ಬೆಂಗಳೂರು : ಹರಿಯಾಣದ ರಾಜ್ಯಸಭಾ ಚುನಾವಣೆಯಲ್ಲಿ ದಲಿತ ಧ್ವನಿಯನ್ನು ಮಣಿಸಲು ನಡೆದ ಬಿಜೆಪಿಯ ನೀಚತನದ ಪ್ರಹಸನಕ್ಕೆ ಕಾಂಗ್ರೆಸ್ ಪಕ್ಷ ತಕ್ಕ ಪಾಠ ಕಲಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಕರ್ಮವೀರ ಸಿಂಗ್ ಬೌದ್ಧ ಅವರ ಗೆಲುವಿನ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಹರಿಯಾಣದ ಜನತೆ ಎತ್ತಿ ಹಿಡಿದಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಶ್ಲಾಘಿಸಿದ್ದಾರೆ.

ಶಾಸಕರನ್ನು ಖರೀದಿಸುವುದು, ಹೆದರಿಸುವುದು-ಬೆದರಿಸುವುದು, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು, ಚುನಾವಣಾ ಆಯೋಗವನ್ನೇ ನಿಷ್ಕ್ರೀಯಗೊಳಿಸಿ ಸಂವಿಧಾನದ ಮೌಲ್ಯವನ್ನೇ ಬುಡಮೇಲು ಮಾಡಿ ಗೆಲ್ಲುವ ಪ್ರಧಾನಿ ನರೇಂದ್ರ ಮೋದಿ , ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಪಕ್ಷದ ಸಿದ್ದಮಾದರಿಯ ಚುನಾವಣಾ ಕುತಂತ್ರಗಾರಿಕೆಯನ್ನು ಹರಿಯಾಣದ ಜನತೆ ಮಣ್ಣು ಮುಕ್ಕಿಸಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲಿನ ಮುನ್ಸೂಚನೆಯಿಂದ ಮೋ-ಶಾ ಜೋಡಿಗೆ ಸೋಲಿನ ಭೀತಿಯಿಂದಾಗಿ ಗುಜರಾತಿನ ಉಪಮುಖ್ಯಮಂತ್ರಿಯನ್ನೇ ಹರಿಯಾಣ ರಾಜ್ಯಕ್ಕೆ ಕಳಿಸಲಾಗಿತ್ತು. ಅಧಿಕಾರದ ದರ್ಪ, ಹಣಬಲ ಮತ್ತು ನೀಚ ರಾಜಕೀಯದಿಂದ ಒಬ್ಬ ದಲಿತ ಸಮುದಾಯದ ಹೋರಾಟಗಾರನನ್ನು ಸೋಲಿಸಲು ನಡೆದ ಸಂಚನ್ನು ಹರಿಯಾಣದ ಕಾಂಗ್ರೆಸ್ ಶಾಸಕರು ಬಯಲು ಮಾಡಿದ್ದಾರೆ ಎಂದು ಕುಟುಕಿದ್ದಾರೆ.
ರಾಜಕೀಯ ಒತ್ತಡಗಳು, ಆಮಿಷಗಳು ಮತ್ತು ಕುತಂತ್ರಗಳ ನಡುವೆಯೂ ಕಾಂಗ್ರೆಸ್ ಶಾಸಕರು ತೋರಿದ ಏಕತೆ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ಅವರ ಬದ್ಧತೆಯನ್ನು ದೃಢಪಡಿಸಿದೆ. ಹಣಬಲದ ಮುಂದೆ ಮಣಿಯದೆ ನಿಲ್ಲುವ ರಾಜಕೀಯ ಮನೋಬಲವೇ ಜನತಂತ್ರದ ನಿಜವಾದ ಶಕ್ತಿ ಎಂಬುದನ್ನು ಕಾಂಗ್ರೆಸ್ ಶಾಸಕರು ಸಾಬೀತುಪಡಿಸಿದ್ದಾರೆ ಎಂದು ಕೈ ಶಾಸಕರ ಗುಣಗಾನ ಮಾಡಿದ್ದಾರೆ.
ಇದನ್ನೂ ಓದಿ : ‘ಬಾಸ್’ ಸಿನಿಮಾ ವಿವಾದ: ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ ದರ್ಶನ್ ಪರ ವಕೀಲರು
ಈ ಎಲ್ಲಾ ಬೆಳವಣಿಗೆಗಳ ನಡುವೆ ಚುನಾವಣಾ ಆಯೋಗದ ನಿಷ್ಕ್ರೀಯತೆ ಅತ್ಯಂತ ಆತಂಕಕಾರಿ. ಸಂವಿಧಾನದ ಮೌಲ್ಯವನ್ನು ಕಾಪಾಡಬೇಕಾದ ಸಂಸ್ಥೆಯೇ ಕಣ್ಣೆದುರೇ ನಡೆಯುತ್ತಿದ್ದ ರಾಜಕೀಯ ಅಕ್ರಮಗಳತ್ತ ನಿರ್ಲಕ್ಷ್ಯ ತೋರಿರುವುದು ಹಾಗೂ ದೃಢ ಕ್ರಮಗಳನ್ನು ಕೈಗೊಳ್ಳದಿರುವುದು ಜನತಾಂತ್ರಿಕ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ದುರ್ಬಲಗೊಳಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯ ಪವಿತ್ರತೆಯನ್ನು ಕಾಪಾಡಬೇಕಾದ ಸಂಸ್ಥೆ ತಟಸ್ಥತೆಯನ್ನು ಕಳೆದುಕೊಂಡಂತೆ ಕಾಣುತ್ತಿರುವುದು ದೇಶದ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಸೂಚನೆ ಎಂದು ಹರಿಪ್ರಸಾದ್ ಎಚ್ಚರಿಸಿದ್ದಾರೆ.
ಪ್ರಜಾಪ್ರಭುತ್ವವನ್ನು ಹರಾಜಿಗೆ ಇಡುವ ರಾಜಕೀಯ ಯಾವತ್ತೂ ಶಾಶ್ವತವಾಗುವುದಿಲ್ಲ. ಅಂತಿಮವಾಗಿ ಗೆಲ್ಲುವುದು ಜನತಂತ್ರದ ಮೌಲ್ಯಗಳೇ ಎಂಬುದು ಭಾರತದ ರಾಜಕೀಯ ಇತಿಹಾಸ ಹಲವು ಬಾರಿ ಸಾಬೀತುಪಡಿಸಿದೆ ಎನ್ನುವ ಮೂಲಕ ಕರ್ಮವೀರ ಸಿಂಗ್ ಬೌದ್ಧ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಅವರ ಗೆಲುವಿಗೆ ಶ್ರಮಿಸಿದ ಹರಿಯಾಣ ಮಾಜಿ ಮುಖ್ಯಮಂತ್ರಿ, ಸಿಎಲ್ ಪಿ ನಾಯಕರಾದ ಭೂಪೇಂದ್ರ ಸಿಂಗ್ ಹೂಡಾ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾವ್ ನರೇಂದರ್ ಸಿಂಗ್ , ಕಾಂಗ್ರೆಸ್ ಸಂಸದರಾದ ದೀಪೇಂದ್ರ ಸಿಂಗ್ ಹೂಡಾ ಸೇರಿದಂತೆ ಶಾಸಕರುಗಳು ಹಾಗೂ ಹರಿಯಾಣದ ಜನತೆಗೆ ಆಭಾರಿಯಾಗಿದ್ದೇನೆ ಎಂದು ಬಿ.ಕೆ. ಹರಿಪ್ರಸಾದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳನ್ನು ತಿಳಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.






