕ್ರಾಂತಿ , ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಹಾಗೂ ಇತರ ಟೆಕ್ ಸೇವೆಗಳು ಲಕ್ಷಾಂತರ ಜನರ ಜೀವನವನ್ನು ಸರಳಗೊಳಿಸಿವೆ.
ಅಂತಿಮವಾಗಿ, ಇಡೀ ಮನುಕುಲವನ್ನು ಈ ಎರಡು ವರ್ಷಗಳಲ್ಲಿ ಇನ್ನಿಲ್ಲದಂತೆ ಕಾಡಿದ ಅತಿ ಪುಟ್ಟ ಕರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯಲಾಗಿದೆ. ಮತ್ತು ಈಗಾಗಲೇ ಈ ದೇಶದ ಬಹುತೇಕರಿಗೆ ಲಸಿಕೆ ನೀಡಲಾಗಿದೆ. ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 31, ಬೆಳಿಗ್ಗೆ 7 ಗಂಟೆಯವರೆಗೆ 84,33,69,725 ಮೊದಲ ಡೋಸ್ ಮತ್ತು 60,20,46,989 ಎರಡನೇ ಡೋಸ್ ಸೇರಿದಂತೆ ಒಟ್ಟು 1,44,54,16,714 ಲಸಿಕೆಗಳನ್ನು ಈ ದೇಶದಲ್ಲಿ ನೀಡಲಾಗಿದೆ.