• Home
  • About Us
  • ಕರ್ನಾಟಕ
Thursday, September 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

ನಾ ದಿವಾಕರ by ನಾ ದಿವಾಕರ
September 4, 2025
in Top Story, ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ, ವಿಶೇಷ, ಸ್ಟೂಡೆಂಟ್‌ ಕಾರ್ನರ್
0
ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ
Share on WhatsAppShare on FacebookShare on Telegram

ಶಿಕ್ಷಕರ ದಿನಾಚರಣೆಯಲ್ಲಿ ನಡೆದ ಹಾದಿಯ ಪುನರಾವಲೋಕನ-ಆತ್ಮವಿಮರ್ಶೆ ಆದ್ಯತೆಯಾಗಲಿ

ADVERTISEMENT

ನಾ ದಿವಾಕರ

 ಸಮಕಾಲೀನ ಭಾರತದ ಒಂದು ಪ್ರಧಾನ ಲಕ್ಷಣ ಎಂದರೆ, ಗತಕಾಲದ ದಾರ್ಶನಿಕರ, ಮಾರ್ಗದರ್ಶಕರ, ತತ್ವಶಾಸ್ತ್ರಜ್ಞರ, ಶಿಕ್ಷಣ ತಜ್ಞರ ಹಾಗೂ ಆಧ್ಯಾತ್ಮಿಕ ವ್ಯಕ್ತಿಗಳ ಹುಟ್ಟುಹಬ್ಬ ಅಥವಾ ಮರಣದ ವಾರ್ಷಿಕವನ್ನು ಬಹಳ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಆದರೆ ಈ ಆಚರಣೆಗಳ ನಡುವೆ, ಮಹನೀಯರು ಬಿಟ್ಟು ಹೋದ ಹಾದಿ ಮತ್ತು ಆದರ್ಶಗಳನ್ನು, ಅವರ ಚಿಂತನಾ ಕ್ರಮ-ವಿಚಾರಧಾರೆಗಳನ್ನು, ವರ್ತಮಾನದ ಸಮಾಜ ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದೆ ಅಥವಾ ಕನಿಷ್ಠ ಪಕ್ಷ ಅನುಸರಿಸುತ್ತಿದೆ ಎನ್ನುವುದನ್ನು ಸ್ವ-ವಿಮರ್ಶಾತ್ಮಕ ನೆಲೆಯಲ್ಲಿ ಪರಾಮರ್ಶಿಸುವ ಬೌದ್ಧಿಕ ಕ್ರಿಯೆಗಳು ನಡೆಯುವುದಿಲ್ಲ. ಬುದ್ಧನಿಂದ ಅಂಬೇಡ್ಕರ್-ಕುವೆಂಪುವರೆಗೂ ಈ ವಾಸ್ತವವನ್ನು ಗುರುತಿಸಬಹುದು. ಸರ್ಕಾರಗಳಿಗೆ ಈ ಆಚರಣೆಗಳು ಸಾಂಕೇತಿಕ ಕಾರ್ಯಕ್ರಮಗಳಾಗಿ ಕಂಡರೆ, ಸಾಮಾಜಿಕ ಸಂಘಟನೆಗಳಿಗೆ ಇದು ಅಸ್ತಿತ್ವವಾದಿ ನೆಲೆಯಲ್ಲಿ ಕಾಣುತ್ತದೆ.

 ಈ ವಿರೋಧಾಭಾಸಗಳ ನಡುವೆ ಸೆಪ್ಟಂಬರ್‌ 5ರಂದು, ಡಾ ರಾಧಾಕೃಷ್ಣನ್‌  ಅವರ ಜನ್ಮದಿನದ ನಿಮಿತ್ತ, ಶಿಕ್ಷಕರ ದಿನವನ್ನೂ ಆಚರಿಸಲಾಗುತ್ತದೆ. ಈ ಆಚರಣೆಯ ರಾಜಕೀಯ-ಸಾಮಾಜಿಕ ಉದ್ದಿಶ್ಯಗಳು ಏನೇ ಇದ್ದರೂ, ಅಂತಿಮವಾಗಿ ಈ ದಿನದಂದು ದೇಶದ ಜನಸಾಮಾನ್ಯರು ಶಿಕ್ಷಕ, ಶಿಕ್ಷಣ ಮತ್ತು ವಿದ್ಯಾರ್ಜನೆಯ ಚೌಕಟ್ಟಿನಲ್ಲಿ ಭವಿಷ್ಯದ ಹಾದಿಯನ್ನು ರೂಪಿಸಿಕೊಳ್ಳುವ ಬೌದ್ಧಿಕ ಕ್ರಿಯೆಯಾಗಿ ಈ ದಿನವನ್ನು ಆಚರಿಸುವುದು ಅಪೇಕ್ಷಣೀಯ. ಏಕೆಂದರೆ ವರ್ತಮಾನದ ಭಾರತದಲ್ಲಿ ಬಹುಸಂಖ್ಯೆಯಲ್ಲಿರುವ ಮಿಲೆನಿಯಂ ಮಕ್ಕಳು ದೇಶದ ಶಿಕ್ಷಣ ವ್ಯವಸ್ಥೆಯ ಪ್ರಧಾನ ಭಾಗಿದಾರರಾಗಿದ್ದು (Stake holders) ,ಈ ಯುವ ಸಮೂಹಕ್ಕೆ, ಉತ್ತಮ ಭವಿಷ್ಯದ ಹಾದಿಯನ್ನು ರೂಪಿಸುವುದು ಸಮಾಜದ ಆದ್ಯತೆಯಾಗಬೇಕಿದೆ. ಇಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಕಾಣುವುದು ಪ್ರಧಾನವಾಗಿ ಶಿಕ್ಷಕರು ಎನ್ನುವುದು ನಿರ್ವಿವಾದ ಸತ್ಯ.

 ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳ ಪಾತ್ರ

 ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಎರಡು ವಿದ್ಯಮಾನಗಳನ್ನು ಅನಪೇಕ್ಷಿತ ಎಂದು ಭಾವಿಸಬಹುದಾದರೆ, ಮೊದಲನೆಯದು ವಾಣಿಜ್ಯೀಕರಣ-ಕಾರ್ಪೋರೇಟೀಕರಣ, ಎರಡನೆಯದು ವರ್ತಮಾನದ-ಭವಿಷ್ಯದ ಸಮಾಜಕ್ಕೆ ಅಗತ್ಯವಾದ ಮಾನವೀಯ ಮೌಲ್ಯಗಳ ಕೊರತೆ. ವ್ಯಕ್ತಿಗತವಾಗಿ ಇಂದಿಗೂ ಸಹ ಸಾವಿರಾರು ಶಿಕ್ಷಕರು ( ಉಪನ್ಯಾಸಕರು, ಪ್ರಾಧ್ಯಾಪಕರು, ಬೋಧಕರು ಎಲ್ಲರನ್ನೂ ಒಳಗೊಂಡು ಶಿಕ್ಷಕರು ಎನ್ನಬಹುದು) ಆದರ್ಶಗಳನ್ನು, ಮೌಲ್ಯಗಳನ್ನು ಉಳಿಸಿಕೊಂಡು, ಶಿಕ್ಷಣಾರ್ಥಿಗಳಿಗೆ ಮನದಟ್ಟು ಮಾಡುತ್ತಾ ನಿಷ್ಠೆಯಿಂದ ದುಡಿಯುತ್ತಿದ್ದಾರೆ. ಇದನ್ನು ಪ್ರಶಸ್ತಿ-ಸನ್ಮಾನಗಳ ಮಾನದಂಡದ ಮೂಲಕ ಅಳೆಯುವುದಕ್ಕಿಂತಲೂ, ವಾಸ್ತವ ಸನ್ನಿವೇಶದ ನೆಲೆಯಲ್ಲಿ ವ್ಯಾಖ್ಯಾನಿಸಿದರೆ ಪ್ರಾಮಾಣಿಕ ಚಿತ್ರಣ ದೊರೆಯುತ್ತದೆ. ಏಕೆಂದರೆ ಸರ್ಕಾರ-ಸಂಘಸಂಸ್ಥೆಗಳು ಕೊಡಮಾಡುವ ಪ್ರಶಸ್ತಿಗಳು ತಮ್ಮದೇ ಆದ ಹಿನ್ನೆಲೆ ಹೊಂದಿರುತ್ತವೆ.

 ಮೌಲ್ಯಗಳು ಎಂದ ಕೂಡಲೇ ವಿಶಾಲ ಸಮಾಜದಲ್ಲಿ ಹಲವು ಧ್ವನಿಗಳು ಹುಟ್ಟಿಕೊಳ್ಳುತ್ತವೆ. ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಮೌಲ್ಯಗಳು ಒಂದಾದರೆ ಅದರೊಳಗೆ ಸಾಂಪ್ರದಾಯಿಕ, ಕರ್ಮಠ, ಗ್ರಾಂಥಿಕ ಮೌಲ್ಯಗಳು ಪ್ರಧಾನವಾಗುತ್ತವೆ. ಜೀವನಾದರ್ಶ ಮೌಲ್ಯಗಳು ಎಂದಾಕ್ಷಣ ವಿವಿಧ ಸಮಾಜಗಳು ರೂಪಿಸಿಕೊಳ್ಳುವ ಮಾರ್ಗಗಳು ಮತ್ತು ಚಿಂತನೆಗಳು, ಆಯಾ ಸಮಾಜದ ಪ್ರಬಲ ವರ್ಗಗಳಿಂದಲೇ ನಿರ್ದೇಶಿಸಿ, ನಿಯಂತ್ರಿಸಲ್ಪಡುವುದರಿಂದ, ಹಲವು ಸಂದರ್ಭಗಳಲ್ಲಿ ಇದು ಸಾರ್ವತ್ರಿಕತೆ-ಸಾರ್ವಕಾಲಿಕತೆ ಪಡೆದುಕೊಳ್ಳುವುದಿಲ್ಲ. ಭಾರತದಂತಹ ಶ್ರೇಣೀಕೃತ ಸಮಾಜದಲ್ಲಿ ಜಾತಿ-ಮತ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೂರನೆಯ ಮಜಲಿನಲ್ಲಿ ಮೌಲ್ಯಗಳನ್ನು ನಿರ್ವಚಿಸುವಾಗ, ಸಮಾಜದ ವಿವಿಧ ವರ್ಗಗಳು ತಾವು ನಂಬುವ ಅಥವಾ ಅನುಸರಿಸುವ ಜಾತಿ ನಿರ್ದಿಷ್ಟ ದಾರ್ಶನಿಕರ ಮತ್ತು ಮತ ಕೇಂದ್ರಿತ ಚಿಂತನಾಧಾರೆಗಳ ಪ್ರಭಾವಕ್ಕೊಳಗಾಗುವುದರಿಂದ, ಅಲ್ಲಿಯೂ ಸಹ ಮೌಲ್ಯಗಳು ಭಿನ್ನ ರೂಪಗಳನ್ನು ಪಡೆದುಕೊಳ್ಳುತ್ತವೆ.

ಆದರೆ ವಾಸ್ತವವಾಗಿ ವರ್ತಮಾನದ ಭಾರತಕ್ಕೆ, ಮಿಲೆನಿಯಂ ಸಮೂಹದ ಭವಿಷ್ಯದ ಬದುಕಿಗೆ ಬೇಕಾಗಿರುವುದು ಎಲ್ಲರನ್ನೂ ಸಮನಾಗಿ ಕಾಣುವ, ಒಳಗೊಳ್ಳುವ ಸಹಬಾಳ್ವೆ, ಸಮನ್ವಯ, ಸೌಹಾರ್ದತೆ ಮತ್ತು ಮನುಷ್ಯರ ನಡುವೆ ಇರಬಹುದಾದ ಎಲ್ಲ ರೀತಿಯ ಅಂತರಗಳನ್ನೂ ದೂರ ಮಾಡಿ ಬದುಕುವಂತಹ ಒಂದು ಜೀವನ ಸಂಸ್ಕೃತಿ. ಇದನ್ನು ಉನ್ನತ ಮಟ್ಟದಲ್ಲಿ, ಉದಾತ್ತ ಪರಿಕಲ್ಪನೆಯಲ್ಲಿ ವಿಶಾಲವಾಗಿ “ ಮಾನವೀಯ ಮೌಲ್ಯಗಳು ” ಎಂದು ನಿರ್ವಚಿಸಬಹುದು. ಭಾರತದ ಚರಿತ್ರೆಯಲ್ಲಿ ಈ ಉದಾತ್ತ ಮೌಲ್ಯಗಳನ್ನು ಬಿತ್ತಿ, ಪೋಷಿಸಿ, ನೀರೆರೆದು ಸಮಾಜಕ್ಕೆ ಶಾಶ್ವತ ಕೊಡುಗೆಯಾಗಿ ನೀಡಿರುವ ಹಲವಾರು ಚಿಂತಕರು ನಮಗೆ ಕಾಣುತ್ತಾರೆ. ದುರದೃಷ್ಟವಶಾತ್‌ ವಾಲ್ಮೀಕಿಯಿಂದ ಕುವೆಂಪು ಅವರವರೆಗೂ ಎಲ್ಲ ದಾರ್ಶನಿಕರನ್ನು ಮತ್ತೆ ಜಾತಿ ವ್ಯವಸ್ಥೆಯೇ ಜಾತಿ ನಿರ್ದಿಷ್ಟವಾಗಿ ವಿಭಜಿಸಿರುವುದರಿಂದ, ಈ ಮಹನೀಯರು ಬಿತ್ತಿ ಹೋದ ಜೀವನ ಮೌಲ್ಯಗಳು, ಆಚರಣೆ-ಅನುಕರಣೆಗಿಂತಲ್ಲೂ ಹೆಚ್ಚಾಗಿ, ಅಸ್ಮಿತೆ ಮತ್ತು ಅಸ್ತಿತ್ವವನ್ನು ಸಂರಕ್ಷಿಸುವ ಸಾಧನಗಳಾಗಿ ಪರಿಣಮಿಸಿವೆ.

 ಭವಿಷ್ಯದ ದೃಷ್ಟಿಯಿಂದ ಶಿಕ್ಷಕರ ಪಾತ್ರ

P Chidambaram : GST ಯಲ್ಲಿ ಬಾರಿ ಬದಲಾವಣೆ P Chidambaram ಪ್ರತಿಕ್ರಿಯೆ #pratidhvani

 ಈ ಅಡ್ಡಗೋಡೆಗಳನ್ನು ದಾಟಿ ಹೊಸ ಜಗತ್ತಿನ ಕಲ್ಪನೆಯೊಂದಿಗೆ ಭವಿಷ್ಯದ ಸಮಾಜವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಪ್ರಾಥಮಿಕದಿಂದ ಅತ್ಯುನ್ನತ ವ್ಯಾಸಂಗದವರೆಗಿನ ಶಿಕ್ಷಕ ವೃಂದ ಇದನ್ನು ಮೊದಲು ಮನಗಾಣಬೇಕಿದೆ. ರಾಜಕೀಯ, ಆರ್ಥಿಕ, ಹುದ್ದೆ, ಸ್ಥಾನಮಾನ ಮತ್ತು ಸಾಮಾಜಿಕ ಅಸ್ಮಿತೆಯ ಪ್ರಲೋಭನೆಗಳಿಂದ ಹೊರಬಂದು, ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಜಾತಿ-ಮತಗಳ ಅಸ್ಮಿತೆಯ ಕವಚಗಳನ್ನು ಕಳಚಿ ಹಾಕಿ, ʼ ಎಲ್ಲರೊಳಗೊಂದಾಗುವ ʼ ಔದಾತ್ಯವನ್ನು ಬೆಳೆಸಿಕೊಳ್ಳುವುದು ಶಿಕ್ಷಕ ವೃತ್ತಿಯಲ್ಲಿರುವವರ ಪ್ರಥಮ ಆದ್ಯತೆಯಾಗಬೇಕಿದೆ. ಇದು ಸಾಧ್ಯವಾಗುತ್ತಿಲ್ಲ ಎಂಬ ವಿಷಾದದ ನಡುವೆಯೇ, ನಾವು ಗಮನಿಸಬೇಕಿರುವುದು, ಇದರಿಂದ ಸಮಾಜಕ್ಕೆ ಆಗುತ್ತಿರುವ ಅಪಾಯಗಳನ್ನು ಮತ್ತು ದುಷ್ಪರಿಣಾಮಗಳನ್ನು. ಇಲ್ಲಿ ʼ ಮೌಲ್ಯ ʼ ಎಂಬ ಅಮೂಲ್ಯ ವಸ್ತು  ನಮಗೆ ನಿರ್ಣಾಯಕವಾಗಿ ಕಾಣುತ್ತದೆ.

 ಕನ್ನಡದ ಸಾಹಿತ್ಯಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚರಿತ್ರೆ-ಪರಂಪರೆಯನ್ನು ಆದಿಯಿಂದಲೂ ಗಮನಿಸುತ್ತಾ ಬಂದಾಗ, ಎಲ್ಲ ವಲಯಗಳಲ್ಲೂ ಬೋಧಕ ವೃತ್ತಿಯೇ, ಸಮಾಜ ಸುಧಾರಣೆಗೆ, ಪರಿವರ್ತನೆಗೆ, ಉತ್ತಮ ಸಮಾಜದ ನಿರ್ಮಾಣದ ಕಡೆಗೆ ಮಕ್ಕಳನ್ನು ಕರೆದೊಯ್ಯಲು ಅತಿ ಹೆಚ್ಚು ವೇದಿಕೆಗಳನ್ನು ಸೃಷ್ಟಿಸಿರುವುದನ್ನು ಗಮನಿಸಬಹುದು. ಭಾರತದ ಸಾಂಪ್ರದಾಯಿಕ ಸಮಾಜದ “ ಗುರುವಿನ ಗುಲಾಮನಾಗುವ ತನಕ ” ಎಂಬ ಧೋರಣೆಯನ್ನು ಗೌರವದಿಂದ ನೋಡುವುದು ಸಹಜವಾದರೂ, ಆಧುನಿಕ ಸಮಾಜದಲ್ಲಿ ಇದನ್ನು ಒಡೆದು ನೋಡಬೇಕಾಗುತ್ತದೆ. ಏಕೆಂದರೆ ವಿಧೇಯತೆ ಮತ್ತು ಗುಲಾಮಿ ಎಂಬ ಎರಡು ಪದಗಳ ನಡುವೆ ಅಪಾರ ಅಂತರವಿದೆ. ವಯೋಮಾನದ ಹಂಗಿಲ್ಲದೆ ವಿದ್ಯೆಕಲಿಸುವ ಗುರುಗಳನ್ನು ಗೌರವಿಸುವುದು, ಆರಾಧನಾ ಭಾವನೆಯಿಂದ ನೋಡುವುದು ಅಪ್ಯಾಯಮಾನವಾಗಿ ಕಂಡರೂ, ಗುಲಾಮಿ ಅಥವಾ ಸೇವಕ ಎಂಬ ಕಲ್ಪನೆಯೇ , ಶಿಕ್ಷಣಾರ್ಥಿಗಳಲ್ಲಿ ಅಂಧ ವಿಶ್ವಾಸ ಬೆಳೆಸುತ್ತದೆ ಮತ್ತು ಬೋಧಕರಲ್ಲಿ ಊಳಿಗಮಾನ್ಯ ಯಜಮಾನಿಕೆಯ ಗುಣಗಳನ್ನು ಪೋಷಿಸುತ್ತದೆ.

 ಡಿಜಿಟಲ್‌ ಯುಗದಲ್ಲಿ ನಾವು ಭಿನ್ನ ನೆಲೆಯಲ್ಲಿ ಯೋಚನೆ ಮಾಡಬೇಕಿದೆ. ವಿದ್ಯಾರ್ಥಿ/ವಿದ್ಯಾರ್ಥಿನಿಯರಲ್ಲಿ ಶಾಲೆಯ ಆವರಣದೊಳಗೆ ವಿಧೇಯಕ ಜೀವಿಗಳಾಗಿ ಕಂಡರೂ, ಹೊರಜಗತ್ತಿಗೆ ಬಂದಾಗ ಅವರನ್ನು ಸ್ನೇಹಿತರನ್ನಾಗಿ ಕಾಣಬೇಕು ಎಂಬ ಔದಾತ್ಯವನ್ನು ಇಂದು ಅಳವಡಿಸಿಕೊಳ್ಳಬೇಕಿದೆ. (ಇಂತಹ ಹಲವು ಶಿಕ್ಷಕರು ನನ್ನ ವ್ಯಕ್ತಿಗತ ಬದುಕನ್ನು ರೂಪಿಸಿದ್ದಾರೆ.) ಜಗತ್ತಿನ ವಿದ್ಯಮಾನಗಳನ್ನು ಜ್ಞಾನಾರ್ಜನೆಯ ದಿಸೆಯಲ್ಲಿ ತಿಳಿದುಕೊಳ್ಳುವ ಸಲುವಾಗಿ ಶಾಲೆ-ಕಾಲೇಜಿಗೆ ಬರುವ ಶಿಕ್ಷಣಾರ್ಥಿಗಳನ್ನು , ವಿದ್ಯಾಭ್ಯಾಸದ ಯಶಸ್ಸಿನ ಮೆಟ್ಟಿಲು ಹತ್ತಿಸುವುದು ಶಿಕ್ಷಕರ ಮೊದಲ ಆದ್ಯತೆಯಾಗಿದ್ದರೂ, ಇದನ್ನೂ ದಾಟಿ, ಅವರನ್ನು ಮಾನವೀಯ ಪ್ರಜೆಗಳನ್ನಾಗಿ ರೂಪಿಸುವ ಮತ್ತು ಎಲ್ಲರನ್ನೂ ಪ್ರೀತಿಸುವ ಉದಾತ್ತ ವ್ಯಕ್ತಿತ್ವವನ್ನು ಅವರೊಳಗೆ ಉದ್ಧೀಪನಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ.

DK Shivakumar: ರೈತರ ಪರ  ಡಿಸಿಎಂ ಡಿಕೆಶಿಗೆ ಬೇಡಿಕೆ ಇಟ್ಟ ಶಾಸಕ..! #dkshivakumar #congress #mla

 ವರ್ತಮಾನದ ಸಂಕಟಗಳ ನಡುವೆ

 ಹೀಗೆ ರೂಪುಗೊಳ್ಳುವ ವ್ಯಕ್ತಿತ್ವಗಳೇ ಭವಿಷ್ಯದ ಸಮಾಜವನ್ನು ಮಾನವೀಯತೆಯ ನೆಲೆಯಲ್ಲಿ ಕಟ್ಟುವ ಕಾಲಾಳುಗಳಾಗಿ ರೂಪುಗೊಳ್ಳುವುದನ್ನು ಇತಿಹಾಸ ನಿರೂಪಿಸಿದೆ. ವರ್ತಮಾನದ ಸಂದರ್ಭದಲ್ಲೂ ಶಿಕ್ಷಕ ವೃಂದದ ಧ್ಯೇಯ ಇದೇ ಆಗಿರಬೇಕು. ಆದರೆ ಐವತ್ತು ವರ್ಷಗಳ ಹಿಂದಿನ ಸಮಾಜವನ್ನು ಗಮನಿಸಿದಾಗ, ಬೋಧಕ ಜಗತ್ತಿನಲ್ಲಿ ಈ ಆದರ್ಶಗಳು ಕ್ಷೀಣಿಸುತ್ತಿರುವುದು ಢಾಳಾಗಿ ಕಾಣುತ್ತದೆ. ಇದಕ್ಕೆ ಕಾರಣಗಳನ್ನು ಶೋಧಿಸುತ್ತಾ ಹೋದರೆ, ಶ್ರೇಣೀಕೃತ ಜಾತಿ ಅಸ್ಮಿತೆ, ಮತೀಯ ಅಸ್ತಿತ್ವ, ಭಾಷಿಕ ಒಲವು ಹಾಗೂ ಇವುಗಳ ಒಡಲಲ್ಲೇ ರೂಪುಗೊಳ್ಳುವ ವೈಯುಕ್ತಿಕ ಹಿತಾಸಕ್ತಿಗಳು ಮೇಲುಗೈ ಸಾಧಿಸುವುದನ್ನು ಕಾಣಬಹುದು. ಜಾತಿ-ಮತಗಳ ಅಸ್ಮಿತೆ ಮತ್ತು ಅಸ್ತಿತ್ವ ಎನ್ನುವುದು ಒಂದು ಸಾಮಾಜಿಕ ವ್ಯಸನವಾಗಿ ಬೇರೂರಿರುವುದರಿಂದ, ಸಮಾಜದ ಇತರ ವರ್ಗಗಳಂತೆಯೇ ಬೋಧಕ ವರ್ಗವೂ ಈ ಸಾಂಕ್ರಾಮಿಕ ಸೋಂಕಿಗೆ ಒಳಗಾಗಿರುತ್ತದೆ.

 ಇದಕ್ಕೆ ಬದಲಾದ ರಾಜಕೀಯ ಸನ್ನಿವೇಶ ಮತ್ತು ಆರ್ಥಿಕ ಚೌಕಟ್ಟುಗಳೂ ಕಾರಣ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ʼ ವಿದ್ಯಾರ್ಥಿ ರಾಜಕಾರಣ ʼ ಅಥವಾ ʼ ಕ್ಯಾಂಪಸ್‌ ರಾಜಕಾರಣ ʼವನ್ನು ಬಲವಾಗಿ ವಿರೋಧಿಸುವ ಒಂದು ವ್ಯವಸ್ಥೆಯೇ, ಬೋಧಕ ಜಗತ್ತನ್ನು ರಾಜಕೀಯ ಚಿಂತನೆಗಳ ಆಡುಂಬೊಲಗಳನ್ನಾಗಿ ಮಾಡಿ, ವ್ಯಕ್ತಿಗತವಾಗಿ, ಸಾಂಘಿಕವಾಗಿ ಹಾಗೂ ಸಾಂಸ್ಥಿಕವಾಗಿ, ರಾಜಕೀಯ ಪಕ್ಷಗಳ ವಕ್ತಾರಿಕೆಯನ್ನು ವಹಿಸುವ ಶಕ್ತಿಯನ್ನಾಗಿ ಮಾಡಿಕೊಂಡಿರುವ ದುರದೃಷ್ಟಕ ಬೆಳವಣಿಗೆಗೆ ನಾವು ಸಾಕ್ಷಿಯಾಗಿದ್ದೇವೆ. ಹಾಗಾಗಿಯೇ ಇಂದು ವಿಶ್ವವಿದ್ಯಾಲಯಗಳ ಉನ್ನತ ಹುದ್ದೆಗಳ ನೇಮಕಾತಿಯಿಂದ ಹಿಡಿದು ಅನುದಾನದವರೆಗೂ ಎಲ್ಲವೂ ಅಧಿಕಾರ ರಾಜಕಾರಣದ ಕೃಪಾಕಟಾಕ್ಷಕ್ಕೊಳಗಾಗಿರುತ್ತವೆ. ಸಹಜವಾಗಿಯೇ ತಮ್ಮ ಬದುಕು ಸವೆಸಲು ದುಡಿಯುವ ಬೋಧಕ ವೃಂದಕ್ಕೆ, ಅಧಿಕಾರ ರಾಜಕಾರಣದ ನಿರ್ದೇಶನಕ್ಕೊಳಗಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇದನ್ನು ಧಿಕ್ಕರಿಸಿದವರು ನಿರ್ಲಕ್ಷ್ಯಕ್ಕೊಳಗಾಗಿ, ತಮ್ಮ ವೃತ್ತಿ ಜೀವನದಲ್ಲೂ ಹಿನ್ನಡೆ ಅನುಭವಿಸಬೇಕಾಗುತ್ತದೆ. ಮಾನವ ಸಹಜ ಗುಣಗಳ ದೃಷ್ಟಿಯಿಂದ ನೋಡಿದಾಗ ಇದು ಸುಲಭವಾಗಿ ಕ್ರಮಿಸುವಂತಹ ಹಾದಿ ಎನಿಸುವುದಿಲ್ಲ.

 ಏಕೆಂದರೆ ಅಧಿಕಾರ ರಾಜಕಾರಣವು ಸೃಷ್ಟಿಸುವ ಜೀವನ ಮೌಲ್ಯಗಳು, ಭಾರತ ಪಾರಂಪರಿಕವಾಗಿ ವೈಭವೀಕರಿಸುತ್ತಲೇ ಬಂದಿರುವ ʼ ವಸುದೈವ ಕುಟುಂಬಕಂʼ ಅಥವಾ ಪಂಪ ಮಹಾಕವಿಯ ʼ ಮನುಜ ಜಾತಿ ತಾನೊಂದೇ ವಲಂ ʼ ಎಂಬ ಉದಾತ್ತ ಮೌಲ್ಯಗಳಿಂದ ವಾಸ್ತವಿಕವ ನೆಲೆಯಲ್ಲಿ ಬಹಳ ದೂರ ಸಾಗಿಬಂದಿದೆ . ಈ ಮೌಲ್ಯಗಳನ್ನು ನಾವು ಕಾಣಬಹುದಾದರೆ, ಭಾರತೀಯ ಸಮಾಜಕ್ಕೆ ಒಂದು ಹೊಸ ರೂಪ ಕೊಡಲು ಶ್ರಮಿಸಿರುವ ಬುದ್ಧ, ಬಸವ, ಶರಣರು, ಸೂಫಿಗಳು ಹಾಗೂ 19-20ನೆ ಶತಮಾನದ ಸಮಾಜ ಸುಧಾರಕರು, ರಾಜಕೀಯ ಚಿಂತಕರು, ಸಾಂಸ್ಕೃತಿಕ ಹರಿಕಾರರು ಇವರೆಲ್ಲರ ನಡುವೆ ನಿಂತು ವರ್ತಮಾನದ ಸಮಾಜವನ್ನು ನೋಡಬೇಕಾಗುತ್ತದೆ. ಫುಲೆ, ನಾರಾಯಣಗುರು ಆದಿಯಾಗಿ ಗಾಂಧಿ, ಅಂಬೇಡ್ಕರ್‌ವರೆಗೆ, ಠಾಗೋರ್‌ ಪರಂಪರೆಯಿಂದ ರಾಷ್ಟ್ರಕವಿ ಕುವೆಂಪುವರೆಗೆ ವಿಸ್ತರಿಸುವ ಈ ಮೌಲ್ಯಾಧಾರಿತ ಜಗತ್ತನ್ನು ತೆರೆದ ಕಣ್ಣಿಂದ, ಮುಕ್ತ ಹೃದಯದಿಂದ ಒಳಹೊಕ್ಕು ನೋಡಿದಾಗ, ನಮಗೆ ಭವಿಷ್ಯದ ದಿಕ್ಸೂಚಿಗಳು ಹೇರಳವಾಗಿ ದೊರೆಯುತ್ತವೆ.

 ಇಂದಿನ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಇರಬಹುದಾದ ಕಾರ್ಪೊರೇಟ್‌ ಮಾರುಕಟ್ಟೆ ಆಯಾಮ ಮತ್ತು ರಾಜಕೀಯ ಧೋರಣೆಗಳ ಹೊರತಾಗಿಯೂ ಶಿಕ್ಷಕ ವೃಂದವು ಈ ದಾರ್ಶನಿಕರ ಮೌಲ್ಯಗಳನ್ನು ಮಿಲೆನಿಯಂ ಸಮೂಹದ ಮುಂದೆ ತೆರೆದಿಡಬೇಕಿದೆ. “ ಈ ಮಕ್ಕಳ ತಲೆಯಲ್ಲಿ ಏನೂ ಇಲ್ಲ, ನಾವು ತಿಳಿದವರಾಗಿ ಅವರ ಮಿದುಳಿನಲ್ಲಿ ಬೌದ್ಧಿಕ ಸರಕುಗಳನ್ನು ತುಂಬುತ್ತೇವೆ ,,,,, ” ಎಂಬ ದಾರ್ಷ್ಟ್ಯದ ಧೋರಣೆಗಿಂತಲೂ ಮುಖ್ಯವಾಗಿ, ಈ ಬೃಹತ್‌ ಸಮೂಹದ ನಡುವೆಯೂ ಇರಬಹುದಾದ ಆಲೋಚನೆಗಳನ್ನು, ಕಲ್ಪನೆಗಳನ್ನು, ವಿಚಾರಗಳನ್ನು ಆಲಿಸಿ, ಪರಾಮರ್ಶಿಸಿ, ನಿಷ್ಕರ್ಷೆ ಮಾಡುವ ವ್ಯವಧಾನ ಶಿಕ್ಷಕ ವೃಂದದಲ್ಲಿರಬೇಕಾಗುತ್ತದೆ. ಇದಕ್ಕಾಗಿ ಈ ಸಮೂಹದೊಡನೆ ನಿರಂತರ ಸಂವಾದ ನಡೆಸಬೇಕಾಗುತ್ತದೆ. ಶಾಲಾ ಕಾಲೇಜು ಆವರಣದ ʼ ಕ್ಲಾಸ್‌ ರೂಮ್‌ ʼ ಪರಿಸರದಿಂದ ಹೊರಬಂದು, ಹೊರ ಜಗತ್ತಿನ ಆಗುಹೋಗುಗಳ ನಡುವೆ ಹೀಗೆ ಯೋಚಿಸಿದಾಗ, ಶಿಕ್ಷಕ ವೃತ್ತಿ ಎನ್ನುವುದೇ ಒಂದು ಕ್ರಾಂತಿಕಾರಕ ವೇದಿಕೆಯಾಗಿ ಪರಿಣಮಿಸಲು ಸಾಧ್ಯ.

 ಆಡಳಿತ ವ್ಯವಸ್ಥೆಯ ವ್ಯತ್ಯಯಗಳು

 ದುರದೃಷ್ಟವಶಾತ್‌ ಸ್ವಾತಂತ್ರ್ಯಾನಂತರ ಭಾರತ ಕಂಡ ಕನಸಿಗೆ ಪೂರಕವಾದ ಆಡಳಿತ ವ್ಯವಸ್ಥೆ ಇಂದು ರೂಪಾಂತರಗೊಂಡು ವಿಭಿನ್ನ ಹಾದಿಯಲ್ಲಿ ಸಾಗಿದೆ. ಶಿಕ್ಷಣವನ್ನು ವ್ಯಾಪಾರವನ್ನಾಗಿ ಮಾಡುವ ನವ ಉದಾರವಾದಿ-ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆ, ಮತ ವಿಭಜನೆಯನ್ನು ಆಳವಾಗಿಸುವ ಸಾಂಪ್ರದಾಯಿಕ-ಧಾರ್ಮಿಕ ಶಕ್ತಿಗಳ ಸಾಂಸ್ಕೃತಿಕ ರಾಜಕಾರಣ, ಸಮಾಜದೊಳಗಿನ ತರತಮಗಳನ್ನು, ಅಸಮಾನತೆಗಳನ್ನು ಹಿಗ್ಗಿಸುತ್ತಲೇ ಇರುವ ಆಡಳಿತ ನೀತಿಗಳು, ಮಹಿಳಾ ಅಧೀನತೆಯನ್ನು ಪೋಷಿಸುವ ಪಿತೃಪ್ರಧಾನತೆಯ ಚೌಕಟ್ಟುಗಳು ಹಾಗೂ ಯಜಮಾನಿಕೆಯ ಸಂಸ್ಕೃತಿ ಇವೆಲ್ಲವೂ ದೇಶದ ಶೈಕ್ಷಣಿಕ ಜಗತ್ತನ್ನು ಕಲುಷಿತಗೊಳಿಸಿದೆ. ಈ ಬೌದ್ಧಿಕ ಮಾಲಿನ್ಯದ ನಡುವೆಯೇ ಶಿಕ್ಷಕ ವೃಂದ ತಮ್ಮ ಬದುಕು ರೂಪಿಸಿಕೊಂಡು, ಸಮಾಜದ ದಾರಿ ದೀಪಗಳಾಗಿ ಕಾರ್ಯನಿರ್ವಹಿಸಬೇಕಿದೆ. ಪ್ರಭುತ್ವದ ಹಿಡಿತದಲ್ಲಿ ಸಿಲುಕಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಈ ಚೌಕಟ್ಟುಗಳನ್ನು ದಾಟಿ ಮಾತನಾಡುವ ಅವಕಾಶಗಳೂ ಕುಗ್ಗುತ್ತಿವೆ. ಶಿಕ್ಷಕ ಜಗತ್ತಿನ ಸಾಮಾಜಿಕ ಅಭಿವ್ಯಕ್ತಿಯನ್ನು ನಿರ್ಬಂಧಿಸುವಂತಹ ಒಂದು ವಿಷಮ ವಾತಾವರಣದಲ್ಲಿ ನಾವು ನಡೆಯುತ್ತಿದ್ದೇವೆ.

ಈ ಸಿಕ್ಕುಗಳನ್ನು ಬಿಡಿಸಿಕೊಂಡು, ಸಂಕೋಲೆಗಳನ್ನು ಕಳಚಿಹಾಕಿ, ಸಮಾಜಮುಖಿಯಾಗಿ ಜೀವನ ಮೌಲ್ಯಗಳನ್ನು, ಮಾನವೀಯ ನೆಲೆಯಲ್ಲಿ ವರ್ತಮಾನದ ಸಮಾಜದಲ್ಲಿ ಬಿತ್ತುವ ನಿಟ್ಟಿನಲ್ಲಿ ಇಡೀ ಸಮಾಜವೇ ಯೋಚಿಸಬೇಕಿದೆ. ತಮ್ಮ ಭವಿಷ್ಯದ ಬಗ್ಗೆಯೇ ಯೋಚಿಸುವಂತಹ ಪರಿಸ್ಥಿತಿಯಲ್ಲಿರುವ ಬೋಧಕ ವೃಂದ (ಅತಿಥಿ ಶಿಕ್ಷಕರು-ಗುತ್ತಿಗೆ ಶಿಕ್ಷಕರು ಇತ್ಯಾದಿ) ಸಮಾಜದ ಭವಿಷ್ಯದ ಚಿಂತನೆ ಮಾಡಲು ಅಪೇಕ್ಷಿಸುವುದೂ ಸಹ ಅಸಹಜ ಎನಿಸುತ್ತದೆ. ಆದಾಗ್ಯೂ ತಮ್ಮ ವೃತ್ತಿ ಜೀವನದ ಭಾಗವಾಗಿ, ಸಮಾಜದ ಸದಸ್ಯರಾಗಿ, ಜನಸಂಸ್ಕೃತಿಯ ರಕ್ಷಕರಾಗಿ, ಶಿಕ್ಷಕರು ಭವಿಷ್ಯ ಭಾರತಕ್ಕೆ ಅಗತ್ಯವಾಗಿರುವ ಒಂದು ಮಾನವೀಯ ಸಮಾಜವನ್ನು ಕಟ್ಟಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ವಾಸ್ತವ. ಇದನ್ನು ಅರಿತು ಮುನ್ನಡೆಯುವುದು ಶಿಕ್ಷಕರ ಆದ್ಯತೆಯಾಗಬೇಕಿದೆ.

 ಹಾಗಾದಲ್ಲಿ ಸಮಸ್ತ ಜನರನ್ನೂ ಪ್ರೀತಿಸುವ, ಆಲಂಗಿಸುವ, ಆದರಿಸುವ ಮತ್ತು ಸಮ್ಮಾನಿಸುವ ಒಂದು ಸಮ ಸಮಾಜದ ಕಲ್ಪನೆಯನ್ನು ಸಾಕಾರಗೊಳಿಸಲು ಸಾಧ್ಯ. ಅಸ್ಪೃಶ್ಯತೆ, ಪುರುಷಾಧಿಪತ್ಯ, ಜಾತಿ-ಮತ ಶ್ರೇಷ್ಠತೆ, ಪ್ರಾಚೀನ ಆಚರಣೆಗಳನ್ನು ತೊಡೆದುಹಾಕಿ, ಅಸ್ಮಿತೆಗಳಿಲ್ಲದ ಮನುಜ ಜಗತ್ತನ್ನು ಕಟ್ಟುವ ಹಾದಿಯಲ್ಲಿ ಭವಿಷ್ಯ ಭಾರತವನ್ನು ಕೊಂಡೊಯ್ಯಬೇಕಿದೆ. ಇದಕ್ಕೆ ಅಗತ್ಯವಾದ ದಿಕ್ಸೂಚಿಗಳು ನಮ್ಮ ನಡುವೆ ಹಿಮಾಲಯದಷ್ಟಿವೆ, ಅರಬ್ಬಿ ಸಮುದ್ರದಷ್ಟೇ ಆಳವಾದ ಚಿಂತನೆಗಳನ್ನು ನಮ್ಮ ಹಿರೀಕರು ಬಿಟ್ಟು ಹೋಗಿದ್ದಾರೆ. ಅವರೆಲ್ಲರನ್ನೂ ಅಸ್ಮಿತೆಗಳ ಸಂಕೋಲೆಗಳಿಂದ ವಿಮೋಚನೆಗೊಳಿಸಿ, ವರ್ತಮಾನದ ಮಿಲೆನಿಯಂ ಮಕ್ಕಳ ಅಂಗಳದಲ್ಲಿ ನಿಲ್ಲಿಸಿದಾಗ, ಈ ಮಕ್ಕಳಿಗೆ ಭವಿಷ್ಯದ ಹಾದಿ ಸುಂದರವಾಗಿ ಕಾಣಲು ಸಾಧ್ಯ.

 ಆಗ ಮಾತ್ರ ಕುವೆಂಪು ಅವರು ಹೇಳಿದಂತೆ ಸಮಾಜವನ್ನು “ ಸರ್ವ ಜನಾಂಗದ ಶಾಂತಿಯ ತೋಟ ”ವನ್ನಾಗಿ ಕಟ್ಟಲು ಸಾಧ್ಯ. ಈ ಜವಾಬ್ದಾರಿಯನ್ನು ಮರೆತರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ, ನಮ್ಮ ಆತ್ಮಸಾಕ್ಷಿಯೂ ಕ್ಷಮಿಸುವುದಿಲ್ಲ. ಶಿಕ್ಷಕರ ದಿನಾಚರಣೆಯಂದು ಈ ಸಂದೇಶವನ್ನು ಹೊತ್ತು ಸಂಭ್ರಮಿಸೋಣ.

 ( ಮುಂದಿನ ಭಾಗದಲ್ಲಿ : ವ್ಯಕ್ತಿಗತ ಬದುಕಿನಲ್ಲಿ ವ್ಯಕ್ತಿತ್ವ ರೂಪಿಸಿದ ಗುರುಗಳ ಸ್ಮರಣೆ)

Tags: card for teachers daydiy teachers day cardExamgift for teachers dayhappy teachers daypoem on teachers dayRadhakrishnastudentteachers dayteachers day cardteachers day card easyteachers day chartteachers day craftteachers day craftsteachers day drawingteachers day giftteachers day gift ideateachers day gift penteachers day giftsteachers day ideasteachers day pen giftteachers day poemteachers day songteachers day specialteachers day speechteachers day statusworld teachers day
Previous Post

ಪಿಎಂಎಫ್ಎಂಇ ಯೋಜನೆಯಲ್ಲಿ ಕರ್ನಾಟಕದ ಅಭೂತಪೂರ್ವ ಪ್ರಗತಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

Next Post

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

Related Posts

Top Story

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

by ಪ್ರತಿಧ್ವನಿ
September 4, 2025
0

ವೃತ್ತಿ ಜೀವನದಲ್ಲಿ ವಿರಾಮದ ನಂತರ, ವಿಶೇಷವಾಗಿ ತಾಂತ್ರಿಕ ಕರ್ತವ್ಯಗಳಲ್ಲಿ ಮಹಿಳೆಯರು ಮತ್ತೆ ಕಾರ್ಯಪಡೆಗೆ ಸೇರಲು ಸಹಾಯ ಮಾಡುವಲ್ಲಿ ಮತ್ತು ಮಹಿಳೆಯರು ಮರುಕೌಶಲ್ಯ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಲು ಅಭ್ಯರ್ಥಿಗಳನ್ನು ಹುರಿದುಂಬಿಸುತ್ತಿರುವ...

Read moreDetails

ಪಿಎಂಎಫ್ಎಂಇ ಯೋಜನೆಯಲ್ಲಿ ಕರ್ನಾಟಕದ ಅಭೂತಪೂರ್ವ ಪ್ರಗತಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

September 4, 2025

“ಭೀಮ” ಖ್ಯಾತಿಯ ಪ್ರಿಯಾ ಅಭಿನಯದ “ಕುಂಭ‌ ಸಂಭವ” ಚಿತ್ರದ ಟೀಸರ್ ಬಿಡುಗಡೆ .

September 4, 2025

ಸೆಪ್ಟೆಂಬರ್ 5 ರಿಂದ “ಅಮೇಜಾನ್ ಪ್ರೈಮ್” ನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ “ಕೊತ್ತಲವಾಡಿ” .

September 4, 2025

ಸೆಪ್ಟೆಂಬರ್ 10 ರಂದು ಬಿಡುಗಡೆಯಾಗಲಿದೆ ಝೈದ್ ಖಾನ್ ಅಭಿನಯದ “ಕಲ್ಟ್” ಚಿತ್ರದ “ಅಯ್ಯೊ ಶಿವನೇ” ಹಾಡು. .

September 4, 2025
Next Post

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

Recent News

Top Story

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

by ಪ್ರತಿಧ್ವನಿ
September 4, 2025
ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ
Top Story

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

by ನಾ ದಿವಾಕರ
September 4, 2025
Top Story

ಪಿಎಂಎಫ್ಎಂಇ ಯೋಜನೆಯಲ್ಲಿ ಕರ್ನಾಟಕದ ಅಭೂತಪೂರ್ವ ಪ್ರಗತಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

by ಪ್ರತಿಧ್ವನಿ
September 4, 2025
Top Story

“ಭೀಮ” ಖ್ಯಾತಿಯ ಪ್ರಿಯಾ ಅಭಿನಯದ “ಕುಂಭ‌ ಸಂಭವ” ಚಿತ್ರದ ಟೀಸರ್ ಬಿಡುಗಡೆ .

by ಪ್ರತಿಧ್ವನಿ
September 4, 2025
Top Story

ಸೆಪ್ಟೆಂಬರ್ 5 ರಿಂದ “ಅಮೇಜಾನ್ ಪ್ರೈಮ್” ನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ “ಕೊತ್ತಲವಾಡಿ” .

by ಪ್ರತಿಧ್ವನಿ
September 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

September 4, 2025
ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

September 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada