ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕ ಪಿ.ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ವಿಧಿವಶರಾಗಿದ್ದಾರೆ. ಇಂದಿರಾ ಲಂಕೇಶ್ ಅವರ ಅಗಲಿಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಲಂಕೇಶ್ ಅವರು ಮಾಡಿರುವ ಸಾಧನೆಯಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದ ಇಂದಿರಾ ಲಂಕೇಶ್ ಅವರ ಬಹುದೊಡ್ಡ ಕೊಡುಗೆ ಇದೆ ಎನ್ನುವುದು ನಿಸ್ಸಂಶಯ ಎಂದಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ, ಪ್ರಸಿದ್ಧ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ದಿವಂಗತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಸಾಹಿತ್ಯ, ಮಾಧ್ಯಮ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಲಂಕೇಶ್ ಅವರು ಮಾಡಿರುವ ಸಾಧನೆಯಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದ ಇಂದಿರಾ ಲಂಕೇಶ್ ಅವರ ಬಹುದೊಡ್ಡ ಕೊಡುಗೆ ಇದೆ ಎನ್ನುವುದು ನಿಸ್ಸಂಶಯ.

ಪ್ರಾರಂಭದ ದಿನಗಳಿಂದಲೂ ಲಂಕೇಶ್ ಅವರ ಕುಟುಂಬದ ಸ್ನೇಹವಲಯದಲ್ಲಿದ್ದ ನನಗೆ ಇಂದಿರಾ ಲಂಕೇಶ್ ಮತ್ತು ಅವರ ಮಕ್ಕಳು ಆತ್ಮೀಯರು. ಸ್ವತ: ಬರವಣಿಗೆಯನ್ನೂ ಮಾಡುತ್ತಿದ್ದ ಇಂದಿರಾ ಲಂಕೇಶ್, ಪುಸ್ತಕ ಪ್ರಕಟಣೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆಯಷ್ಟೆ ನಡೆದ ಗೌರಿ ಲಂಕೇಶ್ ಹತ್ಯೆಯ ನಂತರ ಆಘಾತಕ್ಕೀಡಾಗಿದ್ದ ಇಂದಿರಾ ಅವರು ಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಇಂದಿರಾ ಲಂಕೇಶ್ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.







