ಭಾರತೀಯರು ತಮಗೆ ಸಾವಿರಾರು ವರ್ಷಗಳ ಪ್ರಾಚೀನ ಐತಿಹಾಸಿಕ ಹಿನ್ನೆಲೆ ಹೊಂದಿದ್ದರೂ ವಲಸಿಗ ಆರ್ಯನ್ನರು ಸೃಷ್ಟಿಸಿದ ಕಪೋಲಕಲ್ಪಿತ ಪುರಾಣಗಳನ್ನೆ ತಮ್ಮ ಇತಿಹಾಸವೆಂದು ನಂಬಿದ್ದರು. ಬ್ರಿಟೀಷ್ ಇತಿಹಾಸಕಾರರು ಪ್ರಾಚೀನ ಭಾರತದ ಭವ್ಯ ಇತಿಹಾಸವನ್ನು ಭಾರತೀಯರಿಗೆ ಪರಿಚಯಿಸಿದರು. ಭಾರತೀಯರು ಜಗತ್ತಿನಲ್ಲಿಯೇ ಅತ್ಯಂತ ಮುಂದುವರೆದ ಸಿಂಧೂ ಕಣಿವೆಯ ನಾಗರಿಕತೆ ಹೊಂದಿದ್ದರು ಎನ್ನುವ ಸಂಗತಿ ಕೂಡ ಬ್ರಿಟೀಷ್ ಇತಿಹಾಸಕಾರರೆ ಬಹಿರಂಗಪಡಿಸಿದರು. ಈಗ ಆರ್ಯನ್ ಪಳೆಯುಳಿಕೆಗಳು ಅದನ್ನು ಸಿಂಧೂ-ಸರಸ್ವತಿ ನಾಗರಿಕತೆ ಎಂದು ತಿರುಚುವ ದುಸ್ಸಾಹಸ ಮಾಡುತ್ತಿವೆ. ಭಾರತದ ಪ್ರಾಚೀನ ಇತಿಹಾಸ ಸಿಂಧೂ ಕಣಿವೆಯ ನಾಗರಿಕತೆಯಿಂದ ಆರಂಭಗೊಂಡು ಆರ್ಯ-ದ್ರಾವಿಡ ಸಂಘರ್ಷದ ಪರಿಣಾಮವಾಗಿ ಆ ಶಿವಸಂಸ್ಕೃತಿಯು ಕ್ಷೀಣಗೊಂಡು ಮುಂದೆ ಆರ್ಯ- ಬೌದ್ಧ ಸಂಘರ್ಷಕ್ಕೆ ಎಡೆಮಾಡಿತು. ನೆಲಮೂಲದ ದ್ರಾವಿಡ-ಬೌದ್ಧ ಸಂಸ್ಕೃತಿಗಳ ಮೇಲೆ ವಿಜಯ ಸಾಧಿಸಿದ ಆರ್ಯನ್ ಗಿಡುಗಗಳ ಅಟ್ಟಹಾಸಕ್ಕೆ ಮತ್ತೆ ಹನ್ನೆರಡನೇ ಶತಮಾನದಲ್ಲಿ ಸವಾಲು ಹಾಕಿದ್ದು ಲಿಂಗಾಯತ ಚಳುವಳಿ.
ಭಾರತದ ರಾಷ್ಟ್ರೀಯ ಲಾಂಛನವು ದೇಶದ ನೈಜ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಈ ಲಾಂಛನವು ಮೌರ್ಯ ಸಾಮ್ರಾಟ ಅಶೋಕನ ಸಾಮ್ರಾಜ್ಯದ ಲಾಂಛನವಾಗಿತ್ತು. ಅದನ್ನು ಸಾರಾನಾಥದಲ್ಲಿ ಪತ್ತೆ ಹಚ್ಚಿದವರು ಜರ್ಮನ್-ಸಂಜಾತ ಎಂಜಿನಿಯರ್ ಫ್ರೆಡ್ರಿಕ್ ಆಸ್ಕರ್ ಓರ್ಟೆಲ್ ಎಂಬುವವರು. ಈ ಕುರಿತು ಒಂದು ವಿಶೇಷ ಅಂಕಣವನ್ನು ರಿಂಚನ್ ನಾರ್ಬು ವಾಂಗ್ಚುಕ್ ಎಂಬುವವರು ನವೆಂಬರ್ ೩, ೨೦೨೨ ರ “ದಿ ಬೆಟರ್ ಇಂಡಿಯಾ.ಕಾಮ್” ಎಂಬ ವೆಬ್ ಜರ್ನಲ್ಲಿನಲ್ಲಿ ಬರೆದಿದ್ದಾರೆ. ಈ ಅಂಕಣವನ್ನು ಯೋಷಿತಾ ರಾವ್ ಅವರು ಸಂಪಾದಿಸಿದ್ದಾರೆ. ಆ ಇಡೀ ಅಂಕಣದ ಸಾರಾಂಶವನ್ನು ನಾನು ಇಲ್ಲಿ ವಿಮರ್ಶಿಸಿದ್ದೇನೆ. ಸಾರಾನಾಥದಲ್ಲಿ ಒಮ್ಮೆ ಉತ್ಖನನದ ಸಂದರ್ಭದಲ್ಲಿ ಜರ್ಮನ್ ಮೂಲದ ಎಂಜಿನಿಯರ್ ಫ್ರೆಡ್ರಿಕ್ ಆಸ್ಕರ್ ಓರ್ಟೆಲ್ ಅವರು ಅಶೋಕ ಸ್ಥಾಪಿಸಿದ ಸಿಂಹವುಳ್ಳ ಸ್ತಂಭವನ್ನು ಮೊದಲು ಪತ್ತೆ ಹಚ್ಚಿದರಂತೆ. ಇದನ್ನೆ ಮುಂದೆ ೨೬ ಜನವರಿ ೧೯೫೦ ರಂದು, ಭಾರತ ಗಣರಾಜ್ಯವಾದ ದಿನ, ನಮ್ಮ ರಾಷ್ಟ್ರೀಯ ಲಾಂಛನವಾಗಿ ಅಳವಡಿಸಿಕೊಂಡಿದ್ದನ್ನು ರಿಂಚನ್ ಅವರು ಸ್ಮರಿಸಿದ್ದಾರೆ.
ಭಾರತ ಸರಕಾರ ವಿವರಿಸಿದಂತೆ ಈ ನಮ್ಮ ರಾಷ್ಟ್ರೀಯ ಸಿಂಹ ಲಾಂಛನದ ಮಧ್ಯದಲ್ಲಿ ಧರ್ಮ ಚಕ್ರವನ್ನು ಹೊಂದಿರುವ ಅಬ್ಯಾಕಸ್‌ನಲ್ಲಿ ಮೂರು ಸಿಂಹಗಳ ಪ್ರೊಫೈಲ್ ಹೊಂದಿದೆ. ಕೆಳಗಡೆಯ ಬಲಭಾಗದಲ್ಲಿ ಒಂದು ಗೂಳಿ ಮತ್ತು ಎಡಭಾಗದಲ್ಲಿ ಒಂದು ಕುದುರೆ ಹೊಂದಿದೆ. ಮೂಲ ಪ್ರತಿಮೆಯಲ್ಲಿರುವ ಗಂಟೆಯ ಆಕಾರದ ಕಮಲವನ್ನು ರಾಷ್ಟ್ರೀಯ ಲಾಂಛನದಲ್ಲಿ ಕೈಬಿಡಲಾಗಿದೆ. ಲಾಂಛನದ ಪ್ರೊಫೈಲ್‌ನ ಕೆಳಗೆ ದೇವನಾಗರಿ ಲಿಪಿಯಲ್ಲಿ “ಸತ್ಯಮೇವ ಜಯತೆ” ಎಂಬ ಧ್ಯೇಯವಾಕ್ಯ ಬರೆಯಲಾಗಿದ್ದು ಅದು ‘ಸತ್ಯವೊಂದೇ ಜಯಗಳಿಸುತ್ತದೆ’ ಎಂಬ ಅರ್ಥವನ್ನು ಹೇಳುತ್ತದೆ. ಮೌರ್ಯ ಸಾಮ್ರಾಟ ಅಶೋಕನ ಪ್ರಾಚೀನ ಇತಿಹಾಸದ ಉತ್ಪನ್ನವಾಗಿರುವ ಈ ಪ್ರತಿಮೆಯ ವಿನ್ಯಾಸವನ್ನು ಭಾರತದ ರಾಷ್ಟ್ರೀಯ ಲಾಂಛನವಾಗಿ ಏಕೆ ಅಳವಡಿಸಿಕೊಳ್ಳಲಾಯಿತು ಎನ್ನುವ ಕುರಿತು ರಿಂಚನ್ ಅವರು ಸುದೀರ್ಘವಾಗಿ ವಿವರಿಸಿದ್ದಾರೆ. ದೇಶದ ಪ್ರಥಮ ಪ್ರಧಾನಿ ನೆಹರು ಅವರು ಅಶೋಕ ಸಾಮ್ರಾಟನ ಈ ಹೆಮ್ಮೆಯ ಲಾಂಛನವನ್ನು ಸ್ವತಂತ್ರ ಭಾರತದ ರಾಷ್ಟ್ರೀಯ ಲಾಂಛನವಾಗಿ ಆಯ್ಕೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ನಾವು ಸ್ಮರಿಸಬೇಕಿದೆ.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ವಾತಂತ್ರ ಸಿಗುವ ಒಂದು ತಿಂಗಳು ಮೊದಲು ಅಂದರೆ ೨೨ ಜುಲೈ ೧೯೪೭ ರಂದು ಸಂವಿಧಾನ ಸಭೆಯಲ್ಲಿ ನಿಯೋಜಿತ ರಾಷ್ಟ್ರ ಲಾಂಛನದ ಕುರಿತು ಸ್ಪಷ್ಟವಾದ ಉತ್ತರಗಳನ್ನು ನೀಡಿದ್ದರಂತೆ. ನೆಹರು ಅವರು ಆ ಸಭೆಯಲ್ಲಿ: “ಭಾರತದ ರಾಷ್ಟ್ರಧ್ವಜದಲ್ಲಿ ಅಶೋಕನ ಧರ್ಮಚಕ್ರವನ್ನು ಅಳವಡಿಸಿದ್ದಕ್ಕೆ ಮಹತ್ವದ ಹಿನ್ನೆಲೆಯಿದೆ. ಸಾಮ್ರಾಟ ಅಶೋಕನ ಹೆಸರು ಕೇವಲ ಭಾರತದ ಇತಿಹಾಸದಲ್ಲಿ ಮಾತ್ರವಲ್ಲದೆ ವಿಶ್ವ ಇತಿಹಾಸದಲ್ಲಿ ಅತ್ಯಂತ ಭವ್ಯವಾದದ್ದು. ಆ ಕಾರಣದಿಂದ ಆತನ ಸಾಮ್ರಾಜ್ಯದ ಧರ್ಮಚಕ್ರವನ್ನು ನಮ್ಮ ರಾಷ್ಟ್ರಧ್ವಜದಲ್ಲಿ ಸಂಯೋಜಿಸಿದ್ದು ನನಗೆ ತುಂಬಾ ಹೆಮ್ಮೆಯ ಹಾಗು ಸಂತೋಷದ ಸಂಗತಿಯಾಗಿದೆ. ಈಗ ನಾನು ಸಾಮ್ರಾಟ ಅಶೋಕನ ಹೆಸರನ್ನು ಇಲ್ಲಿ ಉಲ್ಲೇಖಿಸಲು ಕಾರಣˌ ಭಾರತದ ಇತಿಹಾಸದಲ್ಲಿ ಅಶೋಕನ ಆಡಳಿತಾವಧಿಯು ಮೂಲಭೂತವಾಗಿ ಭಾರತೀಯ ಇತಿಹಾಸದ ಅಂತರರಾಷ್ಟ್ರೀಯ ಅವಧಿ ಎಂದು ನೀವು ಭಾವಿಸಬೇಕೆಂದು ನಾನು ಬಯಸುತ್ತೇನೆ. ಇದು ಕೇವಲ ಒಂದು ಸಂಕುಚಿತ ರಾಷ್ಟ್ರೀಯ ಆಡಳಿತಾವಧಿಯಾಗಿರಲಿಲ್ಲ. ಭಾರತದ ರಾಯಭಾರಿಗಳು ಕೇವಲ ಸಾಮ್ರಾಜ್ಯ ಮತ್ತು ಸಾಮ್ರಾಜ್ಯಶಾಹಿಯ ಉದ್ದೇಶದಿಂದ ವಿದೇಶಗಳಿಗೆ ಭೇಟಿ ಕೊಡದೆ ಶಾಂತಿˌ ಸಂಸ್ಕೃತಿ ಮತ್ತು ಸದ್ಭಾವನೆಯ ರಾಯಭಾರಿಗಳಾಗಿ ವಿದೇಶಕ್ಕೆ ಭೇಟಿಕೊಟ್ಟ ಅವಧಿ ಇದು” ಎಂದು ಹೇಳಿದ್ದರ ಕುರಿತು ರಿಂಚನ್ ವಿವರಿಸಿದ್ದಾರೆ.
ಹೆರಿಟೇಜ್ ಲ್ಯಾಬ್ ಪ್ರಕಾರ, ನಮ್ಮ ರಾಷ್ಟ್ರೀಯ ಲಾಂಛನದಲ್ಲಿರುವ ಈ ನಾಲ್ಕು ಭವ್ಯವಾದ ಏಷ್ಯಾಟಿಕ್ ಸಿಂಹಗಳು ಶಕ್ತಿ, ಧೈರ್ಯ, ಹೆಮ್ಮೆ ಮತ್ತು ಆತ್ಮವಿಶ್ವಾಸವನ್ನು ಪ್ರತಿನಿಧಿಸುತ್ತವೆ. ಸಿಂಹಗಳುಳ್ಳ ಈ ಮೌರ್ಯ ಸಂಕೇತವು ‘ಧರ್ಮದ ವಿಜಯಕ್ಕಾಗಿ ತನ್ನ ಎಲ್ಲಾ ಸಂಪನ್ಮೂಲಗಳನ್ನು ಅರ್ಪಿಸಿದ ಸಾರ್ವತ್ರಿಕ ಚಕ್ರವರ್ತಿಯ ಶಕ್ತಿಯನ್ನು’ ಸೂಚಿಸುತ್ತದೆ. ಈ ಸಾಂಕೇತಿಕತೆಯನ್ನು ಅಳವಡಿಸಿಕೊಳ್ಳುವಲ್ಲಿ, ಆಧುನಿಕ ಭಾರತವು ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಕಾಪಾಡುವ ಪ್ರತಿಜ್ಞೆ ಮಾಡಿದೆ ಎನ್ನುವ ಮಾರ್ಮಿಕವಾದ ಅರ್ಥವನ್ನು ಹೊಂದಿದೆ ಎನ್ನುತ್ತಾರೆ ರಿಂಚನ್ ಅವರು. ಮುಂದುವರೆದು, “ಸಿಂಹಗಳು ಸಿಲಿಂಡರಾಕಾರದ ಅಬ್ಯಾಕಸ್ ಮೇಲೆ ಕುಳಿತುಕೊಂಡಿದ್ದು, ಇದು ಕುದುರೆ, ಗೂಳಿ, ಸಿಂಹ ಮತ್ತು ಆನೆಯ ಪ್ರಾತಿನಿಧ್ಯಗಳಿಂದ ಅಲಂಕರಿಸಲ್ಪಟ್ಟಿದೆ. ಈ ಪ್ರಾಣಿಗಳನ್ನು ಮಧ್ಯಂತರ ೨೪ ರೇಖೆಗಳಿರುವ ಚಕ್ರದಿಂದ ಬೇರ್ಪಡಿಸಲಾಗುತ್ತದೆ. ಈ ಚಕ್ರವು ನಮ್ಮ ರಾಷ್ಟ್ರ ಧ್ವಜದಲ್ಲಿ ತನ್ನ ಪ್ರಾತಿನಿಧ್ಯವನ್ನು ಸಹ ಕಂಡುಕೊಳ್ಳುತ್ತದೆ. ಈ ಚಕ್ರ, ಅಥವಾ ‘ವ್ಹೀಲ್ ಆಫ್ ಲಾ’ ಕಾಲಾನಂತರದಲ್ಲಿ ಬುದ್ಧನ ಕಲ್ಪನೆಗಳನ್ನು ಸೂಚಿಸುವ ಪ್ರಮುಖ ಬೌದ್ಧ ಸಂಕೇತವೆನ್ನಿಸಿದೆ. ಧರ್ಮ (ಸದ್ಗುಣ), ಹಾಗು ನಂಬಿಕೆಯು ಶಾಶ್ವತವಾಗಿದೆ, ಮತ್ತು ಅದು ನಿರಂತರವಾಗಿ ಬದಲಾಗುತ್ತಾ ಯಾವ ಅಡೆತಡೆಯಿಲ್ಲದ ನಿರಂತರತೆಯಿಂದ ನಿರೂಪಿಸಲ್ಪಟ್ಟಿದೆ ಎನ್ನುವ ಅರ್ಥಗರ್ಭಿತ ವಿವರವನ್ನು ರಿಂಚನ್ ಅವರು ನೀಡಿದ್ದಾರೆ.
ನಮ್ಮ ರಾಷ್ಟ್ರೀಯ ಲಾಂಛನವು ಪ್ರಾಚೀನ ಭಾರತದ ನೈಜ ಇತಿಹಾಸದ ಸಂಕೇತವಾಗಿದೆ. ಆದಾಗ್ಯೂ, ಈ ಲಾಂಛನವನ್ನು ಪತ್ತೆಹಚ್ಚಿದ ಜರ್ಮನ್ ಮೂಲದ ಎಂಜಿನಿಯರ್, ವಾಸ್ತುಶಿಲ್ಪಿ ಮತ್ತು ಪುರಾತತ್ತ್ವ ಶಾಸ್ತ್ರಜ್ಞರೊಬ್ಬರ ಕಾರ್ಯದ ಬಗ್ಗೆ ನಮಗೆ ಹೆಚ್ಚಿನ ವಿವರಗಳು ತಿಳಿದಿಲ್ಲ. ೧೯೦೪-೦೫ ರ ಚಳಿಗಾಲದ ಒಂದು ದಿನ, ಉತ್ತರ ಪ್ರದೇಶದ ಸಾರನಾಥದಲ್ಲಿ ಪುರಾತತ್ತ್ವ ಸ್ಮಾರಕಗಳ ಸ್ಥಳವನ್ನು ಉತ್ಖನನ ಮಾಡುವಾಗ, ಫ್ರೆಡ್ರಿಕ್ ಆಸ್ಕರ್ ಓರ್ಟೆಲ್ ಎನ್ನುವ ಎಂಜಿನಿಯರ್ ಅಶೋಕನ ಸ್ತಂಭದ ಈ ಸಿಂಹ ಲಾಂಛನವನ್ನು ಪತ್ತೆ ಮಾಡಿದರು. ಭಾರತೀಯ ಕಲಾˌ ಇತಿಹಾಸ, ಪುರಾತತ್ತ್ವ ಶಾಸ್ತ್ರ ಮತ್ತು ರಾಷ್ಟ್ರೀಯ ಲಾಂಛನದ ಅವಿಷ್ಕಾರಕ್ಕೆ ಸ್ವಾಭಾವಿಕ ಬ್ರಿಟಿಷ್ ಪ್ರಜೆಯಾಗಿದ್ದ ಓರ್ಟೆಲ್‌ರ ಕೊಡುಗೆಗಳನ್ನು ಕಡೆಗಣಿಸಲಾಗಿದೆ. ಓರ್ಟೆಲ್ ಅವರು ತಮ್ಮ ಹೆಚ್ಚಿನ ಸಮಯವನ್ನು ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಯಾಗಿ ಅನನ್ಯ ಸೇವೆಯನ್ನು ಮಾಡಿದ್ದರು ಎನ್ನುವ ವಿವರಣೆ ರಿಂಚನ್ ಅವರು ಅಂಕಣದುದ್ದಕ್ಕೂ ನೀಡಿದ್ದಾರೆ.
ಭೂಮಿಯಲ್ಲಿ ಹುದುಗಿಹೋಗಿದ್ದ ಭಾರತದ ರಾಷ್ಟ್ರೀಯ ಲಾಂಛನವನ್ನು ಹೊರತೆಗೆದ ಓರ್ಟೆಲ್ ಅವರು ಜರ್ಮನಿಯ ಹ್ಯಾನೋವರ್‌ನಲ್ಲಿ ೯ ಡಿಸೆಂಬರ್ ೧೮೬೨ ರಂದು ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಬ್ರಿಟಿಷ್ ಆಳ್ವಿಕೆಯ ಭಾರತಕ್ಕೆ ಬಂದ ಓರ್ಟೆಲ್ ಅವರು ಥಾಮಸ್ಸನ್ ಕಾಲೇಜ್ ಆಫ್ ಸಿವಿಲ್ ಇಂಜಿನಿಯರಿಂಗ್‌ನಿಂದ ಪದವಿ ಪಡೆದರು (ಇಂದಿನ ಐಐಟಿ-ರೂರ್ಕಿ). ಆನಂತರ ಅವರು ಭಾರತೀಯ ಸಾರ್ವಜನಿಕ ಮಂಡಳಿಯಿಂದ ೧೮೮೩ ರಿಂದ ೧೮೮೭ ರವರೆಗೆ ರೈಲ್ವೆ ಮತ್ತು ಕಟ್ಟಡ ನಿರ್ಮಾಣ ಇಲಾಖೆಯಲ್ಲಿ ಇಂಜಿನಿಯರ್ ಆಗಿ ನೇಮಕಗೊಂಡರು. ಓರ್ಟೆಲ್ ಅವರು ಅವಿಭಜಿತ ಭಾರತಕ್ಕೆ ಹಿಂದಿರುಗುವ ಮೊದಲು ವಾಸ್ತುಶಿಲ್ಪಶಾಸ್ತ್ರವನ್ನು ಅಧ್ಯಯನ ಮಾಡಲು ಯುರೋಪ್ ಗೆ ಮರಳಿದರು. ಭಾರತೀಯ ಕಲೆ ಹಾಗು ಇತಿಯಾಸಕಾರ ಕ್ಲೌಡೀನ್ ಬಾಟ್ಜ್ ಪಿಕ್ರಾನ್ ಅವರ ಪ್ರಕಾರ, ಓರ್ಟೆಲ್ ಅವರು ಆನಂತರ ಲೋಕೋಪಯೋಗಿ ಇಲಾಖೆಯಲ್ಲಿ ಅದ್ಭುತ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೊದಲು ವಿವಿಧ ಕಾರ್ಯಾಚರಣೆಗಳಿಗೆ ನಿಯೋಜಿಸಲಾಗಿದ್ದ ಅವರು ನಂತರ ವಿವಿಧ ಸ್ಥಳಗಳಲ್ಲಿ ಕಾರ್ಯ ಮಾಡಿದರು. ೧೮೯೧-೯೨ ರ ಚಳಿಗಾಲದಲ್ಲಿ ವಾಯುವ್ಯ ಪ್ರಾಂತ್ಯ ಮತ್ತು ಔಧ್ ಸರಕಾರದಿಂದ ಅವರು ಮಾರ್ಚ್ ೧೮೯೨ ರಲ್ಲಿ ರಂಗೂನ್ ತಲುಪುವ ಮೊದಲು ಉತ್ತರ ಮತ್ತು ಮಧ್ಯ ಭಾರತದಲ್ಲಿನ ಸ್ಮಾರಕಗಳು ಮತ್ತು ಪುರಾತತ್ತ್ವ ಸ್ಮಾರಕಗಳುಳ್ಳ ಸ್ಥಳಗಳನ್ನು ಸಮೀಕ್ಷೆ ಮಾಡಿದ್ದರ ಕುರಿತು ರಿಂಚನ್ ಅವರು ಓರ್ಟೆಲ್ಲರ ಸಂಕ್ಷಿಪ್ತ ಪರಿಚಯ ನೀಡಿದ್ದಾರೆ.
ಅಂದು ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಬರ್ಮಾಕ್ಕೆ (ಇಂದಿನ ಮ್ಯಾನ್ಮಾರ್) ಪ್ರಯಾಣಿಸಿದ ಓರ್ಟೆಲ್ ಅವರು ಮೂಲ ಫೋಟೋಗಳೊಂದಿಗೆ ಬರ್ಮಾದ ಸ್ಮಾರಕಗಳ ಬಗ್ಗೆ ಸುದೀರ್ಘ ಮತ್ತು ವಿವರವಾದ ವರದಿಯನ್ನು ಬರೆದಿದ್ದರಂತೆ. ಕ್ಲೌಡೀನ್ ಬಾಟ್ಜ್ ಪಿಕ್ರಾನ್ ಅವರ ಪ್ರಕಾರ “೧೬೦೦ ರಲ್ಲಿ ಅಭಯಗಿರಿ ದಗೋಬಾವನ್ನು [ಪವಿತ್ರವಾದ ಬೌದ್ಧ ಯಾತ್ರಾ ಸ್ಥಳ] ಭೇಟಿ ಮಾಡಿದ ಓರ್ಟೆಲ್ ಅವರನ್ನು ಅದರ ಸಂರಕ್ಷಣೆ ಮತ್ತು ಜೀರ್ಣೋದ್ಧಾರದ ಕುರಿತು ಮಹತ್ವದ ಸಲಹೆಗಳನ್ನು ನೀಡುವ ಸಲುವಾಗಿ ರಾಯಲ್ ಏಷ್ಯಾಟಿಕ್ ಸೊಸೈಟಿಯಿಂದ ಶ್ರೀಲಂಕಾಕ್ಕೆ ಕಳುಹಿಸಲಾಯಿತ್ತಂತೆ. ೧೯೦೨ ರಿಂದ ಲೋಕೋಪಯೋಗಿ ಇಲಾಖೆ, ವಾಯುವ್ಯ ಪ್ರಾಂತ್ಯ ಮತ್ತು ಔಧ್‌ನ ‘ಕಟ್ಟಡ ಮತ್ತು ರಸ್ತೆ’ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಮತ್ತು ೧೯೦೮ ರಿಂದ ಸೂಪರಿಂಟೆಂಡಿಂಗ್ ಇಂಜಿನಿಯರ್ ಆಗಿ, ಅವರು ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ ನಿಯೋಜನೆಗೊಂಡರಂತೆ. ೧೯೦೩ ರಿಂದ ೧೯೦೭ ರವರೆಗೆ , ಅವರು ಬನಾರಸ್‌ನಲ್ಲಿದ್ದು, ೧೯೦೮ ರಲ್ಲಿ ಲಕ್ನೋದಲ್ಲಿ, ಮತ್ತು ೧೯೦೯ ರಿಂದ ೧೯೧೫ ರವರೆಗೆ, ಕಾನ್ಪುರದಲ್ಲಿ ˌ ನಂತರ ಅವರನ್ನು ಅಸ್ಸಾಂನ ಶಿಲ್ಲಾಂಗ್‌ಗೆ ಕಳುಹಿಸಲಾಗಿ ಅಲ್ಲಿ ಅವರು ೧೯೨೦ರ ವರೆಗೆ ಇದ್ದರೆಂದು ರಿಂಚನ್ ಬರೆದಿದ್ದಾರೆ.
ಈ ಸಮಯದಲ್ಲಿ ಕಟ್ಟಡಗಳ ಮೇಲ್ವಿಚಾರಣೆ ಮತ್ತು ನಿರ್ಮಾಣದಲ್ಲಿ ಅವರಿಗಿದ್ದ ಅಪಾರ ಅನುಭವವು, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಹಾಗು, ನವದೆಹಲಿಯಲ್ಲಿ ಹೊಸ ರಾಜಧಾನಿಯ ನಿರ್ಮಾಣದ ಬಗ್ಗೆ ಅಭಿಪ್ರಾಯವನ್ನು ರೂಪಿಸಲು ಅವರಿಗೆ ಹೆಚ್ಚಿನ ಸಹಾಯ ಮಾಡಿತು ಎನ್ನಲಾಗುತ್ತದೆ. ೨೧ ಜುಲೈ ೧೯೧೩ ರಂದು ವೆಸ್ಟ್‌ಮಿನಿಸ್ಟರ್‌ನ ಕ್ಯಾಕ್ಸ್‌ಟನ್ ಹಾಲ್‌ನಲ್ಲಿರುವ ಈಸ್ಟ್ ಇಂಡಿಯಾ ಅಸೋಸಿಯೇಷನ್‌ನಲ್ಲಿ ನೀಡಿದ ಉಪನ್ಯಾಸದ ಸಂದರ್ಭದಲ್ಲಿ, ಹೊಸ ರಾಜಧಾನಿಯನ್ನು ವಿನ್ಯಾಸಗೊಳಿಸುವಾಗ “ನಿಜವಾಗಿಯೂ ರಾಷ್ಟ್ರೀಯ ಭಾರತೀಯ ಶೈಲಿ” ಯಿಂದ ಸ್ಫೂರ್ತಿ ಪಡೆಯಲು ಅಂದು ನಿಯೋಜನೆಗೊಂಡ ವಾಸ್ತುಶಿಲ್ಪಿಗಳಿಗೆ ಅವರು ಕರೆ ನೀಡಿದ್ದರಂತೆ. ಓರ್ಟೆಲ್ ಅವರು ಡಿಸೆಂಬರ್ ೧೯೦೪ ರಿಂದ ಏಪ್ರಿಲ್ ೧೯೦೫ ರವರೆಗೆ ಸಾರನಾಥದಲ್ಲಿ ನಡೆಸಿದ ಉತ್ಖನನದ ಮೂಲಕ ರಾಷ್ಟ್ರೀಯ ಲಾಂಛನವನ್ನು ಹೊರತೆಗೆದು ಜನಪ್ರೀಯರಾದರು. ಜಾನ್ಹವಿ ಪಟ್ಗಾಂವ್ಕರ್ ಅವರು “ಲೈವ್ ಹಿಸ್ಟರಿ ಆಫ್ ಇಂಡಿಯಾ” ಬರೆಯುತ್ತಾ, “೧೯ ನೇ ಶತಮಾನದ ಆರಂಭದಲ್ಲಿ, ಸಾರನಾಥವು ತನ್ನ ಮಹತ್ವದ ಪುರಾತತ್ತ್ವ ಸ್ಮಾರಕಗಳಿಗಾಗಿ ವಿದ್ವಾಂಸರ ಗಮನವನ್ನು ಸೆಳೆಯಲು ಪ್ರಾರಂಭಿಸಿತು ಎನ್ನುತ್ತಾರೆ. ಭಾರತದ ಮೊದಲ ಸರ್ವೇಯರ್ ಜನರಲ್ ಕಾಲಿನ್ ಮೆಕೆಂಜಿ ಅವರು ೧೮೧೫ ರಲ್ಲಿ ಮೊದಲ ಬಾರಿಗೆ ಪರಿಶೋಧಿಸಿದರು ಎನ್ನುವ ವಿವರಣೆ ರಿಂಚನ್ ನೀಡಿದ್ದಾರೆ.
ಸಾರನಾಥವು ೧೮೩೦ ರ ದಶಕದಲ್ಲಿ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಮಹಾನಿರ್ದೇಶಕರಾದ ಮೇಲೆ ಮತ್ತಷ್ಟು ಉತ್ಖನನಗಳಿಗೆ ಸಾಕ್ಷಿಯಾಯಿತು. ಸ್ವಾಭಾವಿಕವಾಗಿ ಸಾರನಾಥದಲ್ಲಿ ಹೆಚ್ಚಿನ ಉತ್ಖನನ ಆಸಕ್ತಿ ಬೆಳೆಸಿಕೊಂಡ ಓರ್ಟೆಲ್ ಆ ಸಮಯದಲ್ಲಿ ಬನಾರಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು ಸಾರನಾಥದಲ್ಲಿ ಒಂದು ಸ್ಥಳವನ್ನು ಉತ್ಖನನ ಮಾಡಲು ಅನುಮತಿಯನ್ನು ಪಡೆದುಕೊಂಡರಂತೆ. ಮುಂದಿನ ವರ್ಷದಲ್ಲಿ, ಅವರು ಪುರಾತತ್ವ ಇಲಾಖೆಯ ಸಹಾಯದಿಂದ ತಮ್ಮ ಕೆಲಸವನ್ನು ಪ್ರಾರಂಭಿಸಿದರಂತೆ. ಪಟ್ಗಾಂವ್ಕರ್ ಅವರು, ಓರ್ಟೆಲ್ ಸಾರನಾಥದಲ್ಲಿ “ಇದುವರೆಗೆ ಮಾಡಿದ ಕೆಲವು ಮಹತ್ವದ ಸಂಶೋಧನೆಗಳನ್ನು” ಪಟ್ಟಿಮಾಡಿದ್ದಾರೆ. ಇವುಗಳಲ್ಲಿ ೪೭೬ ಶಿಲ್ಪಗಳು ಮತ್ತು ಅನೇಕ ವಾಸ್ತುಶಿಲ್ಪದ ಅವಶೇಷಗಳು, ಜೊತೆಗೆ ೪೧ ಶಿಲಾಶಾಸನಗಳು ಸೇರಿವೆಯಂತೆ. ಪಾಟ್ಗಾಂವ್ಕರ್ ಮುಂದುವರೆದು, “ಕುಶಾಣ ರಾಜ ಕನಿಷ್ಕನ (ಆರ್. ೭೮-೧೪೪ CE) ಅವಧಿಯ ಭೋದಿಸತ್ವನ ಆಕೃತಿ ˌ ಒಂದು ಸಂಘರಾಮ್ (ಮಠ) ದ ತಳಪಾಯˌ ಬೌದ್ಧ ಮತ್ತು ಹಿಂದೂ ದೇವತೆಗಳ ಹಲವಾರು ಚಿತ್ರಗಳು ಮತ್ತು ಶಾಸನಗಳನ್ನು ಹೊಂದಿರುವ ಚಕ್ರವರ್ತಿ ಅಶೋಕನ ಕಾಲದ (೩ನೇ BCE) ಅಶೋಕ ಸ್ತಂಭ ಸೇರಿವೆ ಎಂದು ರಿಂಚನ್ ಅವರು ವಿವರಿಸಿದ್ದಾರೆ.
ಇತಿಹಾಸಕಾರ್ತಿ ಪಟ್ಗಾವ್ಕರ್ ಅವರು ಮುಂದುವರೆದು ಹೇಳುವುದೇನೆಂದರೆ, ಸಹಜವಾಗಿ ಸಿಂಹದ ರಾಜಧಾನಿ ಎಂದೇ ಖ್ಯಾತವಾಗಿರುವ ಅಶೋಕನ ಸ್ತಂಭಕ್ಕೆ ಕಿರೀಟದಂತಿರುವ ಸಿಂಹ ಲಾಂಛನವು ಒಂದು ಅತ್ಯಂತ ಮಹತ್ವದ ಆವಿಷ್ಕಾರವಾಗಿದೆ. ಬೌದ್ಧ ಧರ್ಮಕ್ಕೆ ಮತಾಂತರಗೊಂಡ ನಂತರ ಬುದ್ಧನ ಸಂದೇಶಗಳನ್ನು ಪ್ರಸಾರ ಮಾಡಲು ಭಾರತೀಯ ಉಪಖಂಡದಾದ್ಯಂತ ಸಾಮ್ರಾಟ ಅಶೋಕನಿಂದ ನಿಯೋಜಿಸಲಾದ ಅನೇಕ ಕಂಬಗಳಲ್ಲಿ ಈ ನಿರ್ದಿಷ್ಟ ಸ್ತಂಭವೂ ಒಂದಾಗಿದೆ. ಸಾರಾನಾಥದಲ್ಲಿ ಪತ್ತೆಯಾದ ಲಯನ್ ಕ್ಯಾಪಿಟಲ್ ಅಶೋಕ ಸ್ಥಾಪಿಸಿದ ಉಳಿದಿರುವ ಏಳು ಸ್ತಂಭಗಳ ಪೈಕಿ ಒಂದು ಎನ್ನುವ ಪಟ್ಗಾಂವ್ಕರ್ ಉಲ್ಲೇಖವನ್ನು ರಿಂಚನ್ ಅವರು ಪ್ರಸ್ತಾಪಿಸಿದ್ದಾರೆ. ಈ ಸಂಶೋಧನೆಯ ವಿವರಗಳು ‘ಭಾರತೀಯ ಪುರಾತತ್ವ ಸಮೀಕ್ಷೆಯ ೧೯೦೪-೧೯೦೫’ ರ ವಾರ್ಷಿಕ ವರದಿಯಲ್ಲಿ ಹೀಗೆ ವಿವರಿಸಲಾಗಿದೆ: “ಈ ಸಿಂಹ ಲಾಂಛನವು ೭ ಅಡಿ ಎತ್ತರವಾಗಿದೆ. ಇದು ಮೂಲತಃ ಒಂದು ಕಲ್ಲಿನ ತುಂಡಾಗಿದ್ದು ಈಗ ಗಂಟೆಯ ಮೇಲೆ ಅಡ್ಡಲಾಗಿ ತುಂಡಾಗಿದೆ. ಅದನ್ನು ನಾಲ್ಕು ಭವ್ಯವಾದ ಸಿಂಹಗಳು ಒಂದರ ಹಿಂದೆ ಒಂದು ನಿಂತಿವೆ ಮತ್ತು ಅವುಗಳ ಮಧ್ಯದಲ್ಲಿ ಒಂದು ದೊಡ್ಡ ಕಲ್ಲಿನ ಚಕ್ರ, ಅದು ಬೌದ್ಧ ಧರ್ಮದ ಪವಿತ್ರ ಧರ್ಮಚಕ್ರದ ಸಂಕೇತವಾಗಿದೆ.”
ಪುರಾತತ್ವ ಸರ್ವೇಕ್ಷಣಾ ವರದಿಯು ಮುಂದುವರೆದು ಹೀಗೆ ವಿವರಿಸುತ್ತದೆ: “ಇದು ಸ್ಪಷ್ಟವಾಗಿ ೩೨ ರೇಖೆಗಳನ್ನು ಹೊಂದಿತ್ತು, ಆದರೆ ಸಿಂಹಗಳ ಕೆಳಗಿನ ನಾಲ್ಕು ಸಣ್ಣ ಚಕ್ರಗಳು ಮಾತ್ರ ಕೇವಲ ೨೪ ರೇಖೆಗಳನ್ನು ಹೊಂದಿವೆ. ನಾಲ್ಕು ಚಕ್ರಗಳ ನಡುವೆ ಇರಿಸಲಾಗಿರುವ ಸಿಂಹ, ಆನೆ, ಗೂಳಿ ಮತ್ತು ಕುದುರೆ ಎಂಬ ನಾಲ್ಕು ಪ್ರಾಣಿಗಳ ಆಕೃತಿಗಳೊಂದಿಗೆ ಸಿಂಹಗಳು ಡ್ರಮ್ ಮೇಲೆ ನಿಂತಿವೆ. ಲಾಂಛನದ ಮೇಲಿನ ಭಾಗವು ಸೊಗಸಾದ ಆಕಾರದ ಪರ್ಸೆಪಾಲಿಟನ್ ಬೆಲ್-ಆಕಾರದ ಸದಸ್ಯರಿಂದ ಆಸರೆ ನೀಡಲಾಗಿದೆ. ಸಿಂಹ ಮತ್ತು ಇತರ ಪ್ರಾಣಿಗಳ ಆಕೃತಿಗಳು ಅತ್ಯದ್ಭುತವಾಗಿ ಜೀವಸದೃಶವಾಗಿವೆ ಮತ್ತು ಪ್ರತಿಯೊಂದು ವಿವರಗಳ ಕೆತ್ತನೆಯು ಪರಿಪೂರ್ಣವಾಗಿದೆ.” ಪುರಾತತ್ವ ಸರ್ವೇಕ್ಷಣಾ ವರದಿಯು ಆ ಲಾಂಛನದ ಗಾಂಭೀರ್ಯವನ್ನು ವಿವರಿಸುತ್ತಾ: “ಒಟ್ಟಾರೆಯಾಗಿ ಈ ಲಾಂಛನವು ನಿಸ್ಸಂದೇಹವಾಗಿ ಭಾರತದಲ್ಲಿ ಇದುವರೆಗೆ ಪತ್ತೆಯಾದ ಈ ಬಗೆಯ ಸ್ಮಾರಕಗಳಲ್ಲಿಯೆ ಅತ್ಯುತ್ತಮವಾದ ಶಿಲ್ಪಕಲೆಯಾಗಿದೆ. ೨,೦೦೦ ವರ್ಷಗಳ ಹಿಂದೆ ಸ್ಥಾಪಿಸಲಾದ ಸ್ತಂಭದ ವಯಸ್ಸನ್ನು ಪರಿಗಣಿಸಿ, ಅದು ಎಷ್ಟೊಂದು ಚೆನ್ನಾಗಿ ಸಂರಕ್ಷಿಸಲ್ಪಟ್ಟಿದೆ ಎಂಬುದೆ ಅದ್ಭುತ ಸಂಗತಿಯಾಗಿದೆ. ಇದರ ಕೆತ್ತನೆಯು ಅದನ್ನು ಕೆತ್ತಿದ ದಿನದಷ್ಟೇ ಸ್ಪಷ್ಟ ಹಾಗು ಹೊಚ್ಚ ಹೊಸತನದಿಂದ ಕಂಗೊಳಿಸುತ್ತದೆ. ಈ ಶಿಲ್ಪವು ಉದ್ದೇಶಪೂರ್ವಕ ವಿರೂಪದ ಹೊರತಾಗಿಯೂ ಅದೊಂದು ಅದ್ಭುತವಾದ ಸ್ಮಾರಕವಾಗಿದೆ” ಎನ್ನುವ ವಿವರಗಳಿವೆ.
ಅಶೋಕನ ಈ ಸಿಂಹ ಶಿಲ್ಪವು ಭಾರತದ ರಾಷ್ಟ್ರೀಯ ಲಾಂಛನಕ್ಕೆ ಹೇಳಿ ಮಾಡಿದ್ದಾಗಿದ್ದು ಇದು ಸಾರಾನಾಥ ಪ್ರದೇಶದಲ್ಲಿ ಧಮೇಕ್ ಸ್ತೂಪದ ಬಳಿ ಹೂತು ಹೋಗಿತ್ತು. ಈ ಲಾಂಛನವನ್ನು ಹೊತ್ತಿರುವ ಸ್ತಂಭವು ಇಂದು ಕಂಡುಬಂದ ಸ್ಥಳದಲ್ಲಿಯೆ ನಿಂತಿದ್ದರೆ, ಸಿಂಹದ ಲಾಂಛನವನ್ನು ಸಾರನಾಥ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ. ಅಂತಹ ಮಹತ್ವದ ಆವಿಷ್ಕಾರದ ಹೊರತಾಗಿಯೂ, ಓರ್ಟೆಲ್ ಕೇವಲ ಒಂದು ಅವಧಿಗೆ ಮಾತ್ರ ಸಾರನಾಥದಲ್ಲಿ ಉತ್ಖನನ ಮಾಡಲು ಸಾಧ್ಯವಾಯಿತು ಮತ್ತು ೧೯೦೫ ರ ಹೊತ್ತಿಗೆ ಅವರನ್ನು ಆಗ್ರಾಕ್ಕೆ ವರ್ಗಾ ಮಾಡಲಾಯಿತು. ೧೯೦೭-೦೮ ರಲ್ಲಿ ಯುನೈಟೆಡ್ ಪ್ರಾವಿನ್ಸ್‌ನಲ್ಲಿ ಬರಗಾಲದ ನಂತರ ಅವರನ್ನು ಮತ್ತೆ ಸಾರನಾಥಗೆ ಹಿಂತಿರುಗಿ ಹೆಚ್ಚಿನ ಉತ್ಖನನಗಳನ್ನು ಮಾಡಲು ಅನುಮತಿಯನ್ನು ನಿರಾಕರಿಸಲಾಯಿತು. ಅದೃಷ್ಟವಶಾತ್, ಬಿ ಸಿ ಭಟ್ಟಾಚಾರ್ಯರಂತಹ ವಿದ್ವಾಂಸರು ಸಾರನಾಥದಲ್ಲಿ ಓರ್ಟಲ್ ಅವರ ಕೊಡುಗೆಗಳನ್ನು ಹೀಗೆ ಸ್ಮರಿಸಿದ್ದಾರೆ: “ಓರ್ಟೆಲ್‌ರ ಉತ್ಖನನ ಕಾರ್ಯವು ಸಾರನಾಥದಲ್ಲಿ ಸಂಶೋಧನಾ ಕಾರ್ಯದಲ್ಲಿ ಹೊಸ ಯುಗವನ್ನು ಪ್ರಾರಂಭಿಸಿತು. ಈ ಸ್ಥಳದಲ್ಲಿ ಅವರು ಮಾಡಿದ ಅದ್ಭುತ ಆವಿಷ್ಕಾರಗಳಿಗಾಗಿ ಜಗತ್ತು ಅವರಿಗೆ ಋಣಿಯಾಗಿದೆ” ಎನ್ನುವ ಭಟ್ಟಾಚಾರ್ಯರ ಸ್ಮರಣೀಯ ಸಾಲುಗಳನ್ನು ರಿಂಚನ್ ಅವರು ವಿವರಿಸಿದ್ದಾರೆ.
ಸಾರನಾಥ ಉತ್ಖನನದ ನಂತರ ಓರ್ಟೆಲ್ ಅವರು ಆಗ್ರಾಕ್ಕೆ ತೆರಳಿದರು, ಅಲ್ಲಿ ಇತರ ಕೆಲಸಗಳ ಜೊತೆಗೆ, ಅವರು ಆಗ್ರಾ ಕೋಟೆಯಲ್ಲಿರುವ “ದಿವಾನ್-ಐ-ಅಮ್ಮ್ ಮತ್ತು ಜಹಾಂಗಿರಿ ಮಹಲ್‌ನ ಪುನಃಸ್ಥಾಪನೆ ಮತ್ತು ಸಿಕಂದರ್ ನಲ್ಲಿರುವ ಅಕ್ಬರ್ ಸಮಾಧಿಯ ದಕ್ಷಿಣ ದ್ವಾರದ ನಾಲ್ಕು ಮಿನಾರ್‌ಗಳ ಪುನರ್ನಿರ್ಮಾಣವನ್ನು ಕೈಗೊಂಡರು. ೧೯೦೫-೧೯೦೬ ರಲ್ಲಿ ತಾಜ್ ಮಹಲ್‌ನ ಕಾಂಪೌಂಡ್ ಕೆಲಸ ಮಾಡಿದರು. ಅವರು ಮೊಘಲ್ ವಾಸ್ತುಶಿಲ್ಪದ ಬಗ್ಗೆ ಹೆಚ್ಚು ವಿವರವಾದ ಅಧ್ಯಯನವನ್ನು ನಡೆಸಿದ್ದರು. ಉತ್ತರ ಪ್ರದೇಶದ ಈಗಿನ ಚಿತ್ರಕೂಟ ಜಿಲ್ಲೆಯ ಬಂದಾದ್ ನಲ್ಲಿನ ರಿಖಿಯಾನ್ ನಲ್ಲಿ ಯೋಗಿನಿಯರ ಶಿಲ್ಪಗಳನ್ನು ಇತಿಸಾಹದ ಪುಟಗಳಲ್ಲಿ ದಾಖಲಿಸಿದ್ದಾರೆ ಎನ್ನುವ ಇತಿಹಾಸಕಾರರ ಉಲ್ಲೇಖಗಳನ್ನು ರಿಂಚನ್ ಅವರು ಈ ಅಂಕಣದಲ್ಲಿ ಪ್ರಾಸ್ತಾಪಿಸಿದ್ದಾರೆ. ೧೯೨೧ ರಲ್ಲಿ ಓರ್ಟೆಲ್ ಭಾರತವನ್ನು ತೊರೆದು ಯುನೈಟೆಡ್ ಕಿಂಗ್‌ಡಮ್‌ಗೆ ಹೋಗುವಾಗ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ ಅವರ ಅವಿಷ್ಕಾರವನ್ನು ಭಾರತ ಸರಕಾರ ತನ್ನ ರಾಷ್ಟ್ರೀಯ ಗುರುತಾಗಿ ಅಂಗೀಕರಿಸುತ್ತದೆ ಎನ್ನುವ ಸಂಗತಿ ಅವರಿಗೆ ತಿಳಿದಿರಲಿಲ್ಲ. ಓರ್ಟೆಲ್ ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ˌ ಆದರೆ ಅವರು ಬಿಟ್ಟುಹೋದ ಪುರಾತತ್ವ ಸ್ಮಾರಕಗಳ ಉಜ್ವಲ ಸಂಶೋಧನಾ ಪರಂಪರೆ ಎಲ್ಲಾ ಭಾರತೀಯರ ಕಣ್ಣಿಗೆ ಕಾಣುವಂತಿದೆ ಎನ್ನುತ್ತಾರೆ ರಿಂಚನ್ ಅವರು.
ಹೀಗೆ ಭಾರತವು ಸಂಪೂರ್ಣವಾಗಿ ದ್ರಾವಿಡ ಶಿವಸಂಸ್ಕೃತಿ ಮತ್ತು ಅದರ ತರುವಾಯದ ಬೌದ್ಧ ಸಂಸ್ಕೃತಿಯ ನೆಲೆವೀಡಾಗಿದ್ದು ಮಾತ್ರ ಸುಳ್ಳಲ್ಲ. ಆನಂತರದ ಕಾಲಘಟ್ಟದಲ್ಲಿ ವಲಸಿಗ ಆರ್ಯನ್ನರು ಈ ಭಾರತೀಯ ಮೂಲ ಸಂಸ್ಕೃತಿಗಳನ್ನು ಹುಡಿಗೊಳಿಸಿ ಅಲ್ಲಿ ಆರ್ಯ ಧರ್ಮದ ಕುರುಹುಗಳನ್ನು ಕೃತಕವಾಗಿ ಒಳ ನುಸುಳಿಸಿದರು ಎನ್ನುವ ಸತ್ಯ ಭಾರತೀಯರಾದ ನಾವು ಅರ್ಥಮಾಡಿಕೊಳ್ಳಬೇಕಿದೆ.