
ಧಾರವಾಡ, ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ (Santosh Lad)ಧಾರವಾಡ ನಗರದ ಸೈದಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ, ವಿದ್ಯಾರ್ಥಿನಿಯರ ಊಟ, ಗ್ರಂಥಾಲಯ, ಓದುವ ಕೊಠಡಿ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರೊಂದಿಗೆ ವಿದ್ಯಾರ್ಥಿನಿಯರ ವಸತಿನಿಲಯಕ್ಕೆ ಆಗಮಿಸಿದ ಸಚಿವರು, ನೇರವಾಗಿ ಅಡುಗೆ ಕೊಣೆಗೆ ಭೇಟಿ ನೀಡಿ, ಆಹಾರ ತಯಾರಿಕೆ, ಅಡುಗೆ ಪದಾರ್ಥ, ಸ್ವಚ್ಛತೆ, ನೈರ್ಮಲ್ಯ ಪರಿಶೀಲಿಸಿ, ಅಡುಗೆ ಪದಾರ್ಥಗಳ ಗುಣಮಟ್ಟ, ರುಚಿ ನೋಡಿದರು.

ನಂತರ ಮಾತನಾಡಿದ ಸಚಿವರು, ಬೇಡಿಕೆ ಅನುಸಾರ ವಸತಿನಿಲಯದ ಆಸಕ್ತ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಐಎಎಸ್, ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು. ಇದಕ್ಕಾಗಿ ನಿಲಯ ಪಾಲಕರಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಿದರು.ವಸತಿನಿಲಯದ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ. ಯಾವುದೇ ಕೊರತೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಕೌಶಲ್ಯ ಜ್ಞಾನ ಬೆಳೆಸಲು ಹೆಚ್ಚು ಒತ್ತು ನೀಡಲಾಗುತ್ತಿದ್ದು, ವಿದ್ಯಾರ್ಥಿನಿಯರು ಇಚ್ಛಿಸಿದಲ್ಲಿ ವಿಶೇಷವಾದ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡುವುದಾಗಿ ಸಚಿವರು ತಿಳಿಸಿದರು.ಈಗಾಗಲೇ ಜಿಲ್ಲೆಗೆ ಅನುಮತಿ ನೀಡಿರುವ ಹೊಸ ವಸತಿನಿಲಯಗಳನ್ನು ಶೀಘ್ರ ಆರಂಭಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ. ಜಿಲ್ಲಾ ಕಚೇರಿ ವ್ಯವಸ್ಥಾಪಕಿ ಮೀನಾಕ್ಷಿ ಚಂಚನೂರ, ವಾರ್ಡನ್ ಗೀತಾ ಇದ್ದರು.










