ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತುಂಬಿದ ಸಭೆಯೊಂದಲ್ಲಿ ಪಕ್ಷದ ಕಾರ್ಯಕರ್ತರೊಬ್ಬರ ದೇಹವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸಭೆಯೊಂದರಲ್ಲಿ ಪಕ್ಷದ ಕಾರ್ಯಕರ್ತ ಎನ್ನಲಾದ ವ್ಯಕ್ತಿ ಹಾಗೂ ಸಿಎಂ ಬ್ಯಾನರ್ಜಿ ಮಾತನಾಡುತ್ತಿರುವ ಸಂವಾದದ ತುಣುಕು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. .
ವೇದಿಕೆಯ ಮೇಲಿರುವ ಬ್ಯಾನರ್ಜಿ, ಸಭೆಯಲ್ಲಿದ್ದ ವ್ಯಕ್ತಿಯೊಡನೆ ನಿಮ್ಮ ಹೊಟ್ಟೆ ಏಕೆ ಬೆಳೆಯುತ್ತಿದೆ ಎಂದು ಪ್ರಶ್ನಿಸಿದ್ದು, ನಿಮಗೇನಾದರೂ ಅಸ್ವಸ್ಥತೆ ಇದೆಯೇ? ನೀವು ಯಾವುದೇ ದಿನ ಬೀಳಬಹುದು ಎಂದು ಮಮತಾ ಹೇಳುವುದು ವೈರಲ್ ವಿಡಿಯೋದಲ್ಲಿ ಕಾಣಬಹುದು.
ಮುಖ್ಯಮಂತ್ರಿಯವರ ಪ್ರಶ್ನೆಗೆ ಉತ್ತರಿಸಿದ ವ್ಯಕ್ತಿ, “ನನಗೆ ಯಾವ ಸಮಸ್ಯೆಯೂ ಇಲ್ಲ. ನಾನು ಆರೋಗ್ಯವಾಗಿದ್ದೇನೆ, ಸಕ್ಕರೆಯೂ (ಖಾಯಿಲೆ) ಇಲ್ಲ, ಒತ್ತಡವೂ ಇಲ್ಲ” ಎಂದು ಹೇಳುತ್ತಾರೆ. ಈ ಉತ್ತರದಿಂದ ಸಮಾಧಾನ ಪಡದ ಬ್ಯಾನರ್ಜಿ, “”ಖಂಡಿತವಾಗಿಯೂ ಏನಾದರೂ ಸಮಸ್ಯೆ ಇದೆ… ಇಷ್ಟು ವಿಶಾಲವಾದ ಮಧ್ಯಪ್ರದೇಶವನ್ನು ನೀವು ಹೇಗೆ ಹೊಂದುತ್ತೀರಿ,” ಎಂದು ಪ್ರಶ್ನಿಸಿದ್ದಾರೆ. ಆ ವ್ಯಕ್ತಿಯ ಹೊಟ್ಟೆಯ ಭಾಗವನ್ನು ಅವರು ʼಮಧ್ಯಪ್ರದೇಶʼ ಎಂದು ಉಲ್ಲೇಖಿಸಿರುವುದು ಹಾಗೂ ಧಡೂತಿ ದೇಹದ ಬಗ್ಗೆ ಕಾಮೆಂಟ್ ಮಾಡಿರುವುದನ್ನು ನೆಟ್ಟಿಗರು ಬಾಡಿ ಶೇಮಿಂಗ್ ಎಂದು ಕರೆದಿದ್ದಾರೆ.
ತನಗೇನೂ ಸಮಸ್ಯೆ ಇಲ್ಲ, ತಾನು ದಿನಾಲೂ ವ್ಯಾಯಾಮ ಮಾಡುತ್ತಿದ್ದೇನೆ ಎಂದು ತಿಳಿಸಿದ ವ್ಯಕ್ತಿ, ʼನಾನು ದಿನಾಲೂ 1000 ಕಪಾಲ್ ಭಾತಿ (ಉಸಿರಾಟದ ವ್ಯಾಯಾಮ) ಮಾಡುತ್ತೇನೆ ಎಂದು ತಿಳಿಸುತ್ತಾರೆ. ಆದರೆ, ಅಲ್ಲಿಯೇ ಸವಾಲು ಹಾಕಿದ ಮಮತಾ ಸಿಎಂ, ಹಾಗಾದರೆ ಇಲ್ಲಿಯೇ 1000 ಕಪಾಲ್ ಭಾತಿ ಮಾಡಿದರೆ ಇಲ್ಲಿಯೇ 10000 ರುಪಾಯಿ ಬಹುಮಾನ ನೀಡುತ್ತೇನೆ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ, ತಾನು ಐದು ಗಂಟೆ ನಂತರವೇ ಕಪಾಲ್ ಭಾತಿ ಮಾಡುವುದಾಗಿ ಹೇಳಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದ್ದು, ಮಮತಾ ಅವರನ್ನು ಹಲವರು ಟೀಕಿಸಿದ್ದಾರೆ. ಅದಾಗ್ಯೂ, ಕೆಲವರು ಮಮತಾ ಬೆಂಬಲಕ್ಕೆ ನಿಂತಿದ್ದು, ಮಮತಾ ಅವರು ತಾಯಿ ಹೃದಯದಿಂದ ಕಾರ್ಯಕರ್ತರ ಆರೋಗ್ಯದ ಕುರಿತು ಕಾಳಜಿಯಿಂದ ಪ್ರಶ್ನೆಗಳನ್ನು ಕೇಳಿದ್ದಾರೆಯೇ, ಹೊರತು ಅವಮಾನ ಮಾಡುವ ಉದ್ದೇಶ ಇರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.