ರಾಜ್ಯದಲ್ಲಿ ಐಎಎಸ್ ಹಾಗು ಐಪಿಎಸ್ ಅಧಿಕಾರಿಗಳ ಜಟಾಪಟಿಯಿಂದ ರಾಜ್ಯ ಸರ್ಕಾರ ಮುಜುಗರ ಅನುಭವಿಸಿತ್ತು. ಕೊಂಚ ತಡವಾದರೂ ರಾಜ್ಯ ಸರ್ಕಾರ ಆಡಳಿತಾತ್ಮಕ ನಿರ್ಧಾರದಲ್ಲಿ ಕಠಿಣ ನಿಲುವು ಪ್ರಕಟ ಆಗುವಂತೆ ನೋಡಿಕೊಂಡಿತ್ತು. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗು ಐಪಿಎಸ್ ಅಧಿಕಾರಿ ಡಿ ರೂಪಾ ಅವರನ್ನು ಹುದ್ದೆಯನ್ನೇ ತೋರಿಸದೆ ವರ್ಗಾವಣೆ ಮಾಡಿತ್ತು. ಇದೀಗ ಮತ್ತೊಂದು ಸ್ಟ್ರೋಕ್ ಕೊಟ್ಟಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಇಲಾಖಾ ಮಟ್ಟದ ತನಿಖೆಗೆ ಆದೇಶ ಮಾಡಿದ್ದಾರೆ. ಐಎಎಸ್ ಹಾಗು ಐಪಿಎಸ್ ಇಬ್ಬರ ಬಗ್ಗೆಯೂ ತನಿಖೆ ಮಾಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಮಾಡಿದ್ದಾರೆ.
ಕೋರ್ಟ್ ಕಟಕಟೆಯಲ್ಲಿ ರೂಪಾ ಆರೋಪಕ್ಕೆ ಬ್ರೇಕ್..!
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ಆರೋಪ ಮಾಡಿದ್ದ ಐಪಿಎಸ್ ಅಧಿಕಾರಿ ಡಿ ರೂಪ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಾಟ್ ಸೋ ಡೀಸೆಂಟ್ ಅನ್ನೋ ಪದ ಬಳಕೆ ಮಾಡಿ ನನ್ನ ಬಳಿ ಇನ್ನೂ ಸಾಕಷ್ಟು ಫೋಟೋಗಳು ಇವೆ ಎನ್ನುವ ಮುನ್ಸೂಚನೆ ಕೂಡ ನೀಡಿದ್ದರು. ಆ ಬಳಿಕ ದಾಳಿ ವಾಗ್ದಾಳಿಯೂ ಶುರುವಾಗಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಕರೆದು ಮಾತನಾಡಿದರೂ ಸಮರ ನಿಲ್ಲುವ ಲಕ್ಷಣ ಕಾಣಿಸಿರಲಿಲ್ಲ. ಸರ್ಕಾರ ಹುದ್ದೆ ತೋರಿಸದೆ ವರ್ಗಾವಣೆ ಮಾಡುವ ಮೂಲಕ ಕೊಂಚ ತಡೆ ಹಾಕುವ ಪ್ರಯತ್ನ ಮಾಡಿತ್ತು. ಆ ಬಳಿಕ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್ ರೂಪಾ ಆರೋಪಗಳಿಗೆ ಮಧ್ಯಂತರ ತಡೆ ನೀಡಿದೆ. ಕೋರ್ಟ್ ಆದೇಶದ ಬೆನ್ನಲ್ಲೆ ಮತ್ತೊಂದು ಪೋಸ್ಟ್ ಹಾಕಿರುವ ಐಪಿಎಸ್ ಅಧಿಕಾರಿ ರೂಪಾ ಇನ್ನೊಂದು ಸುತ್ತಿನ ಸಮರದ ಸುಳಿವು ಕೊಟ್ಟಿದ್ದಾರೆ.

ರೂಪಾ ಆರೋಪಗಳಿಗೆ ತಡೆ ಕೊಟ್ಟು ಕೋರ್ಟ್ ಹೇಳಿದ್ದೇನು..?
ಸಿಟಿ ಸಿವಿಲ್ ಕೋರ್ಟ್‌ನಲ್ಲಿ ರೋಹಿಣಿ ಸಿಂಧೂರಿ ಅರ್ಜಿ ವಿಚಾರಣೆ ಆರಂಭ ಆಗಿದ್ದು, ಎದುರಾಳಿ ವಕೀಲರು ಅಫಿಡವಿಟ್ ಸಲ್ಲಿಕೆ ಮಾಡುವ ತನಕ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಸಾಮಾಜಿಕ ಜಾಲತಾಣ ಆಥವಾ ಮಾಧ್ಯಮಗಳಲ್ಲಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಲಾಗಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯದಲ್ಲಿ ಮಾನಹಾನಿಕರ ಹೇಳಿಕೆ ಅಥವಾ ಬರಹಕ್ಕೆ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ ಕೋರ್ಟ್ ನೋಟಿಸ್‌ಗೆ ಉತ್ತರಿಸಲು ಡಿ ರೂಪಾ ಅವರಿಗೆ ಕಾಲಾವಕಾಶವನ್ನೂ ಕೋರ್ಟ್ ನೀಡಿದೆ. ಕೋರ್ಟ್ ಆದೇಶದ ಬೆನ್ನಲ್ಲೇ ಹೊಸದಾಗಿ ಪೋಸ್ಟ್ ಹಾಕಿರುವ ಡಿ ರೂಪಾ, ನಿಮ್ಮ ಬೆಂಬಲಕ್ಕೆ ಧನ್ಯವಾದ, ನನ್ನ ಇನ್‌ಬಾಕ್ಸ್ ನಿಮ್ಮ ಮೆಸೇಜ್‌ಗಳಿಂದ ತುಂಬಿ ಹೋಗಿದೆ. ಕೋರ್ಟ್ ಕೂಡ ನನ್ನ ವಾದ ಮಂಡಿಸಲು ಅವಕಾಶ ಕೊಟ್ಟಿದ್ದು, ನಾನು ನನ್ಮ ಬಳಿ ಇರುವ ದಾಖಲೆಯನ್ನು ಸಲ್ಲಿಸುತ್ತೇನೆ. ನನಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ಸತ್ಯಮೇವ ಜಯತೆ ಎಂದಿದ್ದಾರೆ.
ಕೋರ್ಟ್‌ಗೆ ಯಾವೆಲ್ಲಾ ಮಾಹಿತಿ ಕೊಡ್ತಾರೆ ಡಿ. ರೂಪಾ..?
ಬೆತ್ತಲೆ ಫೋಟೋ ಬಗ್ಗೆ ಉತ್ತರಿಸುತ್ತೀರಾ..? ಎಂದಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ, ಶಾಕಿಂಗ್ ವಿಚಾರವನ್ನು ಬಹಿರಂಗ ಮಾಡಿದ್ದರು. ಕರ್ನಾಟಕದಲ್ಲಿ ಓರ್ವ ಐಎಎಸ್ ಅಧಿಕಾರಿ ಸಾವು, ತಮಿಳುನಾಡಿನಲ್ಲಿ ಓರ್ವ ಐಪಿಎಸ್ ಅಧಿಕಾರಿ ಸಾವು. ಕರ್ನಾಟಕದಲ್ಲಿ ಒಂದು ಐಎಎಸ್ ದಂಪತಿ ವಿಚ್ಛೇದನ ಪಡೆಯಲು ಈಕೆಯೇ ಕಾರಣ ಎಂದಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ, ನಾನು ನನ್ನ ಗಂಡ ಇನ್ನೂ ಒಟ್ಟಿಗೆ ವಾಸ್ತವ್ಯ ಹೂಡಿದ್ದೇವೆ ಎನ್ನುವ ಮೂಲಕ ರೋಹಿಣಿ ಅವರ ನೆಕ್ಸ್ಟ್ ಟಾರ್ಗೆಟ್ ನಾನೇ. ನಾನು ನನ್ನ ಕುಟುಂಬ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದೇನೆ ಎನ್ನುವ ಮೂಲಕ ರೋಹಿಣಿ ಅವರ ಬಗ್ಗೆ ನೇರವಾಗಿಯೇ ಸಮರ ಸಾರಿದ್ದರು. ಆಡಿಯೋ ಕೂಡ ವೈರಲ್ ಆಗಿತ್ತು. ಇದೀಗ ತಾನು ನೀಡಿರುವ ಹೇಳಿಕೆಗಳಿಗೆ ನಾನು ಬದ್ಧ ಎನ್ನುವುದನ್ನು ಕೋರ್ಟ್ ಎದುರು ಸಾಬೀತು ಮಾಡಬೇಕಿದೆ. ಅದರ ಜೊತೆಗೆ ಅಕ್ರಮಗಳು ನಡೆದಾಗ ನಾನು ಮೌನವಾಗಿ ಇರುವುದಕ್ಕೆ ಸಾಧ್ಯವಿಲ್ಲ ಎಂದು ಕೋರ್ಟ್ ಎದುರು ರೋಹಿಣಿ ಅಕ್ರಮದ ಸಾಕ್ಷ್ಯವಿಟ್ಟು ತನಿಖೆ ಆಗುವಂತೆ ಮಾಡ್ತಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಇದೀಗ ಇಬ್ಬರು ಘಟಾನುಘಟಿ ಅಧಿಕಾರಿಗಳು ಹುದ್ದೆ ಇಲ್ಲದೆ ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ.











