ಕೋಮುವಾದ ಮತ್ತು ಮತೀಯವಾದ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಸೃಷ್ಟಿಯಾಗುವ ವಿದ್ಯಮಾನಗಳಲ್ಲ. ಚರಿತ್ರೆಯುದ್ದಕ್ಕೂ ಮಾನವ ಸಮಾಜದ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದರೆ, ಅರ್ಥ ವ್ಯವಸ್ಥೆ ಸಾಮಾನ್ಯ ಜನತೆಯ ಬದುಕಿನ ಮೇಲೆ ತನ್ನದೇ ಆದ ನಿರ್ಬಂಧ ಮತ್ತು ಹೇರಿಕೆಗಳ ಮೂಲಕ ನಿಯಂತ್ರಣ ಸಾಧಿಸುವ ಹಾಗೆಯೇ, ಈ ಅರ್ಥ ವ್ಯವಸ್ಥೆಯನ್ನು ಪೋಷಿಸಿ ಸಂರಕ್ಷಿಸುವ ಸ್ಥಾಪಿತ ವ್ಯವಸ್ಥೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಜಾತಿ ಮತ್ತು ಧರ್ಮಗಳ ಚೌಕಟ್ಟಿನಲ್ಲಿ ಜನಜೀವನವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುತ್ತದೆ. ಈ ವ್ಯವಸ್ಥೆಯ ಪರಿಭಾಷೆಯೇ ಸಾಮಾಜಿಕ ವಿದ್ಯಮಾನಗಳ ಸಂದರ್ಭದಲ್ಲಿ ಅಧಿಕೃತವಾಗಿ ಸ್ವೀಕೃತವೂ ಆಗಿಬಿಡುತ್ತದೆ. ಇಂತಹ ಸನ್ನಿವೇಶದಲ್ಲಿ ವ್ಯವಸ್ಥೆಯನ್ನು ನಿಯಂತ್ರಿಸುವ ಶಕ್ತಿಗಳು ತಮ್ಮದೇ ಆದ ಸಾಂಸ್ಥಿಕ ಅಸ್ತಿತ್ವವನ್ನು ಸಂರಕ್ಷಿಸಿಕೊಳ್ಳುವ ಮಾರ್ಗದಲ್ಲಿ, ಹಲವು ಶಿಷ್ಟಾಚಾರಗಳನ್ನು ರೂಪಿಸುತ್ತಾ ಜನಸಾಮಾನ್ಯರ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ತನ್ನ ಇರುವಿಕೆಯನ್ನು ಖಚಿತಪಡಿಸಿಕೊಳ್ಳುತ್ತವೆ.
ಇಂತಹ ಒಂದು ಶಕ್ತಿಯನ್ನು ಎರಡು ಮಜಲುಗಳಲ್ಲಿ ಕಾಣಬಹುದು. ಮೊದಲನೆಯದು ಬಂಡವಾಳಶಾಹಿ ಅರ್ಥವ್ಯವಸ್ಥೆ ಮತ್ತು ಎರಡನೆಯದು ಮತ ಧರ್ಮಗಳನ್ನು ಪ್ರತಿಪಾದಿಸುವ ಸಾಂಸ್ಥಿಕ ಶಕ್ತಿಗಳು. ಯಾವುದೇ ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಈ ಎರಡೂ ಶಕ್ತಿಗಳ ವಿರುದ್ಧ ಅವಕಾಶವಂಚಿತ ಜನರ ಕ್ಷೀಣ ಧ್ವನಿ ಸದಾ ಜೀವಂತಿಕೆಯಿಂದಿರುತ್ತದೆ. ಆದರೆ ಈ ಜನದನಿಯನ್ನು ಸಾಮುದಾಯಿಕ ಚೌಕಟ್ಟಿನಲ್ಲಿ ಬಂಧಿಸುವ ಮೂಲಕ, ಸ್ಥಾಪಿತ ಮತಗಳು ತಮ್ಮದೇ ಆದ ಪಾರಮ್ಯಕ್ಕಾಗಿ ಹಪಹಪಿಸುತ್ತಿರುತ್ತವೆ. ಭಾರತದ ಸಂದರ್ಭದಲ್ಲಿ ಹೇಳುವುದಾದರೆ ಶ್ರೇಣೀಕೃತ ಜಾತಿ ವ್ಯವಸ್ಥೆ ಪೋಷಿಸುವಂತಹ ಜಾತಿ ಪಾರಮ್ಯದ ನೆಲೆಗಳು, ಹಿಂದೂ ಇಸ್ಲಾಂ ಮತ್ತು ಕ್ರೈಸ್ತ ಮತದ ಧಾರ್ಮಿಕ ನೆಲೆಗಳು ಜನಸಾಮಾನ್ಯರ ಈ ಧ್ವನಿಯ ಮೇಲೆ ತಮ್ಮ ನಿಯಂತ್ರಣ ಸಾಧಿಸಲು ನಿರಂತರ ಪ್ರಯತ್ನ ಮಾಡುತ್ತಿರುತ್ತವೆ.
ಶ್ರಮ ಶೋಷಣೆಯನ್ನಾಧರಿಸಿಯೇ ಸಾಮ್ರಾಜ್ಯಗಳನ್ನು ವಿಸ್ತರಿಸಲೆತ್ನಿಸುವ ಬಂಡವಾಳಶಾಹಿ ಅರ್ಥವ್ಯವಸ್ಥೆ ಮೂಲತಃ ಇಂತಹ ನಿಯಂತ್ರಣಕ್ಕೊಳಪಟ್ಟ ಜನತೆಯನ್ನೇ ಕೇಂದ್ರೀಕರಿಸಿ ತನ್ನ ಬಾಹುಗಳನ್ನು ಬಿಗಿಗೊಳಿಸಲು ಯತ್ನಿಸುತ್ತದೆ. ಮುಕ್ತ ಮಾರುಕಟ್ಟೆ ಆರ್ಥಿಕತೆಯು ಬಂಡವಾಳಶಾಹಿಗೆ ಈ ಅವಕಾಶವನ್ನು ಸುಲಭವಾಗಿ ಕಲ್ಪಿಸಿಕೊಡುತ್ತದೆ. ಶ್ರಮಜೀವಿ ವರ್ಗಗಳ ಜೀವನ ಮತ್ತು ಜೀವನೋಪಾಯದ ಮಾರ್ಗಗಳಲ್ಲಿ ಎದುರಾಗುವ ಅಡ್ಡಗೋಡೆಗಳು ಮತ್ತು ಕಂದರಗಳು ಶೋಷಕ ವ್ಯವಸ್ಥೆಗೆ ಪೂರಕವಾಗಿ ಪರಿಣಮಿಸುತ್ತವೆ. ಬಡತನ, ಹಸಿವು, ನಿರುದ್ಯೊಗ, ಅಪೌಷ್ಟಿಕತೆ ಮತ್ತು ಆರ್ಥಿಕ ಅಸಮಾನತೆಯ ಹಲವು ಅಂಶಗಳು ಶೋಷಿತ ಸಮುದಾಯಗಳನ್ನು ಪರಾವಲಂಬಿಗಳನ್ನಾಗಿ ಮಾಡುವ ಅಸ್ತ್ರಗಳಾಗಿ ಪರಿಣಮಿಸುತ್ತವೆ. ಜಾತಿ, ಮತ ಮತ್ತು ಧರ್ಮಾಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಕೀಯ ಮತ್ತು ಆರ್ಥಿಕ ಪಾರಮ್ಯ ಗಳಿಸುವ ಸಾಂಸ್ಥಿಕ ಮತಗಳು ಮತ್ತು ಧಾರ್ಮಿಕ ಸಂಸ್ಥೆಗಳು ಈ ಪರಾವಲಂಬನೆಯನ್ನೇ ಆಧರಿಸಿ ಸ್ಥಾಪಿತ ವ್ಯವಸ್ಥೆಯ ಒಂದು ಭಾಗವಾಗುತ್ತವೆ.
ತಮ್ಮನ್ನು ಶೋಷಣೆಗೊಳಪಡಿಸುವ ಬಂಡವಾಳಶಾಹಿ ಅರ್ಥವ್ಯವಸ್ಥೆ ಮತ್ತು ಈ ವ್ಯವಸ್ಥೆಯನ್ನು ಪೋಷಿಸುವ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆ ಭಾರತದಂತಹ ಶ್ರೇಣೀಕೃತ ವ್ಯವಸ್ಥೆಯ ದೇಶದಲ್ಲಿ ಬಹಳ ಸುಲಭವಾಗಿ ಶ್ರಮಜೀವಿ ವರ್ಗಗಳನ್ನು ಜಾತಿ, ಮತ, ಪಂಥ ಮತ್ತು ಭಾಷಿಕ ಅಸ್ಮಿತೆಗಳ ಆಧಾರದಲ್ಲಿ ವಿಭಜಿಸಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶ್ರಮಜೀವಿ ವರ್ಗಗಳಿಗೆ ತಮ್ಮ ಹಕ್ಕೊತ್ತಾಯಗಳಿಗಾಗಿ ದನಿ ಎತ್ತು ಸರ್ವ ಸ್ವಾತಂತ್ರ್ಯ ಇದ್ದಾಗ್ಯೂ ಈ ಅಸ್ಮಿತೆಗಳ ಗೋಡೆಗಳು ದುಡಿಯುವ ಜನತೆಯನ್ನು ವಿಘಟನೆಗೊಳಪಡಿಸುತ್ತಾ, ಶೋಷಿತರ ಒಗ್ಗಟ್ಟಿನ ಧ್ವನಿಯನ್ನು ಅಡಗಿಸಲು ನೆರವಾಗುತ್ತವೆ. ಒಂದೇ ರೀತಿಯ ಶ್ರಮದಲ್ಲಿ ತೊಡಗಿ, ಒಂದೇ ಪ್ರಮಾಣದ ಶೋಷಣೆಯನ್ನೆದುರಿಸುತ್ತಿದ್ದರೂ, ಶೋಷಣೆಗೊಳಪಡುವ ಜನತೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಜಾತಿ-ಮತ-ಧರ್ಮ ದ್ವೇಷದ ತಾಣಗಳನ್ನಾಗಿ ಮಾಡುವ ಮೂಲಕ, ಶೋಷಿತರ ನಡುವೆ ಬೇಲಿಗಳನ್ನು ನಿರ್ಮಿಸುವ ಮೂಲಕ ಸ್ಥಾಪಿತ ವ್ಯವಸ್ಥೆಯು ಶೋಷಣೆಯ ವಿರುದ್ಧ ಮೂಡಬಹುದಾದ ಪ್ರತಿರೋಧದ ಧ್ವನಿಗಳನ್ನು ಅಡಗಿಸಲು ನಿರಂತರ ಪ್ರಯತ್ನ ಮಾಡುತ್ತಿರುತ್ತದೆ.
ಈ ಸಂದರ್ಭದಲ್ಲಿ ದೈಹಿಕ ಮತ್ತು ಬೌದ್ಧಿಕ ಶ್ರಮ ವ್ಯಯಿಸಿ ತಮ್ಮ ಬದುಕು ಸವೆಸುವ ಶ್ರಮಜೀವಿ ವರ್ಗಗಳು ತಮ್ಮ ವರ್ಗ ನೆಲೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯ. ಕಾರ್ಮಿಕರಾಗಿ ದುಡಿಯುವವರು, ಸೀಮಿತ ಬಂಡವಾಳದೊಡನೆ ವ್ಯಾಪಾರದಲ್ಲಿ ತೊಡಗಿರುವ ಸಣ್ಣ ವ್ಯಾಪಾರಿಗಳು ಮತ್ತು ನಿತ್ಯ ಆದಾಯವನ್ನೇ ನಂಬಿ ಬದುಕುವಂತಹ ಬೀದಿಬದಿಯ ವ್ಯಾಪಾರಿಗಳು, ಜಾತಿ ಆಧಾರಿತ ಕಸುಬುಗಳನ್ನು ಆಧರಿಸಿರುವವರು ಮತ್ತು ವೃತ್ತಿಪರ ಕಸುಬುದಾರರು, ಈ ಎಲ್ಲರೂ ಸಹ ಬಂಡವಾಳಶಾಹಿಯ ಶೋಷಣೆಗೊಳಪಡುವ ದುಡಿಯುವ ವರ್ಗಗಳಾಗಿಯೇ ಕಾಣುತ್ತಾರೆ. ಕಾರ್ಖಾನೆಯ ಕಾರ್ಮಿಕನಿಗೂ, ಭೂಮಿಯನ್ನೇ ಆಶ್ರಯಿಸುವ ಕೃಷಿ ಕಾರ್ಮಿಕನಿಗೂ, ಸ್ವಯಂ ಉದ್ಯೋಗವನ್ನು ಅವಲಂಬಿಸುವವರಿಗೂ, ಕಚೇರಿಗಳಲ್ಲಿ ದುಡಿಯುವ ನೌಕರರಿಗೂ ಇರುವ ವ್ಯತ್ಯಾಸವನ್ನು ಆರ್ಥಿಕ ನೆಲೆಯಲ್ಲಿ ಸುಲಭವಾಗಿ ಗುರುತಿಸಬಹುದು. ಆದರೆ ಈ ಎಲ್ಲ ವರ್ಗಗಳನ್ನು ಶೋಷಣೆಗೊಳಪಡಿಸುವ ವ್ಯವಸ್ಥೆ ಬಂಡವಾಳಶಾಹಿಯೇ ಆಗಿರುತ್ತದೆ.
ಶ್ರಮಜೀವಿ ವರ್ಗಗಳನ್ನು ಪ್ರತಿನಿಧಿಸುವ ಪ್ರತಿಯೊಂದು ಸಂಘಟನೆಯಲ್ಲೂ ಸಾಮಾನ್ಯ ವರ್ಗ ಪ್ರಜ್ಞೆಯನ್ನು ಬೆಳೆಸುವ ಪ್ರವೃತ್ತಿ ಇದ್ದಲ್ಲಿ ಈ ಎಲ್ಲ ಶೋಷಿತ ವರ್ಗಗಳನ್ನೂ ಒಂದೇ ಕಣ್ಣೋಟದೊಂದಿಗೆ ನೋಡುವ ಮತ್ತು ಈ ವರ್ಗಗಳ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಒಂದು ತಾತ್ವಿಕ ಭೂಮಿಕೆಯನ್ನು ಸಿದ್ಧಪಡಿಸಲು ಸಾಧ್ಯ. ತಳ್ಳುಗಾಡಿಯ ವರ್ತಕನಿಗೂ, ರಸ್ತೆ ಬದಿಯ ವ್ಯಾಪಾರಿಗೂ, ಸಣ್ಣ ಕಿರಾಣಿ/ಪೆಟ್ಟಿಗೆ ಅಂಗಡಿಯ ವ್ಯಾಪಾರಿಗೂ ಇರುವ ಅಂತಸ್ತಿನ ಅಥವಾ ಆದಾಯದ ವ್ಯತ್ಯಯಗಳನ್ನು ಬದಿಗಿಟ್ಟು ನೋಡಿದಾಗ, ಈ ಮೂರೂ ವರ್ಗದ ಜನರು ಮೂಲ ಬಂಡವಾಳದ ಶೋಷಣೆಯನ್ನು ಎದುರಿಸುತ್ತಿರುತ್ತಾರೆ. ಒಂದು ಸುಸಜ್ಜಿತ ಕಿರಾಣಿ/ಹಣ್ಣು ತರಕಾರಿ ಅಂಗಡಿ ಬೀದಿ ಬದಿ ವ್ಯಾಪಾರಿಯ ಬದುಕಿಗೆ ಮಾರಕವಾಗಿ ಕಾಣುವಂತೆಯೇ ಡಿ ಮಾರ್ಟ್, ವಾಲ್ ಮಾರ್ಟ್, ರಿಲೈಯನ್ಸ್‍ನಂತಹ ಷಾಪಿಂಗ್ ಮಾಲ್‍ಗಳು ಕಿರಾಣಿ ಅಂಗಡಿಗಳಿಗೆ, ವಸ್ತ್ರ ಮಳಿಗೆಗಳಿಗೆ ಮಾರಕವಾಗಿ ಕಾಣುತ್ತದೆ. ಬಂಡವಾಳದ ಶೋಷಣೆ ಜಾತಿ ವ್ಯವಸ್ಥೆಯಂತೆಯೇ ಶ್ರೇಣೀಕೃತ ಮಾದರಿಯನ್ನು ಅನುಸರಿಸುತ್ತದೆ.
ಈ ಶ್ರೇಣೀಕೃತ ಮಾದರಿಗೆ ಜಾತಿ-ಮತ-ಸಮುದಾಯ ಮತ್ತು ಧರ್ಮದ ಅಸ್ಮಿತೆಗಳು ಆಧಾರವಾದಾಗ ಈ ವ್ಯಾಪಾರಿ ವರ್ಗಗಳು ಅಥವಾ ದುಡಿಮೆಯ ಶಕ್ತಿಗಳು ಲಂಬಾನುಕ್ರಮವಾಗಿ ವಿಭಜಿಸಲ್ಪಡುತ್ತವೆ. ಭಾರತವನ್ನು ಶತಮಾನಗಳಿಂದ ಕಾಡುತ್ತಿರುವ ಅಸ್ಪೃಶ್ಯತೆ, ಜಾತಿ ತಾರತಮ್ಯಗಳು, ಕಳೆದ ಮೂರು ದಶಕಗಳಲ್ಲಿ ಹೆಮ್ಮರದಂತೆ ಬೆಳೆದಿರುವ ಮತೀಯವಾದ ಮತ್ತು ಮತಾಂಧತೆ ಮತ್ತು ಬಡತನ-ಶ್ರೀಮಂತಿಕೆಯ ಕಂದರಗಳು ಈ ಶ್ರೇಣೀಕೃತ ತಾರತಮ್ಯಕ್ಕೆ ಆಧಾರವಾಗಿಬಿಡುತ್ತವೆ. ಭಾರತ ಒಂದು ಜಾತ್ಯಾತೀತ ರಾಷ್ಟ್ರವೇ ಆಗಿದ್ದರೂ, ಇಲ್ಲಿನ ಬೌದ್ಧಿಕ ಆಲೋಚನೆಗಳು ಜಾತ್ಯಾಧಾರಿತವಾಗಿಯೇ ಇರುವುದು ಸ್ಪಷ್ಟ. ಜನ್ಮಾಧಾರಿತ ಜಾತಿಯಿಂದಲೇ ಮನುಷ್ಯನನ್ನು ಗುರುತಿಸುವ ಬೌದ್ಧಿಕ ಮನಸ್ಥಿತಿ ಇಂದಿಗೂ ಸಹ ಸಾಮಾಜಿಕ ಜೀವನವನ್ನು ಆವರಿಸಿದೆ. ಇಂತಹ ಒಂದು ಪ್ರಾಚೀನ ಮನಸ್ಥಿತಿಯ ಸಮಾಜದಲ್ಲಿ ವರ್ಗ ಪ್ರಜ್ಞೆಯನ್ನು ಮೂಡಿಸುವ ಸಾಹಸಕ್ಕೆ ಇಂದು ಮುಂದಾಗಬೇಕಿದೆ.
ಶೋಷಕರನ್ನು ಬಂಡವಾಳ ಮತ್ತು ಮಾರುಕಟ್ಟೆ ಒಂದು ಮಾಡುತ್ತದೆ ಏಕೆಂದರೆ ಮಾರುಕಟ್ಟೆಯ ಲಾಭ ಮತ್ತು ಬಂಡವಾಳದ ಕ್ರೋಢೀಕರಣಕ್ಕೆ ಯಾವುದೇ ಅಡ್ಡಗೋಡೆಗಳಿರುವುದಿಲ್ಲ. ಸಂಪನ್ಮೂಲಗಳ ಕ್ರೋಢೀಕರಣ, ಬಳಕೆ, ವಿಲೇವಾರಿ ಮತ್ತು ಲಾಭ ಈ ಮೂಲ ಮಂತ್ರಗಳನ್ನಧರಿಸಿದ ಒಂದು ಧರ್ಮ ಮಾರುಕಟ್ಟೆ ವ್ಯವಸ್ಥೆಯನ್ನೂ, ಬಂಡವಾಳಶಾಹಿಯನ್ನೂ ರಕ್ಷಿಸುತ್ತದೆ. ಆದರೆ ಇದೇ ಬಂಡವಾಳ ಮತ್ತು ಮಾರುಕಟ್ಟೆಯೇ ಶೋಷಿತರನ್ನು ಅಡ್ಡಡ್ಡಲಾಗಿ ಸೀಳುತ್ತದೆ, ಲಂಬಾನುಕ್ರಮವಾಗಿ ವಿಭಜಿಸುತ್ತದೆ. ಈ ವಿಭಜನೆಯ ಸರಕುಗಳಾಗಿ ಜಾತಿ, ಮತ, ಪಂಥ, ಧರ್ಮ ಮತ್ತು ಭಾಷೆ ಬಳಕೆಯಾಗುತ್ತದೆ. ಬಂಡವಾಳಾಧೀನ ಸಣ್ಣ ವ್ಯಾಪಾರಿ ವರ್ಗಗಳು ಶ್ರೇಣೀಕೃತ ತಾರತಮ್ಯಗಳ ಈ ಗೋಡೆಗಳನ್ನು ದಾಟಿ, ಇತರ ದುಡಿಮೆಯ ಶಕ್ತಿಗಳೊಡನೆ ಗುರುತಿಸಕೊಳ್ಳುವುದಾದರೆ ಮಾರುಕಟ್ಟೆ ವ್ಯವಸ್ಥೆಗೆ ಪ್ರಬಲ ಪ್ರತಿರೋಧವನ್ನು ಕಟ್ಟುವುದು ಸುಲಭಸಾಧ್ಯವಾಗುತ್ತದೆ. ದೈಹಿಕ ಮತ್ತು ಬೌದ್ಧಿಕ ಶ್ರಮದ ಮೂಲಕವೇ ಬದುಕು ಕಟ್ಟಿಕೊಳ್ಳುವ ದುಡಿಯುವ ವರ್ಗಗಳು ತಮ್ಮ ಸಾಮಾಜಿಕ ಅರಿವು ಮತ್ತು ಸಾಂಸ್ಕೃತಿಕ ಪರಿವೆಯನ್ನು ವಿಸ್ತರಿಸಿಕೊಂಡು, ತಮ್ಮ ಸುತ್ತಲಿನ ಸಮಾಜದಲ್ಲಿ ನಿತ್ಯ ನಡೆಯುವ ಶೋಷಣೆಯನ್ನು ಗಮನಿಸುವ ಮೂಲಕ ಬಂಡವಾಳಶಾಹಿಗೆ ಒಂದು ಪ್ರಬಲ ಪ್ರತಿರೋಧದ ಭೂಮಿಕೆಯನ್ನು ಸಿದ್ಧಪಡಿಸಲು ಸಾಧ್ಯವಾಗುತ್ತದೆ.
ಶ್ರಮ ಶಕ್ತಿಯ ವಿನಿಮಯ ಮೌಲ್ಯವನ್ನು ಬಂಡವಾಳ ನಿರ್ಧರಿಸುತ್ತದೆ. ಈ ಮೌಲ್ಯವನ್ನಾಧರಿಸಿಯೇ ಮಾರುಕಟ್ಟೆ ಶ್ರಮಿಕರ ಕೂಲಿ, ವೇತನ ಇತ್ಯಾದಿಗಳನ್ನು ನಿಷ್ಕರ್ಷೆ ಮಾಡುತ್ತಾ ಹೋಗುತ್ತದೆ. ಈ ಹಾದಿಯಲ್ಲಿ ಸೃಷ್ಟಿಯಾಗುವ ತರತಮಗಳು, ಕಂದರಗಳು ಸಮಾಜದಲ್ಲಿ ಅಂತಸ್ತುಗಳನ್ನು ರೂಪಿಸುವ ಮೂಲಕ, ದುಡಿಮೆಯ ವಲಯದಲ್ಲೇ ಲಂಬಾನುಕ್ರಮದ ಶ್ರೇಣೀಕೃತ ಹಂತಗಳನ್ನು ನಿರ್ಮಿಸುತ್ತದೆ. ಒಂದೇ ಪ್ರಮಾಣದ ಶೋಷಣೆಗೊಳಗಾಗುವ ದುಡಿಮೆಗಾರರೂ ವಿಭಿನ್ನ ಹಂತದ ಸಾಮಾಜಿಕಾರ್ಥಿಕ ಅಂತಸ್ತುಗಳನ್ನು ಹೊಂದಿರುವ ರೀತಿಯಲ್ಲಿ ಬಂಡವಾಳ ವ್ಯವಸ್ಥೆ ಸಮಾಜದಲ್ಲಿನ ಅಸಮಾನತೆಯ ಕಂದರಗಳನ್ನು ಹಿಗ್ಗಿಸುತ್ತಾ ಹೋಗುತ್ತದೆ. ಹಾಗಾಗಿಯೇ ಹಿತವಲಯದಲ್ಲಿರುವ, ಬಿಳಿ ಕಾಲರಿನ ಕಾರ್ಮಿಕರ/ದುಡಿಮೆಗಾರರ ನಡುವೆ ತಾತ್ವಿಕ ಐಕಮತ್ಯ ಕೆಲವೊಮ್ಮೆ ಅಸಾಧ್ಯವೇ ಆಗಿಬಿಡುತ್ತದೆ. ಆರ್ಥಿಕ ಕಾರಣಗಳಿಗಾಗಿ ಒಂದಾಗಬಹುದಾದರೂ, ಸಾಮಾಜಿಕ, ಬೌದ್ಧಿಕ ನೆಲೆಯಲ್ಲಿ ವಿಘಟಿತರಾಗಿಯೇ ಉಳಿದುಬಿಡುತ್ತಾರೆ.
ಈ ವಿಘಟನೆಯೇ ಬಂಡವಾಳಶಾಹಿ ವ್ಯವಸ್ಥೆಯನ್ನು ಪೋಷಿಸಲು ಅಡಿಗಲ್ಲು ನಿರ್ಮಿಸುತ್ತದೆ. ಇದು ಶೋಷಣೆಯ ಮೂಲವೂ ಆಗುತ್ತದೆ. ಇದಕ್ಕೆ ಪ್ರತಿಯಾಗಿ ಶೋಷಣೆಯ ವಿರುದ್ಧ ರೂಪುಗೊಳ್ಳುವ ದುಡಿಯುವ ವರ್ಗಗಳಿಗೆ ತಮ್ಮ ಶ್ರಮದ ಐಹಿಕ ಮತ್ತು ಬೌದ್ಧಿಕ ಮೌಲ್ಯದ ಅರಿವು ಇದ್ದಲ್ಲಿ, ತಮ್ಮನ್ನು ಶೋಷಣೆಗೊಳಪಡಿಸುತ್ತಿರುವ ಕ್ರೂರ ವ್ಯವಸ್ಥೆಯ ವಿರಾಟ್ ಸ್ವರೂಪವೂ ಸುಲಭವಾಗಿ ಅರ್ಥವಾಗುತ್ತದೆ. ಶ್ರಮ ಮತ್ತು ಶ್ರಮ ಶಕ್ತಿಯನ್ನು ಮಾರುಕಟ್ಟೆಯ ತಕ್ಕಡಿಯಲ್ಲಿ ತೂಗುವುದರ ಬದಲಾಗಿ, ಸಾಮಾಜಿಕ-ಸಾಂಸ್ಕೃತಿಕ ತಕ್ಕಡಿಯಲ್ಲಿ ತೂಗಿ ನೋಡಿದಾಗ ಶೋಷಣೆಯ ವಿಭಿನ್ನ ಆಯಾಮಗಳ ಪರಿಚಯವಾಗುತ್ತದೆ. ಹಾಗೆಯೇ ಬದುಕಿನ ಪಯಣದಲ್ಲಿ ಶೋಷಿತ ವರ್ಗಗಳು ಎದುರಿಸಬೇಕಾದ ತಾರತಮ್ಯ ಮತ್ತು ದೌರ್ಜನ್ಯಗಳ ಪರಿಚಯವೂ ಆಗುತ್ತದೆ. ತಳ್ಳುಗಾಡಿಯವರು-ಕಿರಾಣಿ ಅಂಗಡಿಯವರು, ಬ್ಯಾಂಕ್ ನೌಕರ-ಕಾರ್ಖಾನೆ ಕಾರ್ಮಿಕ, ಆಟೋ ಚಾಲಕ-ಬಸ್ ಚಾಲಕ, ವಿಶ್ವವಿದ್ಯಾಲಯದ ಪ್ರಾಧ್ಯಾಪಕ-ಶಾಲಾ ಶಿಕ್ಷಕ, ಆಸ್ಪತ್ರೆಯ ಶುಶ್ರೂಷಕಿ-ಅಂಗನವಾಡಿ ಆಶಾ ಕಾರ್ಯಕರ್ತೆ ಹೀಗೆ ಶ್ರಮ ವಿಭಜನೆಯ ವಿವಿಧ ಹಂತಗಳನ್ನು ಪ್ರತಿನಿಧಿಸುವ ದುಡಿಮೆಗಾರರಿಗೆ ಮತ್ತೊಂದು ಆಯಾಮದ ಶ್ರಮದ ಮೌಲ್ಯದ ಅರಿವು ಮೂಡಿದರೆ, ಆ ಶ್ರಮದ ಶೋಷಣೆ ಹೇಗಾಗುತ್ತದೆ, ಯಾರಿಂದ ಆಗುತ್ತದೆ ಎನ್ನುವುದೂ ಅರ್ಥವಾಗುತ್ತದೆ.
ಬಂಡವಾಳದ ದೃಷ್ಟಿಯಲ್ಲಿ ಅಥವಾ ಬಂಡವಾಳಶಾಹಿಯ ದೃಷ್ಟಿಯಲ್ಲಿ ಶೋಷಣೆಯ ಧ್ಯೇಯ ಒಂದೇ ಆಗಿರುತ್ತದೆ. ಬಂಡವಾಳ ಶೇಖರಣೆ, ಸಂಪತ್ತಿನ ಕ್ರೋಢೀಕರಣ ಮತ್ತು ಸಾಮ್ರಾಜ್ಯ ವಿಸ್ತರಣೆ. ಈ ಮೂರೂ ಪ್ರಕ್ರಿಯೆಗಳಿಗೆ ಪೂರಕವಾಗಿಯೇ ಜಾತಿ-ಮತ-ಧರ್ಮ ಮತ್ತು ಪಂಥಗಳನ್ನು ಪ್ರತಿನಿಧಿಸುವ ಆಳುವ ವರ್ಗಗಳ ಪ್ರತಿನಿಧಿಗಳು ಆಡಳಿತ ವ್ಯವಸ್ಥೆಯ ಪರಿಭಾಷೆಯನ್ನೂ ಸಿದ್ಧಪಡಿಸುತ್ತಾರೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಈ ಹೊಂದಾಣಿಕೆ ವ್ಯವಸ್ಥಿತವಾಗಿಯೇ ನಡೆಯುತ್ತಾ ಹೋಗುತ್ತದೆ. ಮತಾಂಧತೆಯನ್ನು ಪೋಷಿಸುವ ಸಾಂಸ್ಥಿಕ ಧರ್ಮ ಕೇಂದ್ರಗಳು, ಜಾತಿ ತಾರತಮ್ಯವನ್ನು ಯಥಾಸ್ಥಿತಿಯಲ್ಲಿ ಕಾಪಾಡುವ ಆಧ್ಯಾತ್ಮಿಕ ಮಠ ಮಾನ್ಯಗಳು (ಕೆಲವು ಅಪವಾದಗಳನ್ನು ಹೊರತುಪಡಿಸಿ) ಮತ್ತು ಮತೀಯ ರಾಜಕಾರಣದ ಫಲಾನುಭವಿ ರಾಜಕೀಯ ಪಕ್ಷಗಳು ಈ ಪರಿಭಾಷೆಯನ್ನೇ ಆಡಳಿತಭಾಷೆಯನ್ನಾಗಿ ಪರಿವರ್ತಿಸುತ್ತಾರೆ. ಇಂತಹ ಒಂದು ಪರಿಭಾಷೆಯನ್ನು ಹಿಂದುತ್ವ ರೂಪಿಸುತ್ತಿದೆ.
ಹಿಂದುತ್ವ ರಾಜಕಾರಣದ ಈ ನೂತನ ಪರಿಭಾಷೆಯನ್ನೇ ಬಳಸಿಕೊಂಡು ಭಾರತ ಸಾಂವಿಧಾನಿಕವಾಗಿ ಒಪ್ಪಿಕೊಂಡು ಬಂದಿರುವ ಒಂದು ಸಾಮಾಜಿಕ ಸಮಾನತೆಯ ಭದ್ರಕೋಟೆಯನ್ನು ಭಂಜಿಸುವ ಪ್ರಯತ್ನಗಳು ಈಗ ನಡೆಯುತ್ತಿವೆ. ಜಾತ್ರೆ, ಸಂತೆಗಳಲ್ಲಿ ಮುಸಲ್ಮಾನರ ಅಂಗಡಿಗಳನ್ನು ನಿಷೇಧಿಸುವ ದಬ್ಬಾಳಿಕೆಯ ಕ್ರಮಗಳು ಈ ಪ್ರಯತ್ನಗಳಲ್ಲಿ ಒಂದು ಹೆಜ್ಜೆ ಮಾತ್ರ. ಈ ವಿಧ್ವಂಸಕ, ವಿಭಜಕ ಸಾಂಸ್ಕೃತಿಕ-ರಾಜಕೀಯ ದಾಳಿಯನ್ನು ಎದುರಿಸುವ ಶಕ್ತಿ ದುಡಿಮೆಯನ್ನಾಧರಿಸಿದ ದುಡಿಯುವ ವರ್ಗಗಳಿಗೆ ಮಾತ್ರವೇ ಇರಲು ಸಾಧ್ಯ. ಶ್ರಮಜೀವಿಗಳು ಎಂಬ ದೊಡ್ಡ ಕ್ಯಾನ್ವಾಸ್‍ನಲ್ಲಿ ಅಳವಡಿಸಬಹುದಾದ ಎಲ್ಲ ಹಂತಗಳ ದುಡಿಮೆಯ ಕೈಗಳು ತಮ್ಮ ಶ್ರಮದ ಮೌಲ್ಯವನ್ನು ಅರಿತು, ಈ ಶ್ರಮದ ಶೋಷಕರನ್ನು ಗುರುತಿಸಿದಲ್ಲಿ, ಪ್ರತಿರೋಧದ ಧ್ವನಿಗೆ ಒಂದು ಹೊಸ ಆಯಾಮವನ್ನು ನೀಡಲು ಸಾಧ್ಯ. ಎಡಪಕ್ಷಗಳು, ಪ್ರಜಾತಂತ್ರ ಮತ್ತು ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸುವ ಸಂಘಟನೆಗಳು ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಲು ಇದು ಸಕಾಲ.