ಈಯ ಬಾರಿ ರಾಷ್ಟ್ರಪತಿ ಚುನಾವಣೆ ಅಷ್ಟೇನೂ ಕುತೂಹಲ ಮೂಡಿಸಿಲ್ಲ. ಏಕೆಂದರೆ ಫಲಿತಾಂಶ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಈಗ ಇದೇ ಪರಿಸ್ಥಿತಿ ಉಪ ರಾಷ್ಟ್ರಪತಿ ಚುನಾವಣೆಯಲ್ಲೂ ಕಂಡುಬರುತ್ತಿದೆ. ಉಪ ರಾಷ್ಟ್ರಪತಿ ಸ್ಥಾನಕ್ಕೆ ಆಡಳಿತಾರೂಢ ಎನ್ ಡಿಎ ವತಿಯಿಂದ ಅಭ್ಯರ್ಥಿ ಯಾರಾಗುತ್ತಾರೆ? ಜೊತೆಗೆ ಪ್ರತಿಪಕ್ಷಗಳ ಪಾಳೆಯದಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಮಾತ್ರ ಸದ್ಯದ ಕುತೂಹಲವಾಗಿದೆ.
ಇಂತಹುದೊಂದು ಕುತೂಹಲ ಹೆಚ್ಚಾಗಲು ಇತ್ತೀಚೆಗೆ ಬಿಜೆಪಿ ಕಡೆವರೆಗೂ ಗೌಪ್ಯತೆ ಕಾಪಾಡಿಕೊಂಡು ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಕ್ರಮವೂ ಕಾರಣ. ಆದುದರಿಂದ ಈಗಲೂ ಪ್ರತಿಪಕ್ಷಗಳ ಅಭ್ಯರ್ಥಿಗಿಂತ ಎನ್ ಡಿಎ ಅಭ್ಯರ್ಥಿ ಯಾರಾಗುತ್ತಾರೆ ಎಂಬುದರ ಮೇಲೆಯೇ ಹೆಚ್ಚಿನ ಕುತೂಹಲ. ಇದಕ್ಕೆ ಎನ್ ಡಿಎ ಅಭ್ಯರ್ಥಿಯೇ ಗೆದ್ದು ಉಪ ರಾಷ್ಟ್ರಪತಿ ಆಗುವುದು ಇನ್ನೂ ಒಂದು ಕಾರಣ.
ಕಳೆದ ಬಾರಿ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿ ಮಾಡುವಾಗ ಯಾರೂ ಊಹಿಸದೇ ಇದ್ದ ರಮಾನಾಥ್ ಕೋವಿಂದ್ ಹೆಸರನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿತ್ತು. ಆದರೆ ಅಷ್ಟೇ ಗೌಪ್ಯತೆಯನ್ನು ಈ ಬಾರಿ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಕೆಲವರಾದರೂ ದ್ರೌಪದಿ ಮುರ್ಮು ರಾಷ್ಟ್ರಪತಿ ಅಭ್ಯರ್ಥಿ ಆಗಬಹುದು ಎಂಬ ಅಂದಾಜು ಮಾಡಿದ್ದರು. ಆದರೆ ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವರ್ಚಸ್ಸಿಗೆ ಧಕ್ಕೆ ಆಗಿರುವುದರಿಂದ ಮುಸ್ಲಿಂ ನಾಯಕರೊಬ್ಬರಿಗೆ ಅವಕಾಶ ನೀಡಬಹುದು ಎಂಬುದು ಹೆಚ್ಚು ಚರ್ಚೆ ಆಗಿತ್ತು. ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಹೆಸರು ಹೆಚ್ಚು ಚರ್ಚೆ ಆಗಿತ್ತು.
ಈಗ ಮತ್ತೆ ಅದೇ ಅಂಶ ಚರ್ಚೆ ಆಗುತ್ತಿದೆ. ಅದರಲ್ಲೂ ಪ್ರವಾದಿ ಮೊಹಮ್ಮದ್ ಬಗ್ಗೆ ಬಿಜೆಪಿಯ ಮಾಜಿ ವಕ್ತಾರೆ ನೂಪೂರ್ ಶರ್ಮಾ ಅವಹೇಳನಕಾರಿ ಮಾತನಾಡಿದ ಬಳಿಕ ಇಡೀ ದೇಶಕ್ಕೆ ಬೆಂಕಿ ಬಿದ್ದಿದೆ. ನೂಪೂರ್ ಶರ್ಮಾ ಹೊತ್ತಿಸಿದ ಬೆಂಕಿ ಈಗಾಗಲೇ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಅಸಹಿಷ್ಣು ದೇಶ ಎಂದು ಬಿಂಬಿತವಾಗಿದೆ. ಕೆಲ ದೇಶಗಳು ಭಾರತದ ಸರಕು-ಸರಂಜಾಮುಗಳನ್ನು ನಿಷೇಧಿಸಿವೆ. ದೇಶದೊಳಗೂ ಕೋಮು ದ್ವೇಷ ಬೂದಿ ಮುಚ್ಚಿದ ಕೆಂಡದಂತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಬಿಜೆಪಿ ಉಪ ರಾಷ್ಟ್ರಪತಿ ಸ್ಥಾನಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಮುಸ್ಲಿಂ ಸಮುದಾಯದಿಂದ ಕೇಳಿ ಬರುತ್ತಿರುವ ಹೆಸರುಗಳೆಂದರೆ ಕೇಂದ್ರದ ಮಾಜಿ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ, ನಜ್ಮಾ ಹೆಫ್ತುಲ್ಲಾ ಹಾಗೂ ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್. ಇದಲ್ಲದೆ ಎನ್ ಡಿಎ ಮಿತ್ರಪಕ್ಷವಾದ ಜೆಡಿಯುನ ಆರ್ ಸಿಪಿ ಸಿಂಗ್ ಹೆಸರು. ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾಗಿದ್ದ ಮುಖ್ತಾರ್ ಅಬ್ಬಾಸ್ ನಖ್ವಿ ಹಾಗೂ ಉಕ್ಕು ಖಾತೆ ಸಚಿವರಾಗಿದ್ದ ಜೆಡಿಯುನ ಆರ್ ಸಿಪಿ ಸಿಂಗ್ ಅವರ ರಾಜ್ಯಸಭಾ ಅವಧಿ ಇಂದಿಗೆ (ಜುಲೈ 7) ಮುಕ್ತಾಯ ಆಗುತ್ತಿತ್ತು. ಅವರು ಒಂದು ದಿನದ ಮಂಚೆಯೇ (ಜುಲೈ 6) ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಈ ಪೈಕಿ ಯಾರಾದರೊಬ್ಬರು ಉಪ ರಾಷ್ಟ್ರಪತಿ ಚುನಾವಣೆಯ ಎನ್ ಡಿಎ ಅಭ್ಯರ್ಥಿ ಆಗಬಹುದು ಎಂದು ಹೇಳಲಾಗುತ್ತಿದೆ.

ಮುಖ್ತಾರ್ ಅಬ್ಬಾಸ್ ನಖ್ವಿ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲೂ ಸಚಿವರಾಗಿದ್ದರು. ಬಿಜೆಪಿ ಪಾಲಿಗೆ ಮುಸ್ಲಿಂ ಸಮುದಾಯದ ಅತ್ಯಂತ ಹಿರಿಯ ನಾಯಕ. ಹಾಗಾಗಿ ಅವರನ್ನು ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ ಬಿಜೆಪಿ ಒಲವು-ನಿಲುವುಗಳನ್ನು ನಖ್ವಿಗಿಂತ ಬಲವಾಗಿ ಆರೀಫ್ ಮೊಹಮ್ಮದ್ ಖಾನ್ ಸಮರ್ಥಿಸುತ್ತಾರೆ. ರಾಜ್ಯಪಾಲರ ಹುದ್ದೆಯಲ್ಲಿ ಇದ್ದರೂ ಮೈಚಳಿ ಬಿಟ್ಟು ಮಾತನಾಡುತ್ತಾರೆ. ಇತ್ತೀಚೆಗೆ ಹಿಜಾಬ್ ವಿಷಯದ ಚರ್ಚೆ ತೀವ್ರವಾಗಿ ನಡೆಯುತ್ತಿದ್ದಾಗ ‘ಹಿಜಾಬ್ ಧರಿಸುವು ಕುರಾನ್ ನಲ್ಲಿ ಕಡ್ಡಾಯವಲ್ಲ’ ಎಂದು ಹೇಳಿದ್ದರು. ಹಾಗಾಗಿ ಆರೀಫ್ ಮೊಹಮ್ಮದ್ ಖಾನ್ ಹೆಸರೇ ಮುಂಚೂಣಿಯಲ್ಲಿದೆ. ಮುಖ್ತಾರ್ ಅಬ್ಬಾಸ್ ನಖ್ವಿಯನ್ನು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಬಹುದಷ್ಟೇ ಎನ್ನಲಾಗುತ್ತಿದೆ.
ನಜ್ಮಾ ಹೆಫ್ತುಲ್ಲಾ ಅವರ ಹೆಸರು ಕೂಡ ಪರಿಗಣನೆಯಲ್ಲಿದೆ. ಕೇಂದ್ರ ಸರ್ಕಾರ ತ್ರಿಬಲ್ ತಲಾಖ್ ಕುರಿತಾದ ಕಾನೂನು ತಂದ ಮೇಲೆ ಮುಸ್ಲಿಂ ಸಮುದಾಯದ ಮಹಿಳಾ ಮತದಾರರು ಬಿಜೆಪಿ ಬಗ್ಗೆ ಹೊಂದಿದ್ದ ನಿಲುವು ಸ್ವಲ್ಪ ಮಟ್ಟಿಗೆ ಬದಲಾಗಿದೆ. ಇತ್ತೀಚೆಗೆ ಮುಸ್ಲಿಂ ಬಾಹುಳ್ಯವುಳ್ಳ ಉತ್ತರ ಪ್ರದೇಶದ ರಾಂಪುರ ಹಾಗೂ ಅಜಂಘಡ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಮುಸ್ಲಿಂ ಮಹಿಳಾ ಮತದಾರರು ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ ಏಕಕಾಲಕ್ಕೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದರೆ ಹಾಗೂ ನಜ್ಮಾ ಹೆಫ್ತುಲ್ಲಾ ಅವರನ್ನು ಉಪ ರಾಷ್ಟ್ರಪತಿಯನ್ನಾಗಿ ಮಾಡಿದರೆ ಒಟ್ಟಾರೆಯಾಗಿ ಮಹಿಳಾ ಮತದಾರರನ್ನು ತನ್ನತ್ತ ಸೆಳೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ ಎಂದು ಸಹ ಹೇಳಲಾಗುತ್ತಿದೆ.
ಜಾತಿ ಸಮೀಕ್ಷೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ ಬಿಜೆಪಿ ಉಪ ರಾಷ್ಟ್ರಪತಿ ಸ್ಥಾನವನ್ನು ಮಿತ್ರಪಕ್ಷ ಜೆಡಿಯುಗೆ ಬಿಟ್ಟುಕೊಡುವುದು ಅಷ್ಟು ಸುಲಭವಲ್ಲ. ಆದರೆ 2024ರ ಲೋಕಸಭಾ ಚುನಾವಣೆ ದೃಷ್ಟಿ ಇಟ್ಟುಕೊಂಡು ಮಿತ್ರಪಕ್ಷಗಳ ಬಗ್ಗೆ ಮೃಧು ಧೋರಣೆ ಹೊಂದಲೂಬಹುದು.
ಇನ್ನು, ಪ್ರತಿಪಕ್ಷಗಳ ಪಾಳೆಯದಿಂದಲೂ ಅಭ್ಯರ್ಥಿ ಹುಡುಕಾಟ ನಡೆದಿದೆ. ಎಲ್ಲಾ ಸಮಾನ ಮನಸ್ಕ ವಿರೋಧ ಪಕ್ಷಗಳ ಜೊತೆ ಮಾತನಾಡುವಂತೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷೆ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಇಂದಿನಿಂದ ಮಾತುಕತೆ ನಡೆಸಲಿದ್ದಾರೆ. ಶೀಘ್ರವೇ ವಿರೋಧ ಪಕ್ಷಗಳ ನಾಯಕರ ಸಭೆ ಕರೆಯುವ ಸಾಧ್ಯತೆ ಇದೆ. ಆಗ ಅಂತಿಮವಾಗಬಹುದು. ಹಾಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರದ ಅವಧಿ ಆಗಸ್ಟ್ 10ಕ್ಕೆ ಮುಗಿಯಲಿದೆ. ಆಗಸ್ಟ್ 6ನೇ ತಾರೀಖು ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಜುಲೈ 19 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ.






