ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯಾನಂತರ ಸಂವಿಧಾನ ರಚನಾ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ಒಂದು ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆಯಾಗಿ ಭಾರತವನ್ನು ರೂಪಿಸುವ ನಿಟ್ಟಿನಲ್ಲಿ ಭವಿಷ್ಯದ ಭಾರತ ಸಾಮಾಜಿಕಾರ್ಥಿಕ ಸಮಾನತೆ, ಸಾಂಸ್ಕೃತಿಕ ಸೌಹಾರ್ದತೆ ಮತ್ತು ವೈಜ್ಞಾನಿಕ ಮನೋಭಾವದ ಆರೋಗ್ಯಕರ ಸಮಾಜವಾಗಿ ರೂಪುಗೊಳ್ಳಬೇಕು ಎನ್ನುವ ಆಶಯಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಸಂವಿಧಾನ ರಚನಾ ಮಂಡಲಿಯಲ್ಲಿ ವ್ಯಕ್ತವಾಗಿರಬಹುದಾದ ಭಿನ್ನ ನಿಲುವುಗಳು, ಪ್ರತಿಪಾದನೆಗಳು ಈ ಧೋರಣೆಗೆ ವಿಮುಖವಾಗಿ ಯೋಚಿಸಿರುವುದನ್ನು ಕಾಣಲಾಗುವುದಿಲ್ಲ. ಕೆಲವೇ ದಶಕಗಳಲ್ಲಿ ಭಾರತ ಒಂದು ನೈಜ ಪ್ರಜಾಪ್ರಭುತ್ವವಾಗಿ ರೂಪುಗೊಳ್ಳುತ್ತದೆ ಎಂಬ ಆಶಾಭಾವನೆ, ಡಾ ಅಂಬೇಡ್ಕರ್ ಸೇರಿದಂತೆ ಎಲ್ಲ ಚಿಂತಕರಲ್ಲೂ ಕಾಣಬಹುದಿತ್ತು.
ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆಯಾಗಿ ಭಾರತ ತನ್ನ ೭೫ನೆಯ ವರ್ಷಕ್ಕೆ ಕಾಲಿಡುತ್ತಿದೆ. ೭೪ ವರ್ಷಗಳ ಅಧಿಕಾರ ರಾಜಕಾರಣ ಭಾರತದಲ್ಲಿ ಪ್ರಜಾಪ್ರಭುತ್ವದ ಬುನಾದಿಯನ್ನು ಬಲಪಡಿಸಿದೆಯೇ ಎಂಬ ಪ್ರಶ್ನೆಗೆ ಈ ದೇಶ ನಿರುತ್ತರವಾಗುತ್ತದೆ. ತನ್ನ ೭೫ನೆಯ ವರ್ಷದಲ್ಲೇ ಸ್ವತಂತ್ರ ಭಾರತ ತನ್ನ ಮೂಲ ಸಾಂವಿಧಾನಿಕ ಆಶಯಗಳಿಗೆ ವಿಮುಖವಾಗಿ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಒಂದೆಡೆ ಸಾಂವಿಧಾನಿಕ ಮೌಲ್ಯಗಳು ಶಿಥಿಲವಾಗುತ್ತಿದ್ದರೆ ಮತ್ತೊಂದೆಡೆ ೧೯೪೭ರ ಕನಸುಗಳು ಛಿದ್ರವಾಗುತ್ತಿವೆ. ಸಾಮಾಜಿಕ ಸಮಾನತೆ ಮತ್ತು ಸೌಹಾರ್ದತೆಯ ಉದಾತ್ತ ಪರಿಕಲ್ಪನೆಯನ್ನು ಸಾಪೇಕ್ಷಗೊಳಿಸುವ ಮೂಲಕ ಭಾರತದ ಅಧಿಕಾರ ರಾಜಕಾರಣ, ಅಸಮಾನತೆ, ದ್ವೇಷ ಮತ್ತು ಕ್ರೌರ್ಯದ ನೆಲೆಗಳನ್ನು ಭದ್ರಪಡಿಸುತ್ತಿದೆ.
ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ೨೮ನೆಯ ಸಂಸ್ಥಾಪನಾ ದಿನದಂದು ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾನವ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ನಡುವೆ ಅಂತರ್ ಸಂಬಂಧವನ್ನು ಕಲ್ಪಿಸುತ್ತಾ “ ಮಾನವ ಹಕ್ಕುಗಳು ಎಂದರೆ ಕೇವಲ ಹಕ್ಕುಗಳ ಬಗ್ಗೆ ಮಾತ್ರವೇ ಯೋಚಿಸುವುದಲ್ಲ, ಕರ್ತವ್ಯಗಳ ಬಗ್ಗೆಯೂ ಯೋಚಿಸಬೇಕು , ಎರಡನ್ನೂ ಪ್ರತ್ಯೇಕಿಸಿ ನೋಡಲಾಗದು, ಪ್ರಜೆಗಳು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿರುವಂತೆಯೇ ತಮ್ಮ ಕರ್ತವ್ಯವನ್ನೂ ನಿಭಾಯಿಸಬೇಕು ” ಎಂದು ಹೇಳಿದ್ದಾರೆ. ಈ ಹಿಂದೆ ೨೦೨೦ರಲ್ಲೂ ಒಮ್ಮೆ ಪ್ರಧಾನಿ ಮೋದಿ “ ನಾವು ಪ್ರಾಮಾಣಿಕತೆಯಿಂದ ನಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ಹಕ್ಕುಗಳಿಗೆ ಆಗ್ರಹಪಡಿಸುವ ಅವಶ್ಯಕತೆಯೇ ಇರಲಾರದು, ಅದು ಸಹಜವಾಗಿ ಲಭಿಸುತ್ತದೆ ” ಎಂದು ಹೇಳಿದ್ದರು. ೧೯೭೫ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ ೪೨ರ ಮೂಲಕ ಅಳವಡಿಸಲಾದ ಮೂಲಭೂತ ಕರ್ತವ್ಯಗಳಲ್ಲಿ,ಸಂವಿಧಾನ ಬದ್ಧತೆ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ, ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವದ ರಕ್ಷಣೆ, ವೈಜ್ಞಾನಿಕ ಮನೋಭಾವದ ಪೋಷಣೆ ಇವು ಪ್ರಮುಖವಾಗಿ ಕಾಣುತ್ತವೆ.
ಭಾರತದ ಯಾವುದೇ ಪ್ರಜೆಯೂ ತನ್ನ ಸಾಂವಿಧಾನಿಕ ಅಥವಾ ಸಹಜ ಮಾನವ ಹಕ್ಕುಗಳನ್ನು ಪ್ರತಿಪಾದಿಸಲು, ಈ ಕರ್ತವ್ಯಗಳನ್ನು ನಿಭಾಯಿಸಬೇಕು ಎಂಬ ಪೂರ್ವಷರತ್ತು ಅನ್ವಯಿಸಲಾಗದು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಜನತೆಯ ಮಾನವ ಹಕ್ಕುಗಳನ್ನು ಸಂರಕ್ಷಿಸುವುದು ಪ್ರಭುತ್ವದ ಆದ್ಯತೆ ಮತ್ತು ಜವಾಬ್ದಾರಿ. ಅದೇ ವೇಳೆ ತನ್ನ ಸಾಂವಿಧಾನಿಕ ಕರ್ತವ್ಯಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಪ್ರಜೆಯನ್ನು ಶಿಕ್ಷಿಸುವ ಹಕ್ಕನ್ನೂ ಸಂವಿಧಾನ ನೀಡಿದೆ. ಸಮಸ್ತ ಭಾರತದ ಜನತೆ ತಮ್ಮ ಸಾಂವಿಧಾನಿಕ ಮತ್ತು ನೈತಿಕ ಜವಾಬ್ದಾರಿ ಮತ್ತು ಕರ್ತವ್ಯವನ್ನು ನಿಭಾಯಿಸುತ್ತಿರುವುದರಿಂದಲೇ ಭಾರತ ಇಂದು ಜಗತ್ತಿನ ಅಗ್ರಮಾನ್ಯ ರಾಷ್ಟ್ರಗಳಲ್ಲೊಂದಾಗಿ ಹೊರಹೊಮ್ಮಿದೆ. ೧೩೫ ಕೋಟಿ ಜನಸಂಖ್ಯೆಯಲ್ಲಿ ಸಂಭವಿಸುವ ಒಂದೆರಡು ಲೋಪಗಳು ಸಹಜವಾದದ್ದು.
ಹಾಗಾಗಿ ಭಾರತದ ಪ್ರತಿಯೊಬ್ಬ ಪ್ರಜೆಗೂ ತನ್ನ ಮೂಲಭೂತ/ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ನೈತಿಕ ಅಧಿಕಾರ ಇದ್ದೇ ಇರುತ್ತದೆ. ಆದರೆ ಒಂದು ಪ್ರಜಾಪ್ರಭುತ್ವವನ್ನು ನಿರ್ವಹಿಸುವ ನಿಟ್ಟಿನಲ್ಲಿ, ಸಂವಿಧಾನದ ಮೂಲ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಈ ದೇಶದ ಅಧಿಕಾರ ಋಜುಮಾರ್ಗದಲ್ಲಿ ನಡೆಯುತ್ತಿದೆಯೇ ? ಸಾಮಾಜಿಕಾರ್ಥಿಕ ಸಮಾನತೆ ಮತ್ತು ಮಾನವ ಸೌಹಾರ್ದತೆಯನ್ನು ಸಾಧಿಸುವಲ್ಲಿ ಆಳುವ ವರ್ಗಗಳು ಸಫಲವಾಗಿವೆಯೇ ? ಬಡವ-ಶ್ರೀಮಂತರ ನಡುವಿನ ಕಂದರವನ್ನು ಕಡಿಮೆ ಮಾಡಲು ಸಾಧ್ಯವಾಗಿದೆಯೇ ? ಪ್ರಜೆಗಳಿಗೆ ಸಂವಿಧಾನದತ್ತ ಹಕ್ಕುಗಳನ್ನು ಚಲಾಯಿಸುವ ಸ್ವಾತಂತ್ರö್ಯವನ್ನು ನೀಡಲಾಗಿದೆಯೇ ? ಭಾರತದ ಬಹುತ್ವದ ನೆಲೆಗಳನ್ನು, ಬಹುಸಾಂಸ್ಕೃತಿಕ ಆಶಯಗಳನ್ನು ಮತ್ತು ಸಾಮಾಜಿಕ-ಸಾಂಸ್ಕೃತಿಕ ವೈವಿಧ್ಯತೆಯನ್ನು ಗೌರವಿಸಲಾಗುತ್ತಿದೆಯೇ ?
ಈ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುವ ನೈತಿಕತೆಯನ್ನೇ ಅಧಿಕಾರ ರಾಜಕಾರಣದ ಫಲಾನುಭವಿಗಳು ಕಳೆದುಕೊಂಡಿದ್ದಾರೆ. ಕಳೆದ ಮೂರು ದಶಕಗಳ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಜನತೆಯ ಸಾಂವಿಧಾನಿಕ ಹಕ್ಕುಗಳನ್ನು ನಿಯಂತ್ರಿಸುವ ಮತ್ತು ನಿರ್ಬಂಧಿಸುವ ಮುನ್ನ, ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ತಮ್ಮ ಸಾಧನೆಯನ್ನು ಪರಾಮರ್ಶೆ ಮಾಡಿಕೊಳ್ಳುವ ಆತ್ಮಾವಲೋಕನದ ಪರಿಜ್ಞಾನ ಆಳುವ ವರ್ಗಗಳಲ್ಲಿರಬೇಕು. ಭಾರತದ ಸಂದರ್ಭದಲ್ಲಿ ಇದು ಕಾಣುವುದಿಲ್ಲ. ಇಂದು ಭಾರತದ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಶೇ ೪೨ರಷ್ಟಿರುವ ಅಪರಾಧ ಹೊತ್ತವರನ್ನು ಹೊತ್ತುಕೊಂಡಿದ್ದು, ಭಾರತದ ಆಡಳಿತ ವ್ಯವಸ್ಥೆ ಪಾಪದ ಕೂಪದಂತೆ ಕಾಣುತ್ತಿದೆ. ಶೇ ೯೦ಕ್ಕಿಂತಲೂ ಹೆಚ್ಚು ಕೋಟ್ಯಧಿಪತಿಗಳೂ ಇದ್ದಾರೆ. ನಿರೀಕ್ಷಣಾ ಜಾಮೀನು ಪಡೆದಿರುವ ಅನೇಕರು ಇಂದು ಶಾಸನ ಸಭೆಗಳಲ್ಲಿ ವಿರಾಜಮಾನರಾಗಿದ್ದಾರೆ.
ಈ ಆರೋಪಿತ ಜನಪ್ರತಿನಿಧಿಗಳ ಅಪರಾಧ ಸಾಬೀತಾಗಿಲ್ಲ ಎಂಬ ಕಾರಣಕ್ಕೆ ಮುಕ್ತ ಸ್ವಾತಂತ್ರ್ಯಕ್ಕೆ ಅರ್ಹರಾಗುವುದಾದರೆ, ದೇಶದ ಜೈಲುಗಳಲ್ಲಿ ವರ್ಷಗಳಿಂದ ಕೊಳೆಯುತ್ತಿರುವ ಅಸಂಖ್ಯಾತ ಪತ್ರಕರ್ತರು, ಸಾಮಾಜಿಕ-ರಾಜಕೀಯ ಕಾರ್ಯಕರ್ತರು, ಬುದ್ಧಿಜೀವಿಗಳು ಮತ್ತು ಆಡಳಿತ ನೀತಿಗಳ ವಿರುದ್ಧ ಹೋರಾಡುತ್ತಿರುವ ಕ್ರಿಯಾಶೀಲ ವ್ಯಕ್ತಿಗಳು ಏಕೆ ಅರ್ಹರಾಗುವುದಿಲ್ಲ ? ೨೦೦೨ರ ಗುಜರಾತ್ ಹತ್ಯಾಕಾಂಡದ ರೂವಾರಿಗಳು ಯಾರೆಂಬುದೇ ತೀರ್ಮಾನಿಸಲಾಗಿಲ್ಲ, ಆದರೆ ಈ ಹತ್ಯಾಕಾಂಡದ ಒಳಸತ್ಯಗಳನ್ನು ಬಹಿರಂಗಪಡಿಸಬಲ್ಲ ಓರ್ವ ನಿಷ್ಠಾವಂತ ಪೊಲೀಸ್ ಅಧಿಕಾರಿ, ಸಂಜೀವ್ ಭಟ್, ೩೦ ವರ್ಷದ ಹಳೆಯ ಮೊಕದ್ದಮೆಯೊಂದರ ಆರೋಪಿಯಾಗಿ ಸೆರೆವಾಸ ಅನುಭವಿಸುತ್ತಿದ್ದಾರೆ. ಇದು ನ್ಯಾಯವ್ಯವಸ್ಥೆಯ ಲೋಪವೋ ಅಥವಾ ಆಳುವ ವರ್ಗಗಳ ತಾರತಮ್ಯ ನೀತಿಯ ಪರಿಣಾಮವೋ ಎನ್ನುವುದಕ್ಕೆ, ಸುಧಾ ಭರದ್ವಾಜ್, ಗೌತಮ್ ನವಲಖ, ಉಮರ್ ಖಾಲಿದ್, ಸಿದ್ದಿಖಿ ಕಪ್ಪನ್, ಆನಂದ್ ತೇಲ್ತುಂಬ್ಡೆ, ಪ್ರೊ ಸಾಯಿಬಾಬಾ ಮುಂತಾದವರ ಬಂಧನ ಮತ್ತು ಸೆರೆವಾಸವೇ ಸಾಕ್ಷಿ. ಇವರೆಲ್ಲರೂ ಅಪರಾಧ ಸಾಬೀತಾಗದೆ ಇದ್ದರೂ, ಜಾಮೀನು ಸಹ ದೊರೆಯದೆ ಜೈಲಿನಲ್ಲಿದ್ದಾರೆ. ಸ್ಟಾನ್ ಸ್ವಾಮಿಯಂತಹ ವೃದ್ಧರು ಹುತಾತ್ಮರಾಗಿದ್ದಾರೆ.
ದುರಂತ ಎಂದರೆ ಭಾರತದ ೧೩೫ ಕೋಟಿ ಜನರ ಬದುಕನ್ನು ನಿರ್ಧರಿಸುವ ಕಾನೂನುಗಳನ್ನು ರೂಪಿಸುವಲ್ಲಿ, ಅನುಮೋದಿಸುವಲ್ಲಿ ಈ ಆರೋಪ ಹೊತ್ತವರ ಅಧಿಕೃತ ಸಮ್ಮತಿ ಅವಶ್ಯವಾಗಿ ಬೇಕಾಗುತ್ತದೆ. ಇಲ್ಲಿ ಸಾಂವಿಧಾನಿಕ ಮೂಲಭೂತ ಕರ್ತವ್ಯಗಳ ಪ್ರಶ್ನೆ ಎದುರಾಗುತ್ತದೆ. ಸಾಂವಿಧಾನಿಕ ನೈತಿಕತೆಯ ಪ್ರಶ್ನೆ ಎದುರಾಗುತ್ತದೆ. ಲಖೀಂಪುರ ಖೇರಿಯಲ್ಲಿ ಕೇಂದ್ರ ಸಚಿವರೊಬ್ಬರ ಪುತ್ರನಿಂದ ಹತ್ಯೆ ನಡೆಯುತ್ತದೆ, ಈ ಆರೋಪ ಹೊತ್ತ ಸಚಿವರನ್ನು ವಜಾಮಾಡುವುದಿರಲಿ, ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಲೂ ಪ್ರಧಾನಮಂತ್ರಿಗಳು ಮುಂದಾಗುವುದಿಲ್ಲ. ಆ ಸಚಿವರು ಇನ್ನೂ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಇತ್ತೀಚೆಗೆ ಮಂಗಳೂರು ಮತ್ತು ಕರ್ನಾಟಕದ ಕರಾವಳಿಯಲ್ಲಿ ಹೆಚ್ಚಾಗುತ್ತಿರುವ ಕೋಮು ದ್ವೇಷದ ಧಾಳಿಗಳು, ನೈತಿಕ ಪೊಲೀಸ್‌ಗಿರಿ ಸರ್ಕಾರವನ್ನು ಜಾಗೃತಗೊಳಿಸಬೇಕಿತ್ತು. ಆದರೆ “ ನೈತಿಕ ಪೊಲೀಸ್‌ಗಿರಿ, ಇದು ಸೂಕ್ಷ್ಮವಾಗಿರುವ ವಿಚಾರ. ಸಮಾಜದಲ್ಲಿ ನಾವೆಲ್ಲರೂ ಜವಾಬ್ದಾರಿ ಹೊಂದಬೇಕಾಗುತ್ತದೆ. ಸಮಾಜದಲ್ಲಿ ಹಲವಾರು ಭಾವನೆಗಳ ಜನರಿದ್ದಾರೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೆ ನಾವು ನಡೆದುಕೊಳ್ಳಬೇಕಾಗುತ್ತದೆ, ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ರಿಯಾಕ್ಷನ್ ಆಗುತ್ತದೆ ” ಎಂದು ಹೇಳುವ ಮೂಲಕ, ಹಿಂದೂ ಮೂಲಭೂತವಾದಿಗಳ ಅಟ್ಟಹಾಸಕ್ಕೆ ಅಧಿಕೃತ ಅನುಮೋದನೆ ನೀಡಿದ್ದಾರೆ. ಅಂದರೆ ಒಂದು ಮತ ಅಥವಾ ಜಾತಿಯ ಸಮಸ್ತ ಜನತೆಯ ಭಾವನೆಗಳಿಗೆ ಕೆಲವೇ ಪುಂಡರ ಒಂದು ಗುಂಪು ಅಧಿಕೃತ ವಕ್ತಾರರಾಗಿ, ಭಾವನೆಗಳಿಗೆ ಧಕ್ಕೆ ಬಂದಾಗ ರಿಯಾಕ್ಷನ್‌ಗೆ ಮುಂದಾಗುವುದು ಸರಿಯೇ ?
“ ನೈತಿಕತೆ ” ಎನ್ನುವುದೇ ಸಾಪೇಕ್ಷ ವಿದ್ಯಮಾನವಾಗಿರುವ ಸಂದರ್ಭದಲ್ಲಿ, ವಿಶ್ವ ಹಿಂದೂ ಪರಿಷತ್ ತನ್ನ ಕಾರ್ಯಕರ್ತರಿಗೆ ತ್ರಿಶೂಲ ವಿತರಿಸುವುದು, ಉಡುಪಿಯಲ್ಲಿ, ಬೆಳಗಾವಿಯಲ್ಲಿ ಸಾರ್ವಜನಿಕವಾಗಿ ತಲ್ವಾರ್ ಪ್ರದರ್ಶನದ ಮೆರವಣಿಗೆ ಮಾಡುವುದು ಒಂದು ಕೋಮಿನ ದೃಷ್ಟಿಯಲ್ಲಿ ನೈತಿಕ ಎನಿಸಿಬಿಡುತ್ತದೆ. ಹತ್ಯೆಗೊಳಗಾದ, ಹಲ್ಲೆಗೊಳಗಾಧ ಅಲ್ಪಸಂಖ್ಯಾತರ ಹಕ್ಕೊತ್ತಾಯಗಳು ಅನೈತಿಕ ಎನಿಸಿಬಿಡುತ್ತದೆ. ಮುಖ್ಯಮಂತ್ರಿಗಳ ಈ ಮಾತುಗಳು ಯಾವ ಸಂದೇಶ ನೀಡುತ್ತವೆ ? “ಧಕ್ಕೆಗೊಳಗಾದ ಭಾವನೆಗಳು ” ಹಿಂಸಾಕೃತ್ಯಗಳಿಗೆ ಪ್ರಚೋದನೆ ನೀಡಿದರೆ ಅದನ್ನು ಸಹಿಸಿಕೊಳ್ಳಬೇಕೆಂದೇ ? ಇದು ಎಲ್ಲ ಮತಗಳ ಮೂಲಭೂತವಾದಿಗಳ ಕೈಗೆ ಒಂದು ಪ್ರಬಲ ಅಸ್ತç ನೀಡಿದಂತೆ ಅಲ್ಲವೇ ? ಈ ಹೇಳಿಕೆಯ ಬೆನ್ನಲ್ಲೇ ಯುವ ಜನರಿಗೆ ತ್ರಿಶೂಲ ವಿತರಣೆ ಮಾಡುವ ಕಾರ್ಯಕ್ರಮವೂ ಜರುಗಿದೆ. ಇಲ್ಲಿ ಸರ್ಕಾರದ ನೈತಿಕ ಜವಾಬ್ದಾರಿ ಇಲ್ಲವೇ ? ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಬೇಕಾದ ಕರ್ತವ್ಯ ಇಲ್ಲವೇ ? ಲಖೀಂಪುರದ ಹತ್ಯೆಯನ್ನು ಕುರಿತು ಪ್ರತಿಕ್ರಯಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘಟನೆಯನ್ನು ಖಂಡಿಸಿದ್ದರೂ, “ ಇಂತಹ ಘಟನೆಗಳು ಸಹಜವಾಗಿ ನಡೆಯುತ್ತಲೇ ಇರುತ್ತವೆ ” ಎಂದು ಹೇಳುವ ಮೂಲಕ, ಒಂದು ಹತ್ಯೆಯನ್ನು ಸಾಮಾನ್ಯೀಕರಿಸಲು ಯತ್ನಿಸಿದ್ದಾರೆ.
ನಾವು ಯಾವ ನೈತಿಕತೆಯನ್ನು ಕುರಿತು ಮಾತನಾಡಬೇಕಿದೆ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಶೋಧಿಸುತ್ತಲೇ ಭಾರತದ ಜನತೆ ಕಳೆದ ಐದಾರು ವರ್ಷಗಳಲ್ಲಿ ಕಳೆದುಕೊಂಡಿರುವ, ಕಳೆದುಕೊಳ್ಳುತ್ತಿರುವ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಯೋಚಿಸಬೇಕಿದೆ ಅಲ್ಲವೇ ? ಮಾನವ ಹಕ್ಕುಗಳನ್ನು ಕೇವಲ ಕಾನೂನು/ನ್ಯಾಯ ವ್ಯವಸ್ಥೆಯ ಚೌಕಟ್ಟಿನಲ್ಲಿ ಮಾತ್ರವೇ ನೋಡಬೇಕಿಲ್ಲ. ನಮ್ಮ ಸಂವಿಧಾನ ಸಾರ್ವಭೌಮ ಪ್ರಜೆಗಳಿಗೆ ನೀಡಿರುವ ಆಹಾರದ ಹಕ್ಕು, ಶಿಕ್ಷಣದ ಹಕ್ಕು, ಜೀವನದ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರö್ಯದ ಹಕ್ಕು ಹಂತ ಹಂತವಾಗಿ ಇಲ್ಲವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಲ್ಲವೇ ? ಪ್ರಾತಿನಿಧಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಯ ಬದುಕನ್ನು ರೂಪಿಸುವ ಆಡಳಿತ ನೀತಿಗಳು ಈ ಹಕ್ಕುಗಳನ್ನು ಮಾನ್ಯ ಮಾಡಬೇಕಾಗುತ್ತದೆ. ತಮ್ಮಿಂದ ಚುನಾಯಿತರಾದ ಪ್ರತಿನಿಧಿಗಳು ರೂಪಿಸುವ ನೀತಿಗಳು, ಕೈಗೊಳ್ಳುವ ಕ್ರಮಗಳು ಸಂವಿಧಾನಬದ್ಧವಾಗಿದೆಯೇ ಎಂದು ತಿಳಿಯುವ ಹಕ್ಕು ಜನತೆಗೆ ಇರುತ್ತದೆ. ಈ ನಿಟ್ಟಿನಲ್ಲಿ ರೂಪಿಸಲಾದ ಮಾಹಿತಿ ಹಕ್ಕು ಕಾಯ್ದೆಯನ್ನು ನರೇಂದ್ರ ಮೋದಿ ಸರ್ಕಾರ ಶಿಥಿಲಗೊಳಿಸಿದೆ.
ಹಿಂದುತ್ವ ರಾಜಕಾರಣದಲ್ಲಿ ಗೋ ಹತ್ಯೆ ನಿಷೇಧದ ನೆಪದಲ್ಲಿ ಸಾಮಾನ್ಯ ಜನತೆಯ ಆಹಾರದ ಹಕ್ಕು ಹಲ್ಲೆಗೊಳಗಾಗಿದೆ. ಮತಾಂತರ ನಿಷೇಧ, ಲವ್ ಜಿಹಾದ್ ಕಲ್ಪನೆಗಳ ಮೂಲಕ ಸಂವಿಧಾನದತ್ತ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ. ಸಾರ್ವತ್ರಿಕ ಶಿಕ್ಷಣದ ಸಾಂವಿಧಾನಿಕ ಹಕ್ಕುಗಳು ಕ್ರಮೇಣ ಮರೀಚಿಕೆಯಾಗುತ್ತಿದೆ. ರೈತರು ತಮ್ಮ ಕೃಷಿ ಭೂಮಿಯ ಮೇಲಿನ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ಸುಲಭ ಮಾರ್ಗ ರೂಪಿಸುವ ಶಾಸನಗಳು ಈ ದೇಶದ ನೆಲ, ಜಲ, ಅರಣ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಕಾರ್ಪೋರೇಟ್‌ಗಳಿಗೆ ಒಪ್ಪಿಸುವ ಸುಲಭ ಸಾಧನಗಳಾಗಿವೆ. ಈ ಸಂಪನ್ಮೂಲಗಳ ಮೇಲೆ ಈ ದೇಶದ ಜನತೆಯ ಹಕ್ಕು ಸಾಂವಿಧಾನಿಕವಾದದ್ದು. ಈ ಹಕ್ಕುಗಳಿಗೆ ಚ್ಯುತಿ ಬಂದಾಗ ವ್ಯಕ್ತವಾಗುವ ಪ್ರತಿರೋಧವನ್ನು ದಮನಿಸಲು, ಸಂವಿಧಾನ ವಿರೋಧಿ ಕರಾಳ ಶಾಸನಗಳನ್ನು ಬಳಸಲಾಗುತ್ತಿದೆ.
ದೇಶದಲ್ಲಿ ನಿರಂತರವಾಗಿ ದಲಿತರು, ಮಹಿಳೆಯರು ದೌರ್ಜನ್ಯ, ಅತ್ಯಾಚಾರಗಳಿಗೆ ಈಡಾಗುತ್ತಿರುವ ಸಂದರ್ಭದಲ್ಲೂ ಅಧಿಕಾರ ರಾಜಕಾರಣದ ಫಲಾನುಭವಿಗಳು ಇದೇ ರೀತಿಯ ಅಸೂಕ್ಷ್ಮತೆಯನ್ನು ಪ್ರದರ್ಶಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಹೋಗಿದೆ. ಜಾತಿ ದೌರ್ಜನ್ಯ, ಅತ್ಯಾಚಾರ, ಕೋಮು ದ್ವೇಷ, ಗುಂಪು ಥಳಿತ, ಸಾಮೂಹಿಕ ಹತ್ಯೆ ಮತ್ತು ಸಾಂಸ್ಕೃತಿಕ ಗೂಂಡಾಗಿರಿಗೆ ಬಲಿಯಾಗಿ, ಸಾವಿಗೀಡಾಗುವ ಜನತೆಯ ನೋವಿಗೆ ಸ್ಪಂದಿಸಬೇಕಾದ ಆಡಳಿತ ವ್ಯವಸ್ಥೆ ಇಂದು ಕನಿಷ್ಠ ಮಾನವೀಯ ಪ್ರಜ್ಞೆಯನ್ನೂ ಕಳೆದುಕೊಂಡು, ಜಡಗಟ್ಟಿದಂತೆ ತೋರುತ್ತಿದೆ. ಈ ಜಡಗಟ್ಟಿದ ಮನಸ್ಥಿತಿಗೆ ಶಿಖರವಿಟ್ಟಂತೆ ದೇಶದ ಗೃಹಸಚಿವ ಅಮಿತ್ ಶಾ “ ಅನಕ್ಷರಸ್ಥರು ಈ ದೇಶಕ್ಕೆ ದೊಡ್ಡ ಹೊರೆ, ಅನಕ್ಷರಸ್ಥರು ಎಂದಿಗೂ ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ ” ಎಂದು ಹೇಳುವ ಮೂಲಕ ಅಸೂಕ್ಷ್ಮತೆ ಈ ದೇಶದ ಆಡಳಿತ ವ್ಯವಸ್ಥೆಯ ಗರ್ಭದಲ್ಲೇ ಅಡಗಿದೆ ಎನ್ನುವುದನ್ನು ನಿರೂಪಿಸಿದ್ದಾರೆ.
ಭಾರತದಲ್ಲಿ ಇನ್ನೂ ಅನಕ್ಷರಸ್ಥರಿದ್ದರೆ ಅದಕ್ಕೆ ೭೪ ವರ್ಷಗಳ ಆಡಳಿತ ವೈಫಲ್ಯವೇ ಕಾರಣವಲ್ಲವೇ ? ಅನಕ್ಷರಸ್ಥ ದುಡಿಮೆಯ ಕೈಗಳೇ ಈ ದೇಶದ ಸಂಪತ್ತಿನ ವೃದ್ಧಿಗೆ ಕಾರಣ ಎನ್ನುವ ವಾಸ್ತವದ ಅರಿವು ಇವರಿಗಿಲ್ಲವೇ ? ಈಗ ಹೊಸ ಶಿಕ್ಷಣ ನೀತಿಯ ಮೂಲಕ ಅನಕ್ಷರಸ್ಥ ಜನಸಮುದಾಯಗಳನ್ನು ಮತ್ತಷ್ಟು ಶಿಕ್ಷಣ ವಂಚಿತರನ್ನಾಗಿ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಹೀಗೆ ಹೇಳುವ ನೈತಿಕತೆಯಾದರೂ ಇದೆಯೇ ? ಅಕ್ಷರ ಕಲಿತವರ ಭ್ರಷ್ಟತೆ, ಮತಾಂಧತೆ, ಜಾತೀಯತೆ ಮತ್ತು ಅವೈಚಾರಿಕ ಮೌಢ್ಯಗಳೇ ಈ ದೇಶಕ್ಕೆ ಹೊರೆಯಾಗಿದೆ. ಈ ಹೊರೆಯನ್ನು ಹೊತ್ತು ಇಂದಿಗೂ ಅವಕಾಶವಂಚಿತರಾಗಿಯೇ ಬದುಕುತ್ತಿರುವ ಕೋಟ್ಯಂತರ ಅನಕ್ಷರಸ್ಥರು ಈ ದೇಶದ ಅಮೂಲ್ಯ ಆಸ್ತಿಯೇ ಹೊರತು, ಹೊರೆ ಅಲ್ಲ. ಆದರೆ ಅಧಿಕಾರ ರಾಜಕಾರಣದ ಫಲಾನುಭವಿಗಳಿಂದ ವ್ಯತಿರಿಕ್ತವಾದ ಸಂದೇಶ ರವಾನೆಯಾಗುತ್ತಿದೆ. ಈ ಸಂದೇಶಗಳೇ ಭ್ರಷ್ಟರನ್ನು, ಮತಾಂಧರನ್ನು, ಮೂಲಭೂತವಾದಿಗಳನ್ನು, ಅತ್ಯಾಚಾರಿಗಳನ್ನು, ಹಂತಕರನ್ನು ಮತ್ತಷ್ಟು ಹಿಂಸೆಗೆ ಪ್ರಚೋದಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆ ಆಳುವ ಪ್ರತಿನಿಧಿಗಳಲ್ಲಿರಬೇಕಲ್ಲವೇ ? ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ಚುನಾಯಿತರಾಗುವ ಜನಪ್ರತಿನಿಧಿಗಳ ಈ ಅಸೂಕ್ಷ್ಮತೆಯನ್ನು ಗಮನಿಸಿಯೂ, ಅಧಿಕಾರ ರಾಜಕಾರಣದ ಮೋಹಕ್ಕೆ ಬಲಿಯಾಗಿ ಈ ಅಸೂಕ್ಷö್ಮತೆಯನ್ನು ಕಂಡೂ ಕಾಣದಂತಿರುವ ಕೆಲವೇ ಸಂವಿಧಾನಬದ್ಧ ರಾಜಕಾರಣಿಗಳೂ ಸಹ ತಮ್ಮ ಈ ಸಾಂವಿಧಾನಿಕ ಕರ್ತವ್ಯವನ್ನು ಮರೆತಿದ್ದಾರೆಯೇ ?
ಇಂತಹ ಒಂದು ಅರಾಜಕ ವ್ಯವಸ್ಥೆಯನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪೋಷಿಸುವ ಅಧಿಕಾರ ರಾಜಕಾರಣದ ಫಲಾನುಭವಿಗಳಿಗೆ, ಸಾರ್ವಭೌಮ ಪ್ರಜೆಗಳ ಹಕ್ಕುಗಳನ್ನು ಹತ್ತಿಕ್ಕುವ ನೈತಿಕತೆ ಇರಲು ಸಾಧ್ಯವೇ ? ತಮ್ಮ ಜೀವನ ಮತ್ತು ಜೀವನೋಪಾಯಕ್ಕಾಗಿ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಹೋರಾಡುತ್ತಿರುವ ಕೋಟ್ಯಂತರ ಜನತೆಗೆ ಕರ್ತವ್ಯ ನಿರ್ವಹಣೆಯ ಬಗ್ಗೆ ಉಪದೇಶಿಸುವ ಮುನ್ನ, ಈ ದೇಶದ ಆಳುವ ವರ್ಗಗಳು, ಅಧಿಕಾರ ರಾಜಕಾರಣದ ಫಲಾನುಭವಿಗಳು ತಮ್ಮ ಆತ್ಮ ಪರಿಶೋಧನೆ ಮಾಡಿಕೊಳ್ಳುವುದು ಒಳಿತು. ದುಡಿಮೆಯೇ ಬದುಕು ಎಂದು ನಂಬಿ ಬಾಳುವ ಬಡ ಜನತೆ ಎಂದಿಗೂ ಕರ್ತವ್ಯ ಲೋಪ ಎಸಗುವುದಿಲ್ಲ. ಈ ನೈತಿಕತೆಯೇ ಅವರ ಹಕ್ಕೊತ್ತಾಯಗಳಿಗೂ ಆಧಾರ. ತಮ್ಮ ಸಾಂವಿಧಾನಿಕ ಕರ್ತವ್ಯ ಮತ್ತು ನೈತಿಕತೆಯನ್ನು ಮರೆತಿರುವ ಈ ದೇಶದ ಅಧಿಕಾರ ರಾಜಕಾರಣ ತನ್ನ ಹೊಣೆಯರಿತು ಕಾರ್ಯ ನಿರ್ವಹಿಸಿದರೆ, ಸ್ವಾತಂತ್ರ್ಯ ಪೂರ್ವದ ಕನಸುಗಳು ಸಾಕಾರಗೊಳ್ಳಲು ಸಾಧ್ಯ.