ಬೆಂಗಳೂರು:ಮಾ.21: ಹಾಸನ ಜಿಲ್ಲೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದೆ. ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಪೈಪೋಟಿ ಜೊತೆಗೆ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗು ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದು, ಜೆಡಿಎಸ್ ಭದ್ರಕೋಟೆಗೆ ಕಾಂಗ್ರೆಸ್ ಕೊಡಲಿ ಇಟ್ಟಂತೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಬಹು ಚರ್ಚಿತ ವಾಚಾರ. ಈಗಾಗಲೇ ಅಧಿಕೃತವಾಗಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡ್ತೇನೆ ಎಂದು ಶಾಸಕ ಶಿವಲಿಂಗೇಗೌಡ ಘೋಷಣೆ ಮಾಡಿಕೊಂಡಿದ್ದರೆ, ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಇನ್ನು ಕಾಂಗ್ರೆಸ್ ಅಥವಾ ಬಿಜೆಪಿ ಅನ್ನೋ ತೂಗುಯ್ಯಾಲೆಯಲ್ಲಿ ಇದ್ದಾರೆ. ಇದರ ನಡುವೆ ಅರಸೀಕೆರೆ ಶಾಸಕ ಶಿವಲಿಂಗೇಗೌಡರನ್ನು ಉಳಿಸಿಕೊಳ್ಳಲು ಜೆಡಿಎಸ್ ನಾಯಕ ಹೆಚ್.ಡಿ ರೇವಣ್ಣ ಪ್ರಯತ್ನ ಮಾಡಿರುವ ಆಡಿಯೋ ಅರಸೀಕೆರೆಯಲ್ಲಿ ಸಂಚಲನ ಮೂಡಿಸಿದೆ. ಈ ಆಡಿಯೋ ಜೆಡಿಎಸ್ ತೊರೆದ ಶಿವಲಿಂಗೇಗೌಡರ ಗೆಲುವಿಗೆ ಮುಳುವಾಗುತ್ತಾ ಅನ್ನೋ ಭೀತಿ ಸೃಷ್ಟಿಸಿದೆ.
ಪಕ್ಷ ಬಿಡದಂತೆ ಪರಿಪರಿಯಾಗಿ ಬೇಡಿಕೊಂಡ ರೇವಣ್ಣ..!

ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಶಿವಲಿಂಗೇಗೌಡರು ಜೆಡಿಎಸ್ ತೊರೆಯುವ ಮೊದಲು ರೇವಣ್ಣ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಶಿವಲಿಂಗೇಗೌಡರು ಜೆಡಿಎಸ್ ಬಿಡದಂತೆ ಮನವೊಲಿಸಲು ರೇವಣ್ಣ ಕಸರತ್ತು ಮಾಡಿದ್ದು, ಯಾವೋ ಏನೇನು ಆಡುತ್ತವೆ ಅಂತಾ ನೀನು ಆಡಬೇಡ ಶಿವಲಿಂಗಣ್ಣ, ನಾನು ಯಾವತ್ತಾದ್ರೂ ನಿನಗೆ ಕೆಟ್ಟದ್ದ ಮಾತಾಡಿದ್ದೀನೇನಯ್ಯ, ನೀನು ಮೋಸ ಮಾಡಿದ್ದಿ ಅಂತಾ ಹೇಳಿದ್ದೇನಾ..? ಎಂದಿದ್ದಾರೆ. ಇದಕ್ಕೆ ರಾಜಿ ಮಾಡಿಕೊಳ್ಳುತ್ತೇನೆ ತಡೀರಿ ಎಂದರು ನೀವು ಸಭೆ ಮಾಡಿಬಿಟ್ಟಿದ್ದೀರಲ್ಲ ಎಂದು ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಶಿವಲಿಂಗು ನನಗೆ ಇನ್ನು ಉಳಿದಿರೋದು 90 ದಿನ, ಗೆಲ್ಲಿಸ್ಕೊಂಡ್ ಬರೋದು ನನ್ನ ಜವಾಬ್ದಾರಿ ಅಂತ ಹೇಳಿಲ್ವಾ ಎಂದಿರುವ ಹೆಚ್.ಡಿ ರೇವಣ್ಣ ಮಾತಿಗೆ ಇವನು ಈ ಮಾತ್ರೆ ಅನ್ನೋನು ಬಂದಿದ್ದಾರಲ್ಲ ಎಂದು ಎನ್.ಆರ್ ಸಂತೋಷ್ ಹೆಸರು ಹೇಳದೆ ಶಿವಲಿಂಗೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಸಭೆ ಕ್ಯಾನ್ಸಲ್ ಮಾಡ್ಬೇಕಾ ಹೇಳು ಶಿವಲಿಂಗು..!?

ಶಿವಲಿಂಗಣ್ಣ ಒಂದು ನಿಮಿಷ ತಾಳ್ಮೆಯಿಂದ ಕೇಳ್ಕೊಳೋ, ನನ್ನ ನಿನ್ನ ಸಂಬಂಧ ಹದಿನೆಂಟು ಇಪ್ಪತ್ತು ವರ್ಷಗಳದ್ದು. ಶಿವಲಿಂಗೇಗೌಡರಿಗೆ ತೊಂದರೆ ಆಗಬಾರದು ಅನ್ನೋದು ನನ್ನ ಭಾವನೆ. ನೋಡಯ್ಯ ನಿನ್ನ ಹಣೆಯಲ್ಲಿ ಬರೆದಿದ್ದನ್ನು ಯಾರು ತಪ್ಪಿಸಲಿಕ್ಕೆ ಆಗೋದಿಲ್ಲ ಎಂದಿರುವ ರೇವಣ್ಣಗೆ ಸಮಾಧಾನಚಿತ್ತದಿಂದಲೇ ಉತ್ತರ ಕೊಟ್ಟಿರುವ ಶಿವಲಿಂಗೇಗೌಡ, ನನ್ನ ಹಣೆಬರಹದ ಪರೀಕ್ಷೆಯನ್ನು ನನ್ನ ಜನಗಳೇ ಮಾಡ್ತಾರೆ. ನನ್ನ ಜನಗಳೇ ನನ್ನ ಹಣೆಬರಹ ಬರಿತಾರೆ. 50 ಸಾವಿರದಿಂದ ಗೆಲ್ತೀನಿ ಎಂದು ಎರಡು ವರ್ಷ ಹೇಳಿದ್ದೆ, ಅವನು ಯಾವನೋ ಯಡಿಯೂರಪ್ಪನ ಸಿ.ಡಿ ಮಾಡಿದವನು, ಇಲ್ಲೂ ಮಾಡ್ತಾವ್ನೆ ಎಂದು ಹೆಸರು ಹೇಳದೆ ಬಿಜೆಪಿ ಮುಖಂಡ ಎನ್.ಆರ್ ಸಂತೋಷ್ ವಿರುದ್ಧ ಗುಡುಗಿದ್ದಾರೆ. ಇನ್ನು ನಾಳೆ ಕಾರ್ಯಕ್ರಮ ಇಟ್ಕೊಂಡು ಅರಸೀಕೆರೆ ತುಂಬೆಲ್ಲಾ ಬಾವುಟ ಕಟ್ಟಿದ್ದಾರೆ ಈಗ ಫೋನ್ ಮಾಡಿದ್ದೀರಿ ಎಂದು ರೇವಣ್ಣನನ್ನು ಪ್ರಶ್ನಿಸಿದ್ದಾರೆ. ಅರಸೀಕೆರೆ ತುಂಬಾ ಬಾವುಟ ಕಟ್ಟಿದರೆ ಏನಯ್ಯ, ಮೊನ್ನೆ ದಿನ ನಾನು ಬಂದಾಗ ಹೇಳಿ ಬರ್ಲಿಲ್ವಾ ನಿನಗೆ, ನೀವು ಹೇಳಿದಿರಿ, ನೀನು ಸಭೆ ಮಾಡಬೇಕು, ಮಾಡೋದಾದ್ರೆ ಮಾಡು. ಇಲ್ಲ ನಾವು ಬೇರೆ ನೋಡ್ಕೋತಿವಿ ಅನ್ಬೇಕಿತ್ತು ಎಂದು ಜೆಡಿಎಸ್ ಸಮಾವೇಶದ ಬಗ್ಗೆ ಹೇಳಿದ್ದಾರೆ ಶಿವಲಿಂಗೇಗೌಡ. ಹಂಗಾದ್ರೆ ನಾಳೆ ಸಭೆ ರದ್ದು ಮಾಡೋನೇನಯ್ಯ ಶಿವಲಿಂಗು, ಇನ್ನು 15 ದಿನ ಬಿಟ್ಟು ಶಿವಲಿಂಗಗೌಡ್ರೆ ಸಭೆ ಕರಿತಾರೆ ಅಂತ ಹೇಳಲೇನಯ್ಯ ಎಂದ ಮಾತಿಗೆ ಅದೆಲ್ಲಾ ಆಗುವುದಿಲ್ಲ. ಈಗ ಬಂದು ಮಾಡ್ಕೊಂಡು ಹೋಗಿ ಎಂದಿದ್ದಾರೆ.
ನೀನೇ ಮಂತ್ರಿ ಆಗುವಂತೆ ಜೆಡಿಎಸ್ ಬಿಡಬೇಡಯ್ಯ..!

ಈಗ ನಾಳಿನ ಸಭೆಯಲ್ಲಿ ಏನಂತ ಹೇಳಬೇಕು ಶಿವಲಿಂಗು, ಶಿವಲಿಂಗೇಗೌಡರ ಮನೆಯಲ್ಲಿ ಮದುವೆ ಇದೆ ಬರೋದಿಕ್ಕೆ ಆಗಿಲ್ಲ ಅಂತಾ ಹೇಳೋದಾ..? ಅಂದಿರೋ ರೇವಣ್ಣ ಮಾತಿಗೆ ಏನಾದ್ರೂ ಹೇಳಿ ಅವರ ಮನೇಲಿ ಮದುವೆ ಇದೆ ಅವರು ಬರಕಾಗಿಲ್ಲ ಅಂತ ಹೇಳಿ ಅಂದಿದ್ದಾರೆ. ಅದಕ್ಕೆ ರೇವಣ್ಣ, ಅವರು ಸಭೆಗೆ ಬರೋಕಾಗಿಲ್ಲ, ಆದರೆ ಅವರು ಜೆಡಿಎಸ್ನಲ್ಲೇ ಇರ್ತಾರೆ ಅಂತ ಹೇಳೋದಾ ಅಂದಿದ್ದಕ್ಕೆ ಆ ಪದ ಬೇಡ ನಾನು ಇರ್ತೀನೋ, ಇರಲ್ವೋ ಅನ್ನೋದನ್ನ ಹೇಳ್ತೀನಿ ನಿಮಗೆ. ನಿಮಗೆ ದೊಡ್ಡವರಿಗೆ ಹೇಳದೆ ನಾನು ಎಲ್ಲಿಗೂ ಹೋಗಲ್ಲ. ನಾನೇನು ಕಾಂಗ್ರೆಸಿಗೆ ಹೋದರೂ ಗೆಲ್ಲೋಕಾಗಲ್ಲ ಎಂದಿರುವ ಶಿವಲಿಂಗೇಗೌಡರಿಗೆ ಶಿವಲಿಂಗಣ್ಣ ನನ್ನ ಜೊತೆ ನಿನ್ನನ್ನ ಗೆಲ್ಲಿಸ್ಕೊಂಬೇಕು ಅನ್ನೋದೇ ಕಣೋ ನನಗೆ ಇರೋದು. ನಾನು ನಿನ್ನನ್ನು ಬಿಟ್ಟಿರೋದಕ್ಕೆ ಆಗಲ್ಲ ಕಣೋ, ಲೇ ನಾನು ಹೇಳೋದು ನಿನಗೆ ಒಳ್ಳೆಯದಾಗಲಿ ಅಂತ ಹೇಳ್ತೀನಿ. ಅಂತಿಮವಾಗಿ ನೀನೇ ಮಂತ್ರಿ ಆಗು ನನಗೆ ಮಂತ್ರಿ ಬೇಡ ಎಂದಿದ್ದಾರೆ ರೇವಣ್ಣ. ಅದಕ್ಕೆ ಶಿವಲಿಂಗೇಗೌಡ ಥೋ ಆ ಮಂತ್ರಿ ತಗೊಂಡು ತಿಪ್ಪೇಗುಂಡಿಗೆ ಎಸೀರಿ, ನಾವು ಅಂತ ಥರ್ಡ್ ಕ್ಲಾಸ್ ನನ್ ಮಕ್ಕಳಲ್ಲ, ಆ ಮಂತ್ರಿ ಗಿಂತ್ರಿ ಆಸೆ ಇಲ್ಲ ಎಂದಿದ್ದಾರೆ. ಜೆಡಿಎಸ್ನಲ್ಲಿ ಉಳಿಸಿಕೊಳ್ಳೋಕೆ ಭಾರೀ ಪ್ರಯತ್ನ ಮಾಡಿದ್ರೂ ಶಿವಲಿಂಗೇಗೌಡ್ರು ಬಗ್ಗಿಲ್ಲ ಅನ್ನೋದು ಚರ್ಚಿತ ವಿಚಾರ.
ಕಾಂಗ್ರೆಸ್ನಲ್ಲಿ ಭುಗಿಲೆದ್ದ ಭಿನ್ನಮತ, ಶಿವಲಿಂಗೇಗೌಡರಿಗೆ ಸಂಕಷ್ಟ..!
ಬಿಎಸ್ ಯಡಿಯೂರಪ್ಪ ಸಂಬಂಧಿ ಎನ್.ಆರ್ ಸಂತೋಷ್, ಅರಸೀಕೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಲಿಂಗಾಯತ ಮತಗಳು ಸಂತೋಷ್ಗೆ ಹೋದರೆ ನಾನು ಜೆಡಿಎಸ್ನಲ್ಲಿ ಗೆಲ್ಲುವುದು ಕಷ್ಟ ಎನ್ನುವ ಕಾರಣಕ್ಕೆ ಕಾಂಗ್ರೆಸ್ಗೆ ಹೋಗಿರುವ ಶಿವಲಿಂಗೇಗೌಡರಿಗೆ ಹೊಸ ಸಂಕಷ್ಟ ಎದುರಾಗಿದೆ. ಕುಮಾರಸ್ವಾಮಿ ಈಗಾಗಲೇ ಅಶೋಕ್ರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಇನ್ನು ಒಂದಿಬ್ಬರು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಜೆಡಿಎಸ್ – ಬಿಜೆಪಿ ನಡುವೆ ಫೈಟ್ ನಡೆದರೂ ಅಚ್ಚರಿಯಿಲ್ಲ ಎನ್ನುವಂತಾಗಿದೆ. ಜೆಡಿಎಸ್ ಮತದಾರರು ವ್ಯಕ್ತಿಗಿಂತಲೂ ಪಕ್ಷಕ್ಕೆ ಹೆಚ್ಚಿನ ಒತ್ತು ಕೊಡುವಂತೆ ಕಾಣಿಸುತ್ತಿದ್ದು ಶಿವಲಿಂಗೇಗೌಡರು, ಕಾಂಗ್ರೆಸ್ಗೆ ಹೋಗಿ ಎಡವಟ್ಟು ಮಾಡಿಕೊಂಡ್ರಾ ಎನ್ನುವಂತಾಗಿದೆ.
ಕೃಷ್ಣಮಣಿ