
ಬೆಂಗಳೂರು: ಉಚಿತ ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೂ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 15 ಕ್ಷೇತ್ರ ಗೆಲ್ಲಲು ಯಾಕೆ ಆಗಲಿಲ್ಲ ಎಂದು ರಾಜ್ಯದ ‘ಕೈ’ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವೇಣುಗೋಪಾಲ್ ಹಾಗೂ ಸುರ್ಜೆವಾಲ ಅವರು ಸಿಎಂ ನಿವಾಸ ಕಾವೇರಿಯಲ್ಲಿ ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ ಈ ಎಲ್ಲಾ ಬೆಳವಣಿಗೆಗಳು ನಡೆದಿವೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ಸಚಿವರು ಸರಿಯಾಗಿ ಶ್ರಮ ಹಾಕದ ಕಾರಣ ಕಡಿಮೆ ಕ್ಷೇತ್ರಗಳಲ್ಲಿ ಗೆಲ್ಲುವಂತಾಯ್ತು.ನಿಮ್ಮ ವರ್ಕೌಟ್ ನಮಗೆ ತೃಪ್ತಿ ನೀಡಿಲ್ಲ ಎಂದು ಹೈಕಮಾಂಡ್ ನಾಯಕರು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.ಮುಂದಿನ ದಿನಗಳಲ್ಲಿ ಜವಾಬ್ದಾರಿಯಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಿ.ಇನ್ನೆರಡು ತಿಂಗಳಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ನಾವು ವಿಶ್ಲೇಷಣೆ ಮಾಡುತ್ತೇವೆ.
ಆಗ ಯಾರು ನಿಮ್ಮ ಸಚಿವ ಸ್ಥಾನಗಳನ್ನು ಉಳಿಸಿಕೊಳ್ಳುತ್ತೀರಿ ಎಂಬುವುದು ನಿಮ್ಮ ಕಾರ್ಯ ವೈಖರಿ ಮೇಲೆ ನಿಂತಿರುತ್ತೆ ಎಂದು ಹೇಳುವ ಮೂಲಕ ಸಚಿವರ ಹುದ್ದೆಗಳ ಬುಡವನ್ನು ಹೈಕಮಾಂಡ್ ನಾಯಕರು ಶೇಕ್ ಮಾಡಿದ್ದಾರಂತೆ.ಇದಲ್ಲದೇ, ವಿಪಕ್ಷಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ರೂಪಿಸಿ. ಬಿಜೆಪಿ-ಜೆಡಿಎಸ್ ನಾಯಕರ ಹಗರಣಗಳನ್ನು ಹೊರಗೆ ತನ್ನಿ. ಸಿಎಂ ಬೆನ್ನಿಗೆ ನಿಂತುಕೊಳ್ಳಿ ಎಂದು ಹೈಕಮಾಂಡ್ ನಾಯಕರು ಸಭೆಯಲ್ಲಿ ಸಚಿವರಿಗೆ ಸಲಹೆ ನೀಡಿದ್ದಾರೆಂದು ಹೇಳಲಾಗುತ್ತಿದೆ.