ನಾ ದಿವಾಕರ
ಭಾಗ 3
(ಜೀವನೋಪಾಯ ಮಾರ್ಗಗಳೂ ಸರ್ಕಾರಗಳ ಉಪಾಯಗಳೂ ಹಾಗೂ ಶ್ರೀಸಾಮಾನ್ಯನ ಸ್ವಾವಲಂಬನೆಯೂ ಮಾರುಕಟ್ಟೆ ಆಧಿಪತ್ಯವೂ ಲೇಖನಗಳ ಮುಂದುವರೆದ ಭಾಗ)
ಕರ್ನಾಟಕದ ಚುನಾವಣಾ ಫಲಿತಾಂಶಗಳು (Karnataka election) ಬಿಜೆಪಿಯನ್ನೂ (BJP) ಒಳಗೊಂಡಂತೆ ಎಲ್ಲ ವಿರೋಧ ಪಕ್ಷಗಳ ನಿದ್ದೆಗೆಡಿಸಿರುವುದಂತೂ ನಿಚ್ಚಳವಾಗಿ ಕಾಣುತ್ತಿದೆ. ಪ್ರಜಾಪ್ರಭುತ್ವದಲ್ಲಿ ಸಹಜ ಪ್ರಕ್ರಿಯೆಯಂತೆ ಸ್ವೀಕಾರಾರ್ಹವಾಗಬೇಕಿದ್ದ ಸ್ಪಷ್ಟ ಬಹುಮತದ ಕಾಂಗ್ರೆಸ್ ಗೆಲುವು ಉಳಿದ ಪಕ್ಷಗಳಲ್ಲಿ ಆತ್ಮಾವಲೋಕನದ ಹಾದಿಗಳನ್ನು ತೆರೆಯಬೇಕಿತ್ತು. ಕಾಂಗ್ರೆಸ್ ಪಕ್ಷದ (Congress) ಗೆಲುವಿಗೆ ಐದು ಗ್ಯಾರಂಟಿಗಳೇ ಮೂಲ ಕಾರಣ ಎನ್ನುವುದು ಅರ್ಧಸತ್ಯ. ಇದರ ಮತ್ತೊಂದು ಕಾರಣವನ್ನು ತಳಮಟ್ಟದ ಸಾಮಾಜಿಕ ತಲ್ಲಣಗಳಲ್ಲಿ ಹಾಗೂ ಶ್ರೀಸಾಮಾನ್ಯರ ನಿತ್ಯ ಬದುಕಿನ ಬವಣೆಗಳಲ್ಲಿ ಕಾಣದೆ ಹೋದರೆ, ಬಹುಶಃ ನಾವು ಜನತೆಯ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿಲ್ಲ ಎಂದೇ ಹೇಳಬೇಕಾಗುತ್ತದೆ. ತಳಮಟ್ಟದ ಸಮಾಜದಲ್ಲಿ ಸೆಣಸುವ ಬಡಜನತೆಯ ನಿತ್ಯಬವಣೆಯನ್ನು ಅಧಿಕಾರ ರಾಜಕಾರಣದ ಬೆಳ್ಳಿಯ ತಟ್ಟೆಯಲ್ಲಿಟ್ಟು ಅಳೆಯಲು ಹೋದರೆ ಬಹುಶಃ ಬೆಳ್ಳಿಯ ಹೊಳಪಿನಲ್ಲಿ ಶ್ರೀಸಾಮಾನ್ಯನ ಬೆವರು ಮತ್ತು ಶ್ರಮ ಎರಡೂ ಮರೆಯಾಗಿಬಿಡುತ್ತದೆ. ಹಸಿವು, ಬಡತನ (POOR PEPAL) ಮತ್ತು ದಾರಿದ್ರ್ಯ ಈ ಮೂರೂ ವಿದ್ಯಮಾನಗಳು ಅನುಭವ ಮತ್ತು ಅನುಭಾವದ ನೆಲೆಯಲ್ಲಿ ವಿಭಿನ್ನ ಆಯಾಮಗಳ ಅಭಿವ್ಯಕ್ತಿಯನ್ನು ಪಡೆದುಕೊಳ್ಳುತ್ತದೆ. ಅನುಕಂಪ, ದಯೆ, ಕರುಣೆ ಮಾನವ ಸಹಜ ಪ್ರವೃತ್ತಿಗಳೇ ಆದರೂ ಇದರಿಂದ ಉಗಮಿಸುವ ಅಭಿವ್ಯಕ್ತಿಗಳೆಲ್ಲವೂ ದಾನ, ದಾಸೋಹ ಮತ್ತು ಔದಾರ್ಯದ ನೆರಳಲ್ಲಿ ತಮ್ಮ ಮೂಲ ಅರ್ಥವನ್ನು ಕಳೆದುಕೊಂಡುಬಿಡುತ್ತವೆ.

ಅಳುವ ಸರ್ಕಾರಗಳು ಬಡನವನ್ನು ಅಳೆಯಲು ಕೆಲವು ಮಾನದಂಡಗಳನ್ನು ಬಳಸುತ್ತವೆ. ಮೂಲತಃ ಸರ್ಕಾರದ ಆದಾಯ ಮತ್ತು ವೆಚ್ಚವನ್ನು (TAX) ಸರಿದೂಗಿಸುವ ಕಸರತ್ತುಗಳ ನಡುವೆ ಸಮಾಜದಲ್ಲಿ ಸೌಲಭ್ಯ/ಸವಲತ್ತು ವಂಚಿತ ಮಂದಿಯನ್ನು ಗುರುತಿಸಿ, ಈ ಜನಸಮುದಾಯಗಳಿಗೆ ನೆರವಿನ ಹಸ್ತ ಚಾಚುವ ರೀತಿಯಲ್ಲಿ ಬಡತನದ ರೇಖೆಗಳನ್ನು ನಿರ್ಧರಿಸುತ್ತವೆ. ಇಂದು ಸಾರ್ವಜನಿಕ ವಲಯದಲ್ಲಿ ಬಹುಚರ್ಚಿತ ವಿಷಯವಾಗಿರುವ ಬಡತನದ ರೇಖೆಯ ಕೆಳಗಿನ ಮತ್ತು ಮೇಲಿನ (ಬಿಪಿಎಲ್-ಎಪಿಎಲ್) (BPL-APL) ಜನಸಂಖ್ಯೆಯ ನಡುವೆ ಇರುವ ವ್ಯತ್ಯಯಗಳು, ಈ ಬೃಹತ್ ಜನಸಮೂಹ ಎದುರಿಸುವ ನಿತ್ಯ ತಾರತಮ್ಯಗಳು, ಆಡಳಿತ ನೀತಿ ನಿರೂಪಣೆಯಲ್ಲಿ ಯಾವುದೇ ಸ್ಥಾನ ಪಡೆಯದ ಈ ಸಮುದಾಯಗಳ ಹಿತಾಸಕ್ತಿಗಳು ಹಾಗೂ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮಾರ್ಗದಲ್ಲಿ ಅಂಚಿಗೆ ತಳ್ಳಲ್ಪಟ್ಟಿರುವ ತಳಮಟ್ಟದ ಜನತೆಯ ಜೀವನೋಪಾಯದ ಮಾರ್ಗಗಳು ಇವೆಲ್ಲವೂ ಸಹ ಆಳುವ ಸರ್ಕಾರ ನಿರ್ಧರಿಸುವ ಜೀವನಮಟ್ಟದ ರೇಖೆಗಳ ಆಸುಪಾಸಿನಲ್ಲೇ ನಿಷ್ಕರ್ಷೆಗೊಳಗಾಗುತ್ತವೆ. ಈ ಸಮುದಾಯಗಳೇ ರಾಜಕೀಯ ಪಕ್ಷಗಳ ಅಧಿಕಾರ ಗ್ರಹಣಕ್ಕೆ ಹೆಬ್ಬಾಗಿಲುಗಳಾಗಿರುತ್ತವೆ ಎಂದು ಭಾವಿಸಲಾಗುತ್ತದೆ.

ಬಂಡವಾಳಶಾಹಿಯ ಚೌಕಟ್ಟಿನಲ್ಲಿ
ಆದರೆ ವಾಸ್ತವದಲ್ಲಿ ಬಂಡವಾಳ-ಮಾರುಕಟ್ಟೆ ಹಾಗೂ ಕಾರ್ಪೋರೇಟ್ ಹಿತಾಸಕ್ತಿಗಳನ್ನೇ ಪ್ರಧಾನವಾಗಿ ಪರಿಗಣಿಸುವ ರಾಜಕೀಯ ಪಕ್ಷಗಳು, ಅಧಿಕಾರ ಕೇಂದ್ರಗಳನ್ನು ತಲುಪಲು ಈ ಹೆದ್ದಾರಿಗಳನ್ನೇ ಸಮರ್ಪಕವಾಗಿ ಬಳಸಿದರೂ, ಚುನಾವಣೆಗಳ ಸಂದರ್ಭದಲ್ಲಿ ತಮ್ಮ ಜನಪರ ಕಾಳಜಿಯನ್ನು ವ್ಯಕ್ತಪಡಿಸುವ ಸಲುವಾಗಿ ಅವಕಾಶವಂಚಿತ ತಳಮಟ್ಟದ ಜನತೆಯ ಆಶೋತ್ತರಗಳತ್ತ ಗಮನಹರಿಸುತ್ತವೆ. ತಾವು ಅಧಿಕಾರಕ್ಕೆ ಬಂದರೆ ಅನುಸರಿಸಲಾಗುವ ಮಾರುಕಟ್ಟೆ ಆರ್ಥಿಕ ನೀತಿಗಳು ಇದೇ ವಂಚಿತ ಸಮುದಾಯಗಳ ಜೀವನ ಮತ್ತು ಜೀವನೋಪಾಯದ ಮಾರ್ಗಗಳಲ್ಲಿ ಸಾಕಷ್ಟು ಕಂದರಗಳನ್ನು ಉಂಟುಮಾಡುತ್ತವೆ ಎಂಬ ಸುಡುವಾಸ್ತವದ ಅರಿವು ಎಲ್ಲ ಬಂಡವಾಳಿಗ ರಾಜಕೀಯ ಪಕ್ಷಗಳಿಗೂ ಇದ್ದೇ ಇರುತ್ತದೆ. ಬಂಡವಾಳಶಾಹಿ ಆರ್ಥಿಕತೆಯನ್ನು ಪೋಷಿಸುತ್ತಲೇ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ, ಅರ್ಥವ್ಯವಸ್ಥೆಯನ್ನು ಸುಭದ್ರವಾಗಿ ಕಾಪಾಡಲು ನೆರವಾಗುವ ತಳಮಟ್ಟದ ಶ್ರಮಿಕ ವರ್ಗಗಳು ಮಾರುಕಟ್ಟೆ ಸೃಷ್ಟಿಸುವ ಈ ಕಂದರಗಳಲ್ಲಿ ಬಿದ್ದು ಕಳೆದುಹೋಗದಂತೆ ಎಚ್ಚರವಹಿಸುವುದು ಎಲ್ಲ ಸರ್ಕಾರಗಳ ಪ್ರಥಮ ಆದ್ಯತೆಯಾಗಿರುತ್ತದೆ. ಹಾಗಾಗಿಯೇ ಚುನಾವಣೆಗಳ ಸಂದರ್ಭದಲ್ಲಿ ಈ ತಳಮಟ್ಟದ ಸಮಾಜವನ್ನು ಆಕರ್ಷಿಸುವ ಯೋಜನೆಗಳನ್ನು ಘೋಷಿಸುವುದು ಒಂದು ಪರಂಪರೆಯಾಗಿ ಬೆಳೆದುಬಂದಿದೆ. ಇಲ್ಲಿ ವಿಶಾಲ ಸಮಾಜ ಗಮನಿಸದೆ ಇರುವ ಸಂಗತಿ ಎಂದರೆ ಸರ್ಕಾರಗಳು ತಮ್ಮ ವಾರ್ಷಿಕ ಬಜೆಟ್ಗಳಲ್ಲಿ ಕಾರ್ಪೋರೇಟ್ ಉದ್ಯಮಿಗಳಿಗೆ ಮತ್ತು ಮಾರುಕಟ್ಟೆ ಶಕ್ತಿಗಳಿಗೆ ನೀಡುವ ಸವಲತ್ತುಗಳು, ಸೌಲಭ್ಯಗಳು, ರಿಯಾಯಿತಿಗಳು ಮತ್ತು ವಿನಾಯಿತಿಗಳು.

ಬಂಡವಾಳಶಾಹಿ ವ್ಯವಸ್ಥೆ ತನ್ನ ಒಡಲಿನಿಂದಲೇ ಸೃಷ್ಟಿಸುವ ಒಂದು ಬೃಹತ್ ಮಧ್ಯಮ ವರ್ಗ ಅಧಿಕಾರ ರಾಜಕಾರಣದ ಮೈದಾನದಲ್ಲಿ ನಡೆಯುವ ಸ್ಪರ್ಧೆಗೆ ಅಂಪೈರ್ನಂತೆ ಕೆಲಸ ಮಾಡಲಿಚ್ಚಿಸುತ್ತದೆ. ಸಂವಹನ ಮಾಧ್ಯಮಗಳು ಮತ್ತು ಸಾರ್ವಜನಿಕ ಸಂವಾದದ ಬಹುತೇಕ ನೆಲೆಗಳನ್ನು ತನ್ನ ವಶದಲ್ಲಿರಿಸಿಕೊಳ್ಳುವ ಈ ವರ್ಗ ಒಂದು ಕಾಲಘಟ್ಟದಲ್ಲಿ ಪರಿವರ್ತನೆಯ ಪ್ರವರ್ತಕ ಶಕ್ತಿಯಾಗಿ ಪರಿಣಮಿಸಿದರೆ ಮತ್ತೊಂದು ಕಾಲಘಟ್ಟದಲ್ಲಿ ವ್ಯವಸ್ಥೆಯ ಯಥಾಸ್ಥಿತಿಯನ್ನು ಕಾಪಾಡುವ ಪ್ರಬಲ ಶಕ್ತಿಗಳಾಗಿ ಪರಿಣಮಿಸುತ್ತವೆ. ದೇಶದ ಸಂಪತ್ತನ್ನು ಉತ್ಪಾದಿಸುವ ಶ್ರಮಿಕ ವರ್ಗದ ಜೀವನ ಹಾಗೂ ಜೀವನೋಪಾಯ ಮಾರ್ಗಗಳ ವಾಸ್ತವ ಚಿತ್ರಣವನ್ನು ಬಿಂಬಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಅಭಿಪ್ರಾಯವನ್ನು ಉತ್ಪಾದಿಸಿ ಅದನ್ನೇ ಸಾರ್ವತ್ರೀಕರಿಸುವ ಒಂದು ʼ ಮಹತ್ಕಾರ್ಯವನ್ನು ʼ ಈ ಮಧ್ಯಮ ವರ್ಗಗಳೇ ಶಿಸ್ತಿನಿಂದ ಮಾಡುತ್ತವೆ. ವಿದ್ಯುನ್ಮಾನ-ಮುದ್ರಣ ಮಾಧ್ಯಮಗಳಷ್ಟೇ ಅಲ್ಲದೆ ಇತರ ಎಲ್ಲ ಸಂವಹನ ಮಾರ್ಗಗಳಲ್ಲೂ, ಎಲ್ಲ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲೂ, ಸಾಂಸ್ಥಿಕವಾಗಿ ಬೌದ್ಧಿಕವಾಗಿ ಹಾಗೂ ಸಂಘಟನಾತ್ಮಕವಾಗಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಈ ಮಧ್ಯಮ ವರ್ಗ ಉತ್ಪಾದಿಸುವ ಅಭಿಪ್ರಾಯಗಳೇ ಆಳುವ ಪಕ್ಷಗಳ ಪಾಲಿಗೆ ರಕ್ಷಾ ಕವಚವೂ ಆಗುತ್ತದೆ.
ಬಜೆಟ್ ಮತ್ತು ಅನುದಾನದ ಬಲೆಗಳು
ಪ್ರತಿವರ್ಷ ಸರ್ಕಾರಗಳು ಮಂಡಿಸುವ ವಾರ್ಷಿಕ ಬಜೆಟ್ಗಳಲ್ಲಿ ಮಧ್ಯಮ ವರ್ಗಗಳ ಮತ್ತು ಕಾರ್ಪೋರೇಟ್ ಔದ್ಯಮಿಕ ಸಮೂಹಗಳ ಹಿತಾಸಕ್ತಿಯನ್ನು ಕಾಪಾಡುವಂತಹ ಆರ್ಥಿಕ ನಿರ್ಣಯಗಳನ್ನು ಮಂಡಿಸಲಾಗುತ್ತದೆ. ಆದಾಯ ತೆರಿಗೆ ದರದಲ್ಲಿ ಕಡಿತ, ತೆರಿಗೆ ತಪ್ಪಿಸಲು ನೆರವಾಗುವ ವಿನಾಯಿತಿಗಳು, ಕಾರ್ಪೋರೇಟ್ ತೆರಿಗೆಯಲ್ಲಿನ ಕಡಿತ ಮತ್ತು ರಿಯಾಯಿತಿಗಳು ಹಾಗೂ ಈ ವರ್ಗಗಳ ಜೀವನಮಟ್ಟ ಸುಧಾರಣೆಗೆ ಪೂರಕವಾದ ಪೆಟ್ರೋಲ್-ಡೀಸೆಲ್ ಬೆಲೆಗಳ ಏರಿಳಿಕೆ, ಐಷಾರಾಮಿ ಗೃಹಬಳಕೆ ವಸ್ತುಗಳ ಮೇಲಿನ ಸುಂಕ/ತೆರಿಗೆ ಕಡಿತ, ಹೀಗೆ ಸಮಾಜದ ಹಿತವಲಯದ ಜೀವನಶೈಲಿಯನ್ನು ಪ್ರಭಾವಿಸುವ ಹಲವು ನಿರ್ಣಾಯಕ ನೀತಿಗಳನ್ನು ಬಜೆಟ್ಗಳಲ್ಲಿ ಮಂಡಿಸಲಾಗುತ್ತದೆ. ಪ್ರತಿವರ್ಷವೂ ಬಜೆಟ್ ಸಮಯದಲ್ಲಿ ಬಾಯ್ದೆರೆದು ನಿಲ್ಲುವ ಈ ಹಿತವಲಯದ ನಡುವೆ ಇದೇ ಬಜೆಟ್ಗಳಲ್ಲಿ ಸರ್ಕಾರಗಳು ಜನಕಲ್ಯಾಣ ಯೋಜನೆಗಳಿಗೆ ಹಾಗೂ ಕಡುಬಡವರಿಗೆ ನೀಡಲಾಗುವ ಉಚಿತ ಸವಲತ್ತು/ಸೌಲಭ್ಯಗಳಿಗೆ ಅನುದಾನಗಳನ್ನು ಕಡಿಮೆ ಮಾಡುವುದು ಚರ್ಚೆಗೆ ಗ್ರಾಸವಾಗುವುದೇ ಇಲ್ಲ. ನರೇಗಾ ಯೋಜನೆಯನ್ನೂ ಒಳಗೊಂಡಂತೆ ಕೇಂದ್ರ ಸರ್ಕಾರದ ಬಹುತೇಕ ಜನಕಲ್ಯಾಣ ಯೋಜನೆಗಳಿಗೆ ಸರ್ಕಾರದ ಅನುದಾನ ಪ್ರತಿ ಬಜೆಟ್ನಲ್ಲೂ ಕಡಿಮೆಯಾಗುತ್ತಿರುವುದರಿಂದಲೇ, ಅವಕಾಶವಂಚಿತ ಜನತೆ ಮತ್ತಷ್ಟು ಅಂಚಿಗೆ ತಳ್ಳಲ್ಪಡುತ್ತಿದ್ದಾರೆ ಎನ್ನುವ ವಾಸ್ತವವನ್ನು ಸಾರ್ವಜನಿಕ ಸಂಕಥನದಲ್ಲಿ ಬಿಂಬಿಸುವುದೂ ಇಲ್ಲ. ವಿಡಂಬನೆ ಎಂದರೆ ಮಧ್ಯಮ ವರ್ಗಗಳನ್ನು ಪ್ರತಿನಿಧಿಸುವ ಈ ಫಲಾನುಭವಿಗಳೇ ಸರ್ಕಾರಗಳು ಬಡಜನತೆಗೆ ನೀಡುವ ‘ಉಚಿತ ʼಗಳ (FREE) ಬಗ್ಗೆ ಹುಯಿಲೆಬ್ಬಿಸುತ್ತಾರೆ.

ಮತ್ತೊಂದು ವಿಡಂಬನೆ ಎಂದರೆ ಸಾರ್ವಜನಿಕವಾಗಿ ಸ್ವೀಕೃತವಾಗಿರುವ ಅಭಿಪ್ರಾಯದಲ್ಲಿ ತೆರಿಗೆ ಪಾವತಿದಾರರು (TAX) ಎಂದರೆ ಕೇವಲ ನೇರ ತೆರಿಗೆ ಪಾವತಿ ಮಾಡುವವರೇ ಆಗಿರುತ್ತಾರೆ. “ ನಾವು ಕೊಡುವ ತೆರಿಗೆ ಹಣವನ್ನು ಉಚಿತ ಕೊಡುಗೆಗಳನ್ನು ನೀಡುವ ಮೂಲಕ ಪೋಲು ಮಾಡಲಾಗುತ್ತಿದೆ ” ಎಂಬ ಕೂಗು ದೇಶದ ಉದ್ದಗಲಕ್ಕೂ ಕೇಳಿಬರುತ್ತದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಪೀಠದ ಸಲಹೆಯ ಮೇರೆಗೆ ತೆರಿಗೆ ಪಾವತಿದಾರರ ವೇದಿಕೆಯನ್ನೂ ರೂಪಿಸುವ ಪ್ರಯತ್ನಗಳು ನಡೆದಿದ್ದು, ಸರ್ಕಾರಗಳು ಕೊಡುವ ಉಚಿತಗಳ ವಿರುದ್ಧ ಮಾತನಾಡಲು ಒಂದು ಸಾಂಸ್ಥಿಕ ವೇದಿಕೆ ಸಿದ್ಧವಾಗುತ್ತಿದೆ. ಸರ್ಕಾರಗಳ ಬೊಕ್ಕಸದಲ್ಲಿ ಸಂಗ್ರಹವಾಗುವ ಹಣಕಾಸು ಸಂಪನ್ಮೂಲದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಪಾಲು ಸಹ ಇರುತ್ತದೆ. ಪ್ರತಿಯೊಬ್ಬ ಪ್ರಜೆಯೂ ತನ್ನ ಜೀವನ ನಿರ್ವಹಣೆಯ ಹಾದಿಯಲ್ಲಿ ಖರೀದಿಸುವ ಪ್ರತಿಯೊಂದು ವಸ್ತುವಿನ ಮೇಲೆ, ಪಡೆಯುವ ಪ್ರತಿಯೊಂದು ಸೇವೆಗೆ ತೆರಿಗೆ ಪಾವತಿಸುತ್ತಾನೆ. ಅಷ್ಟೇ ಅಲ್ಲದೆ ಬಡತನ ರೇಖೆಯ ಆಚೀಚೆ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಉತ್ಪಾದಕೀಯ ಶಕ್ತಿಯಾಗಿ ತನ್ನ ಶ್ರಮದ ಮೂಲಕ ದೇಶದ ಸಂಪತ್ತಿನ ವೃದ್ಧಿಗೆ ಕಾರಣನಾಗಿರುತ್ತಾನೆ. ಆದರೆ ಈ ಶ್ರಮಿಕ ವರ್ಗಗಳ ಜೀವನ ನಿರ್ವಹಣೆಗೆ ಸರ್ಕಾರಗಳು ಕೊಡುವ ಅತ್ಯಲ್ಪ ಸೌಲಭ್ಯಗಳನ್ನು ಉಚಿತವಾಗಿ ನೀಡುವುದು ಮೇಲ್ವರ್ಗದ ಸಮಾಜಕ್ಕೆ ಮಹಾಪರಾಧವಾಗಿ ಕಾಣುತ್ತದೆ. ಅಷ್ಟೇ ಅಲ್ಲ ತುಂಡು ಬೀಡಿಗೂ ತೆರಿಗೆ ಪಾವತಿಸುವ ಈ ಬಡಜನತೆ ʼ ತೆರಿಗೆ ಪಾವತಿದಾರ ʼ ಎಂಬ ವರ್ಗಕ್ಕೆ ಸೇರ್ಪಡೆಯಾಗುವುದೇ ಇಲ್ಲ. ಇದು ಬೌದ್ಧಿಕ ಬೂಟಾಟಿಕೆ ಅಲ್ಲವೇ ?

ಪ್ರತಿ ಬಜೆಟ್ನಲ್ಲೂ ತಮ್ಮ ಜೀವನಮಟ್ಟ ಸುಧಾರಿಸುವಂತೆ ಸರ್ಕಾರಗಳು ಸೌಲಭ್ಯಗಳನ್ನು ಹೆಚ್ಚಿಸಬೇಕು, ರಿಯಾಯಿತಿ/ವಿನಾಯಿತಿಗಳನ್ನು ಒದಗಿಸಬೇಕು, ಆದಾಯ ಮಟ್ಟವನ್ನು ಉತ್ತಮಗೊಳಿಸಬೇಕು, ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಬೇಕು, ಆದಾಯ ತೆರಿಗೆಯ ವಿನಾಯಿತಿ ನೀಡಬೇಕು ಎಂದು ಬಯಸುವ ಮಧ್ಯಮ ವರ್ಗಗಳಿಗೆ ತಮ್ಮ ಸುತ್ತಮುತ್ತಲಿನ ವಾತಾವರಣದಲ್ಲೇ ಬದುಕುವ ಶ್ರಮಿಕರ ಜೀವನಶೈಲಿ ಮತ್ತು ಜೀವನಮಟ್ಟ ಎರಡೂ ಉತ್ತಮವಾಗಬೇಕು ಎಂಬ ಆಶಯವೇ ಮೂಡುವುದಿಲ್ಲ. “ ಅವರಿಗೇನು ಬಿಡ್ರಿ ಮನೆಯಲ್ಲಿ ನಾಲ್ಕು ಜನ ದಿನಗೂಲಿ ಮಾಡಿ ಎರಡು ಸಾವಿರ ಸಂಪಾದಿಸ್ತಾರೆ ” ಎಂದು ಈ ಶ್ರಮಿಕ ವರ್ಗಗಳ ಬದುಕಿನಲ್ಲಿ ಇಣುಕಿ ನೋಡುವ ಮಧ್ಯಮ ವರ್ಗಗಳಿಗೆ ಗೋಚರಿಸದೆ ಇರುವ ವಾಸ್ತವ ಎಂದರೆ , ಈ ಶ್ರಮಿಕರು ಶಿಕ್ಷಣದಿಂದ, ಆರೋಗ್ಯ ಸೌಲಭ್ಯಗಳಿಂದ, ಪೌಷ್ಟಿಕತೆಯಿಂದ ವಂಚಿತರಾಗಿರುತ್ತಾರೆ, ಇವರ ಕುಟುಂಬದ ಮಕ್ಕಳು ಎಳೆಯ ವಯಸ್ಸಿನಲ್ಲೇ ದುಡಿಮೆಯ ಆಕರಗಳಾಗಿರುತ್ತಾರೆ, ಇವರ ಜೀವನ ಶೈಲಿ ವರ್ಷಾನುಗಟ್ಟಲೆ ಯಥಾಸ್ಥಿತಿಯಲ್ಲಿರುತ್ತದೆ, ಜೀವನವಿಡೀ ಸೂರಿಲ್ಲದೆಯೆ ಕಾಲಕಳೆಯುತ್ತಾರೆ. ಮಕ್ಕಳು ಶಾಲಾ ಶಿಕ್ಷಣದಿಂದ ಶಾಶ್ವತವಾಗಿ ವಂಚಿತರಾಗುತ್ತಾರೆ. ಆದಾಗ್ಯೂ ದೇಶದ ನಿವ್ವಳ ಸಂಪತ್ತಿನ ಹೆಚ್ಚಳಕ್ಕೆ ಈ ಉತ್ಪಾದಕೀಯ ಶಕ್ತಿಗಳ ದುಡಿಮೆಯೇ ಬುನಾದಿಯಾಗಿರುತ್ತದೆ.
ಸಾಮಾಜಿಕ ಬದುಕಿನ ನೆಲೆಗಳು
ವಿದ್ಯಾಭ್ಯಾಸದ ಅವಕಾಶ ಮತ್ತು ಸೌಲಭ್ಯಗಳು, ಆರೋಗ್ಯ ಮತ್ತು ಯೋಗಕ್ಷೇಮದ ಸವಲತ್ತುಗಳು, ಸುಸ್ಥಿರ ಉದ್ಯೋಗ ಮತ್ತು ದುಡಿಮೆಯ ಅವಕಾಶಗಳು , ಸಾರ್ವಜನಿಕ ಸೌಲಭ್ಯಗಳು ಹಾಗೂ ಮನುಷ್ಯ ಜೀವನದಲ್ಲಿ ಅತ್ಯವಶ್ಯವಾಗಿ ಬೇಕಾಗುವ ಸಾಮಾಜೀಕರಣದ (ಮನರಂಜನೆಯ) ತಾಣಗಳು ಇವೆಲ್ಲವೂ ಈ ಶ್ರಮಿಕ ವರ್ಗಗಳಿಗೆ ಕೈಗೆಟುಕದಂತೆಯೇ ಇರುವ ಒಂದು ಆರ್ಥಿಕ ಜಗತ್ತನ್ನು ಬಂಡವಾಳಶಾಹಿ ಆರ್ಥಿಕತೆ ಸೃಷ್ಟಿಸುತ್ತದೆ. ಈ ಜಗತ್ತು ಎಷ್ಟೇ ವಿಶಾಲವಾದರೂ, ತಂತ್ರಜ್ಞಾನ ಬಳಕೆಯ ಮೂಲಕ ಎಷ್ಟೇ ತಳಮಟ್ಟಕ್ಕೆ ಎಟುಕುವಂತಾದರೂ ಇದರಿಂದ ವಂಚಿತರಾಗುವ ಜನಸಂಖ್ಯೆ ಕಡಿಮೆಯಾಗುವುದನ್ನು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾಣಲಾಗುವುದಿಲ್ಲ. ತಮ್ಮಂತೆಯೇ ಈ ಶ್ರಮಿಕರಿಗೂ ಉತ್ತಮ ಜೀವನಶೈಲಿಯನ್ನು ರೂಪಿಸಿಕೊಳ್ಳುವ ಹಾಗೂ ಜೀವನ ಮಟ್ಟ ಹೆಚ್ಚಿಸಿಕೊಳ್ಳುವ ನೈತಿಕ ಹಕ್ಕುಗಳಿವೆ ಎಂಬ ಸಾಮಾನ್ಯ ಪ್ರಜ್ಞೆಯೇ ಮಧ್ಯಮ ವರ್ಗಗಳಲ್ಲಿ ಕಾಣಲಾಗುವುದಿಲ್ಲ. (ಶ್ರೀಮಂತರಲ್ಲಿ ಇದನ್ನು ಅಪೇಕ್ಷಿಸುವುದೂ ಅಸಾಧ್ಯ). ಆಳುವ ಸರ್ಕಾರಗಳೂ ಸಹ ದೇಶದ ಸಂಪತ್ತಿನ ಸೃಷ್ಟಿ ಮತ್ತು ವೃದ್ಧಿಯಲ್ಲಿ ಈ ಶ್ರಮಿಕ ಸಮುದಾಯಗಳನ್ನು ಭಾಗಿದಾರರನ್ನಾಗಿ ಪರಿಗಣಿಸುವುದೇ ಇಲ್ಲ. ಈ ಕಾರಣಕ್ಕಾಗಿಯೇ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಈ ಕೆಳಸ್ತರದ ವರ್ಗಗಳನ್ನು ಬಡತನ ರೇಖೆಗಳೆಂಬ ಅಮೂರ್ತ ಜಗತ್ತಿನ ಇಬ್ಬದಿಗಳಲ್ಲಿ ಕಾಪಾಡಿಕೊಂಡುಬರಲಾಗುತ್ತದೆ.

ಹಸಿವು, ಬಡತನ ಮತ್ತು ದಾರಿದ್ರ್ಯ ಮನುಷ್ಯನಲ್ಲಿ ಅಸಹಾಯಕತೆಯನ್ನು ಉಂಟುಮಾಡುವಷ್ಟೇ ವೇಗದಲ್ಲಿ ಹತಾಶೆ, ಆಕ್ರೋಶ ಮತ್ತು ಜುಗುಪ್ಸೆಯನ್ನೂ ಉಂಟುಮಾಡುತ್ತದೆ. ಈ ಹತಾಶೆ ಮತ್ತು ಆಕ್ರೋಶಗಳು ಸ್ಪೋಟಿಸದಂತೆ ಎಚ್ಚರ ವಹಿಸುವುದು ಬಂಡವಾಳಿಗ ಸಮಾಜದ ಆದ್ಯತೆಯೂ ಆಗುತ್ತದೆ. ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದರೆ, ಈ ಹತಾಶೆ ಮತ್ತು ಆಕ್ರೋಶವೇ ಜಗತ್ತಿನ ಮಹಾನ್ ಕ್ರಾಂತಿಗಳಿಗೆ ಆಕರವಾಗಿರುವುದನ್ನು ಗುರುತಿಸಬಹುದು. ಅವಕಾಶವಂಚಿತ-ಅಂಚಿಗೆ ತಳ್ಳಲ್ಪಟ್ಟ ತಳಮಟ್ಟದ ಸಮಾಜದಲ್ಲಿ ಸಾಮಾನ್ಯವಾಗಿ ಕಂಡುಬರುವ ಸಹಿಷ್ಣುತೆ ಮತ್ತು ತಾಳ್ಮೆ ಬದುಕಿನ ಅನಿವಾರ್ಯತೆ ಎಂಬ ಭಾವನೆಯನ್ನು ಉದ್ಧೀಪನಗೊಳಿಸಲೆಂದೇ ಶ್ರೀಸಾಮಾನ್ಯನನ್ನು ಧರ್ಮ-ನಂಬಿಕೆ-ಶ್ರದ್ಧೆ-ದೇಶಭಕ್ತಿ ಮುಂತಾದ ಅಲಂಕಾರಿಕ ಚೌಕಟ್ಟುಗಳಲ್ಲಿ ಬಂಧಿಸಲಾಗುತ್ತದೆ. ಬಡತನ ಮತ್ತು ದಾರಿದ್ರ್ಯವನ್ನು ತಮ್ಮ ಪೂರ್ವಜನ್ಮದ ಕರ್ಮಫಲ ಎಂದು ಭಾವಿಸುವ ಜನಸಂಖ್ಯೆಯೇ ಹೆಚ್ಚಾಗಿರುವ ಭಾರತದಲ್ಲಿ ಇದು ಸುಲಭವೂ ಆಗುತ್ತದೆ. ಇದೇ ಬಡತನ-ದಾರಿದ್ರ್ಯವನ್ನು ದಾಟಿ ಮಧ್ಯಮ ವರ್ಗಗಳಾಗಿ ರೂಪುಗೊಂಡಿರುವ ಬೃಹತ್ ಜನಸ್ತೋಮವೂ ತನ್ನ ಪೂರ್ವಾಶ್ರಮದ ವಾಸ್ತವಗಳನ್ನು ಮರೆತು, ಮುಖ್ಯವಾಹಿನಿಯಲ್ಲಿ ಸಮ್ಮಿಳಿತವಾಗುತ್ತದೆ.
ಸಮಾಜದ ಈ ಮುಖ್ಯವಾಹಿನಿಯಲ್ಲಿ ಹಸಿವು-ಬಡತನ ಮತ್ತು ದಾರಿದ್ರ್ಯ ಅನುಕಂಪ ಮೂಡಿಸುವ ವಿದ್ಯಮಾನಗಳಾಗಿ ಮಾತ್ರ ಕಾಣುತ್ತವೆ. ಹಾಗಾಗಿ ಮುಖ್ಯವಾಹಿನಿ ಸಮಾಜವು ತನ್ನ ಔದಾರ್ಯದ ನೆಲೆಗಳನ್ನೇ ಪ್ರಧಾನವಾಗಿ ಬಳಸಿಕೊಂಡು, ಬಡತನ ರೇಖೆಯ ಇಬ್ಬದಿಗಳಲ್ಲಿರುವ ಬಿಪಿಎಲ್-ಎಪಿಎಲ್ ಸಮೂಹಗಳನ್ನು ಮತ್ತು ಈ ಸಾಂಖ್ಯಿಕ ರೇಖೆಗಳಿಗೂ ಗೋಚರಿಸದೆ ಇರುವಂತಹ ಜನಸಮುದಾಯಗಳನ್ನು ಶಾಶ್ವತವಾಗಿ ಪರಾವಲಂಬಿಗಳನ್ನಾಗಿಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಬಂಡವಾಳಶಾಹಿ ಆರ್ಥಿಕತೆಯು ಪೋಷಿಸುವ ಶೋಷಕ ವ್ಯವಸ್ಥೆಯಲ್ಲಿ ಈ ತಳಮಟ್ಟದ ಸಮಾಜವೇ ಮತಬ್ಯಾಂಕ್ ರಾಜಕಾರಣದಲ್ಲಿ ದಾಳಗಳಾಗಿ ಕಂಡುಬರುತ್ತವೆ. ಈ ಊಳಿಗಮಾನ್ಯ ಔದಾರ್ಯದ (Benevolent Feudalism) ನೆರಳಲ್ಲಿ ತಮ್ಮ ಬದುಕು ಸವೆಸುವ ಕೋಟ್ಯಂತರ ಕುಟುಂಬಗಳು ಶಾಶ್ವತ ಬಡತನವನ್ನು ಅನುಭವಿಸುವುದರೊಂದಿಗೇ ತಮ್ಮ ಪರಾವಲಂಬಿ ಬದುಕನ್ನೂ ಸವೆಸುತ್ತಿರುತ್ತವೆ. ಇಂದಿರಾಗಾಂಧಿಯ “ಗರೀಬಿ ಹಠಾವೋ” ಘೋಷಣೆಯಾಗಲೀ, ಈಗ ಮೊಳಗುತ್ತಿರುವ “ ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಘೋಷಣೆಯಾಗಲೀ ಈ ಶ್ರಮಿಕ ವರ್ಗಗಳನ್ನು ಸ್ವಾವಲಂಬಿಯನ್ನಾಗಿಸುವ ಧ್ವನಿಯಾಗಿ ಕೇಳಿಸುವುದೇ ಇಲ್ಲ. ಬಂಡವಾಳಶಾಹಿ ಆರ್ಥಿಕತೆ ಇದಕ್ಕೆ ಅವಕಾಶವನ್ನೂ ಕಲ್ಪಿಸುವುದಿಲ್ಲ.

ಆದ್ದರಿಂದಲೇ ಆಡಳಿತಾರೂಢ ಸರ್ಕಾರಗಳು ಈ ಶ್ರಮಿಕ ವರ್ಗಗಳನ್ನು ಸಂತೃಪ್ತರಾಗಿರಿಸಲು, ಅವರ ಹತಾಶೆ ಮತ್ತು ಹತಾಶೆಗಳನ್ನು ಅದುಮಿಡಲು, ಹೊರಹೊಮ್ಮಬಹುದಾದ ಆಕ್ರೋಶ ಸ್ಪೋಟಿಸದಂತೆ ಎಚ್ಚರವಹಿಸಲು ಹಲವು ಆರ್ಥಿಕ ನೀತಿಗಳನ್ನು ರೂಪಿಸುತ್ತಿರುತ್ತವೆ. ಹಾಗೆಯೇ ಜಾತಿ, ಧರ್ಮ, ಭಾಷೆ ಮುಂತಾದ ಅಸ್ಮಿತೆಗಳನ್ನು ರಕ್ಷಾ ಕವಚಗಳಂತೆ ಬಳಸುತ್ತಾ, ಸಾಮಾಜೀಕರಣದ ಕಿಟಕಿಗಳನ್ನು ಸದಾ ಮುಚ್ಚಿರಲು ಬಯಸುತ್ತವೆ. ಮೇಲ್ ಸ್ತರದಲ್ಲಿ ಏಣಿಯ ಮೆಟ್ಟಿಲುಗಳನ್ನು ಏರಲು ಅವಕಾಶಗಳನ್ನು ಕಲ್ಪಿಸುತ್ತಲೇ ಕೆಳಸ್ತರದಲ್ಲಿ ಇರಬಹುದಾದ ಏಣಿಗಳನ್ನೂ ಬದಿಗಿಟ್ಟು ಯಥಾಸ್ಥಿತಿಯನ್ನು ಕಾಪಾಡಲು ಸಕಲ ಪ್ರಯತ್ನಗಳನ್ನೂ ಸರ್ಕಾರಗಳು ಮಾಡುತ್ತಿರುತ್ತವೆ. ಇಲ್ಲಿ ಸೃಷ್ಟಿಯಾಗುವ ಕಂದರವನ್ನು ಕಡಿಮೆ ಮಾಡುವ ಸಾಧನಗಳಾಗಿ ಸಾಮಾಜಿಕ ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಸರ್ಕಾರಗಳು, ತಳಮಟ್ಟದ ಸಮಾಜ ಕಂದರವನ್ನು ದಾಟಿ ಬರದಂತೆ ಎಚ್ಚರವಹಿಸಿ ಕೆಲವು ಉಚಿತಗಳನ್ನು ಒದಗಿಸುತ್ತಿರುತ್ತವೆ. ಈ ಉಚಿತಗಳ ಔಚಿತ್ಯವನ್ನು ಪ್ರಶ್ನಿಸುವ ಹಿತವಲಯದ ಒಂದು ಸಮಾಜಕ್ಕೆ ಬಡತನದ ರೇಖೆಗಳಂತೆ ಈ ಬೃಹತ್ ಕಂದರವೂ ಸಹ ಅಮೂರ್ತವಾಗಿಯೇ ಕಾಣುತ್ತದೆ. ಹಾಗಾಗಿಯೇ ಈ ಪರಿಯ ಲೇವಡಿ, ವ್ಯಂಗ್ಯ ಮತ್ತು ಅವಜ್ಞೆ.
ದೇಶದ ಸಂಪತ್ತಿನ ಶಿಖರದ ಅಥವಾ ಪಿರಮಿಡ್ಡಿನ ತಳಹದಿಯಾಗಿರುವ ಈ ಶ್ರಮಿಕರನ್ನು ತಳಮಟ್ಟದಲ್ಲಿಟ್ಟು ನೋಡುವುದೇ ಒಂದು ದುರಂತ. ಹಸಿವು-ಬಡತನ ಮತ್ತು ದಾರಿದ್ರ್ಯವನ್ನು ಅನುಭವಾತ್ಮಕವಾಗಿ ಅಲ್ಲವಾದರೂ ಅನುಭಾವದ ನೆಲೆಯಲ್ಲಾದರೂ ಗ್ರಹಿಸುವ ಒಂದು ಸಂವೇದನಾಶೀಲ ಸಮಾಜದಲ್ಲಿ ಮಾತ್ರವೇ ಈ ಅಪಸವ್ಯಗಳು ಕಾಣದಿರಲು ಸಾಧ್ಯ.
(ಉಚಿತಗಳ ರಾಜಕೀಯ ಲೆಕ್ಕಾಚಾರಗಳು ಮತ್ತು ಫಲಾನುಭವಿಗಳ ವಾಸ್ತವ ಮುಂದಿನ ಭಾಗದಲ್ಲಿ )