ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆಯಲ್ಲೇ ಗೆಲುವಿನ ನಗೆ ಬೀರುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಮತ್ತೆ ಮುಂದಿನ ಸಿಎಂ ಜಪ ಆರಂಭವಾಗಿದೆ. ಪರೋಕ್ಷವಾಗಿ ಸಿಎಂ ಗಾದಿ ಮೇಲೆ ಆಸೆ ಇದೆ ಎಂದು ಸಂದೇಶ ರವಾನಿಸುವ ಮೂಲಕ ಮುಖ್ಯಮಂತ್ರಿ ವಿಚಾರದ ಶೀತಲ ಸಮರಕ್ಕೆ ತುಪ್ಪ ಸುರಿದಿದ್ದಾರೆ ಸಿದ್ದರಾಮಯ್ಯ.
ಸಿದ್ದರಾಮಯ್ಯ ಆಸೆಯ ಸಂದೇಶ ನೀಡಿದ ಬೆನ್ನಲ್ಲೇ ವಿರೋಧಿ ಬಣಗಳು ಫುಲ್ ಅಲರ್ಟ್ ಆಗಿವೆ. ಹೌದು, ಕಾಂಗ್ರೆಸ್ನಲ್ಲಿ ಮತ್ತೆ ಮುಂದಿನ ಸಿಎಂ ಜಪ ಆರಂಭವಾಗಿದೆ. ಸಿಎಂ ಗಾದಿ ಮೇಲೆ ಆಸೆ ಇದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಸಂದೇಶ ಹೊರಡಿಸಿದ್ದಾರೆ.
ಸಿದ್ದು ಸಿಎಂ ಸ್ಟೋರಿಗೆ ವಿರೋಧಿ ಬಣಗಳು ಎಚ್ಚೆತ್ತುಕೊಂಡಿದ್ದಾರೆ. ಹೇಗಾದರೂ ಸಿದ್ದರಾಮಯ್ಯರನ್ನು ಮುಂದಿನ ಸಿಎಂ ಮಾಡಬಾರದು ಎಂದು ರಣತಂತ್ರ ಹೆಣೆಯುತ್ತಿದ್ದಾರೆ. ಸಾಕಷ್ಟೂ ಸಂಚಲನ ಸೃಷ್ಟಿಸಿದ್ದ ಕಾಂಗ್ರೆಸ್ನ ಮುಂದಿನ ಸಿಎಂ ವಿಚಾರಕ್ಕೆ ಖುದ್ದು ಹೈಕಮಾಂಡ್ ತೆರೆ ಎಳೆದಿತ್ತು. ಈ ವಿಚಾರ ಚರ್ಚೆ ಮಾಡದಂತೆ ರಾಜ್ಯ ನಾಯಕರಿಗೆ ಖಡಕ್ ಸಂದೇಶ ರವಾನಿಸಿತ್ತು. ಆಗ ಕೊಂಚ ಸೈಲೆಂಟ್ ಆಗಿದ್ದ ಮುಂದಿನ ಸಿಎಂ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಸಿಎಂ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಚರ್ಚೆ ಶುರುವಾಗಿದೆ. ನನಗೆ ಇನ್ನೂ ಸಿಎಂ ಆಗುವ ಆಸೆ ಇದೆ ಎಂದು ಹೇಳಿದ ಸಿದ್ದರಾಮಯ್ಯ ಹೇಳಿಕೆ ಈಗ ಕೈ ಒಳಗಿನ ಸಿಎಂ ವಿಚಾರದ ಶೀತಲ ಸಮರಕ್ಕೆ ತುಪ್ಪ ಸುರಿದಂತಾಗಿದೆ.
ನಿಲ್ಲದ ಸಿದ್ದರಾಮಯ್ಯ ‘ಸಿಎಂ ಕಹಾನಿ’
ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಗಾದಿಗೇರುವ ರೇಸ್ ನಿಲ್ಲುವಂತೆ ಕಾಣ್ತಿಲ್ಲ. ಮತ್ತೆ ದಾಳ ಉರುಳಿಸಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನದ ಮೇಲಿನ ಆಸೆ ಜೀವಂತವಾಗಿಸಿದ್ದಾರೆ. ಹಾನಗಲ್ನಲ್ಲಿ ಗೆಲ್ಲುತ್ತಿದ್ದಂತೆ ಮತ್ತೆ ಸಿಎಂ ಕುರ್ಚಿ ಮೇಲೆ ಸಿದ್ದು ಕಣ್ಣುಹಾಕಿದ್ದು, ಪರೋಕ್ಷವಾಗಿ ಸಿಎಂ ಗಾದಿಯ ಮೇಲಿನ ಕನಸಿನ ಸಂದೇಶ ರವಾನಿಸಿದ್ದಾರೆ. ಇತ್ತ ಹೀಗೆ ಸಿದ್ದು ಸಿಎಂ ಕಹಾನಿ ಮುನ್ನೆಲೆಗೆ ಬರುತ್ತಿದ್ದಂತೆಯೇ ವಿರೋಧಿ ಬಣಗಳು ಫುಲ್ ಅಲರ್ಟ್ ಆಗಿವೆ. ತಂತ್ರ ರಣತಂತ್ರಕ್ಕೂ ಇದು ಸಾಕ್ಷಿಯಾಗ್ತಿದೆ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಸಿಎಂ ಸ್ಟೋರಿ ಮತ್ತೆ ಕಿಚ್ಚು ಹಚ್ಚಿದೆ.
ಶೀತಲ ಸಮರಕ್ಕೆ ಪೆಟ್ರೋಲ್ ಸುರಿದ ಸಿದ್ದು ನಡೆಯಿಂದ ಬಣಗಳು ಕಂಗಾಲಾಗಿವೆ. ಡಿಕೆಶಿ, ಖರ್ಗೆ, ಪರಮೇಶ್ವರ್, ಸಿದ್ದು ಬಣಗಳ ನಡುವೆ ಪೈಪೋಟಿ ಶುರುವಾಗಿದೆ. ಅದಕ್ಕೆ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ, 10 ಕೆಜಿ ಅಕ್ಕಿ ಕೊಡುತ್ತೇವೆ, ನಾನು ಸಿಎಂ ಆಸೆ ಬಿಟ್ಟಿದ್ದೇನಾ? ಅದನ್ನ ವರಿಷ್ಠರು ತೀರ್ಮಾನಿಸ್ತಾರೆ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆ ಈಗ ಇದಕ್ಕೆ ಸಾಕ್ಷಿಯಾಗಿದೆ.
ಹೈಕಮಾಂಡ್ ಸೂಚನೆ ನಡುವೆಯೂ ಮುಂದಿನ ಸಿಎಂ ವಿಚಾರ ರಾಜ್ಯ ಕಾಂಗ್ರೆಸ್ ಮನೆಯಲ್ಲಿ ಪದೇ ಪದೇ ಪ್ರತಿಧ್ವನಿಸಿ ಕಿಚ್ಚು ಹಚ್ಚುತ್ತಿದೆ. ಭವಿಷ್ಯದ ಮುಖ್ಯಮಂತ್ರಿ ವಿಚಾರದಲ್ಲಿ ಮನೆಯೊಂದು ನಾಲ್ಕು ಬಾಗಿಲಾಗಿರುವ ಕೈ ಮನೆಯಲ್ಲಿ ಸಿದ್ದು ಸಂದೇಶ ಸಾಕಷ್ಟೂ ಸಂಚಲ ಸೃಷ್ಟಿಸಿದೆ.
ಈ ಹಿಂದೆ ಮುಖ್ಯಮಂತ್ರಿ ಹುದ್ದೆ ಕುರಿತ ಸಂಘರ್ಷಕ್ಕೆ ಅಂತ್ಯ ಹಾಡಬೇಕು. ಪಕ್ಷದ ಸಂಘಟನೆಗೆ ಒತ್ತು ಕೊಡುವುದರ ಜತೆಗೆ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಪ್ರಬಲ ಹೋರಾಟ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ತಾಕೀತು ಮಾಡಿತ್ತು. ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದ ಜಮೀರ್ ಅಹಮದ್ ಖಾನ್ ಮತ್ತು ರಾಘವೇಂದ್ರ ಹಿಟ್ನಾಳ್ ಮತ್ತಿತರಿಗೆ ಪರೋಕ್ಷ ಎಚ್ಚರಿಕೆ ನೀಡಿತ್ತು.
ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಆಗಬೇಕೆಂದು ಶಾಸಕರಾದ ಜಮೀರ್ ಅಹ್ಮದ್ ಖಾನ್, ರಾಘವೇಂದ್ರ ಹಿಟ್ನಾಳ್ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಆಪ್ತ ವಲಯದ ಇನ್ನೂ ಕೆಲವರು ಇದಕ್ಕೆ ದನಿಗೂಡಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಮಧ್ಯ ಪ್ರವೇಶಿಸಿದೆ.
ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಪ್ರಥಮ ಆದ್ಯತೆಯಾಗಿದೆ, ಸಾಮೂಹಿಕ ನಾಯಕತ್ವದಲ್ಲಿ ನಾನು ನಂಬಿಕೆಯಿಟ್ಟಿದ್ದೇನೆ, ಮುಂದಿನ ಸಿಎಂ ಯಾರೂ ಎಂಬ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ, ನಮಗೆ ಪಕ್ಷದ ಶಿಸ್ತು ಪ್ರಾಥಮಿಕವಾಗಿದೆ, ಇದನ್ನು ಎಲ್ಲಾ ನಾಯಕರು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರೋಕ್ಷವಾಗಿ ಸಿದ್ದರಾಮಯ್ಯ ಬಣದ ವಿರುದ್ಧ ಕೆಂಡಕಾರಿದ್ದರು.