ಬೆಂಗಳೂರು : ಮದುವೆ ಅನ್ನೋದು ಎಷ್ಟು ಪವಿತ್ರ ಸಂಬಂಧವೋ ಸ್ವಲ್ಪ ಹಳಿ ತಪ್ಪಿತು ಅಂದರೆ ಇದಕ್ಕಿಂತ ಭಯಾನಕ ಇನ್ನೊಂದಿಲ್ಲ. ಪರಸ್ಪರ ನಂಬಿಕೆ ಮೇಲೆ ನಡೆಯುವ ಈ ಸಂಬಂಧದಲ್ಲಿ ಅಪನಂಬಿಕೆ ಶುರುವಾಯ್ತು ಅಂದರೆ ಅಲ್ಲಿಂದ ಸಮಸ್ಯೆಗಳು ಆರಂಭವಾಗುತ್ತದೆ. ಇದೇ ರೀತಿ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆಗೈದ ಘಟನೆಯು ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಕೋಲ್ಕತ್ತಾ ಮೂಲದವರಾದ ಶೇಕ್ ಸೋಹೆಲ್ ಹಾಗೂ ತಬ್ಸಿಮ್ ಬೇಬಿ ಕಳೆದ 14 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದಾದ ಬಳಿಕ ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ಈ ಸಂದರ್ಭದಲ್ಲಿ ತಬ್ಸಿಮ್ ಬೇಬಿ ಅಕ್ರಮ ಸಂಬಂಧವನ್ನು ಆರಂಭಿಸಿದ್ದಳು ಎನ್ನಲಾಗಿದೆ. ಈ ವಿಚಾರ ಅರಿತ ಶೇಕ್ ಸೋಹೆಲ್ ತನ್ನ ಪತ್ನಿಯ ಜೊತೆ ಕೋಲ್ಕತ್ತಾಗೆ ಆರು ವರ್ಷಗಳ ಹಿಂದೆ ವಾಪಸ್ಸಾಗಿದ್ದ.
ಆದರೆ ಪತಿಯನ್ನು ತೊರೆದ ತಬ್ಸಿಮ್ ತನ್ನ ಪ್ರಿಯಕರನ ಜೊತೆಯಲ್ಲಿಯೇ ಇರಲು ಬೆಂಗಳೂರಿಗೆ ಮರಳಿದ್ದಳು. ಪತ್ನಿಯ ಜೊತೆ ಮಾತನಾಡಬೇಕೆಂದು ಬೆಂಗಳೂರಿಗೆ ಮರಳಿದ್ದ ಶೇಕ್ ಸೋಹೆಲ್ ನಿನ್ನೆ ರಾತ್ರಿ ತಬ್ಸಿಮ್ಳನ್ನು ಭೇಟಿಯಾಗಿದ್ದಾನೆ. ಇಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು ತಬ್ಸಿಮ್ ಬೇಬಿಯನ್ನು ಶೇಕ್ ಸೋಹೆಲ್ ಕೊಲೆ ಮಾಡಿದ್ದಾನೆ. ಅಲ್ಲದೇ ತಬ್ಸಿಮ್ ಹಾಗೂ ಆಕೆಯ ಪ್ರಿಯಕರನಿಗೆ ಜನಿಸಿದ ಮಗುವಿನ ಮೇಲೂ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಶೇಕ್ ಸೋಹೆಲ್ನನ್ನು ಪೊಲೀಸರು ಬಂಧಿಸಿದ್ದಾರೆ.