ನವ ಭಾರತ ಇಂದು, ಜನವರಿ 12 2026 , ವಿವೇಕಾನಂದರ ಜಯಂತಿಯನ್ನು “ ರಾಷ್ಟ್ರೀಯ ಯುವದಿನ ” ಎಂದು ಆಚರಿಸುತ್ತಿದೆ. ಒಟ್ಟು ಜನಸಂಖ್ಯೆಯ ಶೇಕಡಾ 40ರಷ್ಟಿರುವ ಯುವ ಸಮಾಜಕ್ಕೆ ಈ ದಿನದಂದು ವಿವೇಕಾನಂದರ ಆಲೋಚನೆಗಳನ್ನು, ಚಿಂತನೆಗಳನ್ನು ಹಾಗೂ ಸೈದ್ಧಾಂತಿಕ ನಿಲುವುಗಳನ್ನು ಮುಟ್ಟಿಸಲು ದೇಶಾದ್ಯಂತ ಕಾರ್ಯಕ್ರಮಗಳು ನಡೆಯುತ್ತವೆ. ವಿವೇಕಾನಂದರ ಆದರ್ಶಗಳನ್ನು ಪಾಲಿಸುವಂತೆ ಯುವ ಸಮೂಹವನ್ನು ಹುರಿದುಂಬಿಸುವ ರಾಜಕೀಯ ಉಪನ್ಯಾಸಗಳು ಹೇರಳವಾಗಿ ಕಂಡುಬರುತ್ತವೆ. ನಡೆ ಮತ್ತು ನುಡಿಯ ನಡುವೆ ಅಂತರ ಹೆಚ್ಚಾಗುತ್ತಲೇ ಇರುವ ರಾಜಕೀಯ ವಲಯದ ಧ್ವನಿ ವರ್ತಮಾನದ ಯುವ ಸಮೂಹಕ್ಕೆ ಹೇಗೆ ಕೇಳಿಸಬಹುದು ? ನುಡಿದಂತೆ ನಡೆಯುವ ಮೌಲ್ಯ ಸೈದ್ಧಾಂತಿಕವೇನಲ್ಲ, ಅದು ಮನುಷ್ಯ ಸಮಾಜದಲ್ಲಿ ಸ್ವಾಭಾವಿಕವಾಗಿ ಅಳವಡಿಸಿಕೊಳ್ಳಬೇಕಾದ ಒಂದು ತತ್ವ.

ವಿಪರ್ಯಾಸ ಎಂದರೆ ಈ ತತ್ವವನ್ನು ಎಂದೋ ಮರೆತಿರುವ ಅಥವಾ ಸ್ವಾರ್ಥ ಹಿತಾಸಕ್ತಿಗಾಗಿ ಸಾರ್ವಜನಿಕ ಬದುಕಿನಿಂದಲೇ ಮರೆಮಾಡಿರುವ ರಾಜಕೀಯ ಧ್ವನಿಗಳು, ವಿವೇಕಾನಂದರ ಜನ್ಮದಿನಾಚರಣೆಯಂದು ಇದೇ ಬೋಧನೆ ಮಾಡುತ್ತವೆ. ಪರ್ಯಾಯವಾಗಿ ನೋಡಿದಾಗ, ಈ ದೇಶದ ಬಹುಸಂಖ್ಯಾತ ಯುವ ಸಮೂಹ ಅಂದರೆ ಮಿಲೆನಿಯಂ ಸಮಾಜ ( 25ರ ಓರಿಗೆಯ ಜನಸಂಖ್ಯೆ) ಈ ಮೂಲ ತತ್ವಕ್ಕೆ ತದ್ವಿರುದ್ಧವಾದ ಸಮಾಜವನ್ನು, ರಾಜಕಾರಣವನ್ನು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನೋಡುತ್ತಲೇ ಬೆಳೆದಿದೆ. ಚರಿತ್ರೆಯನ್ನು ಸಂಭ್ರಮಿಸುವ, ವರ್ತಮಾನವನ್ನು ಅಲಕ್ಷಿಸುವ ಹಾಗೂ ಭವಿಷ್ಯಕ್ಕೆ ಕುರುಡಾಗುವ ಒಂದು ಹೊಸ ಮಾದರಿಯ ಸಾರ್ವಜನಿಕ ಸಂಕಥನಗಳನ್ನು ವ್ಯವಸ್ಥಿತವಾಗಿ ಹುಟ್ಟುಹಾಕಲಾಗುತ್ತದೆ.

ದಾರ್ಶನಿಕರ ಪಾರ್ಶ್ವ ದರ್ಶನ
ವಿವೇಕಾನಂದರನ್ನೂ ಸೇರಿದಂತೆ ಬುದ್ಧನಿಂದ ಅಂಬೇಡ್ಕರ್-ಗಾಂಧಿಯವರೆಗಿನ ಭಾರತದ ದಾರ್ಶನಿಕರು , ಭಾರತೀಯ ಸಮಾಜವನ್ನು ಅಗಲಿಸಿದ ಕಣ್ಣಿನಿಂದ ನೋಡುವ, ವಿಶಾಲ ಹೃದಯದಿಂದ ಸ್ಪಂದಿಸುವ, ತೆರೆದ ಬಾಹುಗಳಿಂದ ಅಪ್ಪಿಕೊಳ್ಳುವ ಉದಾತ್ತ ತತ್ವಗಳನ್ನು ನಮ್ಮ ನಡುವೆ ಬಿಟ್ಟುಹೋಗಿದ್ದಾರೆ. ಈ ಹೃದಯ ವೈಶಾಲ್ಯವನ್ನು ಬೆಳೆಸಿಕೊಳ್ಳಲು ನೆರವಾಗುವ ಹಿಮಾಲಯದೆತ್ತರದ, ಕಡಲಾಳದಷ್ಟು ವ್ಯಾಪ್ತಿಯ ಸಾಹಿತ್ಯವನ್ನು ಬಿಟ್ಟು ಹೋಗಿದ್ದಾರೆ. ಈ ಚಾರಿತ್ರಿಕ ಮೌಲ್ಯಗಳ ಕ್ರೋಢೀಕರಣವನ್ನು ಭಾರತದ ಸಂವಿಧಾನದಲ್ಲಿ ಗುರುತಿಸಬಹುದು. ದುರಂತ ಎಂದರೆ, ಸಂವಿಧಾನವನ್ನೂ ಒಳಗೊಂಡಂತೆ ಎಲ್ಲವೂ ಸಹ ಗ್ರಾಂಥಿಕವಾಗಿ ಉಳಿದಿದ್ದು, ವಾಸ್ತವ ಸಾಮಾಜಿಕ ಪರಿಸರದಲ್ಲಿ, ಮನುಷ್ಯರು ಮತ್ತು ಸಮಾಜ ಬೌದ್ಧಿಕವಾಗಿ-ಮೌಲಿಕವಾಗಿ ಕುಬ್ಜರಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ವಾಲ್ಮೀಕಿಯಿಂದ ವಿವೇಕಾನಂದರವರೆಗೆ ಎಲ್ಲ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪಾಲಿಸುವಂತೆ ಮಕ್ಕಳಿಗೆ ದಿನನಿತ್ಯ ಹೇಳುತ್ತಲೇ ಬಂದಿದ್ದೇವೆ.

ಅನುಸರಿಸಬೇಕಾದ ಆದರ್ಶಗಳು ಏನು ಎಂಬುದನ್ನು ಮಕ್ಕಳಿಗೆ, ಯುವ ಸಮೂಹಕ್ಕೆ ಮನದಟ್ಟಾಗುವಂತೆ ಹೇಳಲಾಗುತ್ತಿಲ್ಲ. ಗತ ಇತಿಹಾಸದ ಗ್ರಂಥಗಳಿಂದ ಹೆಕ್ಕಿ ತೆಗೆದ ಸಾಲುಗಳನ್ನು ಯುವ ಮನಸ್ಸುಗಳಲ್ಲಿ ಬಿತ್ತುವ ಮೂಲಕ, ಆ ಮಿದುಳುಗಳನ್ನು ಅಕ್ಷರ ಕೂಪಗಳನ್ನಾಗಿ ಮಾಡಲಾಗುತ್ತಿದೆ. ಸಮಕಾಲೀನ ಯುಗಧರ್ಮಕ್ಕೆ ಅನುಸಾರವಾಗಿ, ವರ್ತಮಾನದ ಡಿಜಿಟಲ್ ಯುಗದ ಮಿಲೆನಿಯಂ ಮಕ್ಕಳಿಗೆ/ಯುವ ಸಮೂಹಕ್ಕೆ, ಅಗತ್ಯವಾದ ಮೌಲ್ಯಗಳನ್ನು ಮನದಟ್ಟು ಮಾಡಲಾಗುತ್ತಿಲ್ಲ. ಜೀವನ ಮೌಲ್ಯಗಳು ಕಾಲಕಾಲಕ್ಕೆ ಪರಿಷ್ಕರಣೆಗೊಳಗಾಗುತ್ತಾ, ನವೀನ ಮಾದರಿಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಆದರೆ ಮೂಲದಲ್ಲಿ ಸಮಾಜದ ಆರೋಗ್ಯಕರ ಮುನ್ನಡೆಗೆ ಅಗತ್ಯವಾದ ಮಾನವೀಯ ಮೌಲ್ಯಗಳು ಬದಲಾಗುವುದಿಲ್ಲ.

ಈ ತಾತ್ವಿಕ ನೆಲೆಯಲ್ಲಿ ನೋಡಿದಾಗ, ವರ್ತಮಾನದ ಯುವ ಸಮೂಹ ಚರಿತ್ರೆಯಿಂದ ಕಲಿಯುವುದೇನಿದೆ ? ಸಮಕಾಲೀನ ರಾಜಕೀಯದಿಂದ ಕಲಿಯುವುದೇನಿದೆ ? ಅವರು ಬದುಕಬೇಕಾದ ವಿಶಾಲ ಸಮಾಜದಿಂದ ಪಡೆಯಬೇಕಾದ್ದು ಏನಿದೆ ? ಈ ಪ್ರಶ್ನೆಗಳು ನಮ್ಮನ್ನು ಕಾಡಬೇಕಲ್ಲವೇ ? ವಾಲ್ಮೀಕಿ, ಬುದ್ಧನ ಕಾಲದ ಸಮಾಜ ಈಗಿಲ್ಲ ಆದರೆ ಆ ಯುಗದ ಸಮಾಜದಲ್ಲಿದ್ದ ಎಲ್ಲ ರೀತಿಯ ದುರ್ವ್ಯಸನಗಳೂ, ದುಷ್ಟ ನಡವಳಿಕೆಗಳೂ, ಅಮಾನುಷ ಪದ್ಧತಿಗಳೂ ಜೀವಂತವಾಗಿವೆ. ಯುವ ಸಮೂಹಕ್ಕೆ ಇದು ಮನದಟ್ಟಾಗಬೇಕಾದರೆ ಚರಿತ್ರೆಯ ಒಳಹೊಕ್ಕು ನೋಡಬೇಕು, ವರ್ತಮಾನವನ್ನು ಛೇದಿಸಿ ನೋಡಬೇಕು. ಈ ಎರಡೂ ಕ್ರಿಯೆಗಳಿಗೆ ಅವಕಾಶವನ್ನೇ ನೀಡದಂತಹ ಒಂದು ಸಮಾಜವನ್ನು ನವ ಭಾರತ ಸೃಷ್ಟಿಸಿಕೊಂಡಿರುವುದನ್ನು ಹೇಗೆ ವ್ಯಾಖ್ಯಾನಿಸುವುದು ?

ಮುಕ್ತ ಕಣ್ಣೋಟ ಮತ್ತು ಮುಂಗಾಣ್ಕೆ
ಇಲ್ಲಿ ನಾವು ತೆರೆದ ಹೃದಯದಿಂದ ಸುತ್ತಲಿನ ಸಮಾಜವನ್ನು ನೋಡಬೇಕಿದೆ. ಕೇವಲ ಐದು ದಶಕಗಳ ಹಿಂದೆ ನಾವು ಕಂಡಿದ್ದ ಸಾಮಾಜಿಕ ಪರಿಸರವನ್ನು ಇಂದು ಕಾಣಲಾಗುತ್ತಿಲ್ಲ. ನೈಸರ್ಗಿಕ ಪರಿಸರ ವಿನಾಶದಂಚಿಗೆ ಸಾಗುತ್ತಿರುವಂತೆಯೇ ಮಾನವ ಪರಿಸರವೂ ಸಹ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಈ ಪಾತಾಳ ಕುಸಿತದ ವೇಗ ಹೆಚ್ಚಿಸುವ ಸಲುವಾಗಿಯೇ ʼ ವಾಟ್ಸಾಪ್ ವಿಶ್ವವಿದ್ಯಾಲಯದ ʼ ಬೌದ್ಧಿಕ ವಲಯ ನಿರಂತರ ಚಲನೆಯಲ್ಲಿದೆ. ಇಲ್ಲಿ ಚರಿತ್ರೆಯಿಂದ ಪಾಠ ಕಲಿತು ಸುಧಾರಣೆಯಾಗುವ ಮನಸ್ಥಿತಿಯನ್ನು ಕೊಂದು, ಶತಮಾನಗಳ ಹಿಂದೆ ಕಾಣಬಹುದಾದ ವೈಷಮ್ಯ, ವೈರತ್ವ, ದ್ವೇಷಾಸೂಯೆಗಳನ್ನು ವರ್ತಮಾನದ ಸಮಾಜದಲ್ಲಿ ಪುನರ್ ಸ್ಥಾಪಿಸುವಂತಹ ವಿಕೃತ ಮನಸ್ಥಿತಿಯನ್ನು ಸೃಷ್ಟಿಸಲಾಗುತ್ತದೆ.

ಸಹಜವಾಗಿಯೇ ಯುವ ಸಮೂಹ ತೆರೆದ ವಾಸ್ತವಗಳಿಗೆ ಕುರುಡಾಗಿ, ಭೂಗತವಾಗಿರುವ ಮಿಥ್ಯೆಗಳಿಗೆ ಕಣ್ತೆರೆಯುತ್ತದೆ. ಇತಿಹಾಸ ಪ್ರಸಿದ್ಧ ಸೋಮನಾಥ ದೇವಾಲಯದ ಪುನರುಜ್ಜೀವನದ ಮೂಲಕ ಹರಡಲಾಗುವ ಮತದ್ವೇಷದ ಸಂದೇಶಗಳು, ಕಣ್ಣೆದುರು ಕಾಣುವ ಸೌಹಾರ್ದ ಸಮಾಜದಲ್ಲೂ ಬಿರುಕು ಮೂಡಿಸುತ್ತವೆ. ಚರಿತ್ರೆಯ ಘಟನೆಗಳನ್ನು, ದುಷ್ಕೃತ್ಯಗಳನ್ನು ಅನಾಮತ್ತಾಗಿ ಹೆಕ್ಕಿತಂದು ವರ್ತಮಾನದ ಸಮಾಜದಲ್ಲಿಡುವ ಒಂದು ಪ್ರಕ್ರಿಯೆ ಯುವ ಸಮೂಹದಲ್ಲಿ ಇತಿಹಾಸ ಪ್ರಜ್ಞೆಯನ್ನು ಅಳಿಸಿಹಾಕುವುದಷ್ಟೇ ಅಲ್ಲದೆ, ಭವಿಷ್ಯದ ಬಗೆಗಿನ ಆಲೋಚನೆಗಳನ್ನೂ ಭ್ರಷ್ಟಗೊಳಿಸುತ್ತದೆ. ಹಾಗಾಗಿಯೇ ವಾಲ್ಮೀಕಿಯ ರಾಮ ಸ್ಥಾವರ ರೂಪದಲ್ಲಿ ವೈಭವೀಕರಿಸಲ್ಪಟ್ಟರೆ, ಮಹಾಕವಿ ಸೃಷ್ಟಿಸಿದ ಮೌಲ್ಯಗಳಿಗೆ ತದ್ವಿರುದ್ಧವಾದ ಸಮಾಜಗಳು ಮೇಲುಗೈ ಪಡೆಯುತ್ತವೆ.

ಚರಿತ್ರೆಯನ್ನು ಇಡಿಯಾಗಿ ಓದುವ ಅಥವಾ ಅರ್ಥಮಾಡಿಕೊಳ್ಳುವ ಸಂಯಮ, ಸಮಯ, ವಿವೇಕ ಮತ್ತು ವಿವೇಚನೆ ಇಲ್ಲದ ಯುವ ಸಮೂಹದ ಒಂದು ದೊಡ್ಡ ವರ್ಗವನ್ನು ಪೋಷಿಸುವ ವಿಭಜಕ ಶಕ್ತಿಗಳು, ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಗ್ರಾಂಥಿಕವಾಗಿ ಹೆಕ್ಕಿತೆಗೆದ ಸಾಲುಗಳನ್ನೇ ಅಂತಿಮ ಸತ್ಯ ಎಂದು ಬಿಂಬಿಸುವ ಮೂಲಕ, ಅರಿವಿನ ಹಂದರವನ್ನು ಕಿರಿದಾಗಿಸುತ್ತಲೇ ಇರುತ್ತವೆ. ಇದಕ್ಕೆ ಪರ್ಯಾಯವಾಗಿ 78 ವರ್ಷಗಳ ಸ್ವತಂತ್ರ, ಸ್ವಾವಲಂಬಿ ಆಳ್ವಿಕೆಯಲ್ಲಾದರೂ ನಿಶ್ಶೇಷವಾಗಬೇಕಿದ್ದ ಮಾನವ ವಿರೋಧಿ ಪದ್ಧತಿಗಳು, ಅಮಾನವೀಯ ಆಚರಣೆಗಳು ಮತ್ತು ಚಿಂತನಾ ಮಾದರಿಗಳು ಸದಾ ಚಾಲ್ತಿಯಲ್ಲಿರುವಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಕ್ರಿಯವಾಗಿರಿಸಲಾಗುತ್ತದೆ.

ಪುನರ್ ನಿರ್ಮಾಣದ ಮರುವ್ಯಾಖ್ಯಾನ
ಈ ವಾತಾವರಣವನ್ನು ಭವಿಷ್ಯದ ಬುನಾದಿಯನ್ನಾಗಿ ಮಾಡಲು ಇಡೀ ಸಮಾಜವನ್ನೇ ಪುನರ್ ನಿರ್ವಚಿಸಿ, ಮರುನಿರ್ಮಾಣ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. “ ಹೇಗಿದ್ದ ಸಮಾಜ ಹೇಗಾಗಿದೆ ? ” ಎಂಬ ಪ್ರಶ್ನೆಯನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಿ, ಬದಲಾದ ಸಮಾಜದಲ್ಲಿ ಕಳೆದುಹೋಗುತ್ತಿರುವ ಮೌಲ್ಯಾದರ್ಶನಗಳನ್ನು ಮರುಸ್ಥಾಪಿಸುವ ಪ್ರಯತ್ನಗಳ ಬದಲು, ಪುರಾತನ ಮೌಲ್ಯಾದರ್ಶಗಳನ್ನೇ ವೈಭವೀಕರಿಸಿ, ಯುವ ಸಮೂಹಕ್ಕೆ ಮಾರ್ಗದರ್ಶಕವಾಗಿ ಕಾಣುವಂತೆ ಮಾಡುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಹಾಗಾಗಿಯೆ ಯುವ ಸಮಾಜಗಳಲ್ಲಿ ತಾರತಮ್ಯ, ಭೇದಭಾವ, ಜಾತೀಯತೆ, ಮತಶ್ರೇಷ್ಠತೆ, ಧಾರ್ಮಿಕ ಅಂಧಶ್ರದ್ಧೆ ಮತ್ತು ದೌರ್ಜನ್ಯಗಳ ವಿರುದ್ಧ ದನಿ ಎತ್ತುವ ವ್ಯವಧಾನ ಬಹುಮಟ್ಟಿಗೆ ಇಲ್ಲವಾಗುತ್ತಿದೆ.

ಯುವ ಸಮೂಹದಲ್ಲಿ ಸ್ವತಂತ್ರ ಆಲೋಚನೆಗಳೇ ಮೊಳೆಯದ ಹಾಗೆ ಇಡೀ ಸಮಾಜವನ್ನು ಅಸ್ಮಿತೆಗಳ ಚೌಕಟ್ಟಿನಲ್ಲಿ, ಚಾರಿತ್ರಿಕ-ಪೌರಾಣಿಕ ವ್ಯಕ್ತಿಗಳ ಸುತ್ತ, ತತ್ವ ಸಿದ್ಧಾಂತಗಳ ನೆಲೆಯಲ್ಲಿ, ಜಾತಿ ಧರ್ಮಗಳ ಸಂಹಿತೆಗಳಲ್ಲಿ ಕಟ್ಟಿಹಾಕುವ ಒಂದು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದನ್ನು ಗಟ್ಟಿಗೊಳಿಸುವ ಸಲುವಾಗಿ, ಯುವ ಸಮೂಹವು ತಮ್ಮನ್ನು ಬಂಧಿಸಿದ ಕಟಕಟೆಯಿಂದಾಚೆಗಿನ ಒಂದು ಜಗತ್ತನ್ನು ನೋಡಲಾಗದಂತೆ ಮಾಡಲಾಗುತ್ತಿದೆ. ತಾತ್ವಿಕ-ಸೈದ್ಧಾಂತಿಕ ಅನುಸರಣೆಗೂ ವಾಸ್ತವ ಸಮಾಜದೊಡನೆ ಸ್ಪಂದಿಸುವುದಕ್ಕೂ ಇರುವ ಅಗಾಧ ಅಂತರವನ್ನು ಯುವ ಸಮಾಜಕ್ಕೆ ಮನದಟ್ಟು ಮಾಡುವುದರಲ್ಲಿ ವಿಶಾಲ ಸಮಾಜ ವಿಫಲವಾಗಿದೆ. ಬುದ್ಧನಿಂದ ಅಂಬೇಡ್ಕರ್‌ವರೆಗಿನ ದಾರ್ಶನಿಕರನ್ನು ವ್ಯಕ್ತಿ ಆರಾಧನೆಯ ಸಂಕೋಲೆಯಲ್ಲಿ ಸಿಲುಕಿಸುವ ಮೂಲಕ, ಅವರನ್ನು ದಾಟಿ ನೋಡುವ ವಿವೇಚನೆಯನ್ನೂ ಸಹ ಯುವ ಸಮೂಹದಿಂದ ಕಸಿದುಕೊಳ್ಳಲಾಗಿದೆ.
ತತ್ಪರಿಣಾಮವಾಗಿ, ಬಾಹ್ಯ ಸಮಾಜದಲ್ಲಿ ಜೀವನಾದರ್ಶಗಳು, ಮಾನವೀಯ ಮೌಲ್ಯಗಳು ಕಳೆದುಹೋಗುತ್ತಿದ್ದರೂ, ನಿರ್ಲಿಪ್ತವಾಗಿರುವ ಯುವ ಸಮೂಹವನ್ನು ನಾವು ನೋಡುತ್ತಿದ್ದೇವೆ. ಜನಸಂಖ್ಯೆಯಲ್ಲಿ ಸಮಾಜ ಎಷ್ಟೇ ದೊಡ್ಡದಾಗಿದ್ದರೂ, ವ್ಯಕ್ತಿಯ ಕಣ್ಣೋಟದಲ್ಲಿ ಸಹಬಾಳ್ವೆಯ ಮೌಲ್ಯಗಳಿದ್ದರೆ, ಹಂಚಿತಿನ್ನುವ ಮನಸ್ಥಿತಿ ಇದ್ದರೆ, ಭೇದಭಾವಗಳು ಇಲ್ಲದಿದ್ದರೆ, ಮಾನವೀಯ ಸ್ಪಂದನೆಯ ಭಾವ ಅಂತರ್ಗತವಾಗಿದ್ದರೆ, ಆಗ ಸಮಾಜವು ಚಿಕ್ಕ ಕೋಶದ ಹಾಗೆ ಕಾಣುತ್ತದೆ. ಒಂದು ಏಕೀಭವಿಸಿದ (Integrated) ಕೂಟದ ಹಾಗೆ ತೋರುತ್ತದೆ. ಈ ದೃಷ್ಟಿಕೋನ ಬೆಳೆಯುತ್ತಾ ಹೋದಂತೆ ದಿನನಿತ್ಯ ನಡೆಯುವ ಅತ್ಯಾಚಾರಗಳು, ದೌರ್ಜನ್ಯಗಳು, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ, ಮಹಿಳಾ ದೌರ್ಜನ್ಯಗಳು, ಹಿಂಸಾಚಾರಗಳು ಮತ್ತು ಸಹಜೀವಿಗಳ ನಡುವೆ ಗೋಡೆಗಳನ್ನು ಎತ್ತರಿಸುವ ರಾಜಕೀಯ-ಸಾಂಸ್ಕೃತಿಕ ನಡತೆಗಳು, ಇವೆಲ್ಲವೂ ಅಸಹನೀಯವಾಗತೊಡಗುತ್ತವೆ.

ಪರಿವರ್ತನೆಯ ಹಾದಿಗಳ ನೋಟ
ಹೀಗೆ ಅಸಹನೀಯವಾದಾಗ ಮಾತ್ರ ಯುವ ಮನಸ್ಸುಗಳಲ್ಲಿ ನ್ಯಾಯಾನ್ಯಾಯಗಳನ್ನು ಛೇದಿಸಿ ನೋಡುವ ವಿವೇಕ ಬೆಳೆಯಲು ಸಾಧ್ಯ. ವಿಘಟಿತ ಸಮಾಜದಲ್ಲಿ, ವರ್ಗೀಕರಣಕ್ಕೊಳಗಾದ ಸಮಾಜದಲ್ಲಿ ಮಾನವೀಯ ಸ್ಪಂದನೆ ತನ್ನ ಅಂತಃಸತ್ವವನ್ನು ಕಳೆದುಕೊಂಡು, ಯಾಂತ್ರಿಕವಾಗಿಬಿಡುತ್ತದೆ. ಭಾರತದಂತಹ ಶ್ರೇಣೀಕೃತ-ಬಹು ಧಾರ್ಮಿಕ-ಬಹುಭಾಷಿಕ ಸಮಾಜದಲ್ಲಿ, ತಾರತಮ್ಯ-ದೌರ್ಜನ್ಯಗಳೂ ಸಹ ಸಾಪೇಕ್ಷತೆಯನ್ನು ಪಡೆದುಕೊಳ್ಳುತ್ತವೆ. ಕಳೆದ ಮೂರು ನಾಲ್ಕು ದಶಕಗಳ ಅಪರಾಧಿಕ ಜಗತ್ತಿನ ಬೆಳವಣಿಗೆಯನ್ನು ಗಮನಿಸಿದರೆ, ಅತಿ ಹೆಚ್ಚಿನ ಸಂಖ್ಯೆಯ ಅತ್ಯಾಚಾರಿಗಳು, ಹಂತಕರು, ಮತಾಂಧರು, ಕೋಮುವಾದಿಗಳು, ಭಯೋತ್ಪಾದಕರು ಹಾಗೂ ಆರ್ಥಿಕ ಅಪರಾಧಿಗಳು (economic offenders) ಯುವ ಸಮಾಜದಲ್ಲೇ ಕಾಣುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ.

ಮತ್ತೊಂದು ಬದಿಯಲ್ಲಿ ನೋಡಿದಾಗ ಅತ್ಯಾಚಾರಕ್ಕೊಳಗಾಗುವ ಯುವತಿಯರ, ಅಪ್ರಾಪ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದನ್ನೂ ಗಮನಿಸಬೇಕಿದೆ. ಮತಾಂಧ ದಾಳಿಗಳು, ಸಾಮಾಜಿಕ ಬಹಿಷ್ಕಾರ, ಮರ್ಯಾದೆಗೇಡು ಹತ್ಯೆ, ಕೋಮು ಘರ್ಷಣೆ ಮೊದಲಾದ ಹಿಂಸಾತ್ಮಕ ಕೃತ್ಯಗಳಿಗೆ ಬಲಿಯಾಗುವವರಲ್ಲೂ ಯುವ ಸಮೂಹದ ಸಂಖ್ಯೆ ಹೆಚ್ಚಾಗುತ್ತಿದೆ. (2025ರಲ್ಲಿ ದೇಶಾದ್ಯಂತ ದಾಖಲಾಗಿರುವ ಪೋಕ್ಸೋ ಪ್ರಕರಣಗಳು 80,320). ಅಂದರೆ ನಮ್ಮ ಸಮಾಜ ಯುವ ಸಮೂಹದ ನಡುವೆಯೂ ಎರಡು ವರ್ಗಗಳನ್ನು ಸೃಷ್ಟಿಸುತ್ತಿದೆ. ಒಂದು ವರ್ಗ ಹಿಂಸಾತ್ಮಕ-ಅಮಾನುಷ ಚಟುವಟಿಕೆಗಳಲ್ಲಿ ತೊಡಗಿದ್ದರೆ ಮತ್ತೊಂದು ವರ್ಗ ಈ ಕೃತ್ಯಗಳಿಗೆ ಬಲಿಯಾಗುತ್ತಿದೆ.

ಈ ಎರಡೂ ವರ್ಗಗಳನ್ನು ಸೃಷ್ಟಿಮಾಡುವುದು ಮತಾಂಧ ಗುಂಪುಗಳು, ಮೂಲಭೂತವಾದಿ ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ಕೃಪಾಪೋಷಿತ ಸಾಂಸ್ಕೃತಿಕ ವೇದಿಕೆಗಳು. ಇದೇ ವಾತಾವರಣದಲ್ಲಿ ಮನುಜ ಸ್ಪಂದನೆಯ ವಿದ್ಯಮಾನವನ್ನೂ ಗುರುತಿಸುವುದಾದರೆ, ಅನ್ಯಾಯಗಳಿಗೆ ಅಥವಾ ದೌರ್ಜನ್ಯಗಳಿಗೆ ಸ್ಪಂದಿಸುವ ಸಂದರ್ಭದಲ್ಲಿ, ಸಂತ್ರಸ್ತರ ಮತ್ತು ದಾಳಿಕೋರರ ಜಾತಿ-ಧರ್ಮದ ಅಸ್ಮಿತೆಗಳೇ ಪ್ರಧಾನವಾಗುತ್ತಿರುವುದನ್ನೂ ಯುವ ಸಮಾಜದಲ್ಲಿ ಕಾಣಬಹುದು. ಇದು ವೈಯುಕ್ತಿಕ ದೋಷವಲ್ಲ. ಯುವ ಮನಸ್ಸುಗಳನ್ನು ಬಂಧಿಸಿರುವ ರಾಜಕೀಯ ಮಾದರಿಗಳು ಮತ್ತು ಅಲ್ಲಿ ಸೃಷ್ಟಿಸಲಾಗುವ ಸಾಂಸ್ಕೃತಿಕ ಸಂಕೋಲೆಗಳನ್ನು ಗಮನಿಸಬೇಕಿದೆ.

ದಾರ್ಶನಿಕರ ಬೌದ್ಧಿಕ ಮರುಭೇಟಿ
ವಿಶ್ವವಿದ್ಯಾಲಯಗಳಿಂದ ರಾಷ್ಟ್ರ ರಾಜಕಾರಣದವರೆಗೂ ವಿಸ್ತರಿಸಿರುವ ಈ ಮಾದರಿಯಲ್ಲಿ ಅಂಬೇಡ್ಕರ್, ಗಾಂಧಿ, ಮಾರ್ಕ್ಸ್, ಲೋಹಿಯಾ, ವಿವೇಕಾನಂದ ಎಲ್ಲ ದಾರ್ಶನಿಕರೂ ಸಹ ನಿಮಿತ್ತ ಮಾತ್ರವಾಗಿಬಿಡುತ್ತಾರೆ. ಈ ಮಹಾನ್ ಚಿಂತಕರ ಸುತ್ತ ಹಬ್ಬಿಕೊಳ್ಳುವ ಸಾಂಘಿಕ ಹಾಗೂ ಸಾಂಸ್ಥಿಕ ಚೌಕಟ್ಟುಗಳಲ್ಲಿ ಯುವ ಸಮಾಜಗಳು ಬೌದ್ಧಿಕ ಸಂಕುಚಿತತೆಗೆ ಒಳಗಾಗುತ್ತವೆ. ರಾಮನನ್ನು, ವಿವೇಕಾನಂದರನ್ನು, ಪ್ರವಾದಿ ಮೊಹಮದ್ದರನ್ನು, ಕ್ರೈಸ್ತನನ್ನು ಆರಾಧಿಸುವ ಮನಸ್ಸುಗಳೇ ಮತ್ತೋಂದು ಮಗ್ಗುಲಿನಲ್ಲಿ ತಲ್ವಾರುಗಳನ್ನು ಹಿಡಿದು ಅನ್ಯಮತ ದ್ವೇಷದ ಕಾಲಾಳುಗಳಾಗುತ್ತಿರುವುದನ್ನು ನೋಡುತ್ತಿದ್ದೇವೆ. ಈ ವೈರುಧ್ಯವನ್ನು ಹೇಗೆ ನಿವಾರಿಸುವುದು ?

ಇದು ಸಮಾಜದ ಕರ್ತವ್ಯವೇ ಅಥವಾ ಆಯಾ ಮತ-ಧರ್ಮಗಳ ಸಂಸ್ಥೆಗಳ ಜವಾಬ್ದಾರಿಯೇ ? ಅಥವಾ ಎಲ್ಲ ಧರ್ಮಗಳಲ್ಲೂ ಬೇರುಬಿಟ್ಟಿರುವ ಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳ, ಮಠಮಾನ್ಯಗಳ ಹೊಣೆಗಾರಿಕೆಯೇ ? ಅಥವಾ ವಿಶಾಲ ಸಮಾಜದಲ್ಲಿ ಈ ಎಲ್ಲ ದಾರ್ಶನಿಕರ ಆದರ್ಶಗಳನ್ನೇ ಅನುಸರಿಸುತ್ತಾ, ಸಂವಿಧಾನದ – ಆರ್ಥಿಕ ಅಭಿವೃದ್ಧಿಯ- ಸಾಮಾಜಿಕ ವಿಕಾಸದ ಫಲಾನುಭವಿ ಸಮಾಜಗಳ ಜವಾಬ್ದಾರಿಯೇ ? ಇಲ್ಲಿ ನಮಗೆ ನಡೆ-ನುಡಿಯ ನಡುವಿನ ಗಾಢವಾದ ಸಂಬಂಧ ಮುಖ್ಯವಾಗುತ್ತದೆ. ಈ ಎರಡು ಸಹಜ ವರ್ತನೆಗಳ ನಡುವೆ ಅಂತರವನ್ನು ಕಡಿಮೆ ಮಾಡುವಂತಹ ಅಥವಾ ಅಂತರ ಕಾಣದಂತೆ ನಡೆದುಕೊಳ್ಳುವ ರಾಜಕೀಯ ನಾಯಕತ್ವವನ್ನು ನವ ಭಾರತ-ಯುವ ಭಾರತ ಕಳೆದುಕೊಂಡಿದೆ. ದುರಂತ ಎಂದರೆ ಧಾರ್ಮಿಕ ಕ್ಷೇತ್ರದಲ್ಲೂ, ಅಧ್ಯಾತ್ಮ ಕೇಂದ್ರಗಳಲ್ಲೂ ಸಹ ಈ ಅಂತರ ಹೆಚ್ಚಾಗುತ್ತಲೇ ಇದೆ.

ಹಾಗಾದರೆ ಭಾರತದ ಯುವ ಸಮೂಹ ಒಂದು ಆದರ್ಶಪ್ರಾಯ ಬದುಕು ಕಟ್ಟಿಕೊಳ್ಳಲು ಯಾರ ಕಡೆ ನೋಡಬೇಕು. ಮರಳಿ ಸ್ವಾತಂತ್ರ್ಯ ಪೂರ್ವ ದಿನಗಳಿಗೇ ಹೋಗಬೇಕಾಗುತ್ತದೆ. ವಿವೇಕಾನಂದ-ಗಾಂಧಿ-ಅಂಬೇಡ್ಕರುಗಳತ್ತ ನೋಡಬೇಕಾಗುತ್ತದೆ. 78 ವರ್ಷಗಳಲ್ಲಿ ಒಂದು ಆದರ್ಶಪ್ರಾಯ ಮಾದರಿಯನ್ನು ಸೃಷ್ಟಿಸಲಾಗದೆ ಭಾರತ ವಿಕಾಸವಾಗುವ ಹಾದಿಯಲ್ಲಿ ನಡೆಯುತ್ತಲೇ ಸಾಂಸ್ಕೃತಿಕವಾಗಿ, ಮಾನವೀಯ ನೆಲೆಯಲ್ಲಿ ಹಿಂಚಲನೆಯನ್ನು ಕಾಣುತ್ತಿದೆ. ಈ ಹಿಮ್ಮುಖ ನಡೆಯಲ್ಲಿ ಬಲಿಯಾಗುತ್ತಿರುವುದು ಭಾರತದ ಯುವ ಸಮೂಹ.

ಚರಿತ್ರೆಯ/ದಾರ್ಶನಿಕರ ವೈಭವೀಕರಣ ಅಥವಾ Romanticisation ಮೂಲಕ ಇದನ್ನು ಸರಿಪಡಿಸಲಾಗುವುದಿಲ್ಲ. ಹಿರಿಯ ತಲೆಮಾರು ಒಂದು ಚಿಕಿತ್ಸಕ ಸಮಾಜವನ್ನು ಸೃಷ್ಟಿಸಬೇಕಿದೆ. ಅನ್ಯಾಯಗಳ ವಿರುದ್ದ ಸೆಟೆದು ನಿಲ್ಲುವ, ದ್ವೇಷಾಸೂಯೆಗಳನ್ನು ಇಲ್ಲವಾಗಿಸುವ, ವಿಭಜಕ ಗೋಡೆಗಳನ್ನು ಕೆಡವಿ, ಸೌಹಾರ್ದ ಬದುಕಿನ ಉದ್ಯಾನಗಳನ್ನು ಕಟ್ಟುವ ಯುವ ಸಮಾಜವನ್ನು ಕಟ್ಟಬೇಕಿದೆ. “ ಕಟ್ಟುವೆವು ನಾವು ಹೊಸ ನಾಡೊಂದನು ” ಅಡಿಗರ ಈ ಸಾಲುಗಳು ಮರುಧ್ವನಿಸಬೇಕಿದೆ. ಏಕೆಂದರೆ ಈ ಐವತ್ತು ವರ್ಷಗಳಲ್ಲಿ ಕಟ್ಟಿರುವುದೆಲ್ಲವನ್ನೂ ಧ್ವಂಸ ಮಾಡಲಾಗಿದೆ. ವಿವೇಕಾನಂದರ ಜನ್ಮದಿನಾಚರಣೆ ಆ ಸಮಾಜದಲ್ಲಿ ಸಾರ್ಥಕತೆ ಪಡೆಯುತ್ತದೆ.











