ನಾ ದಿವಾಕರ
ಕೃಪೆ : ಸಮಾಜಮುಖಿ ಮಾಸಪತ್ರಿಕೆಯ ಫೆಬ್ರವರಿ ಸಂಚಿಕೆ
ಬೆಂಗಳೂರು:ಮಾ.24: ಭಾರತದ ಪ್ರಜಾಪ್ರಭುತ್ವದ ಮೂಲ ಲಕ್ಷಣ ಎಂದರೆ, ಕಾಲಕಾಲಕ್ಕೆ ನಡೆಯುವ ಚುನಾವಣೆಗಳ ಸಂದರ್ಭದಲ್ಲಿ ಕಂಡುಬರುವ ಆಶಾಗೋಪುರಗಳು ಮತ್ತು ಆನಂತರದ ಆಳ್ವಿಕೆಯಲ್ಲಿ ಮಣ್ಣುಗುಡ್ಡೆಗಳಂತೆ ಕರೆದುಹೋಗುವ ಭರವಸೆಯ ಕಣಜಗಳು. ಬಹುಶಃ 75 ವರ್ಷಗಳ ಸ್ವಾತಂತ್ರ್ಯೋತ್ತರ ಪಯಣದಲ್ಲಿ ಭಾರತೀಯ ಜನತೆ ಈ ಪರಂಪರೆಗೆ ತಮ್ಮನ್ನು ತಾವು ಒಗ್ಗಿಸಿಕೊಂಡು, ಇಂದಿಗೂ ಸಹ ಚುನಾವಣೆಗಳು ಬಂತೆಂದರೆ ರಾಜಕೀಯ ನಾಯಕರ ಆಶ್ವಾಸನೆಗಳಿಗೆ ಹಾತೊರೆಯುತ್ತಿರುತ್ತಾರೆ. ಕರ್ನಾಟಕ ಮತ್ತೊಂದು ಚುನಾವಣೆಯನ್ನು ಇಷ್ಟರಲ್ಲೇ ಎದುರಿಸಲಿದೆ. ಕರ್ನಾಟಕದ ಜನತೆ ಸಹನಶೀಲತೆಗೆ ಹೆಸರಾಗಿದ್ದರೂ, ವರ್ತಮಾನದ ಸಾಮಾಜಿಕ-ಸಾಂಸ್ಕೃತಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಸಹನಶೀಲ ಮನಸ್ಥಿತಿಯನ್ನು ಕೆಡಿಸುವ ಪ್ರಯತ್ನಗಳು ಅಡೆತಡೆಯಿಲ್ಲದೆ ನಡೆಯುತ್ತಿರುವುದನ್ನು ಗುರುತಿಸಬಹುದು.
ಕನ್ನಡಿಗರು ಎಂಬ ಪದವನ್ನು ವಿಶಾಲಾರ್ಥದಲ್ಲಿ ಬಳಸಿದಾಗ ಕರ್ನಾಟಕದ ಸಮಸ್ತ ಜನತೆಯ ಆದ್ಯತೆ ಮತ್ತು ಆಯ್ಕೆಗಳು ಸಾಕಷ್ಟು ವೈವಿಧ್ಯಮಯವಾಗಿ ಕಂಡುಬರುತ್ತದೆ. ಕೋಲಾರದ ಚಿನ್ನದ ಗಣಿಗಳಿಂದ ಬಳ್ಳಾರಿಯ ಗಣಿಗಳವರೆಗೆ, ಬಾಗೇಪಲ್ಲಿಯ ಬರಡು ಪ್ರದೇಶದಿಂದ ಬೆಳಗಾವಿಯವರೆಗೆ ಕನ್ನಡಿಗರ ಸಮಸ್ಯೆಗಳು ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ನೆಲೆಗಳಲ್ಲಿ ವಿಭಿನ್ನವಾಗಿ ಎದುರಾಗುತ್ತವೆ. ಸರ್ಕಾರಗಳ ಮಟ್ಟಿಗೆ ಕನ್ನಡ ಮತ್ತು ಕನ್ನಡಿಗರು ಎನ್ನುವುದು ಕೇವಲ ಭಾವನಾತ್ಮಕ ವಿಚಾರವಷ್ಟೇ ಆಗಿದ್ದು, ನವಂಬರ್ ತಿಂಗಳ ಉತ್ಸವಗಳಲ್ಲಿ ಕಳೆದುಹೋಗುತ್ತದೆ. ಶಿಕ್ಷಣ ಮಾಧ್ಯಮವಾಗಿ ಕನ್ನಡ, ಆಡಳಿತ ಭಾಷೆಯಾಗಿ ಕನ್ನಡ, ಸಂವಹನ ಮಾಧ್ಯಮವಾಗಿ ಕನ್ನಡ ಮತ್ತು ಬದುಕಿನ ಭಾಷೆಯಾಗಿ ಕನ್ನಡ ಹೀಗೆ ಹಲವು ಮಜಲುಗಳಲ್ಲಿ ಕನ್ನಡಿಗರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾರುಕಟ್ಟೆ ಆರ್ಥಿಕತೆ ಮತ್ತು ಡಿಜಿಟಲೀಕರಣಗೊಂಡ ಔದ್ಯಮಿಕ ಜಗತ್ತು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಿಗೆ ದಾಂಗುಡಿ ಇಡುತ್ತಿರುವ ಸಂದರ್ಭದಲ್ಲಿ ಸಂವಹನ ಮಾಧ್ಯಮವಾಗಿ ಕನ್ನಡದ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಜಟಿಲ ಪ್ರಶ್ನೆ ನಮ್ಮ ಮುಂದಿದೆ. ಆಡಳಿತಾರೂಢ ಸರ್ಕಾರಗಳಿಗೆ ಬಹುಶಃ ಇದು ಮುಖ್ಯ ಎನಿಸುವುದಿಲ್ಲ.
ಆದರೆ ತಮ್ಮ ಬದುಕು ರೂಪಿಸಿಕೊಳ್ಳಲು ಇದೇ ಕಾರ್ಪೋರೇಟ್ ಮಾರುಕಟ್ಟೆಯನ್ನು ಅವಲಂಬಿಸುವ ತಳಮಟ್ಟದ ಸಾಮಾನ್ಯ ಜನತೆಗೆ ಕನ್ನಡ ಒಂದು ಬದುಕು ಕಟ್ಟಿಕೊಳ್ಳುವ ಭಾಷೆಯಾಗಿ ರೂಪುಗೊಳ್ಳುವುದು ಅತ್ಯವಶ್ಯವಾಗಿರುತ್ತದೆ. ಒಂದು ಭಾಷೆಯಾಗಿ ಕನ್ನಡ ಯಾರಿಗೆ ಬೇಕಾಗಿದೆ ? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಸಾಮಾಜಿಕಾರ್ಥಿಕ ನೆಲೆಗಳನ್ನು ಶೋಧಿಸುವಾಗ, ನಿತ್ಯ ಬದುಕಿನ ದುಡಿಮೆಯ ವಲಯಗಳಲ್ಲಿ ಕನ್ನಡಿಗರ ಅಸ್ತಿತ್ವ ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದೀತು. ಆರ್ಥಿಕ ಅಭಿವೃದ್ಧಿಯನ್ನು ಮಾರುಕಟ್ಟೆ ಮತ್ತು ಕಾರ್ಪೋರೇಟ್ ಬಂಡವಾಳದ ದೃಷ್ಟಿಯಿಂದಲೇ ನೋಡಿದಾಗ, ಸಹಜವಾಗಿಯೇ ನಮಗೆ ಆಂತರಿಕ ವಲಸೆ, ಬಾಹ್ಯ ವಲಸೆ ಮತ್ತು ತಳಮಟ್ಟದ ಸಾಮಾಜಿಕ-ಸಾಂಸ್ಕೃತಿಕ ಬಿಕ್ಕಟ್ಟುಗಳು ಕಾಣಲಾಗುವುದಿಲ್ಲ. ಏಳು ಕೋಟಿ ಜನಸಂಖ್ಯೆಯ ಕರ್ನಾಟಕ ಈಗಲೂ ಸಹ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಬಯಲು ಸೀಮೆ ಕರ್ನಾಟಕ ಎಂಬ ನಾಲ್ಕು ವಲಯಗಳಲ್ಲೇ ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳುತ್ತಿದೆ. ಸರ್ಕಾರಗಳು ರೂಪಿಸುವ ಆಡಳಿತ-ಆರ್ಥಿಕ ನೀತಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ನಾಲ್ಕೂ ವಲಯಗಳ ಜ್ವಲಂತ ಸಮಸ್ಯೆಗಳಿಗೆ ಏಕಕಾಲಕ್ಕೆ ಸ್ಪಂದಿಸುವ ಲಕ್ಷಣಗಳನ್ನು ಕಾಣಲಾಗುತ್ತಿಲ್ಲ.

ಮೊದಲನೆಯದಾಗಿ, ಬದಲಾದ ಕನ್ನಡಿಗರ ಆದ್ಯತೆಗಳ ಬಗ್ಗೆ ಪರಾಮರ್ಶಿಸುವ ಮುನ್ನ ಕಳೆದ ಮೂರು ದಶಕಗಳಲ್ಲಿ ರೂಪುಗೊಂಡಿರುವ ಒಂದು ಅರ್ಥವ್ಯವಸ್ಥೆಯನ್ನು ಮತ್ತು ಸಾಂಸ್ಕೃತಿಕ ಜಗತ್ತನ್ನು ಸಹ ಗಮನಿಸಬೇಕಾಗುತ್ತದೆ. ಈ ಆದ್ಯತೆಗಳನ್ನು ಯಾವ ನೆಲೆಯಲ್ಲಿ ನಿಂತು ನೋಡಲು ಸಾಧ್ಯ ಎಂಬ ಜಿಜ್ಞಾಸೆಯೂ ನಮ್ಮನ್ನು ಕಾಡದಿರದು. ಬದಲಾದ ಸಾಂಸ್ಕೃತಿಕ ರಾಜಕಾರಣದಲ್ಲಿ ಕರಾವಳಿ ಕರ್ನಾಟಕದ ಆದ್ಯತೆಗಳ ಬಗ್ಗೆ ಯೋಚಿಸುವಾಗ, ಇವತ್ತಿನ ಕರಾವಳಿ ಮತ್ತು ದಕ್ಷಿಣ ಕನ್ನಡ ವಿಕೃತ ಸಾಂಸ್ಕೃತಿಕ ರಾಜಕಾರಣ, ದ್ವೇಷಾಸೂಯೆಗಳ ಮತೀಯವಾದ ಮತ್ತು ಮತಾಂಧತೆಯ ದಾಳಿಗೆ ಸಿಲುಕಿರುವ ಒಂದು ಪ್ರಕ್ಷುಬ್ಧ ವಲಯವಾಗಿ ಕಾಣುತ್ತದೆ. ಕರ್ನಾಟಕದ ಆರ್ಥಿಕತೆಗೆ, ಮಾರುಕಟ್ಟೆಗೆ ಮತ್ತು ಬಂಡವಾಳ ಪೂರೈಕೆಗೆ ತನ್ನದೇ ಆದ ವಾಹಕಗಳನ್ನು ಹೊತ್ತಿರುವ ಈ ಪ್ರದೇಶದಲ್ಲಿ ಸೃಷ್ಟಿಯಾಗಿರುವ ಆತಂಕಗಳು ಅಲ್ಲಿನ ದುಡಿಮೆಯ ನೆಲೆಗಳನ್ನೇ ಛಿದ್ರಗೊಳಿಸುವಂತೆ ಕಾಣುತ್ತಿದೆ. ಅತ್ಯುತ್ಕೃಷ್ಟ ಶೈಕ್ಷಣಿಕ ಸ್ಥಾವರಗಳನ್ನು ಹೊಂದಿರುವ ಈ ಪ್ರದೇಶದ ಶೈಕ್ಷಣಿಕ ಜಗತ್ತಿನಲ್ಲಿ ಹೊಕ್ಕಿರುವ ಮತೀಯವಾದ ಮತ್ತು ಮತದ್ವೇಷ, ಸಮಾಜದ ಎಲ್ಲ ಸ್ತರಗಳಿಗೂ ಹರಡಿದ್ದು, ಪಾರಂಪರಿಕ ಸಾಂಸ್ಕೃತಿಕ ನೆಲೆಗಳನ್ನೂ ಭ್ರಷ್ಟಗೊಳಿಸುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಹಿಜಾಬ್ನಿಂದ ಕಾಂತಾರದ ಭೂತಕೋಲದವರೆಗೆ ಹಬ್ಬಿರುವ ವಿಷಾನಿಲ ಇಲ್ಲಿನ ಜನತೆಯ ಆದ್ಯತೆಗಳನ್ನು ಖಂಡಿತವಾಗಿಯೂ ಬದಲಿಸಬೇಕಿದೆ.
ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಎನ್ನುವುದು ಇಂದಿಗೂ ಮರೀಚಿಕೆಯಾಗಿಯೇ ಉಳಿಸಿದ್ದು, ಇತ್ತೀಚೆಗೆ ಸಂಪನ್ನಗೊಂಡ ಬೆಳಗಾವಿ ಅಧಿವೇಶನದಲ್ಲೂ ಸಹ ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಕ್ಷೀಣ ಧ್ವನಿಯೂ ಕೇಳಿಬರಲಿಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಲ್ಲವೇ ? ದೇಶವ್ಯಾಪಿಯಾಗಿ ಕಾಡುತ್ತಿರುವ ನಿರುದ್ಯೋಗ, ಯುವ ಸಮೂಹದಲ್ಲಿನ ಅಭದ್ರತೆಯನ್ನು ಹೆಚ್ಚಿಸುತ್ತಿದ್ದು ಇದರಿಂದ ಸಮಾಜದಲ್ಲಿ ಪಾತಕೀಕರಣವೂ ಹೆಚ್ಚಾಗುತ್ತಿರುವುದನ್ನು ಕೋಲಾರದಿಂದ ಬೆಳಗಾವಿಯವರೆಗೂ ಕಾಣಬಹುದಾಗಿದೆ. ಶಾಲಾ ಕಾಲೇಜುಗಳಿಂದ ಸಾಗರೋಪಾದಿಯಲ್ಲಿ ಹೊರಬರುತ್ತಿರುವ ಯುವ ಸಮೂಹ ಭವಿಷ್ಯದ ಜೀವನಕ್ಕೆ ಪೂರಕವಾಗುವಂತಹ ಒಂದು ಉದ್ಯೋಗ ಮಾರುಕಟ್ಟೆ ಕರ್ನಾಟಕದಲ್ಲಿ ಸೃಷ್ಟಿಯಾಗಿಲ್ಲ ಎನ್ನುವುದು ಸ್ಫಟಿಕ ಸ್ಪಷ್ಟ. ಕಾರ್ಪೋರೇಟ್ ಮಾರುಕಟ್ಟೆ ಒದಗಿಸುತ್ತಿರುವ ಉದ್ಯೋಗಾವಕಾಶಗಳು ನೀರ್ಗುಳ್ಳೆಗಳಂತೆ ಕಾಣುತ್ತಿದ್ದು, ನಗರೀಕರಣದ ವಿಸ್ತರಣೆಗೆ ಪೂರಕವಾಗಿದೆಯೇ ಹೊರತು, ಗ್ರಾಮೀಣ ಬದುಕನ್ನು ಹಸನುಗೊಳಿಸುವ ಲಕ್ಷಣಗಳು ಕಾಣುತ್ತಿಲ್ಲ. ಔದ್ಯೋಗಿಕ-ಔದ್ಯಮಿಕ ಪ್ರಗತಿಯನ್ನು ತಳಮಟ್ಟದ ಜನಸಮುದಾಯಗಳ ಹಿತದೃಷ್ಟಿಯಿಂದ ನೋಡದೆ ಹೋದರೆ, ಬಹುಶಃ ಕರ್ನಾಟಕ ಅತಿರೇಕದ ನಗರೀಕರಣಕ್ಕೊಳಗಾಗಿ, ಅನೌಪಚಾರಿಕ ವಲಯದ ವಲಸೆ ಕಾರ್ಮಿಕರ ಸ್ಲಂಗಳ ಕೇಂದ್ರವಾಗಿಬಿಡುತ್ತದೆ. ಈ ಪ್ರಕ್ರಿಯೆಯಲ್ಲಿ ಕನ್ನಡಿಗರು ತಮ್ಮ ಬದುಕಿನ ಆರ್ಥಿಕ ನೆಲೆಗಳನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿದ್ದು, ಇದನ್ನು ತಡೆಗಟ್ಟುವುದೇ ನಮ್ಮ ಆದ್ಯತೆಯಾಗಬೇಕಿದೆ. ಈ ಬದಲಾದ ಆದ್ಯತೆಗಳು ರಾಜಕೀಯ ಪಕ್ಷಗಳಿಗೆ ಅರ್ಥವಾಗುತ್ತಿಲ್ಲ ಎನ್ನುವುದು ಈಗ ನಡೆಯುತ್ತಿರುವ ಪಂಚರತ್ನ, ಪ್ರಜಾಸಂಕಲ್ಪ, ಪ್ರಜಾಧ್ವನಿ ಯಾತ್ರೆಗಳಲ್ಲೇ ಸ್ಪಷ್ಟವಾಗಿ ಕಾಣುತ್ತದೆ.
ಎರಡನೆಯದಾಗಿ, ತಮ್ಮ ಪ್ರಣಾಳಿಕೆಗಳಲ್ಲಿ ಮತ್ತು ಅಧಿಕಾರದಲ್ಲಿದ್ದಾಗ ಬಜೆಟ್ಗಳ ಮೂಲಕ ರಾಜಕೀಯ ಪಕ್ಷಗಳು ನೀಡುವ ಭರವಸೆಗಳಿಗೂ, ನೆಲಮಟ್ಟದ ವಾಸ್ತವಗಳಿಗೂ ಇರುವ ಅಂತರ, ವ್ಯತ್ಯಾಸವನ್ನು ಖಂಡಿತವಾಗಿಯೂ ಜನಸಾಮಾನ್ಯರು ಗಮನಿಸುತ್ತಿದ್ದಾರೆ. ಅಭಿವೃದ್ಧಿ ಎಂಬ ಪರಿಕಲ್ಪನೆಯೇ ತೀವ್ರ ತಪಾಸಣೆಗೊಳಗಾಗಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. ಅಂತಾರಾಷ್ಟ್ರೀಯ ಬಂಡವಾಳ ಹೂಡಿಕೆ, ಜಾಗತಿಕ ಹಣಕಾಸು ಬಂಡವಾಳದ ಹರಿವು ಮತ್ತು ಔದ್ಯಮಿಕ ಮಾರುಕಟ್ಟೆಯ ವಿಸ್ತರಣೆ ಇವುಗಳನ್ನೇ ಅಭಿವೃದ್ಧಿ ಎಂದು ಭಾವಿಸುವ ಸರ್ಕಾರಗಳು ರೂಪಿಸುವ ನೀತಿಗಳು ಸಹಜವಾಗಿಯೇ ನಿಸರ್ಗ ಸಂಪತ್ತನ್ನು ಬರಿದು ಮಾಡುವ ನಿಟ್ಟಿನಲ್ಲಿ ಸಾಗುತ್ತವೆ. ದಶಪಥ ರಸ್ತೆಗಳು, ಮೆಟ್ರೋ ಮಾರ್ಗಗಳು, ಹೆದ್ದಾರಿ-ಮೇಲ್ಸೇತುವೆಗಳು ಇವೆಲ್ಲವನ್ನೂ ದಾಟಿ ಕರ್ನಾಟಕದ ಜನತೆಯ ಸುಭದ್ರ ಭವಿಷ್ಯತ್ತಿಗೆ ಪೂರಕವಾದ ಆರ್ಥಿಕ ನೆಲೆಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ, ಸರ್ಕಾರದ ಭರವಸೆಗಳು ನಿರಾಸೆ ಮೂಡಿಸುವುದೇ ಹೆಚ್ಚು. ರಾಜ್ಯಾದ್ಯಂತ ನಡೆಯುತ್ತಿರುವ ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಮಿಕರ, ಪೌರ ಕಾರ್ಮಿಕರ ಮತ್ತು ರೈತಾಪಿ ಸಮುದಾಯದ ಮುಷ್ಕರಗಳೇ ಇದನ್ನು ನಿರೂಪಿಸುತ್ತವೆ. ದೀರ್ಘಕಾಲೀನ ಅಭಿವೃದ್ಧಿ ಎನ್ನುವ ದೂರದೃಷ್ಟಿಯೇ ಇಲ್ಲದ ಬಜೆಟ್ಗಳು ಮತ್ತು ಪ್ರಣಾಳಿಕೆಗಳು ಈ ಜ್ವಲಂತ ಸಮಸ್ಯೆಗಳತ್ತ ಕಣ್ಣೆತ್ತಿಯೂ ನೋಡುವುದಿಲ್ಲ ಎನ್ನುವುದೂ ಸ್ಪಷ್ಟ.

ಮೂರನೆಯದಾಗಿ, ಪಕ್ಷಾತೀತವಾಗಿ ನೋಡಿದಾಗಲೂ ಕರ್ನಾಟಕದ ರಾಜಕೀಯ ನಾಯಕರಲ್ಲಿ ಗಟ್ಟಿ ನಿರ್ಧಾರ ಎನ್ನುವುದು ಸಾಪೇಕ್ಷವಾಗಿ ಮಾತ್ರವೇ ನಿರ್ವಚಿಸಲು ಸಾಧ್ಯ. ಭಾವನಾತ್ಮಕವಾದ, ತಮ್ಮ ಸೈದ್ಧಾಂತಿಕ ಸಾಂಸ್ಕೃತಿಕ ರಾಜಕಾರಣಕ್ಕೆ ಪೂರಕವಾಗುವ ವಿಚಾರಗಳಲ್ಲಿ ಗಟ್ಟಿ ನಿರ್ಧಾರಕ್ಕೆ ಬದ್ಧರಾಗುವ ರಾಜಕೀಯ ನಾಯಕರು, ತಳಮಟ್ಟದ ದುಡಿಯುವ ಜನರ ಬದುಕಿನ ಪ್ರಶ್ನೆ ಎದುರಾದಾಗ, ಮಾರುಕಟ್ಟೆ ಸೂತ್ರಗಳಿಗೆ ಅಧೀನರಾಗಿ ವರ್ತಿಸುವುದನ್ನು ಹಾಲಿ ಬಿಜೆಪಿ ಸರ್ಕಾರದ ನಡೆಯಲ್ಲೇ ಗುರುತಿಸಬಹುದು. ರಾಜ್ಯವನ್ನು ಎಡಬಿಡದೆ ಕಾಡುತ್ತಿರುವ ಭ್ರಷ್ಟಾಚಾರದ ಪೆಡಂಭೂತವನ್ನು ನಿರ್ನಾಮ ಮಾಡುವ ನಿಟ್ಟಿನಲ್ಲಿ ಲೋಕಾಯುಕ್ತದಂತಹ ಸಂಸ್ಥೆಯನ್ನು ನಿರ್ವೀರ್ಯಗೊಳಿಸಿದ ರಾಜಕೀಯ ಪಕ್ಷಗಳ ಧೋರಣೆಯಲ್ಲೇ ಇದನ್ನು ಗಮನಿಸಬಹುದು. ಕರ್ನಾಟಕದ ಮೂರೂ ಪ್ರಧಾನ ಪಕ್ಷಗಳು ರೈತರ ಪರ ದಿನನಿತ್ಯ ಮೊಸಳೆ ಕಣ್ಣೀರು ಸುರಿಸಿದರೂ, ಭೂಸ್ವಾಧೀನ ಕಾಯ್ದೆಯ ತಿದ್ದುಪಡಿ, ಗೋಹತ್ಯೆ ನಿಷೇಧ ಮುಂತಾದ ಕಾನೂನಾತ್ಮಕ ಕ್ರಮಗಳಿಂದ ರಾಜ್ಯದ ರೈತಾಪಿ ಸಮುದಾಯ ಎದುರಿಸುತ್ತಿರುವ ಜಟಿಲ ಸಮಸ್ಯೆಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಅಲ್ಲವೇ ? ಮಾರುಕಟ್ಟೆ ಆರ್ಥಿಕತೆ ಕೇಂದ್ರಿತ ಅಭಿವೃದ್ಧಿಗಾಗಿ ತಮ್ಮ ಭೂಮಿ ಕಳೆದುಕೊಳ್ಳುತ್ತಿರುವ ರೈತ ಸಮುದಾಯ ನಿರಂತರ ಹೋರಾಟದಲ್ಲಿ ತೊಡಗಿದ್ದಾರೆ. ಮೂರು ಕರಾಳ ಕೃಷಿ ಮಸೂದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದರೂ, ರಾಜ್ಯ ಸರ್ಕಾರ ಇಂದಿಗೂ ತನ್ನ ನಿಲುವು ವ್ಯಕ್ತಪಡಿಸಿಲ್ಲ. ವಿರೋಧ ಪಕ್ಷಗಳೂ ಚಕಾರ ಎತ್ತುತ್ತಿಲ್ಲ. ಈ ದೃಷ್ಟಿಯಿಂದ ನೋಡಿದಾಗ, ನಮ್ಮ ರಾಜಕೀಯ ನಾಯಕರ ಗಟ್ಟಿ ಧ್ವನಿ ಕೇವಲ ಅನುಕೂಲಕ್ಕೆ ತಕ್ಕಂತೆ ವ್ಯಕ್ತವಾಗುವ ಧ್ವನಿಯಾಗಿ ಮಾತ್ರ ಕಾಣುತ್ತದೆ. ಸಮಸ್ತ ಕನ್ನಡಿಗರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದಂತಹ ಒಂದು ಪ್ರಾದೇಶಿಕ ʼ ಕನ್ನಡ ʼ ಧ್ವನಿ ರಾಜಕೀಯ ನೆಲೆಯಲ್ಲಿ ಮರೀಚಿಕೆಯಾಗಿಯೇ ಉಳಿದಿದೆ.
ನಾಲ್ಕನೆಯದಾಗಿ, 2023ರ ಚುನಾವಣೆಗಳಲ್ಲಿ ಕನ್ನಡಿಗರ ಆದ್ಯತೆಗಳು ಏನಾಗಿರಬೇಕು ? ವಿಶಾಲ ನೆಲೆಯಲ್ಲಿ ನಿಂತು ನೋಡಿದಾಗ ನಮ್ಮ ಪ್ರಪ್ರಥಮ ಆದ್ಯತೆ ಕುವೆಂಪು ಅವರ ಆಶಯದತ್ತ ಹೊರಳುತ್ತದೆ. ಸಹನೆ, ಸಂಯಮ, ಸಮನ್ವಯ, ಸೌಹಾರ್ದತೆಯ ಬೀಡು ಎಂದೇ ಹೆಸರಾಗಿದ್ದ ಕರ್ನಾಟಕ ಇಂದು ಮತದ್ವೇಷ, ಕೋಮುದ್ವೇಷ, ಜಾತಿ ದೌರ್ಜನ್ಯ, ಮಹಿಳಾ ದೌರ್ಜನ್ಯಗಳ ನೆಲೆವೀಡಾಗಿರುವುದು ದುರಂತ ಅಲ್ಲವೇ ? ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟದಂತೆ ನೋಡಲಿಚ್ಚಿಸಿದ ರಾಷ್ಟ್ರಕವಿ ಕುವೆಂಪು ಸಮಸ್ತ ಕನ್ನಡಿಗರಿಗೆ ವಿಚಾರಮತಿಗಳಾಗಲು, ನಿರಂಕುಶಮತಿಗಳಾಗಲು ಕರೆ ನೀಡಿದ್ದರು. ಆದರೆ ಇಂದು ತಮ್ಮ ಚುನಾವಣಾ ಲಾಭಕ್ಕಾಗಿ ರಾಜಕೀಯ ನಾಯಕರು ಒಂದು ಇಡೀ ಸಮುದಾಯವನ್ನೇ ರಾಜ್ಯದಿಂದ ಖಾಲಿ ಮಾಡಿಸುವ ಮಾತುಗಳನ್ನಾಡುತ್ತಿದ್ದಾರೆ. ಮನುಜ ಸಂಬಂಧಗಳು ಜಾತಿ-ಮತ-ಧರ್ಮಗಳ ನೆಲೆಯಲ್ಲಿ ನಿರ್ವಚಿಸಲ್ಪಡುತ್ತಿದ್ದು ಯುವ ಸಮೂಹದ ನಡುವೆ ನಿರ್ಮಿಸಲಾಗುತ್ತಿರುವ ಬೇಲಿಗಳು ಇಡೀ ಸಮಾಜವನ್ನು ಕ್ಯಾನ್ಸರ್ ಕೋಶಗಳಂತೆ ಒಳಗಿನಿಂದಲೇ ತಿಂದುಹಾಕುತ್ತಿವೆ.
ಮಾರುಕಟ್ಟೆ ಆರ್ಥಿಕತೆ ಬಡವ ಶ್ರೀಮಂತರ ನಡುವಿನ ಅಂತರವನ್ನು ಹೆಚ್ಚಿಸುತ್ತಿದ್ದರೆ, ಮತಾಂಧತೆ ಮತ್ತು ಕೋಮುರಾಜಕಾರಣ ಮನುಷ್ಯ ಮನುಷ್ಯನ ನಡುವೆ ಅಂತರವನ್ನು ಹೆಚ್ಚಿಸುತ್ತಿದೆ. ಅಸ್ಪೃಶ್ಯತೆಯಂತಹ ಹೀನಾಚರಣೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಯುವ ಸಮೂಹದಲ್ಲಿ ಹಿಂಸಾತ್ಮಕ ಧೋರಣೆ ಹೆಚ್ಚಾಗುತ್ತಿರುವುದನ್ನು ಕರಾವಳಿಯಿಂದ ದೊಡ್ಡಬಳ್ಳಾಪುರದವರೆಗೂ ಗುರುತಿಸಬಹುದಾಗಿದೆ. ಮಹಿಳಾ ದೌರ್ಜನ್ಯವು ಆಧ್ಯಾತ್ಮಿಕ ಮಠಗಳಿಂದ ರಾಮನಗರದ ಬೀದಿಗಳವರೆಗೂ ವ್ಯಾಪಿಸಿದೆ. ಇಷ್ಟರ ನಡುವೆ ಮೂರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ಸರ್ಕಾರ, ಗ್ರಾಮೀಣ ಬಡಜನತೆಯನ್ನು ಶಿಕ್ಷಣವಂಚಿತರನ್ನಾಗಿ ಮಾಡುತ್ತಿದೆ. ಪ್ರಣಾಳಿಕೆಗಳು ಮತ್ತು ವಾರ್ಷಿಕ ಬಜೆಟ್ಗಳು ನಿರ್ಮಿಸುವ ಅಲ್ಲಾದೀನನ ಅದ್ಭುತ ಲೋಕದಿಂದ ಹೊರಬಂದು, ಕನ್ನಡಿಗರು ತಮ್ಮ ಕನಸಿನ ಸುಂದರ ತೋಟವನ್ನು ನಿರ್ಮಿಸಿಕೊಳ್ಳುವ ನಿಟ್ಟಿನಲ್ಲಿ, ವಿಶ್ವಮಾನವ ಪಥದಲ್ಲಿ ಮುನ್ನಡೆಯುವುದೇ ಸಮಸ್ತ ಕನ್ನಡಿಗರ ಆದ್ಯತೆಯಾಗುವುದು ಸಹಜವೇ ಅಲ್ಲವೇ ?
-೦-೦-೦-೦-