ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧವೇ ವಂಚನೆ ಪ್ರಕರಣ ದಾಖಲಾಗಿದೆ. ಇವತ್ತು ಚಾಮರಾಜನಗರ JMFC ಕೋರ್ಟ್ಗೆ ಸ್ನೇಹಮಯಿ ಕೃಷ್ಣ ಹಾಜರಾಗಿದ್ದರು. ಚಾಮರಾಜನಗರದ ಕರುಣಾಕರ್ ಎಂಬುವರು ಸ್ನೇಹಮಯಿ ಕೃಷ್ಣ ವಿರುದ್ದ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ 2018 ರಲ್ಲಿ 1 ಲಕ್ಷ, 2019 ರಲ್ಲಿ 1 ಲಕ್ಷ ಹಾಗು 2020 ರಲ್ಲಿ 1 ಲಕ್ಷ ಹಣ ಪಡೆದುಕೊಂಡಿದ್ದರು. ಅದಕ್ಕಾಗಿ ಪ್ರಾಮಿಸರಿ ನೋಟ್ ಬರೆದು ಕೊಟ್ಟಿದ್ದರು. ಆದರೆ ಹಣ ಕೊಡದೆ ವಂಚನೆ ಮಾಡಿದ್ದಾರೆ. ಹಾಗಾಗಿ ಕೇಸ್ ದಾಖಲಿಸಿದ್ದೇನೆ. ಮೂರು ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ. ಇಂದು ಸಹ ವಿಚಾರಣೆ ನಡೆದಿದೆ ಎಂದಿದ್ದಾರೆ ದೂರುದಾರ ಕರುಣಾಕರ್.
ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕರುಣಾಕರ್ ವಾಗ್ದಾಳಿ ನಡೆಸಿದ್ದು, ಸಾಲದ ರೂಪದಲ್ಲಿ ಸ್ನೇಹಮಯಿ ಕೃಷ್ಣ ಹಣ ಪಡೆಯುತ್ತಾನೆ. ಕೆಲ ದಿನಗಳ ಬಳಿಕ ಬಡ್ಡಿ ಸಮೇತ ಹಣ ವಾಪಸ್ಸು ಕೊಟ್ಟು ನಂಬಿಕೆ ಗಳಿಸುತ್ತಾನೆ. ನಂತರ ಮತ್ತೇ ಹಣ ಪಡೆಯುತ್ತಾನೆ . ಇದೇ ರೀತಿ ನನ್ನ ಬಳಿ ಮೂರು ಲಕ್ಷ ಪಡೆದಿದ್ದಾನೆ. ದುಡ್ಡು ಕೊಡಲೂ ಸಾಧ್ಯವಿಲ್ಲದಿದ್ದಾಗ ರಿವರ್ಸ್ ಆಗ್ತಾನೆ ಎಂದು ದೂರಿದ್ದಾರೆ.
ಹೆಂಡ್ತಿಗೆ ಹುಷಾರಿಲ್ಲ, ಮಗನಿಗೆ ಸ್ಕೂಲ್ ಫೀಸ್ ಬೇಕು ಅಂತಾ ಸಾಲ ಪಡೆದಿದ್ದ. ಯಾರ ಬಳಿಯೂ ಚೆಕ್ ಅಥವಾ ಆರ್ಟಿಜಿಎಸ್ ಮೂಲಕ ಹಣ ಪಡೆಯಲ್ಲ. ಎಲ್ಲ ಹಣವನ್ನು ನಗದು ಮೂಲಕವೇ ಪಡೆದುಕೊಂಡಿದ್ದಾನೆ. ಆ ಬಳಿಕ ಹಣ ವಾಪಸ್ ಕೇಳಿದಾಗ ಲೈಸೆನ್ಸ್ ಇಲ್ಲದೆ ಫೈನಾನ್ಸ್ ಮಾಡ್ತಿದ್ದಾರೆಂದು ನಮ್ಮ ವಿರುದ್ದವೇ ದೂರು ಕೊಡುತ್ತಾನೆ. ಈ ಹಿಂದೆ 2013 ರಲ್ಲಿ ನನ್ನ ವಿರುದ್ಧ ಚಿಟಿಂಗ್ ಕೇಸ್ ಆಗಿತ್ತು. ಆ ವೇಳೆ ನನ್ನನ್ನು ಬಿಡಿಸಿದ್ದನು.ಆ ಬಳಿಕ ನಮ್ಮಿಬ್ಬರ ನಡುವೆ ಸ್ನೇಹ ಬೆಳೆಯಿತು ಎಂದಿದ್ದಾರೆ.