ಇತ್ತೀಚೆಗೆ ರಾಜ್ಯದ ಕಿರುನೀರಾವರಿ ಸಚಿವರು 1400 ಕಿರು ಅಣೆಕಟ್ಟುಗಳನ್ನು ರಾಜ್ಯದಲ್ಲಿ ನಿರ್ಮಿಸುವ ಬಗ್ಗೆ ಹೇಳಿದ್ದಾರೆ. ಆ ಯೋಜನೆ ಏಕೆ ಅಪಾಯಕಾರಿ ಎಂಬ ಕುರಿತು ಇನ್ನೊಂದಿಷ್ಟು ಪೂರಕ ಸಂಗತಿಗಳನ್ನು ಇಲ್ಲಿ ಕರಾವಳಿಯಲ್ಲಿ “ಪಶ್ಚಿಮವಾಹಿನಿ” ಯೋಜನೆಯಲ್ಲಾಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ವಿವರಿಸುತ್ತೇನೆ. ಅಗತ್ಯ ಬಿದ್ದಲ್ಲಿ ಅಂಕಿಅಂಶಗಳ ಸಹಿತ ಇದನ್ನು ವಿವರಿಸಬಹುದು.
ಕರಾವಳಿಯಲ್ಲಿ “ಗುತ್ತಿಗೆದಾರರ ಪ್ರೀತಿಯ ಸ್ಕೀಮು” ಸಮುದ್ರಕೊರೆತದ ವೇಳೆ ಸಮುದ್ರಕ್ಕೆ ಕಲ್ಲು ಹಾಕುವುದು. ಹಾಕಿದ ಕಲ್ಲಿಗೆ ಲೆಕ್ಕ ಇಲ್ಲದಿರುವುದೇ ಇಲ್ಲಿ ಗುತ್ತಿಗೆದಾರರ ಅತ್ಯಂತ ಪ್ರೀತಿಯ ಸಂಗತಿ. ಹತ್ತು ವರ್ಷಗಳ ಹಿಂದೆ ಇದರ ಬೆನ್ನು ಹಿಡಿದು ಹೋಗಿ ಮಾಹಿತಿ ಹಕ್ಕಿನಡಿ ಸಾಕಷ್ಟು ಸಾಕ್ಶ್ಯಾಧಾರಗಳನ್ನು ಸಂಗ್ರಹಿಸಿದ್ದೆ. ಆದರೆ ಆಗ ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ “ಡಿಸೈನರ್” ಸಂಪಾದಕರಿಗೆ ಅದು ಬೇಡವಾಗಿತ್ತು. ಹಾಗಾಗಿ ಅದು ವರದಿಯಾಗಿ ಹೊರಬರಲಿಲ್ಲ. ಹೋಗ್ಲಿಬಿಡಿ.
ಈಗ ಪಶ್ಚಿಮವಾಹಿನಿಯ ಬಗ್ಗೆ ಹೇಳ್ತೇನೆ. ಈ ಯೋಜನೆಯಲ್ಲೊಂದು ಹಣ ಹೊಡೆಯುವ ಪ್ಯಾಟರ್ನ್ ಇದೆ.
ಇವೆಲ್ಲ ಗುತ್ತಿಗೆ ಕಾರ್ಟೆಲ್ ಮೂಲಕ ನಡೆಯುವ ಯೋಜನೆಗಳಾಗಿರುವುದರಿಂದ ಆ ಕಾರ್ಟೆಲ್ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಇದು ಪಾರದರ್ಶಕವಾಗಿಯೇ ನಡೆಯುತ್ತದೆ!
ಒಂದು ಯೋಜನೆಗೆ ಇಲಾಖೆ ತಾಂತ್ರಿಕ ಮಂಜೂರಾತಿ ಕೊಡುತ್ತದೆ.
ಆ ಯೋಜನೆಗೆ ಗುತ್ತಿಗೆದಾರರ ಕಾರ್ಟೆಲ್ ಒಳಗಿನವರೇ ಟೆಂಡರಿಗೆ ನಿಂತು, ತಾಂತ್ರಿಕವಾಗಿ ಮಂಜೂರಾದ ಮೊತ್ತಕ್ಕಿಂತ ಹೆಚ್ಚೇ ದರಕ್ಕೆ ಟೆಂಡರ್ ಆಗಿ ಪ್ರಕ್ರಿಯೆ ಮುಗಿದು ಗುತ್ತಿಗೆದಾರರಿಗೆ ಕೆಲಸ ಸಿಗುತ್ತದೆ. ಈ ಟೆಂಡರು ಕೂಡ ಒಂದೊಂದೇ ಕಾಮಗಾರಿ ಅಲ್ಲ; ಬದಲಾಗಿ ಐದಾರು ಕಾಮಗಾರಿಗಳ ಒಟ್ಟು ಪ್ಯಾಕೇಜು!
ಕೆಲಸ ಆದ ಬಳಿಕ, ಅದರ ಪರಿಶೀಲನೆ ಸುಸೂತ್ರ ನಡೆಯುವುದಿಲ್ಲ. ಏಕೆಂದರೆ ಪರಿಶೀಲಿಸುವ ಅಧಿಕಾರಿಗೆ ನೀರಿನಡಿ ಏನು ನಡೆದಿದೆ ಎಂಬುದು ಕಾಣಿಸುವುದಿಲ್ಲ! ಅಣೆಕಟ್ಟು ನೀರಿನಡಿ ನೆಲಮಟ್ಟದಿಂದ ಇಂತಿಷ್ಟು ಆಳದಿಂದ ಆರಂಭ ಆಗಬೇಕೆಂದಿದ್ದರೆ ಅದರ ಕಾಲಂಶ ಆಳದಿಂದಲೂ ಆರಂಭ ಆಗಿರುವುದಿಲ್ಲ. ಇದನ್ನು ಪರಿಶೀಲಿಸುವುದೂ ಇಲ್ಲ. ಈ ಯೋಜನೆಯ ಅತ್ಯಂತ ಲಾಭದಾಯಕ ಭಾಗ ಇದು. ಆಮೇಲೆ ಕಾಮಗಾರಿ ಎಷ್ಟು ಕಳಪೆ ಎಂಬ ಬಗ್ಗೆ ನಾನು ಹೇಳಬೇಕೆಂದಿಲ್ಲ.
ಕೆಲಸ ಮುಗಿದ ಮೇಲೆ ನಮಗೆ ನೀರಿನಡಿ ಕೆಲಸ ಮಾಡುವುದು ಅಷ್ಟು ಕಷ್ಟವಾಯಿತು-ಇಷ್ಟು ತೊಂದರೆಯಾಯಿತು ಎಂದು ಹೇಳಿ ಹೆಚ್ಚುವರಿ ಆರ್ಥಿಕ ವೆಚ್ಚದ ಲೆಕ್ಕ (ಇದನ್ನು ತಾಂತ್ರಿಕ ಭಾಷೆಯಲ್ಲಿ Extra Financial Implications -EFI ಅನ್ನುತ್ತಾರೆ!) ತೋರಿಸಿ ಇಲಾಖೆಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಲು ಕೋರಲಾಗುತ್ತದೆ. ಇಲಾಖೆಯಂತೂ ಅದಕ್ಕೆ ತಯಾರಾಗಿ ಕುಳಿತಿದ್ದು, ತಕ್ಷಣ ಮಂಜೂರಾತಿ ಮಾಡುತ್ತದೆ!
ಇಲ್ಲಿಗೆ ಯೋಜನೆ ಅಂದಾಜು ವೆಚ್ಚದ ಮೂರು-ನಾಲ್ಕು ಪಾಲು ಹೆಚ್ಚು ಹಣ ಸರ್ಕಾರದ ಬೊಕ್ಕಸದಿಂದ ಗುತ್ತಿಗೆದಾರರಿಗೆ ತಲುಪಿ, ಅಲ್ಲಿಂದ ಎಲ್ಲೆಲ್ಲಿಗೆ ತಲುಪಬೇಕೋ ಅಲ್ಲಿಗೆಲ್ಲ ತಲುಪುವುದು ಸಂಪ್ರದಾಯ ಎಂದು ಈ ಬಗ್ಗೆ ಗೊತ್ತಿರುವವರ ಮಾಹಿತಿ!
ನಮ್ಮದೇ ಜಿಲ್ಲೆಯಲ್ಲಿ ಆಗಿರುವ (2017-18) ಒಂದು ಕಾಮಗಾರಿ (ಊರು,ಹೆಸರು ಇತ್ಯಾದಿ ಮಾಹಿತಿ ಬೇಡ)ಯ ಹಣಕಾಸಿನ ಲೆಕ್ಕ ನೋಡಿ. ಇದು ಒಂದು ಕಿಂಡಿ ಅಣೆಕಟ್ಟು. ಇದರ ಮಂಜೂರಾದ ಮೊತ್ತ: 5 ಕೋಟಿ. ಇದು ಟೆಂಡರ್ ಆದಾಗ ಬಿಡ್ಡುದಾರರಿಗೆ ಮಂಜೂರಾದ ಮೊತ್ತ ಅಂದಾಜು: 6.50 ಕೋಟಿ. ಇದಾದ ಬಳಿಕ EFI ಅಡಿ ಇಲಾಖೆ ಮಂಜೂರು ಮಾಡಿದ ಹೆಚ್ಚುವರಿ ಮೊತ್ತ: 90ಲಕ್ಷ. ಅಂದರೆ ಇಲಾಖೆಯ ಲೆಕ್ಕಾಚಾರಗಳ ಪ್ರಕಾರ ಐದು ಕೋಟಿ ಖರ್ಚು ಬರಬೇಕಾದ ಯೋಜನೆ ಅನುಷ್ಠಾನ ಆಗುವಾಗ ಸರ್ಕಾರದ ಬೊಕ್ಕಸಕ್ಕೆ ಬಿದ್ದ ಒಟ್ಟು ಖರ್ಚು 7.40ಕೋಟಿ! ಅಂದರೆ ಸರ್ಕಾರಿ ಅಂದಾಜಿಗಿಂತ 2.4 ಕೋಟಿ ರೂ. ಹೆಚ್ಚು!!
ಈ EFI ಎಲ್ಲೋ ಒಂದೆರಡು ಯೋಜನೆಯಲ್ಲಿ ಆಗಿದ್ದರೆ, ಹೌದಪ್ಪ ಇರಬಹುದು ಎಂದು ನಂಬಬಹುದು. ಆದರೆ ನಡೆದ ಪ್ರತಿಯೊಂದೂ ಯೋಜನೆಯಲ್ಲಿ ಇದೊಂದು ಪ್ಯಾಟರ್ನ್ ಆಗಿ ಹಣ ಮಂಜೂರು ಆಗುತ್ತಿದ್ದರೆ ಇದನ್ನು ಏನೆಂದು ಕರೆಯಬೇಕು?
ಈಗ ಲೆಕ್ಕಾಚಾರ ಮಾಡಿ. ರಾಜ್ಯದಲ್ಲಿ 1400 ಕಿಂಡಿ ಅಣೆಕಟ್ಟುಗಳು ನಿರ್ಮಾಣ ಆದರೆ, ಒಟ್ಟು ನಡೆಯಬಹುದಾದ ಬೊಕ್ಕಸ ಲೂಟಿ ಎಷ್ಟು?!! ಕರಾವಳಿಯಲ್ಲಿ ಇದೇ ಮಾದರಿಯಲ್ಲಿ ಈಗಾಗಲೇ ನೂರಾರು ಕಾಮಗಾರಿಗಳು ನಡೆದಿವೆ!!
ಅತ್ತ ಪರಿಸರವೂ ನಾಶವಾಗುವ ಇತ್ತ ಸರ್ಕಾರಿ ಬೊಕ್ಕಸವೂ ಲೂಟಿ ಆಗುವ ಈ ಯೋಜನೆಗಳು ಜನದ್ರೋಹಿ ಯೋಜನೆಗಳೆಂಬುದಕ್ಕೆ ಸ್ವಲ್ಪವೂ ಸಂಶಯ ಬೇಡ. ಅದಲ್ಲ ಎಂದಾದರೆ, ಕರಾವಳಿಯಲ್ಲಿ ಈಗಾಗಲೇ ಆಗಿರುವ ಎಲ್ಲ ಕಾಮಗಾರಿಗಳ ಗುಣಮಟ್ಟ ತಪಾಸಣೆಗೆ ಆದೇಶ ಆಗಲಿ.