• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ದಿಕ್ಕುತಪ್ಪುತ್ತಿರುವ ಯುವ ಸಮೂಹಕ್ಕೆ ದಾರಿಯಾವುದಯ್ಯಾ ?

ನಾ ದಿವಾಕರ by ನಾ ದಿವಾಕರ
January 17, 2023
in Top Story, ಅಂಕಣ
0
ದಿಕ್ಕುತಪ್ಪುತ್ತಿರುವ ಯುವ ಸಮೂಹಕ್ಕೆ ದಾರಿಯಾವುದಯ್ಯಾ ?
Share on WhatsAppShare on FacebookShare on Telegram

21ನೆಯ ಶತಮಾನ ಭಾರತಕ್ಕೆ ಸೇರಿದ್ದು ಎಂದು ಬೆನ್ನುತಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲೇ, ಆಂತರಿಕವಾಗಿ ನವಭಾರತವನ್ನು ಯುವಭಾರತ ಎಂದು ಬಿಂಬಿಸುವುದರಲ್ಲೂ ಹೆಮ್ಮೆ ಪಟ್ಟುಕೊಳ್ಳುತ್ತಿದ್ದೇವೆ. ಇತ್ತೀಚೆಗೆ ದೇಶಾದ್ಯಂತ ಆಚರಿಸಲಾದ ಯುವ ಜನೋತ್ಸವದ ಸಂದರ್ಭದಲ್ಲೂ ಸಹ ಇದೇ ಆತ್ಮರತಿಯ ಮಾತುಗಳು ಕೇಳಿಬಂದಿವೆ. ಇದು ವಾಸ್ತವವೂ ಹೌದು. ನವ ಭಾರತ ಯುವ ಸಮೂಹದ ಆಕಾಂಕ್ಷೆಗಳನ್ನು ಈಡೇರಿಸಲು, ಯುವ ಸಮುದಾಯದಲ್ಲಿ ಜೀವನೋತ್ಸಾಹವನ್ನು ಉದ್ಧೀಪನಗೊಳಿಸಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಯುವ ಪೀಳಿಗೆಯನ್ನು ಕಾಡುತ್ತಿರುವ ಜೀವನ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಈ ನಡುವೆಯೇ ಈ ಸಮೂಹಕ್ಕೆ ಅತ್ಯವಶ್ಯವಾದ ಉದ್ಯೋಗಾವಕಾಶಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದನ್ನೂ ಕಾಣುತ್ತಿದ್ದೇವೆ.

ADVERTISEMENT

ನವ ಭಾರತವನ್ನು ಯುವ ಭಾರತವನ್ನಾಗಿ ಮಾಡುವ ಉನ್ನತ ಧ್ಯೇಯ ಸ್ವಾಗತಾರ್ಹವೇ. ಏಕೆಂದರೆ ಯುವ ಶಕ್ತಿಯ ಮೂಲಕವೇ ಭಾರತ ಆರ್ಥಿಕ ನೆಲೆಯಲ್ಲಿ ಜಗತ್ತಿನ ಇತರ ರಾಷ್ಟ್ರಗಳಿಗೆ ಸರಿಸಮಾನವಾಗಿ ನಿಲ್ಲಲು ಸಾಧ್ಯ. ಆರ್ಥಿಕವಾಗಿ ಸುಸ್ಧಿರತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಮಾರುಕಟ್ಟೆ, ಬಂಡವಾಳ ಮತ್ತು ಕಾರ್ಪೋರೇಟ್‌ ಔದ್ಯಮಿಕ ಶಕ್ತಿಗಳನ್ನೇ ಅವಲಂಬಿಸಿರುವ ನವ ಭಾರತ ಯುವ ಸಮುದಾಯದ ನಡುವೆ ಹಲವು ಕನಸುಗಳನ್ನು ಬಿತ್ತುತ್ತಲೇ ಬಂದಿವೆ. ದೇಶ, ಭಾಷೆ, ಸೀಮೆ ಮತ್ತು ಭೌಗೋಳಿಕ ರಾಷ್ಟ್ರದ ಚೌಕಟ್ಟುಗಳನ್ನು ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂಕುಚಿತಗೊಳಿಸುತ್ತಿರುವ ಹೊತ್ತಿನಲ್ಲೇ ತಮ್ಮ ಬದುಕು ಕಟ್ಟಿಕೊಳ್ಳಲು ಮಾರುಕಟ್ಟೆಯ ಕದ ಬಡಿಯುತ್ತಿರುವ ಕೋಟ್ಯಂತರ ಸಂಖ್ಯೆಯ ಯುವ ಸಮೂಹ ಒಂದು ಆರೋಗ್ಯಕರ ಸಮಾಜಕ್ಕಾಗಿ ಹಾತೊರೆಯುತ್ತಿರುವುದನ್ನು ಸಹ ಗಮನಿಸಬೇಕಿದೆ.

ಯುವ ಸಮೂಹದ ತುಡಿತ ಸಹಜವಾಗಿಯೇ ವ್ಯಕ್ತಿಗತ ಬದುಕು ಕಟ್ಟಿಕೊಳ್ಳುವತ್ತಲೇ ಹೆಚ್ಚಾಗಿರುತ್ತದೆ. ಆಧುನಿಕ ಜಗತ್ತಿನ ಐಷಾರಾಮಿ ಜೀವನದ ಪ್ರತಿಮೆಗಳ ನಡುವೆಯೇ ತಮ್ಮ ವಿದ್ಯಾರ್ಜನೆಯನ್ನು ಪೂರೈಸಿ,  ವಿಶಾಲ ಸಮಾಜದ ಭಾಗವಾಗಿ ವೈಯುಕ್ತಿಕ ಬದುಕು ಕಟ್ಟಿಕೊಳ್ಳಲು ಬಯಸುವ ಯುವ ಸಮೂಹದ ಮುಂದೆ ಬೃಹತ್ತಾದ ವಿಶ್ವದ ಚಿತ್ರಣ ತೆರೆದುಕೊಳ್ಳುತ್ತದೆ. ಆಂಡ್ರಾಯ್ಡ್‌ ಮೊಬೈಲ್‌ನ ಪುಟ್ಟ ಪರದೆಯಲ್ಲಿ ಕಾಣಿಸುವ ಪ್ರಪಂಚದಲ್ಲಿ ತಾವೂ ಸಹ ಭಾಗಿದಾರರಾಗಿ, ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಬದುಕು ಕಟ್ಟಿಕೊಳ್ಳುವ ಆಶಯಗಳೊಡನೆ ಈ ಯುವ ಸಮೂಹ ಮುಖ್ಯವಾಹಿನಿಗಳಲ್ಲಿ ಒಂದಾಗುತ್ತದೆ. ವಿದ್ಯುನ್ಮಾನ ತಂತ್ರಜ್ಞಾನ ಕಲ್ಪಿಸಿರುವ ಜ್ಞಾನ ವಿಸ್ತರಣೆ ಮತ್ತು ಹಂಚಿಕೆಯ ವೈವಿಧ್ಯಮಯ ವಾಹಿನಿಗಳು ಈ ಬೃಹತ್‌ ಸಮೂಹವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ ಎಂಬ ಪ್ರಶ್ನೆ ಎದುರಾದಾಗ, ಬಹುಶಃ ಇಡೀ ಸಮಾಜವೇ ನಿರುತ್ತರವಾಗುತ್ತದೆ. ತಂತ್ರಜ್ಞಾನಾಧಾರಿತ ದತ್ತಾಂಶಗಳು ಮತ್ತು ಮಾಹಿತಿಗಳು ಅಂಗೈನಲ್ಲೇ ಲಭ್ಯವಾಗುವುದರಿಂದ ಸಮಾಜದ ಹಿತವಲಯದಲ್ಲಿರುವ ಯುವ ಸಮೂಹ ವಿಶ್ವಜ್ಞಾನ ಪಡೆದ ಹಮ್ಮುಬಿಮ್ಮುಗಳ ನಡುವೆ ಮುಂದಡಿಯಿಡುತ್ತಿದೆ.

ಅದರೆ ವಿದ್ಯುನ್ಮಾನ ಪ್ರಪಂಚದ ಆಚೆಗೂ ಒಂದು ಜಗತ್ತು ತಮ್ಮ ನಡುವೆ ಇದೆ ಎಂಬ ಪರಿವೆ ಸಮಾಜಕ್ಕಾಗಲೀ, ಸುಶಿಕ್ಷಿತ ಎನ್ನಬಹುದಾದ ಯುವ ಸಮೂಹಕ್ಕಾಗಲೀ ಇದೆಯೇ ಎಂಬ ಪ್ರಶ್ನೆಗೂ ನಾವು ಉತ್ತರ ಶೋಧಿಸಬೇಕಿದೆ. ಅಗ್ನಿಪಥ್‌ ಯೋಜನೆಯಡಿ ದೇಶಸೇವೆಗೆ ಜೀವ ಮುಡಿಪಾಗಿಡಲು ಮುಂದಾಗುವ ಕೋಟ್ಯಂತರ ಯುವ ಸಮೂಹದ ನಡುವೆಯೇ, ತಮ್ಮ ಹಾಗೂ ತಮ್ಮನ್ನು ಪೊರೆದ ಪೋಷಕರ ನಿತ್ಯಬದುಕನ್ನು ರೂಪಿಸಲು ನೆರವಾಗುವ ಉದ್ಯೋಗಾವಕಾಶಗಳಿಗಾಗಿ ಹಾತೊರೆದು ಸಾಲುಗಟ್ಟಿರುವ ಕೋಟ್ಯಂತರ ಯುವ ಜೀವಗಳೂ ನಮ್ಮೆದುರು ಢಾಳಾಗಿ ಕಾಣಿಸಿಕೊಳ್ಳುತ್ತಿವೆ.                            ʼ ನಿರುದ್ಯೋಗ ʼ ಎಂಬ ಆರ್ಥಿಕ ನೆಲೆಗಟ್ಟಿನ ಪದದ ಅರ್ಥ ಇಂದು ರೂಪಾಂತರಗೊಂಡಿದ್ದು, ಜೀವನ ಮತ್ತು ಜೀವನೋಪಾಯದ ಪಯಣದಲ್ಲಿ ಬದುಕುಳಿಯುವ ಜವಾಬ್ದಾರಿ ಯುವ ಸಮೂಹದ ಹೆಗಲಿಗೇರಿಸಲಾಗಿದೆ. ಉದ್ಯೋಗವನ್ನು ಅರಸುವ ಅಥವಾ ಅಪೇಕ್ಷಿಸುವ ವಾತಾವರಣದಿಂದ ಕ್ರಮೇಣ ದೂರ ಸರಿಯುತ್ತಿರುವ ನವ ಭಾರತ ಉದ್ಯೋಗ ಅಥವಾ ದುಡಿಮೆಯನ್ನು ಕಂಡುಕೊಳ್ಳುವ ಹಂತಕ್ಕೆ ತಲುಪಿದೆ. ಕಾರಣ ನವ ಉದಾರವಾದದ ಅರ್ಥವ್ಯವಸ್ಥೆ ತನ್ನ ಲೌಕಿಕ ಜವಾಬ್ದಾರಿಗಳಿಂದ ಮುಕ್ತವಾಗಿದೆ.

ಮೆಟ್ರೋಪಾಲಿಟನ್‌ ನಗರಗಳಲ್ಲಿ ಮತ್ತು ಸಣ್ಣಪುಟ್ಟ ನಗರಗಳಲ್ಲೂ ಸಹ ಷಾಪಿಂಗ್‌ ಮಾಲ್‌ಗಳಲ್ಲಿ, ಅತ್ಯಾಧುನಿಕ ಸಿನಿಮಾ ಥಿಯೇಟರುಗಳಲ್ಲಿ, ಐಷಾರಾಮಿ ಸಂಚಾರಿ ವಾಹನಗಳಲ್ಲಿ ದಿನನಿತ್ಯ ಕಾಣುವ ಒಂದು ಸಮೂಹವನ್ನೇ ಪ್ರಾತಿನಿಧಿಕವಾಗಿ ಪರಿಗಣಿಸುವ ಮೂಲಕ, ಭಾರತದ ಬೌದ್ಧಿಕ ವಲಯವೂ ಸಹ ಯುವ ಪೀಳಿಗೆಯ ನಡುವೆ ಅಸ್ವಾಭಾವಿಕ ಎನ್ನಬಹುದಾದ ಗ್ರಹೀತಗಳನ್ನು ಹುಟ್ಟುಹಾಕುತ್ತಿದೆ. ಸಮಾಜದ ಪ್ರಬಲ ವರ್ಗಗಳನ್ನೇ ಪ್ರತಿನಿಧಿಸುವ ಸಾಂಸ್ಥಿಕ ನೆಲೆಗಳು, ಕಾರ್ಪೋರೇಟ್‌ ಮಾರುಕಟ್ಟೆಯ ವಕ್ತಾರರಂತಿರುವ ವಿದ್ಯುನ್ಮಾನ ಮಾಧ್ಯಮಗಳು, ಈ ಗ್ರಹೀತಗಳನ್ನೇ ವಿಶ್ಲೇಷಣೆಗೊಳಪಡಿಸುತ್ತಾ, ಪ್ರಗತಿಶೀಲ ಭಾರತದ ಒಂದು ಚಿತ್ರಣವನ್ನು ನಮ್ಮ ಮುಂದಿಡುತ್ತಿವೆ. ಈ ಪೂರ್ವಗ್ರಹಪೀಡಿತ ಬೌದ್ಧಿಕ ವಲಯಗಳೇ ಯುವ ಸಮೂಹ ವಿಹರಿಸುತ್ತಿರುವ ಮತ್ತೊಂದು ಜಗತ್ತಿನ ಚಿತ್ರಣವನ್ನು ಮರೆಮಾಚುತ್ತಿವೆ. ತನ್ಮೂಲಕ ಆಂಡ್ರಾಯ್ಡ್‌ ಜಗತ್ತಿನಿಂದ ಆಚೆಗೆ ಕಾಣಬಹುದಾದ ಭಾರತದಲ್ಲಿ ಯುವ ಸಮುದಾಯ ಎದುರಿಸುತ್ತಿರುವ ತಲ್ಲಣಗಳಾಗಲೀ, ಹತಾಶೆಯಾಗಲೀ ಸಾರ್ವಜನಿಕ ಚರ್ಚೆಗೆ ಬಾರದಂತೆ ಮಾಡುತ್ತಿವೆ.

ಶಿಕ್ಷಣ ಮತ್ತು ಸುಸ್ಥಿರ ಬದುಕು ಇವೆರಡೂ ಯುವ ಸಮೂಹವನ್ನು ಸರಿದಾರಿಯಲ್ಲಿ ಕರೆದೊಯ್ಯುತ್ತದೆ ಎಂಬ ಭ್ರಮೆಯನ್ನು ಕಳಚಿಹಾಕಬೇಕಾದ ಸನ್ನಿವೇಶವನ್ನು ನಾವಿಂದು ಎದುರಿಸುತ್ತಿದ್ದೇವೆ. ಏಕೆಂದರೆ ಸಮಾಜದಲ್ಲಿ ಉಗಮಿಸಿರುವ ಹಲವು ರೀತಿಯ ಸಾಂಸ್ಥಿಕ ನೆಲೆಗಳಿಗೆ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮುದಾಯಿಕವಾಗಿಯೂ ಸಹ ಯುವಸಮೂಹವು ಬಳಸಿಕೊಳ್ಳಬಹುದಾದ ಭೌತಿಕ ಬಂಡವಾಳವಾಗಿ ಕಾಣುತ್ತಿದೆ. ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಚ್ಚಾವಸ್ತುಗಳನ್ನು ಮತ್ತು ಸಿದ್ಧ ಪದಾರ್ಥಗಳನ್ನು ವಿತರಣೆ, ವಿಂಗಡನೆ ಹಾಗೂ ಹಂಚಿಕೆಯ ಸರಕುಗಳಂತೆ ಪರಿಗಣಿಸುವ ಹಾಗೆಯೇ, ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ಯುವ ಸಮೂಹವನ್ನು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಬಳಸಿಕೊಳ್ಳುತ್ತಿವೆ. ಈ ಪ್ರಕ್ರಿಯೆಯನ್ನು ಕಂಡೂ ಕಾಣದಂತಿರುವ ವಿಶಾಲ ಬೌದ್ಧಿಕ ವಲಯವೂ ಸಹ ತನ್ನದೇ ಆದ ಗೂಡುಗಳಲ್ಲಿ ಸೇರಿಕೊಂಡಿದ್ದು, ಸುತ್ತಲ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ವಿವೇಚನೆಯನ್ನೂ ಕಳೆದುಕೊಳ್ಳುತ್ತಿದೆ. ಶಿಕ್ಷಣ ಜೀವನೋಪಾಯಕ್ಕೆ ಅಡಿಗಲ್ಲಾಗಬಹುದೇ ಹೊರತು ಜೀವನಾದರ್ಶಗಳ ನೆಲೆಯಾಗುವುದಿಲ್ಲ ಎಂಬ ವಾಸ್ತವವನ್ನು ಮತ್ತಷ್ಟು ಪುಷ್ಟೀಕರಿಸುತ್ತಿರುವುದನ್ನು ವಿಷಾದದಿಂದಲೇ ಗುರುತಿಸಬೇಕಿದೆ.

ಇದರ ಒಂದು ಛಾಯೆಯನ್ನು ರಾಜ್ಯದಲ್ಲಿ ಇತ್ತೀಚೆಗೆ ಬಯಲಾಗುತ್ತಿರುವ ಮಾದಕ ವಸ್ತುಗಳ ಮಾಯಾಜಾಲದ ವರದಿಗಳು ಬಿತ್ತರಿಸುತ್ತಿವೆ. ಡ್ರಗ್‌ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಆತಂಕ ಒಂದೆಡೆಯಾದರೆ ಈ ವ್ಯಸನಿಗಳ ಪೈಕಿ ಯುವ ಸಮೂಹವೇ ಬಹುಸಂಖ್ಯೆಯಲ್ಲಿರುವುದು ಆಘಾತಕಾರಿಯಾಗಿ ಕಾಣುತ್ತದೆ. ದಿನದಿಂದ ದಿನಕ್ಕೆ ಡ್ರಗ್ಸ್‌ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, 2020-22ರ ಮೂರು ವರ್ಷದ ಅವಧಿಯಲ್ಲಿ 16 ಸಾವಿರ ಪ್ರಕರಣಗಳನ್ನು ಭೇದಿಸಲಾಗಿದೆ. ತಂತ್ರಜ್ಞಾನ ಸಮಾಜದ ಉನ್ನತಿಗೆ ಸಾಧನವಾಗಬೇಕೇ ಹೊರತು, ವಿನಾಶದ ಹಾದಿಗೆ ರಹದಾರಿಯಾಗಬಾರದು. ದುರಾದೃಷ್ಟವಶಾತ್‌ ಇಂದು ಇ- ಮೇಲ್‌, ಮೊಬೈಲ್‌, ಆಂಡ್ರಾಯ್ಡ್‌, ಜಾಲತಾಣಗಳು, ಸಾಮಾಜಿಕ ತಾಣಗಳು ಮತ್ತು ಸಾವಿರಾರು Appಗಳು ಸುಶಿಕ್ಷಿತ ಮತ್ತು ಹಿತವಲಯದ ಯುವ ಪೀಳಿಗೆಯನ್ನು ಭ್ರಮಾಧೀನರನ್ನಾಗಿ ಮಾಡುತ್ತಿದ್ದು ಪಾತಕ ಪ್ರಪಂಚಕ್ಕೆ ತೆರೆದುಕೊಳ್ಳುವಂತೆ ಪ್ರಚೋದಿಸುತ್ತಿವೆ.

ಪ್ರಜಾವಾಣಿ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ಸಿಂಥೆಟಿಕ್‌ ಡ್ರಗ್ಸ್‌ ದಂಧೆಯ ವರದಿಯನ್ನು ನೋಡಿದರೆ ಎದೆ ಝಲ್ಲೆನ್ನುತ್ತದೆ. ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿರುವ ಡ್ರಗ್ಸ್‌ ದಂಧೆ ಹೊಸ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದ್ದು ಸಮಾಜದ ಎಲ್ಲ ಸ್ತರಗಳಲ್ಲೂ ವ್ಯಾಪಿಸುತ್ತಿರುವುದನ್ನು ಈ ವರದಿಯಲ್ಲಿ ಕಾಣಬಹುದು. ಪ್ರೌಢಶಾಲೆ ಮತ್ತು ಕಾಲೇಜು ಹಂತದಿಂದಲೇ ಮಾದಕ ವಸ್ತುಗಳ ಸೇವನೆಗೆ ತೆರೆದುಕೊಳ್ಳುವ ಯುವ ಮನಸುಗಳು, ತಮ್ಮ ಬದುಕುಕಟ್ಟಿಕೊಳ್ಳುವ ಸ್ಥಿತಿಯನ್ನು ತಲುಪುವ ವೇಳೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿರುತ್ತವೆ ಎನ್ನುವ ಪರಿವೆ ನಮ್ಮಲ್ಲಿರಬೇಕಲ್ಲವೇ ? ಹಿತವಲಯದ ಭೋಗ ಜೀವನ ಮತ್ತು ಇಲ್ಲಿನ ಪೋಷಕ ವರ್ಗದ ದೃಷ್ಟಿಯಲ್ಲಿ ಮಕ್ಕಳ ಲಾಲನೆ, ಪೋಷಣೆ ಎನ್ನುವುದು ಆರ್ಥಿಕ ಬೇಕು-ಬೇಡಗಳಿಗಷ್ಟೇ ಸೀಮಿತವಾಗುತ್ತಿರುವುದನ್ನೂ ನಗರೀಕರಣದ ನಡುವೆ ಗುರುತಿಸಬಹುದು. ಹಾಗಾಗಿಯೇ ʼ ಸುಶಿಕ್ಷಿತ ವಲಯ ʼ ಎಂದು ವರ್ಗೀಕರಿಸಬಹುದಾದ ಐಟಿ-ಬಿಟಿ ಉದ್ದಿಮೆಗಳು, ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು ಮತ್ತು ವೈದ್ಯಕೀಯ-ಇಂಜಿನಿಯರಿಂಗ್‌ ಕಾಲೇಜುಗಳು ಡ್ರಗ್ಸ್‌ ಮಾಫಿಯಾಗಳಿಗೆ ಆಶ್ರಯತಾಣಗಳಾಗುತ್ತಿವೆ.

ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಡ್ರಗ್ಸ್‌ ದಂಧೆಕೋರರು, ಯುವ ಪೀಳಿಗೆಯ ನಡುವೆ ನುಸುಳಲು ಸಾಧ್ಯವಾಗಿರುವುದಕ್ಕೆ ಇಂದಿನ ಮಾರುಕಟ್ಟೆ ಆರ್ಥಿಕತೆ ಮತ್ತು ಬದಲಾದ ಶೈಕ್ಷಣಿಕ ವಾತಾವರಣವೂ ಒಂದು ಕಾರಣ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ದುಬಾರಿ ಎನ್ನಲಾಗುವ ಸಿಂಥೆಟಿಕ್ಸ್‌ ಡ್ರಗ್ಸ್‌ ಸಹ ಇಂದು ಸುಲಭವಾಗಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಲಭ್ಯವಾಗುತ್ತಿದೆ ಎಂದರೆ ಈ ಯುವ ಸಮೂಹದ ಜೇಬುಗಳಲ್ಲಿ ದುಂದು ವೆಚ್ಚ ಮಾಡಲು ಹಣ ಇದೆ ಎಂತಲೂ ಅರ್ಥ. ಇತ್ತೀಚಿನ ಪ್ರಕರಣದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ಇಬ್ಬರು ವೈದ್ಯರು ಸಿಕ್ಕಿಬಿದ್ದಿರುವುದು ಇದನ್ನೇ ಸೂಚಿಸುತ್ತದೆ. ಈ ಹಣವನ್ನು ಪೂರೈಸುವವರಾದರೂ ಯಾರು ? ಪೋಷಕರಿಂದ ನಿರ್ಬಂಧಕ್ಕೊಳಗಾಗುವ ಮಕ್ಕಳಿಗೆ ಸ್ನೇಹಿತರ ವಲಯ, ಸಹೋದ್ಯೋಗಿಗಳು ನೆರವಾಗುವುದನ್ನು ಸಹ ಸೂಕ್ಷ್ಮವಾಗಿ ಗಮನಿಸಬೇಕಿದೆ. ಬಟ್ಟೆ, ಪಾತ್ರೆ, ಸೋಪು, ಆಟಿಕೆಗಳು, ಅಲಂಕಾರಿಕ ಸಾಮಗ್ರಿಗಳಲ್ಲಿ ಮಾದಕ ವಸ್ತುಗಳನ್ನು ಬಚ್ಚಿಟ್ಟು ವಿದೇಶಗಳಿಗೂ ರಫ್ತುಮಾಡಲಾಗುತ್ತಿದೆ. ಇದೇ ವಸ್ತುಗಳು ಸಣ್ಣಪುಟ್ಟ ಪೆಟ್ಟಿಗೆ ಅಂಗಡಿಗಳಲ್ಲೂ ಲಭ್ಯವಾಗುತ್ತಿರುವುದನ್ನು ಗುರುತಿಸಲಾಗಿದೆ. ಈಗ ವಿನೂತನ ಸಿಂಥೆಟಿಕ್‌ ಡ್ರಗ್ಸ್‌ ಕಾಗದದ ರೂಪದಲ್ಲೂ ದೊರೆಯುತ್ತಿದೆ. ಈ ಕಾಗದಗಳನ್ನು ಸ್ಟಿಕರ್‌ಗಳ ರೂಪದಲ್ಲೂ ಮಾರಾಟ ಮಾಡಲಾಗುತ್ತಿದೆ.

ಸರ್ಕಾರ ಹಾಗೂ ಕಾನೂನು ಪಾಲನೆಯ ವ್ಯವಸ್ಥೆಯು ಡ್ರಗ್ಸ್‌ ದಂಧೆಯನ್ನು ನಿಯಂತ್ರಿಸಲು ಹರಸಾಹಸ ಮಾಡುತ್ತಿರುವುದು ವಾಸ್ತವ. ಆದರೆ ಯುವ ಸಮೂಹವನ್ನು ದಿಕ್ಕುತಪ್ಪಿಸುತ್ತಿರುವುದು ಕೇವಲ ಮಾದಕ ವಸ್ತುಗಳು ಮಾತ್ರ ಎಂದು ಹೇಳಲಾಗುವುದಿಲ್ಲ. ವಿದ್ಯಾರ್ಥಿ ಸಮುದಾಯಕ್ಕೆ ಒಂದು ಆದರ್ಶಪ್ರಾಯ ಬದುಕಿನ ಮೌಲ್ಯಗಳನ್ನು ಕಲಿಸುವ ನೈತಿಕ ಜವಾಬ್ದಾರಿ ಹೊತ್ತಿರುವ ಬೌದ್ಧಿಕ-ಶೈಕ್ಷಣಿಕ ವಲಯ ತನ್ನ ಹೊಣೆಗಾರಿಕೆಯನ್ನು ಮರೆತಿರುವುದೂ ಒಂದು ಕಾರಣ. ಮಕ್ಕಳನ್ನು ಹಣಸಂಪಾದಿಸುವ ಯಂತ್ರಗಳಂತೆ ಬೆಳೆಸುವ ಹಿತವಲಯದ ಸುಶಿಕ್ಷಿತ ಮೇಲ್‌ ವರ್ಗದ ಕುಟುಂಬಗಳೂ ಸಹ ತಮ್ಮ ಮಕ್ಕಳು ಸಾಗುತ್ತಿರುವ ಹಾದಿಯಲ್ಲಿ ಎದುರಾಗಬಹುದಾದ ಇಂತಹ ಅಪಾಯಕಾರಿ ಅಂಶಗಳನ್ನು ಗಮನಿಸುತ್ತಿರಬೇಕು. ಹಾಗೆಯೇ ತಮ್ಮ ವೃತ್ತಿಪರ ಬೋಧನೆಯನ್ನೂ ದಾಟಿ ಶಿಕ್ಷಕ-ಅಧ್ಯಾಪಕ ವರ್ಗವು ಯುವ ಪೀಳಿಗೆಗೆ ಸೂಕ್ತ ಮಾರ್ಗದರ್ಶನವನ್ನು ನೀಡುವ ಅವಶ್ಯಕತೆ ಎದ್ದು ಕಾಣುತ್ತದೆ.

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೊಲೆ, ಅತ್ಯಾಚಾರ, ಅಪಹರಣ ಮತ್ತಿತರ ಸಮಾಜಘಾತುಕ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಯುವ ಸಮೂಹವೇ ಅಪರಾಧಿ ಸ್ಥಾನದಲ್ಲೂ, ಸಂತ್ರಸ್ತ ನೆಲೆಯಲ್ಲೂ ಕಾಣಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಸಮಾಜದ ಹಿತವಲಯದಿಂದಾಚೆಗಿನ ಬಡ ಕುಟುಂಬಗಳಲ್ಲಿ, ನಾಳಿನ ಬದುಕಿಗಾಗಿ ಉದ್ಯೋಗವನ್ನರಸಿ ಅಂಡಲೆಯುವ ಜನರ ನಡುವೆ, ನಿಶ್ಚಿತ ಆದಾಯ ಮತ್ತು ಸುಸ್ಥಿರ ಬದುಕಿನ ನಿರೀಕ್ಷೆಯನ್ನೂ ಮಾಡಲಾಗದ ನಿತ್ಯ ದುಡಿಮೆಯನ್ನಾಧರಿಸಿದ ಜನಸಮುದಾಯಗಳ ನಡುವೆ, ಒಂದು ಯುವ ಸಮೂಹ ಸದ್ದಿಲ್ಲದೆಯೇ ದಾರಿತಪ್ಪುತ್ತಿರುವುದನ್ನು ಈ ಸಮಾಜಘಾತುಕ ಚಟುವಟಿಕೆಗಳ ನಡುವೆ ಗುರುತಿಸಬಹುದು. ಮಾರುಕಟ್ಟೆಯ ವ್ಯತ್ಯಯಗಳಿಂದ ಬಾಧಿತರಾಗದ ಬೃಹತ್‌ ಜನಸಂಖ್ಯೆಯ ನಡುವೆ ನಿತ್ಯಜೀವನದ ಜಂಜಡಗಳಲ್ಲಿ ಸಿಲುಕಿದ ಯುವ ಸಮೂಹವನ್ನು ಗಮನಿಸಿದಾಗ, ಈ ಸಮೂಹವೇ ಸಮಾಜಘಾತುಕ ಶಕ್ತಿಗಳಿಂದ ಹೆಚ್ಚು ಪ್ರಭಾವಿತವಾಗುತ್ತಿರುವುದನ್ನೂ ಕಾಣಬಹುದು. ಒಂದೆಡೆ ಉತ್ತಮ ವಿದ್ಯಾಭ್ಯಾಸ ಪಡೆದ ಯುವ ಸಮೂಹ ಡ್ರಗ್ಸ್‌ ದಂಧೆಗೆ ಬಲಿಯಾಗಿ ಮಾದಕ ವ್ಯಸನಿಗಳಾಗುತ್ತಿದ್ದರೆ, ಶಿಕ್ಷಣವಂಚಿತ ಸಮೂಹ ಇತರ ಸಮಾಜಘಾತುಕ ಶಕ್ತಿಗಳ ಕಾವಲುಪಡೆಗಳಾಗುತ್ತಿದೆ.

ಈ ವಿಷಮ ಸನ್ನಿವೇಶದಲ್ಲಿ ಕಾನೂನು ಕ್ರಮಗಳಿಂದಾಚೆಗೆ ಬಾಹ್ಯ ಸಮಾಜವೂ ಸಹ ತನ್ನ ಜವಾಬ್ದಾರಿಯನ್ನು ಅರಿತು ಯುವ ಸಮೂಹಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕಿದೆ. ಶಾಲಾ ಕಾಲೇಜುಗಳಲ್ಲಿ, ಸಾಮಾಜಿಕ ಸಂಘಟನೆಗಳಲ್ಲಿ, ರಾಜಕೀಯ ಪಕ್ಷಗಳಲ್ಲಿ ಮತ್ತು ಬೌದ್ಧಿಕ ವಲಯದಲ್ಲಿ ಯುವ ಸಮೂಹಕ್ಕೆ ಅಗತ್ಯವಾದ ಜೀವನಾದರ್ಶ ಮೌಲ್ಯಗಳನ್ನು ಬೋಧಿಸುವ ಪ್ರಕ್ರಿಯೆಗೆ ಇನ್ನಾದರೂ ಚಾಲನೆ ನೀಡಬೇಕಿದೆ. ಸ್ಥಾಪಿತ ಹಿತಾಸಕ್ತಿಗಳು, ಯಾವುದೇ ರೀತಿಯಲ್ಲಾದರೂ,  ಯುವ ಸಮೂಹವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಪ್ರವೃತ್ತಿಯಿಂದ ಹೊರಬರಬೇಕಿದೆ. ಯುವ ಸಮೂಹದ ಮಾನಸಿಕ ಸ್ಥಿಮಿತವನ್ನೇ ನಾಶಪಡಿಸುವ ಮಾದಕ ವಸ್ತುಗಳು‌, ಹಿಂಸೆ ಮತ್ತು ಕ್ರೌರ್ಯವನ್ನು ಪ್ರಚೋದಿಸುವ ಶಸ್ತ್ರಾಸ್ತ್ರಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುತ್ತಿರುವುದನ್ನೂ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕಿದೆ. ನವ ಭಾರತ ಯುವ ಭಾರತ ಆಗಬೇಕಾದಲ್ಲಿ ಒಂದು ಆರೋಗ್ಯಕರ ವಾತಾವರಣವನ್ನು, ಮಾನವೀಯ ಪರಿಸರವನ್ನು ಮತ್ತು ಅಪರಾಧಮುಕ್ತ ಸಮಾಜವನ್ನು ನಿರ್ಮಿಸುವ ಜವಾಬ್ದಾರಿಯನ್ನು ಇಡೀ ಸಮಾಜವೇ ಹೊರಬೇಕಾಗಿದೆ.

Tags: BJPಬಿಜೆಪಿಯುವ ಸಮೂಹ
Previous Post

ಸರ್ಕಾರಗಳ ಮುಸ್ಲಿಂ ದ್ವೇಷ: ಬುಲ್ಡೋಜರ್ ಕಾರ್ಯಾಚರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ HRW ವರದಿ

Next Post

N Cheluvarayaswamy : ಮಂಡ್ಯದಲ್ಲಿ ಜೆಡಿಎಸ್ ಪಕ್ಷ ಕಟ್ಟಿದ್ದು ನಾನು | Pratidhvani

Related Posts

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
0

ಬೆಂಗಳೂರು: ಇತ್ತೀಚೆಗೆ ಹೊರಬಂದ ಡಾ.ಕೃತಿಕಾ ರೆಡ್ಡಿ ಕೊಲೆ ಪ್ರಕರಣದ ಮತ್ತಷ್ಟು ರೋಚಕ ವಿಚಾರಗಳು ಬಯಲಾಗ್ತಿದೆ. ವಿಚಾರಣೆ ವೇಳೆ ತಾನೇ ಕೊಲೆ‌ ಮಾಡಿದ್ದು ಎಂದು ಒಪ್ಪಿಕೊಂಡಿರುವ ಪತಿ ಡಾ.ಮಹೇಂದ್ರ ರೆಡ್ಡಿ...

Read moreDetails
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

October 24, 2025
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

October 24, 2025
Next Post
N Cheluvarayaswamy : ಮಂಡ್ಯದಲ್ಲಿ ಜೆಡಿಎಸ್ ಪಕ್ಷ ಕಟ್ಟಿದ್ದು ನಾನು | Pratidhvani

N Cheluvarayaswamy : ಮಂಡ್ಯದಲ್ಲಿ ಜೆಡಿಎಸ್ ಪಕ್ಷ ಕಟ್ಟಿದ್ದು ನಾನು | Pratidhvani

Please login to join discussion

Recent News

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು
Top Story

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

by ಪ್ರತಿಧ್ವನಿ
October 24, 2025
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ
Top Story

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

by ಪ್ರತಿಧ್ವನಿ
October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada