ಸ್ವತಂತ್ರ ಭಾರತದ ಆರಂಭದ ದಿನಗಳಲ್ಲಿ ಆಳುವ ವರ್ಗಗಳಿಗೆ ಹಾಗೂ ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಲು ಶ್ರಮಿಸಿದ ಹಲವಾರು ಚಿಂತಕರಿಗೆ ಕಾಡಿದ ಮೊದಲ ಪ್ರಶ್ನೆ ಎಂದರೆ ಜನಸಾಮಾನ್ಯರ ಅನ್ನ, ಸೂರು, ಬಟ್ಟೆ ಮತ್ತು ಇದಕ್ಕೆ ಪೂರಕವಾದ ಉತ್ತಮ ಆರೋಗ್ಯ ಹಾಗೂ ಜೀವನೋಪಾಯಕ್ಕೆ ನೆರವಾಗುವ ಉದ್ಯೋಗ. ಪ್ರಜಾಪ್ರಭುತ್ವವಾಗಲೀ, ಸರ್ವಾಧಿಕಾರವಾಗಲೀ ಈ ಆದ್ಯತೆಗಳು ಸಾಮಾನ್ಯವಾಗಿ ಮೊದಲ ಸ್ಥಾನ ಪಡೆದಿರುತ್ತವೆ. ಪ್ರಜಾಪ್ರಭುತ್ವದ ಸೌಂದರ್ಯ ಎಂದರೆ ಈ ಜೀವನಾವಶ್ಯ ಆದ್ಯತೆಗಳಿಗೆ ಅಗತ್ಯವಾದ ಆಡಳಿತಾತ್ಮಕ ಉಪಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವ ಒಂದು ಆದರ್ಶ ಇರುತ್ತದೆ. ಈ ಆದರ್ಶವನ್ನು ಭಾರತದ ಸಂವಿಧಾನದಲ್ಲಿ ಕಾಣಬಹುದು. ಶಾಸನಾತ್ಮಕವಾಗಿ ಆಹಾರ, ಶಿಕ್ಷಣ ಇತ್ಯಾದಿ ಹಕ್ಕುಗಳು ಜಾರಿಯಾದದ್ದು 21ನೆಯ ಶತಮಾನದಲ್ಲೇ ಆದರೂ, ಸಂವಿಧಾನದಲ್ಲಿ ಇದಕ್ಕೆ ಪೂರಕವಾದ ನಿಬಂಧನೆಗಳು ಆದಿಯಿಂದಲೂ ಇತ್ತು ಎನ್ನುವುದು ವಿಶೇಷ.

ಇನ್ನೂ ವಿಶೇಷ ಎಂದರೆ, ಸಾಂವಿಧಾನಿಕವಾಗಿ ಎಲ್ಲ ಜನರಿಗೆ ಅನ್ನ ನೀರು ಆಹಾರ ಶಿಕ್ಷಣ ಮತ್ತು ಉದ್ಯೋಗವನ್ನು ಕಲ್ಪಿಸುವ ಜವಾಬ್ದಾರಿ ಚುನಾಯಿತ ಸರ್ಕಾರಗಳ ಮೇಲಿದ್ದರೂ, ಈ ಜೀವನಾವಶ್ಯ ಸೌಲಭ್ಯಗಳು-ಅವಕಾಶಗಳು ಶಾಸನಬದ್ಧವಾಗಿ ಜನತೆಗೆ ಲಭ್ಯವಾಗಬೇಕು ಎಂಬ ಚಿಂತನೆ ಮೂಡಿದ್ದು 1974-75ರಲ್ಲಿ ವೀಣಾ ಮಜುಂದಾರ್ ಮತ್ತು ಲೋತಿಕಾ ಸರ್ಕಾರ್ ನೇತೃತ್ವದ ಸಮಿತಿಯೊಂದು ಮಹಿಳೆಯರ ಮೂಲಭೂತ ಹಕ್ಕುಗಳ ಬಗ್ಗೆ ʼ ಸಮಾನತೆಯ ಕಡೆಗೆ ʼ (Towards Equality) ಎಂಬ ಸಂಶೋಧನಾತ್ಮಕ ಅಧ್ಯಯನ ವರದಿಯನ್ನು ಸಲ್ಲಿಸಿದ ನಂತರದಲ್ಲೇ. ತಳಮಟ್ಟದ ಸಾಮಾಜಿಕ ಜೀವನದಲ್ಲಿ ನಿತ್ಯ ಸಂಕಟಗಳನ್ನು ಎದುರಿಸುತ್ತಿದ್ದ ಕೋಟ್ಯಂತರ ಜನರಿಗೆ ತಲುಪಬೇಕಾದ ಜೀವನಾವಶ್ಯ ಸೌಕರ್ಯಗಳು ತಲುಪುತ್ತಿಲ್ಲ ಎಂಬ ಅರಿವು ಸರ್ಕಾರಗಳಿಗೆ ಮೂಡತೊಡಗಿದ್ದು. ಮಹಿಳೆಯರಿಗೂ ಹಕ್ಕುಗಳಿವೆ ಎಂಬ ಪರಿಜ್ಞಾನ ಮೂಡಿದ್ದೂ ಈ ವರದಿಯ ಫಲಶ್ರುತಿಯೇ.

ಸಾಂವಿಧಾನಿಕ ಹಕ್ಕುಗಳ ಪರಿಧಿಯಲ್ಲಿ
ಈ ದೃಷ್ಟಿಯಿಂದ ಭಾರತದ ಸಂವಿಧಾನವನ್ನು ಗಮನಿಸಿದಾಗ, 1949ರಲ್ಲಿ ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನದಲ್ಲಿ ʼ ಉದ್ಯೋಗ ʼ ಜನತೆಯ ಮೂಲಭೂತ ಹಕ್ಕು ಆಗಿರಲಿಲ್ಲ. (ಇದಕ್ಕೆ ಚಾರಿತ್ರಿಕ ಕಾರಣಗಳೂ ಇದ್ದಿರಬಹುದು) ಆದರೆ ಸಂವಿಧಾನದ ಅನುಚ್ಛೇದ 41ರ ಅನುಸಾರ ಜನತೆಯ ಕೆಲಸದ/ಉದ್ಯೋಗದ ಹಕ್ಕು ನಿರ್ದೇಶಕ ಅಡಿಯಲ್ಲಿ ರಾಜ್ಯ ಸರ್ಕಾರಗಳು ತಮ್ಮ ಆಡಳಿತ ನೀತಿಗಳ ಮುಖಾಂತರ ಒದಗಿಸಬೇಕಾದ ಒಂದು ನಿಬಂಧನೆಯಾಗಿತ್ತು. ಹಾಗಾಗಿ ʼ ಉದ್ಯೋಗ ʼ ಮೂಲಭೂತ ಹಕ್ಕು ಅಲ್ಲದಿದ್ದರೂ, ಪ್ರತಿವ್ಯಕ್ತಿಗೂ ಜೀವನೋಪಾಯಕ್ಕೆ ಪೂರಕವಾಗುವಂತಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಚುನಾಯಿತ ಸರ್ಕಾರಗಳ ಜವಾಬ್ದಾರಿಯಾಗಿತ್ತು. ಈ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದು ನೆಹರೂ ಯುಗದ ಆಳ್ವಿಕೆಯಲ್ಲಿ, ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ, ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ಮುಖಾಂತರ ಹಾಗೂ ಔದ್ಯೋಗಿಕ-ಹಣಕಾಸು ಸಂಸ್ಥೆಗಳ ರಾಷ್ಟ್ರೀಕರಣದ ಮೂಲಕ.

ಆದರೂ ಭಾರತದ ದುಡಿಯುವ ಜನತೆಗೆ ಆಹಾರದ ಹಕ್ಕು, ಶಿಕ್ಷಣದ ಹಕ್ಕು, ಅರಣ್ಯ ಹಕ್ಕು , ಮಾಹಿತಿ ಹಕ್ಕು ಇವೆಲ್ಲವೂ ಶಾಸನಾತ್ಮಕವಾಗಿ ಲಭ್ಯವಾಗಿದ್ದು 21ನೆಯ ಶತಮಾನದ ಆದಿಯಲ್ಲಿ, ಕಾಂಗ್ರೆಸ್ ನೇತೃತ್ವದ ಯುಪಿಎ ಆಳ್ವಿಕೆಯಲ್ಲಿ. ಇದೇ ಅವಧಿಯಲ್ಲಿ ಶ್ರಮಿಕರಿಗೆ ಉದ್ಯೋಗದ ಹಕ್ಕನ್ನೂ ಒದಗಿಸುವ MNREGA ಕಾಯ್ದೆಯನ್ನೂ ಜಾರಿಗೊಳಿಸಲಾಗಿತ್ತು. ಈ ಕಾಯ್ದೆಗೆ 1980ರಿಂದಲೇ ದೇಶವ್ಯಾಪಿಯಾಗಿ ನಡೆಯುತ್ತಿದ್ದ ಜನಾಂದೋಲನಗಳೇ ಕಾರಣ ಎನ್ನುವುದು ವಾಸ್ತವ. ಆದರೂ ಮಾರುಕಟ್ಟೆ ಆರ್ಥಿಕ ನೀತಿಗಳ ಪ್ರಭಾವದಿಂದ ಉದ್ಯೋಗಾವಕಾಶಗಳನ್ನೇ ಕಳೆದುಕೊಂಡಿದ್ದ ಗ್ರಾಮೀಣ ಜನತೆಗೆ, ನಿರುದ್ಯೋಗದ ಬವಣೆಯಿಂದ ಪಾರಾಗಲು ನೆರವಾಗಿದ್ದು ಈ ಉದ್ಯೋಗ ಖಾತರಿ ಯೋಜನೆ. ಕೋಟ್ಯಂತರ ಗ್ರಾಮೀಣ ಜನರ ಜೀವನೋಪಾಯದ ಸುಧಾರಣೆಗೆ ಈ ಯೋಜನೆ ನೆರವಾಗಿತ್ತು.
ಉದ್ಯೋಗ ಖಾತರಿಯ ಭರವಸೆಗಳು
2014ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಖಾತರಿ ಯೋಜನೆಯನ್ನು, ಕಾಂಗ್ರೆಸ್ ಅಳ್ವಿಕೆಯ ಆರ್ಥಿಕ ವೈಫಲ್ಯದ ಜೀವಂತ ಸ್ಮಾರಕ ಎಂದು ಬಣ್ಣಿಸಿದ್ದುದೂ ಉಂಟು. ಈ ಯೋಜನೆಯ ಮಹತ್ವ ಸಮಸ್ತ ಭಾರತೀಯರಿಗೂ ಅರಿವಾಗಲು ಕೋವಿದ್ 19 ಸಾಂಕ್ರಾಮಿಕ ಬರಬೇಕಾಯಿತು. ಬಹುಶಃ ಕೋವಿದ್ ಸಂಕಟಗಳ ದಿನಗಳಲ್ಲಿ MNREGA ಇಲ್ಲದೆ ಹೋಗಿದ್ದರೆ, ಭಾರತ ಅಕ್ಷರಶಃ ಸತ್ತುಹೋಗುತ್ತಿತ್ತು. ಅಂತಹ ಸಂಕಷ್ಟದ ಸಮಯದಲ್ಲಿ ಸಂಜೀವಿನಿಯ ಹಾಗೆ ಒದಗಿಬಂದ ಉದ್ಯೋಗ ಖಾತರಿ ಯೋಜನೆ (MNREGA) ಇದೇ ಜುಲೈ 1ರಿಂದ ಚರಿತ್ರೆಯ ಪುಟಗಳಲ್ಲಿ ಸೇರಿಹೋಗಲಿದೆ. ವಸ್ತುಶಃ ಈ ಕ್ರಾಂತಿಕಾರಿ ಯೋಜನೆಯನ್ನು ʼಸ್ಮಾರಕವನ್ನಾಗಿʼ ಮಾಡುವ ಸಲುವಾಗಿಯೇ ಕೇಂದ್ರ ಎನ್ಡಿಎ ಸರ್ಕಾರ ವಿಕಸಿತ ಭಾರತ್ – ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಯೋಜನೆ (ವಿಬಿ ಜಿ ರಾಮ್ ಜಿ ಕಾಯ್ದೆ) ಯನ್ನು ಜುಲೈ 1ರಿಂದ ಅನುಷ್ಠಾನಗೊಳಿಸುತ್ತಿದೆ.

ಒಂದು ರೀತಿಯಲ್ಲಿ ಈ ಜಿ ರಾಮ್ ಜಿ ಯೋಜನೆ ನಿರುದ್ಯೋಗ ಖಾತರಿಯ ಕಾಯ್ದೆ ಎಂದೇ ಉದ್ಯೋಗಾಕಾಂಕ್ಷಿಗಳು ಬಣ್ಣಿಸುತ್ತಾರೆ. 20 ವರ್ಷಗಳ ಕಾಲ ( 2006-2026) ಗ್ರಾಮೀಣ ಭಾರತದಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ, ಬಡತನವನ್ನು ಸ್ವಲ್ಪ ಮಟ್ಟಿಗಾದರೂ ನೀಗಿಸಲು ನೆರವಾಗಿದ್ದ ನರೇಗಾ (MNREGA) ಕನಿಷ್ಠ ಗ್ರಾಮೀಣ ಜನತೆಗೆ ನಾಳೆಯ ಅನ್ನವನ್ನು ಖಚಿತಪಡಿಸಿತ್ತು. ಹಳ್ಳಿಯ ಮಹಿಳೆಯರಿಗೆ ಮನೆಯಿಂದ ಹೊರಬಂದು ದುಡಿಯುವ ಸ್ವಾತಂತ್ರ್ಯವನ್ನು ನೀಡಿತ್ತು. ಕಳೆದ ಐದು ವರ್ಷಗಳಲ್ಲಿ ನರೇಗಾ ಕಾರ್ಮಿಕರಲ್ಲಿ ಶೇಕಡಾ 58ರಷ್ಟು ಮಹಿಳೆಯರೇ ಇದ್ದರು. ಇದು ಮಹಿಳಾ ಸಬಲೀಕರಣ ಮತ್ತು ಮಹಿಳೆಯರಿಗೆ ಕೌಟುಂಬಿಕ ಜಂಜಡಗಳಿಂದ ವಿಮೋಚನೆಯ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿತ್ತು.

ನರೇಗಾ ಯೋಜನೆಯ ಫಲಶ್ರುತಿ
ನರೇಗಾ ಕಾಯ್ದೆಯಡಿ ಉದ್ಯೋಗವನ್ನು ತಮ್ಮ ಹಕ್ಕು ಎಂದು ಪರಿಗಣಿಸಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ ಪಡೆಯುವ ಅವಕಾಶವಿತ್ತು. ಆಗ್ರಹಿಸಿದ 15 ದಿನಗಳೊಳಗಾಗಿ ಉದ್ಯೋಗ ಪಡೆಯುವ ಮೂಲಕ ಅಸಂಖ್ಯಾತ ಬಡವರು ತಮ್ಮ ಕೌಟುಂಬಿಕ ಜೀವನದಲ್ಲಿ ಸುಧಾರಣೆ ಕಂಡಿದ್ದರು. 2007ರಲ್ಲಿ ಬೆಳಗಾವಿಯ ಅಥಣಿ ತಾಲ್ಲೂಕಿನ ಲಕ್ಷ್ಮಿ ಎಂಬಾಕೆ ದಿನಕ್ಕೆ 40 ರೂ ಕೂಲಿ, ಎರಡು ಕಿಲೋ ಪಡಿತರ ಪಡೆಯುತ್ತಿದ್ದರು. ಅಕೆಯ ಪತಿ 65 ರೂ ದಿನಗೂಲಿ ಮತ್ತು ಪಡಿತರ ಪಡೆಯುತ್ತಿದ್ದರು. ಕೆಲಸವಿಲ್ಲದ ಸಮಯದಲ್ಲಿ ಉಳಿದ 50 ಜನರೊಂದಿಗೆ ನೂರು ಕಿಲೋಮೀಟರ್ ದೂರದ ಕೊಲ್ಹಾಪುರಕ್ಕೆ ವಲಸೆ ಹೋಗಿ 60 ದಿನಗಳ ಕಾಲ 120 ರೂ ದಿನಗೂಲಿ ಸಂಪಾದಿಸಿ ಹಿಂತಿರುಗುತ್ತಿದ್ದರು. ಈ ಆದಾಯವೇ ಮಕ್ಕಳಿಗೆ ಸಾಧಾರಣ ಶಿಕ್ಷಣ ನೀಡಲು, ಕುಟುಂಬದ ಆರೋಗ್ಯ ಸುಧಾರಿಸಲು ಕಾರಣವಾಗುತ್ತಿತ್ತು. ಇಂತಹ ಲಕ್ಷಾಂತರ ಲಕ್ಷ್ಮಿಗಳು ಇಂದು ಅಕ್ಷರಶಃ ಪರೋಪಜೀವಿಗಳಾಗಲಿದ್ದಾರೆ. ಕೃಪೆ ವಿಬಿ ಜಿರಾಮ್ಜಿ ಕಾಯ್ದೆ.

“ ಮಹಿಳೆಯರನ್ನು ಕಾರ್ಮಿಕರು ಎಂದು ಪ್ರಪ್ರಥಮವಾಗಿ ಗುರುತಿಸಿದ್ದೇ ನರೇಗಾ ಯೋಜನೆ, ಇದರ ಮೂಲಕವೇ ನಮಗೆ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಯಿತು, ಮೊಟ್ಟಮೊದಲ ಬಾರಿಗೆ ನಮ್ಮ ಹೆಸರುಗಳು ಉದ್ಯೋಗ ಚೀಟಿಯಲ್ಲಿ (Job Cards) ಜಾಗ ಪಡೆದವು” ಎನ್ನುತ್ತಾರೆ ಲಕ್ಸ್ಮಿ.ಉದ್ಯೋಗಕ್ಕಾಗಿ ಹೋರಾಟಕ್ಕಿಳಿದ ಸಿಂಧನೂರ್ ತಾಲ್ಲೂಕಿನ 120 ಮಹಿಳೆಯರು ಮೊಟ್ಟಮೊದಲ ಬಾರಿ ಸಂಘಟಿತರಾಗಿ, ತಾಲ್ಲೂಕು ಬ್ಲಾಕ್ ಕಚೇರಿಯ ಮುಂದೆ ಧರಣಿ ಹೂಡಿದ್ದನ್ನು ಶ್ರೀಮತಿ ಭಾರತಿ ಸಂತೋಷ್ ಎಂಬ ಕಾರ್ಯಕರ್ತೆ ಹೆಮ್ಮೆಯಿಂದ ನೆನೆಯುತ್ತಾರೆ. ಅಲ್ಲಿಯವರೆಗೂ ಆ ಅಧಿಕಾರಿಗಳು ಅಷ್ಟು ದೊಡ್ಡ ಮಹಿಳಾ ಸಮೂಹವನ್ನು ಒಮ್ಮೆಲೆ ಕಂಡಿರಲೇ ಇಲ್ಲ ಎಂದೂ ಸ್ಮರಿಸುತ್ತಾರೆ. ಬಹುಶಃ ಉದ್ಯೋಗವನ್ನು ತಮ್ಮ ಸಾಂವಿಧಾನಿಕ ಹಕ್ಕು ಎಂದು ಪರಿಗಣಿಸಿ, ಒತ್ತಾಯಿಸಿ ಪಡೆಯುವ ಈ ಸಂಘರ್ಷಗಳು ಚರಿತ್ರೆಯ ಪುಟಗಳಲ್ಲಿ ಸೇರಿಹೋಗುತ್ತವೆ.
ಆಯ್ಕೆಯ ಹಕ್ಕಿಲ್ಲದ ಮಾರುಕಟ್ಟೆಯಲ್ಲಿ
ಏಕೆಂದರೆ ಹೊಸ ಕಾಯ್ದೆಯ ಅನ್ವಯ ಭಾರತದ ಯಾವ ಮೂಲೆಯ ಹಳ್ಳಿಯಲ್ಲಾದರೂ, ಕೆಲಸ ಲಭ್ಯವಿದೆಯೋ ಇಲ್ಲವೋ ಎಂದು ನಿರ್ಧರಿಸುವ ಆಯ್ಕೆಯ ಹಕ್ಕನ್ನು ಸ್ಥಳೀಯ ಜನರಿಂದ ಕಸಿದುಕೊಳ್ಳಲಾಗಿದೆ. ಈಗ ಕೇಂದ್ರ ಸರ್ಕಾರದ ಇದನ್ನು ನಿರ್ಧರಿಸುತ್ತದೆ. ಎಸ್ಐಆರ್ ಮೂಲಕ ಮತದಾನ ಯಾರು ಮಾಡಬೇಕು ಎಂದು ಸರ್ಕಾರವೇ ನಿರ್ಧರಿಸುವ ಮಾದರಿಯಲ್ಲೇ, ಈ ಹೊಸ ಕಾಯ್ದೆಯಡಿ ಯಾವ ರಾಜ್ಯದ, ಯಾವ ಪ್ರದೇಶದ, ಯಾವ ಗ್ರಾಮದ ಜನರು ಉದ್ಯೋಗಕ್ಕೆ ಅರ್ಹರು ಎನ್ನುವುದನ್ನು ದೆಹಲಿಯಲ್ಲಿ ಕುಳಿತ ಅಧಿಕಾರಶಾಹಿಯ ಕಚೇರಿಯಲ್ಲಿ ನಿರ್ಧರಿಸಲಾಗುತ್ತದೆ. ನರೇಗಾ ಕಾಯ್ದೆಯ ಅನ್ವಯ ಇದ್ದ ಕನಿಷ್ಠ 100 ದಿನಗಳ ಉದ್ಯೋಗ ಈಗ 125 ದಿನಗಳಾಗಿವೆ. ವ್ಯತ್ಯಾಸವೆಂದರೆ ಈ ಉದ್ಯೋಗ ಗ್ರಾಮೀಣ ಬಡ ಜನತೆಯ, ಶ್ರಮಜೀವಿಗಳ ಅವಶ್ಯಕತೆಗಳ ಬದಲು ಸರ್ಕಾರದ ನಿರ್ಧಾರವನ್ನು ಅವಲಂಬಿಸುತ್ತದೆ.

NREGA ಸಂಘರ್ಷ ಮೋರ್ಚಾದ ರಾಜೇಂದ್ರ ನಾರಾಯಣ್ ಹೇಳುವಂತೆ “ ಒಂದು ವೇಳೆ ಈ ಯೋಜನೆಯಲ್ಲಿ ಉದ್ಯೋಗವನ್ನು ತಡೆಹಿಡಿದರೆ ಅಥವಾ ನಿರ್ಬಂಧಿಸಿದರೆ, ಸಾವಿರಾರು ಶ್ರಮಿಕರು ಒಮ್ಮೆಲೆ ಖಾಸಗಿ ಶ್ರಮ ಮಾರುಕಟ್ಟೆಯ ಕಡೆ ವಲಸೆ ಹೋಗಬೇಕಾಗುತ್ತದೆ. ಇಲ್ಲಿ ತಮ್ಮ ಚೌಕಾಸಿ ಶಕ್ತಿಯನ್ನು (Bargaining Power) ಕಳೆದುಕೊಳ್ಳುವ ಶ್ರಮಿಕರು ದೊಡ್ಡ ಭೂಮಾಲೀಕರ, ಉದ್ಯೋಗದಾತರ ಮರ್ಜಿಗೆ ಒಳಗಾಗುತ್ತಾರೆ. ಕೃಷಿ ಕಾರ್ಮಿಕರು ಮತ್ತು ಮಹಿಳೆಯರು ಈ ರೇಸ್ನಲ್ಲಿ ಅವಕಾಶವಂಚಿತರಾಗುತ್ತಾರೆ. ” .ಇದು ಕೆಲಸದ ದಿನಗಳ ಸಮಸ್ಯೆಯಷ್ಟೇ ಅಲ್ಲದೆ, ನರೇಗಾ ಕಾಯ್ದೆ ಒದಗಿಸುತ್ತಿದ್ದ ಪರ್ಯಾಯ ಉದ್ಯೋಗ ಅಥವಾ ನೌಕರಿ ಮತ್ತು ಪರ್ಯಾಯ ಆದಾಯವನ್ನು ಕಳೆದುಕೊಳ್ಳುವ ಲಕ್ಷಾಂತರ ಶ್ರಮಿಕರು ಶೋಷಣಾ ವೇತನವನ್ನು (Exploitative Wages) ನಿರಾಕರಿಸುವ ಹಕ್ಕನ್ನು ಕಳೆದುಕೊಂಡು, ಮತ್ತೆ ಉದ್ಯೋಗದಾತರ ಶೋಷಣೆಗೆ ಒಳಗಾಗುತ್ತಾರೆ ಎಂದು ನಾರಾಯಣ್ ಹೇಳುತ್ತಾರೆ.
ನೂತನ ಕಾಯ್ದೆಯಲ್ಲಿ ಉದ್ಯೋಗದ ದಿನಗಳನ್ನು ಹೆಚ್ಚಿಸಿದ್ದರೂ ಉದ್ಯೋಗ ಸೃಷ್ಟಿಯ ಪ್ರಮಾಣವನ್ನು ಮಿತಿಗೊಳಿಸುತ್ತದೆ. ಒಮ್ಮೆ ಈ ಮಿತಿಯನ್ನು ಮೀರಿದರೆ, ಕೇಂದ್ರದ ಅನುದಾನ ಇಲ್ಲವಾಗುತ್ತದೆ, ಉದ್ಯೋಗ ಕಲ್ಪಿಸಿ ಜನತೆಗೆ ಒದಗಿಸುವ ಜವಾಬ್ದಾರಿ ಮತ್ತು ಹಣಕಾಸು ಹೊರೆ ರಾಜ್ಯ ಸರ್ಕಾರದ್ದಾಗುತ್ತದೆ. ಈ ಯೋಜನೆಗೆ ತಗಲುವ ವೆಚ್ಚದಲ್ಲೂ ಶೇಕಡಾ 40ರಷ್ಟನ್ನು ರಾಜ್ಯಸರ್ಕಾರ ಭರಿಸಬೇಕಾಗುತ್ತದೆ. ನರೇಗಾ ಯೋಜನೆಯಲ್ಲಿ ಕೂಲಿಯ ಭಾಗವನ್ನು ಪೂರ್ತಿಯಾಗಿ ಕೇಂದ್ರ ಬಜೆಟ್ ಮೂಲಕ ಭರಿಸಲಾಗುತ್ತಿತ್ತು. ಇತರೆ ಖರ್ಚುಗಳ ಶೇಕಡಾ 10ರಷ್ಟನ್ನು ಮಾತ್ರ ಕೇಂದ್ರ ಸರ್ಕಾರ ನೀಡುತ್ತಿತ್ತು. ಈಗ ಈ ಯೋಜನೆಯೂ ಆಶಾ, ಅಂಗನವಾಡಿಯ ಹಾಗೆ ಕೇಂದ್ರ-ರಾಜ್ಯಗಳ ಹೊಂದಾಣಿಕೆಯನ್ನು ಅವಲಂಬಿಸುತ್ತದೆ. ನರೇಗಾ ಯೋಜನೆಯಲ್ಲೂ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದ್ದುದು ವಾಸ್ತವ. ಆದರೆ ಹೊಸ ಯೋಜನೆಯಲ್ಲಿ ಇದು ಅನಿಶ್ಚಿತವಾಗಿಬಿಡುತ್ತದೆ.

“ ಒಂದು ನಿರ್ದಿಷ್ಟ ಗ್ರಾಮದಲ್ಲಿ ದೈಹಿಕ ಶ್ರಮದ ಅವಶ್ಯಕತೆ ಇದೆ ಎಂದು ಗುರುತಿಸಿ ಅದನ್ನು ಅನುಮೋದಿಸಿ ಅನುದಾನ ಒದಗಿಸಿದರೆ ಮಾತ್ರ ಈ ಯೋಜನೆ ಕಾರ್ಯಗತವಾಗುತ್ತದೆ. ಒಂದು ವೇಳೆ ಯಾವುದೇ ಯೋಜನೆಯನ್ನು ಗುರುತಿಸದಿದ್ದರೆ ಅಥವಾ ಬಜೆಟ್ ಹಣ ಖಾಲಿಯಾಗಿದ್ದರೆ ಉದ್ಯೋಗವೇ ಇಲ್ಲವಾಗುತ್ತದೆ. ಈ ಅನಿಶ್ಚಿತತೆ ನಮ್ಮ ವಲಸೆಯನ್ನೂ ನಿರ್ಧರಿಸುತ್ತದೆ ” ಎನ್ನುತ್ತಾರೆ ಕಲಬುರ್ಗಿಯ ಕಾರ್ಮಿಕ ಮಹಂತೇಶ್. ಕೇಂದ್ರ ಸರ್ಕಾರದ ಆದ್ಯತೆಗಳಿಗೆನುಸಾರ ಉದ್ಯೋಗಗಳನ್ನು ಗುರುತಿಸಲಾಗುತ್ತದೆ, ರಾಯಚೂರು ಅಥವಾ ಬೆಳಗಾವಿಯ ವಸ್ತುಸ್ಥಿತಿ ದೆಹಲಿಯಲ್ಲಿ ಕುಳಿತವರಿಗೆ ಹೇಗೆ ತಿಳಿಯಲು ಸಾಧ್ಯ ಎಂದು ಮಹಂತೇಶ್ ಪ್ರಶ್ನಿಸುವುದು ಉಚಿತವೇ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ದುಡಿಯುವ ಜನತೆಗೆ ವಲಸೆ ಹೋಗುವುದು ಅನಿವಾರ್ಯವಾಗುತ್ತದೆ ಎಂದೂ ಮಹಂತೇಶ್ ವಿಷಾದದಿಂದ ಹೇಳುತ್ತಾರೆ.

ಅನಿಶ್ಚಿತ ನಾಳೆಗಳ ಭರವಸೆಯ ನಡುವೆ
ಈ ಹೊಸ ಕಾಯ್ದೆಯ ಮತ್ತೊಂದು ಆಪತ್ಕಾರಿ ನಿಯಮ ಎಂದರೆ, ವರ್ಷದಲ್ಲಿ ಕೊಯ್ಲು ಮತ್ತು ಬಿತ್ತನೆಯ ಕೆಲಸಗಳು ಗರಿಷ್ಟ ಪ್ರಮಾಣದಲ್ಲಿರುವ 60 ದಿನಗಳನ್ನು “ ಋತುಮಾನದ ಜೋಡಣೆಯ ಅವಕಾಶ ” (Seasonal Alignment window) ಎಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ವಿಬಿ ಜಿರಾಮ್ಜಿ ಕಾಯ್ದೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ನಿರುದ್ಯೋಗ ಭತ್ಯೆಯನ್ನೂ ನೀಡಲಾಗುವುದಿಲ್ಲ. ಭಾರತದ ಯಾವುದೇ ಗ್ರಾಮದಲ್ಲಾದರೂ, ನೀರಾವರಿ ಇರಲಿ ಒಣಭೂಮಿ ಇರಲಿ, ಬಿತ್ತನೆ ಮತ್ತು ಕೊಯ್ಲು ಪ್ರಕ್ರಿಯೆಯಲ್ಲಿ ಗ್ರಾಮದ ಸಮಸ್ತ ಜನತೆಯೂ ಭಾಗಿಯಾಗುವುದಿಲ್ಲ ಎಂಬ ವಾಸ್ತವದ ಅರಿವು ನಮ್ಮ ನೀತಿ ನಿರೂಪಕರಿಗೆ ಇಲ್ಲದಿರುವುವುದು ವಿಪರ್ಯಾಸ. ಆ ಸಮಯದಲ್ಲೂ ಇತರೆ ಕೆಲಸಗಳನ್ನು ಅವಲಂಬಿಸುವ ಕುಟುಂಬಗಳು ಇದ್ದೇ ಇರುತ್ತವೆ. ಹೀಗಿರುವಾಗ 60 ದಿನಗಳ ಕಾಲ ಯೋಜನೆಯನ್ನೇ ಸ್ಥಗಿತಗೊಳಿಸುವುದು ಇಡೀ ಗ್ರಾಮದ ಜನತೆಯನ್ನು ವಲಸೆ ಹೋಗುವಂತೆ ಮಾಡುತ್ತದೆ
ಮತ್ತೊಂದೆಡೆ, ಕರ್ನಾಟಕವನ್ನೂ ಒಳಗೊಂಡಂತೆ ಯಾವ ರಾಜ್ಯದಲ್ಲೂ ಎಲ್ಲ ಪ್ರದೇಶಗಳಲ್ಲಿ ಒಂದೇ ರೀತಿಯ ಹವಾಮಾನ ಮತ್ತು ಭೂ ಸಾಗುವಳಿಯ ಪದ್ಧತಿಗಳು ಇರುವುದಿಲ್ಲ. ಉತ್ತರ ಕರ್ನಾಟಕದ ಬರಗಾಲ ಪೀಡಿತ ಗ್ರಾಮಗಳು, ಕೋಲಾರ ಸುತ್ತಮುತ್ತಲಿನ ಮಳೆ ಆಧಾರಿತ ಒಣಭೂಮಿಗಳು ಅಲ್ಲಿನ ಗ್ರಾಮೀಣ ಜನತೆಯನ್ನು ಸದಾ ಅನಿಶ್ಚಿತತೆಯಲ್ಲೇ ಇರಿಸುತ್ತವೆ. ಹಾಗಾಗಿ ಯಾವುದೇ ಯೋಜನೆಯನ್ನು ಸಮಾನ ನೆಲೆಯಲ್ಲಿ ಜಾರಿಗೊಳಿಸಲಾಗುವುದಿಲ್ಲ. ನರೇಗಾ ಯೋಜನೆಯಲ್ಲೇ ಅತಿಹೆಚ್ಚು ಕಾರ್ಮಿಕರು ಕಾಣುವುದು ಉತ್ತರ ಕರ್ನಾಟಕದಲ್ಲಿ ಮತ್ತು ದಕ್ಷಿಣದ ಕೋಲಾರ ಸುತ್ತಲಿನ ಗ್ರಾಮಗಳಲ್ಲಿ. ನೀರಾವರಿ ಜಿಲ್ಲೆಗಳಲ್ಲಿ ನರೇಗಾ ಕಾರ್ಮಿಕರ ಸಂಖ್ಯೆ ಕಡಿಮೆಯೇ ಇರುತ್ತದೆ. ಹೊಸ ಕಾಯ್ದೆಯನ್ನು ರೂಪಿಸಿದವರಿಗೆ ಈ ನೆಲದ ವಾಸ್ತವದ ಅರಿವು ಇರಬೇಕಿತ್ತು.
ನರೇಗಾ ಯೋಜನೆಯಲ್ಲೇ ಗ್ರಾಮೀಣ ಕಾರ್ಮಿಕರು ಎದುರಿಸಿದ ಅತ್ಯಂತ ಜಟಿಲ ಸಮಸ್ಯೆ ಎಂದರೆ ಹಾಜರಾತಿಯ ಡಿಜಿಟಲೀಕರಣ ಮತ್ತು ಬಯೋಮೆಟ್ರಿಕ್ ವ್ಯವಸ್ಥೆ. ಹೊಸ ಕಾಯ್ದೆಯಲ್ಲೂ ಇದನ್ನು ಮುಂದುವರೆಸಲಾಗಿದೆ. ಈ ಪ್ರಕ್ರಿಯೆಯನ್ನು ರಾಷ್ಟ್ರೀಯ ಮೊಬೈಲ್ ಮೇಲ್ವಿಚಾರಣಾ ವ್ಯವಸ್ಥೆ (NMMS)ಯ ಅಡಿ ನಿರ್ವಹಿಸಲಾಗುತ್ತದೆ. ಕಾರ್ಮಿಕರ ಹಾಜರಾತಿಯನ್ನು ದಾಖಲಿಸಲು ಡಿಜಿಟಲ್ ತಂತ್ರಜ್ಞಾನವನ್ನೇ ಬಳಸುವುದರಿಂದ, ಹಲವಾರು ಗ್ರಾಮಗಳಲ್ಲಿ ಸಂಪರ್ಕ ದೊರೆಯದೆ ಕೆಲಸ ಮಾಡಿದರೂ ಕೂಲಿ ಇಲ್ಲದೆ ಹೋಗಬೇಕಾದ ಪರಿಸ್ಥಿತಿಯನ್ನು ಕಾರ್ಮಿಕರು ಎದುರಿಸಬೇಕಾಗುತ್ತದೆ. 2025ರಲ್ಲಿ ರಚಿಸಲಾಗಿದ್ದ ಸಂಸದೀಯ ಸ್ಥಾಯಿ ಸಮಿತಿಯೂ ತನ್ನ ವರದಿಯಲ್ಲಿ ಈ ಪದ್ಧತಿಯನ್ನು, ತಾತ್ಕಾಲಿಕವಾಗಿ ನಿಲ್ಲಿಸುವಂತೆ ಶಿಫಾರಸು ಮಾಡಿದೆ. ತಂತ್ರಜ್ಞಾನ ಉದ್ಯೋಗಕ್ಕೆ ನೆರವಾಗಬೇಕೇ ಹೊರತು ತಡೆಯಾಗಬಾರದು.

ಕಳೆದುಕೊಳ್ಳುವ ನವ ಪರ್ವ
ಈ ಜಟಿಲ ಸಿಕ್ಕುಗಳ ನಡುವೆಯೇ 20 ವರ್ಷಗಳ ಮುನ್ನ ಭಾರತದ ಗ್ರಾಮೀಣ ಬಡ ಜನರು, ಶ್ರಮಜೀವಿಗಳು ಸಂಪಾದಿಸಿದ ʼ ಉದ್ಯೋಗದ ಹಕ್ಕು ʼ ಈಗ ಇಲ್ಲವಾಗುತ್ತಿದೆ. ಈಗಾಗಲೇ ಜೂನ್ 1 ರಿಂದ ಕಾರ್ಮಿಕ ಸಂಹಿತೆಗಳು ಜಾರಿಯಾಗಿದ್ದು ಕೋಟ್ಯಂತರ ಶ್ರಮಿಕರು ತಾವು ಸುದೀರ್ಘ ಹೋರಾಟಗಳ ಮೂಲಕ ಸಂಪಾದಿಸಿದ ಸಾಂವಿಧಾನಿಕ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಈಗ ಕನಿಷ್ಠ ಉದ್ಯೋಗ ಕಲ್ಪಿಸುವ ಖಾತರಿಯನ್ನೂ ಸಹ ಕಳೆದುಕೊಳ್ಳಲಿದ್ದಾರೆ. ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆಗೆ ಈ ಸನ್ನಿವೇಶ ಲಾಭದಾಯಕವಾಗುತ್ತದೆ. ಏಕೆಂದರೆ ಹೆಚ್ಚುಹೆಚ್ಚು ಶ್ರಮಿಕರು ಖಾಸಗಿ ವಲಯದಲ್ಲಿ ಉದ್ಯೋಗದಾತರ ಆಶ್ರಯ ಬಯಸುವಂತಾಗುತ್ತದೆ. ಈ ಶೋಷಕ ವಲಯದಲ್ಲಿ ಕೂಲಿ, ಸಮಯ, ಭತ್ಯೆ ಮತ್ತು ಉದ್ಯೋಗ ಎಲ್ಲವನ್ನೂ ಮಾರುಕಟ್ಟೆಯೇ ನಿರ್ಧರಿಸುತ್ತದೆ. ಭಾರತದ ಕೋಟ್ಯಂತರ ಶ್ರಮಿಕ ವರ್ಗ ಮಾರುಕಟ್ಟೆಯ ಗುಲಾಮಗಿರಿಗೆ ಒಳಗಾಗುತ್ತದೆ.
ಸ್ವಾತಂತ್ರ್ಯದ ಮೊದಲ ಮೂರು ದಶಕಗಳಲ್ಲಿ ಸರ್ಕಾರಗಳು ಜನರ ಮೂಲಭೂತ ಜೀವನಾವಶ್ಯ ಹಕ್ಕುಗಳ ಬಗ್ಗೆ ಗಂಭೀರವಾಗಿ ಯೋಚಿಸಲೂ ಇಲ್ಲ. ತದನಂತರದ ಮೂರು-ನಾಲ್ಕು ದಶಕಗಳಲ್ಲಿ ಜನಾಂದೋಲನಗಳ ಒತ್ತಡಕ್ಕೆ ಮಣಿದು ಚುನಾಯಿತ ಸರ್ಕಾರಗಳು ಹಲವಾರು ಹಕ್ಕುಗಳನ್ನು ಶಾಸನಬದ್ಧವಾಗಿ ಜನತೆಗೆ ನೀಡಿದ್ದವು. ಈಗ ಮೂರನೆಯ ಪರ್ವದಲ್ಲಿ, ಕಳೆದ 12 ವರ್ಷಗಳಿಂದ ಭಾರತದ ದುಡಿಯುವ ವರ್ಗಗಳು, ಶೋಷಿತ ಸಮುದಾಯಗಳು, ಮಹಿಳೆಯರು ತಮ್ಮ ಒಂದೊಂದೇ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ವ್ಯವಸ್ಥೆಯ ತಾತ್ವಿಕ ಕ್ರೌರ್ಯ ಮತ್ತು ಆಡಳಿತಾತ್ಮಕ ದಬ್ಬಾಳಿಕೆಯ ಸಂಕೇತವಾಗಿದೆ.

ಮುಷ್ಕರ ಮತ್ತು ಸಂಘಟನೆಯ ಹಕ್ಕುಗಳನ್ನೂ ಕಳೆದುಕೊಂಡಿರುವ ಭಾರತದ ಶ್ರಮಜೀವಿ ವರ್ಗದ ಸಂಘಟನೆಗಳು ತಮ್ಮ ಭವಿಷ್ಯದ ಹೆಜ್ಜೆಗಳನ್ನು ನಿರ್ಧರಿಸುವಾಗ, ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ಸೃಷ್ಟಿಯಾಗುವ ಕೋಟ್ಯಂತರ ವಲಸೆ ಕಾರ್ಮಿಕರನ್ನೂ ಒಳಗೊಂಡು ನಡೆಯಬೇಕಾಗಿದೆ. ಇದು ವರ್ತಮಾನದ ತುರ್ತು ಮತ್ತು ಭವಿಷ್ಯದ ಕರೆ.
(ಈ ಲೇಖನದಲ್ಲಿ ಉಲ್ಲೇಖಿಸಲಾಗಿರುವ ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ನರೇಗಾ ಕುರಿತ ಕೆಲವು ಮಾಹಿತಿಗಳನ್ನು No Guarantee of Right to work ? ರಿಷಿತಾ ಖನ್ನಾ, ದ ಹಿಂದೂ , ಜೂನ್ 13 2026 – ಈ ವರದಿಯಿಂದ ಪಡೆಯಲಾಗಿದೆ. )







