Also Read: ಅಫ್ಘನ್ ರಕ್ತಚರಿತೆ ಭಾಗ-1: ಅಫ್ಘನ್ ಅರಾಜಕತೆಯಲ್ಲಿ ಅಮೆರಿಕಾ-ರಷ್ಯಾದ ಪಾತ್ರ!
ತಾಲಿಬಾನ್ ಹುಟ್ಟು, ಬೆಳವಣಿಗೆ
ಪಶ್ತೋ ಭಾಷೆಯಲ್ಲಿ ತಾಲಿಬಾನ್ ಅಂದರೆ ವಿದ್ಯಾರ್ಥಿಗಳ ಸಮೂಹ ಎಂದರ್ಥ. ಇದರ ಆರಂಭಿಕ ನೇತಾರ ಮುಲ್ಲಾ ಉಮರ್. ಕೇವಲ ಐವತ್ತು ಮಂದಿ ತಮ್ಮ ಶಿಷ್ಯರಿಂದ ತಾಲಿಬಾನ್ ಪ್ರಾರಂಭವಾಯಿತು ಎನ್ನಲಾಗಿದೆ. ಪಾಕಿಸ್ತಾನದಲ್ಲಿ ತಾಲಿಬಾನ್ ಚಿಂತನೆಗಳಿಗೆ ಹೇರಳ ಬೆಂಬಲ ಸಿಕ್ಕಿದ್ದು, ಅಫ್ಘನ್ ಆಂತರಿಕ ಕಲಹದ ವೇಳೆ ಪಾಕಿಸ್ತಾನ ಸೇರಿದ್ದ ಅಫ್ಘನ್ ನಿರಾಶ್ರಿತರು ಈ ಸಿದ್ಧಾಂತಗಳಿಗೆ ಮಾರುಹೋಗಿದ್ದರು.
ಮುಜಾಹಿದೀನ್ ಆಡಳಿತಕ್ಕೆ ಬಂದ ಮೇಲೆ ಮರಳಿ ಅಫ್ಘನ್‌ಗೆ ಬಂದ ಪಾಕಿಸ್ತಾನದಲ್ಲಿದ್ದ ನಿರಾಶ್ರಿತರು ತಾಲಿಬಾನ್ ಸೇರಿಕೊಳ್ಳುತ್ತಾರೆ. ಇವರು ಮುಜಾಹಿದೀನ್‌ಗಳಿಗಿಂತ ಕಠಿಣ ಮೂಲಭೂತವಾದಿಗಳು.
ಪಶ್ತೋ ಬುಡಕಟ್ಟಿನ ತಾಲಿಬಾನಿಗಳು ನೋಡ ನೋಡುತ್ತಿದ್ದಂತೆ ಅಫ್ಘನ್‌ನಲ್ಲಿ ತನ್ನ ಬಲ ಹಿಗ್ಗಿಸಿಕೊಂಡರು. 1996 ಕ್ಕಾಗುವಾಗ ಕಾಬೂಲನ್ನೇ ವಶ ಪಡಿಸುವಷ್ಟರ ಮಟ್ಟಿಗೆ ತಾಲಿಬಾನ್ ಬೆಳೆದು ನಿಂತಿತು. ತಮ್ಮದೇ ಸರ್ಕಾರವನ್ನು ರಚಿಸಿಕೊಂಡ ತಾಲಿಬಾನ್ ಅಫ್ಘನ್ ಮೇಲೆ ಹೇರಿದ ನಿಭಂದನೆಗಳು ಅಷ್ಟಿಷ್ಟಲ್ಲ. ಸಿನೆಮಾ, ನೃತ್ಯ, ನಾಟಕ, ಸಂಗೀತ, ಚಿತ್ರಕಲೆ, ಕಲೆ ಎಲ್ಲವನ್ನೂ ತಾಲಿಬಾನ್ ನಿಷೇಧಿಸಿತು. ತಾಲಿಬಾನಿನ ಮಾನವ ವಿರೋಧಿ ಧೋರಣೆ ಎಷ್ಟರ ಮಟ್ಟಿಗೆ ಹೋಯಿತೆಂದರೆ, ನಾಗರಿಕರ ವೈಯಕ್ತಿಕ ಸ್ವಾತಂತ್ರಗಳನ್ನೆಲ್ಲಾ ಕಸಿದುಕೊಳ್ಳಲಾಯಿತು. ಮಹಿಳೆಯರ ಮೇಲಿನ ಹೇರಿಕೆಗಳು ಅತಿಯಾದವು, ಅವರ ವಿಧ್ಯಾಭ್ಯಾಸದ ಹಕ್ಕುಗಳನ್ನು ಮೊಟಕುಗೊಳಿಸಿ ತನ್ನ ಪೈಶಾಚಿಕ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದವು.
ಗಂಡಸರು ಗಡ್ಡ ಬಿಡುವುದು ಕಡ್ಡಾಯ ಹಾಗೂ ಮಹಿಳೆಯರು ಸಂಪೂರ್ಣ ಮೈಮುಚ್ಚುವ ಬುರ್ಖಾ ಧರಿಸುವುದು ಕಡ್ಡಾಯ ಎಂದು ತಾಲಿಬಾನ್ ಆಡಳಿತ ಆದೇಶ ಹೊರಡಿಸಿತು. ತಾಲಿಬಾನಿನ ಮಾನವ ವಿರೋಧಿ ಧೋರಣೆ ವಿಪರೀತ ಎನ್ನಿಸುವಷ್ಟರ ಮಟ್ಟಿಗೆ ಹೋದವು. ಹಿಂದೂ, ಕ್ರಿಷ್ಚಿಯನ್ನರನ್ನು ಪ್ರತ್ಯೇಕವಾಗಿ ಗುರುತಿಸಲೆಂದೆ ಪಟ್ಟಿಗಳು ಪರಿಚಯವಾದವು. ಬಾಬಿಯಾನಿನಲ್ಲಿ ಪುರಾತನ ಬುದ್ಧ ವಿಗ್ರಹವನ್ನು ಕೆಡವಿ ತಮ್ಮ ಧಾರ್ಮಿಕ ಅಸಹಿಷ್ಣುತೆಯನ್ನು ಜಗಜ್ಜಾಹೀರುಗೊಳಿಸಿತು ತಾಲಿಬಾನ್.
ಈ ನಡುವೆ ಮುಜಾಹಿದೀನ್ ತಾಲಿಬಾನ್ ವಿರುದ್ಧ ಬಂಡಾಯ ಏಳುತ್ತದೆ. ಆದರೆ, ಮುಜಾಹಿದೀನ್ ನೇತಾರ ಅಹ್ಮದ್ ಷಾ ಮಸೂದ್ ಅವರ ಹತ್ಯೆಯೊಂದಿಗೆ ಮುಜಾಹಿದ್ ಬಂಡಾಯವನ್ನು ತಾಲಿಬಾನ್ ಮಟ್ಟ ಹಾಕುತ್ತದೆ.
ಅಲ್‌ಕೈದಾ ಮತ್ತು ಒಸಾಮ ಲಾಡೆನ್
2000 ರ ಆರಂಭದಲ್ಲೇ ತಾಲಿಬಾನ್ ಕ್ರೂರತನ ವಿಶ್ವ ರಾಷ್ಟ್ರಗಳೆದುರು ಜಗಜ್ಜಾಹೀರುಗೊಳಿಸಿತ್ತು. ಹೀಗಿರುವಾಗಲೇ ಅಲ್ ಖೈದಾ ಎನ್ನುವ ಉಗ್ರ ಸಂಘಟನೆ ಜನ್ಮ ತಾಳಿತ್ತು.
2001 ಸೆಪ್ಟೆಂಬರ್ 11 ರಲ್ಲಿ ಅಮೆರಿಕಾದ ಟ್ವಿನ್ ಟವರ್ ಮೇಲೆ ನಡೆದ ದಾಳಿ ವಿಶ್ವವನ್ನೇ ಬೆಚ್ಚಿ ಬೀಳಿಸುತ್ತದೆ. ಮುಂದೆ ಇದು 9/11 ದಾಳಿಯೆಂದೇ ಪ್ರಸಿದ್ಧವಾಗುತ್ತದೆ. ಸೌದಿ ಮೂಲದ ಒಸಾಮ ಬಿನ್ ಲಾಡೆನ್ ನೇತೃತ್ವದ ಅಲ್ ಖೈದಾ ಈ ಕೃತ್ಯವನ್ನು ವಹಿಸಿಕೊಳ್ಳುತ್ತದೆ. ತಾಲಿಬಾನ್, ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡುತ್ತದೆ. ಇದು ಅಮೆರಿಕಾದ ಕೆಂಗಣ್ಣಿಗೆ ಗುರಿಯಾಗುತ್ತದೆ.
ಟ್ವಿನ್ ಟವರ್ ದಾಳಿ ಬಳಿಕ ಲಾಡೆನ್ ಹೆಸರು ಕುಖ್ಯಾತಿಯರ ಪಟ್ಟಿಯಲ್ಲಿ ಸೇರುತ್ತದೆ. ಅಮೆರಿಕಾ ಮುಸ್ಲಿಮರ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ನಮ್ಮ ಪ್ರತೀಕಾರ ಇದು ಎಂದು ಲಾಡೆನ್ ಹೇಳಿಕೊಳ್ಳುತ್ತಾನೆ. ಲೆಬನಾನ್, ಸಿರಿಯಾ, ಪ್ಯಾಲೆಸ್ಟೈನ್, ಚಿಚೈವಾ ಮೊದಲಾದ ದೇಶಗಳಲ್ಲಿ ಅಮೆರಿಕಾ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಿದೆ ಹಾಗೂ ದೌರ್ಜನ್ಯ ನಡೆಸುವವರಿಗೆ ಬೆಂಬಲ ನೀಡುತ್ತಿದೆ ಎನ್ನುವುದು ಲಾಡೆನ್ ಆರೋಪ.
ಇಸ್ಲಾಮಿನ ಹೆಸರಿನಲ್ಲಿ ನಡೆಯುವ ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿ ರೂಪುಗೊಳ್ಳುವುದು ಅಲ್ಲಿಂದ.
ಅಫ್ಘಾನಿಸ್ತಾನದಲ್ಲಿ ಅಮೆರಿಕಾ ಸೇನೆ!
ಇದೇ ಕಾರಣ ಇಟ್ಟುಕೊಂಡು ಅಮೇರಿಕಾ 9/11 ದಾಳಿಗೆ ಪ್ರತೀಕಾರಕ್ಕೆ ಇಳಿಯುತ್ತದೆ. ತನ್ನ ಸೇನೆಯನ್ನು ಅಫ್ಘನ್ನಿನ ಗುಡ್ಡಗಾಡಿನಲ್ಲಿ ಇಳಿಸುತ್ತದೆ. ಭಯೋತ್ಪಾದಕು ತಂಗಿದ್ದಾರೆನ್ನಲಾದ ಗುಡಾರಗಳ ಮೇಲೆ ಅಮೇರಿಕಾ ವೈಮಾನಿಕ ದಾಳಿಗಳನ್ನು ನಡೆಸುತ್ತದೆ. ಈ ಸರಣಿ ದಾಳಿಯಲ್ಲಿ ಸಾವಿರಾರು ನಾಗರಿಕರು ಪ್ರಾಣ ಚೆಲ್ಲುತ್ತಾರೆ. ಈ ವೇಳೆ ಮುಜಾಹಿದೀನ್ ತಾಲಿಬಾನ್ ವಿರುದ್ಧ ಅಮೆರಿಕಾಗೆ ಬೆಂಬಲ ನೀಡುತ್ತದೆ.
ಅಮೆರಿಕಾ ಸೇನಾಕಾರ್ಯಾಚರಣೆ ಅಫ್ಘನ್ ನೆಲದಲ್ಲಿ ಮಾಡುತ್ತಿದ್ದಂತೆ ತಾಲಿಬಾನ್ ಚಟುವಟಿಕೆಯ ವೇಗ ಒಂದಿಷ್ಟು ನಿಧಾನವಾಗುತ್ತದೆ. 2001 ರಲ್ಲಿ ಹಮೀದ್ ಕರ್ಝಾಯಿ ಎಂಬವರು ಅಫ್ಘಾನಿಸ್ತಾನದ ಮಧ್ಯಂತರ ಸರ್ಕಾರದ ಅಧ್ಯಕ್ಷರಾಗುತ್ತಾರೆ. ಬಳಿಕ 2004 ರಲ್ಲಿ ನೂತನ ಅಧ್ಯಕ್ಷರಾಗಿ ಚುನಾಯಿತರಾಗುತ್ತಾರೆ.
ಅಫ್ಘನ್‌ನಲ್ಲಿ ಶಾಂತೆ ಸ್ಥಾಪನೆಗೆ ಹಾಗೂ ಪ್ರಜಾತಾಂತ್ರಿಕ ಸರ್ಕಾರದ ರಕ್ಷಣೆಗೆಂದು ಅಮೆರಿಕಾ ಅಫ್ಘನ್‌ನಲ್ಲಿ ಸೇನೆಯನ್ನು ಇರಿಸುತ್ತದೆ. 2011 ರಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಸಾಮ ಲಾಡೆನ್‌ನನ್ನು ಅಮೆರಿಕಾ ಸೇನೆ ಹತ್ಯೆಗೈಯುತ್ತದೆ.
2013 ರಲ್ಲಿ ಮುಲ್ಲಾ ಒಮರ್, ತಾಲಿಬಾನ್ ಆರಂಭಿಕ ನೇತಾರ ಸಾವನ್ನಪ್ಪಿರುವುದಾಗಿ ವರದಿಯಾಗುತ್ತದೆ. ಅದಾಗ್ಯೂ, ತಾಲಿಬಾನ್ ಅಫ್ಘನ್, ಪಾಕಿಸ್ತಾನದ ವಿಶೇಷ ಭೌಗೋಳಿಕ ರಚನೆಯನ್ನು ಅವಲಂಬಿಸಿ ತನ್ನನ್ನು ತಾನು ರಕ್ಷಿಸಿಕೊಂಡಿರುತ್ತದೆ. ಈ ನಡುವೆ ಹಲವು ವಿಧ್ವಂಸಕ ಕೃತ್ಯಗಳನ್ನು ತಾಲಿಬಾನ್ ನಡೆಸುತ್ತಿರುತ್ತದೆ.
ತಾಲಿಬಾನ್ ಸಂಪತ್ತು
ಅಮೆರಿಕಾದ ವಿರುದ್ಧ 20 ವರ್ಷಗಳ ಕಾಲ ಪ್ರತಿರೋಧ ತೋರಿಸಲು ತಾಲಿಬಾನ್ ಪಡೆಗಳಿಗೆ ಸಂಪತ್ತು ಎಲ್ಲಿಂದ ಅನ್ನುವುದೇ ಕುತೂಹಲಕಾರಿ. ಅಫ್ಘನಿನಲ್ಲಿ ಅಕ್ರಮವಾಗಿ ಓಪಿಯಮ್ ಬೆಳೆದು ಅದನ್ನು ಹೆರಾಯಿನ್ ಆಗಿ ಪರಿವರ್ತಿಸಿ, ರಫ್ತು ಮಾಡುವ ದೊಡ್ಡ ಮಾದಕ ವಸ್ತು ಜಾಲವನ್ನೇ ತಾಲಿಬಾನ್ ಹೊಂದಿದೆ. ಅಫ್ಘನ್ ಪಡೆಗಳು ಹಾಗೂ ಅಮೆರಿಕಾ ಸೇನೆ ಹಲವು ಕಡೆಗಳಲ್ಲಿ ಓಪಿಯಮ್ ಬೆಳೆಯನ್ನು ನಾಶ ಮಾಡಿದರೂ ತಾಲಿಬಾನಿಗೆ ಹೇಳಿಕೊಳ್ಳುವಂತಹ ನಷ್ಟವಾಗಿಲ್ಲ. ಇದುವರೆಗೂ ದಂಧೆ ಮುಚ್ಚುವಂತ ಸ್ಥಿತಿ ಅವರಿಗೆ ಬಂದಿಲ್ಲ.
ಓಪಿಯಮ್ ಇಲ್ಲದಿದ್ದರೆ ತಾಲಿಬಾನಿಗಳನ್ನು ಎಂದೋ ಮಟ್ಟ ಹಾಕುತ್ತಿದ್ದೆವು ಎಂದು ಅಫ್ಘನ್ ಅಧ್ಯಕ್ಷ ಈ ಹಿಂದೆ ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಅದರಿಂದ ಬರುವ ದುಡ್ಡಿನಿಂದ ಮಾತ್ರವಲ್ಲದೆ, ಗಣಿಗಾರಿಕೆಯ ದುಡ್ಡನ್ನೂ ತಮ್ಮ ಹೋರಾಟಗಳಿಗೆ ತಾಲಿಬಾನ್ ಬಳಸುತ್ತದೆ. ಹಾಗೂ, ಸಿರಿವಂತ ತಾಲಿಬಾನ್ ಸಿಂಪಥೈಸರ್ ಗಳೂ ಸಂಘಟನೆಗೆ ದುಡ್ಡು ಹಂಚುವುದಾಗಿ ವರದಿಗಳಾಗಿವೆ.
ತಾಲಿಬಾನ್-ಅಮೆರಿಕಾ ಶಾಂತಿ ಒಪ್ಪಂದ: ಸೇನೆ ಹಿಂತೆಗೆತ
ಸುದೀರ್ಘ 18 ವರ್ಷಗಳ ಕಾಲ ಅಫ್ಘನ್ ನೆಲದಲ್ಲಿ ಝಂಡಾ ಹೂಡಿದ್ದ ಅಮೆರಿಕಾಗೂ ಸುಸ್ತಾಗ ತೊಡಗಿತು ಅನಿಸುತ್ತದೆ. ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿದ್ದ ವೇಳೆ ತಾಲಿಬಾನ್‌ನೊಂದಿಗೆ ಅಮೆರಿಕಾ ಶಾಂತಿ ಕರಾರು ಮಾಡಿಕೊಂಡು ಯುದ್ಧವನ್ನು ನಿಲ್ಲಿಸಲು ಉಭಯ ಪಕ್ಷಗಳು ಸಹಿ ಮಾಡುತ್ತವೆ.
ಎರಡು ದಶಕಗಳ ನಿರಂತರ ಕಾರ್ಯಾಚರಣೆಯಲ್ಲಿ 2 ಟ್ರಿಲಿಯನ್ ಡಾಲರ್‌ಗಳಷ್ಟು ಅಮೆರಿಕಾ ಖರ್ಚು ಮಾಡಿತ್ತು. ಸಾವಿರಾರು ಸೈನಿಕರನ್ನು ಕಳೆದುಕೊಂಡಿತ್ತು. ಇದು ಅಮೆರಿಕನ್ನರಲ್ಲಿ ಕೂಡಾ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕಾ ತನ್ನ ಸೇನೆಯನ್ನು ಅಫ್ಘನ್ನಿಂದ ಹಿಂತೆಗೆಯಲು ತೀರ್ಮಾನಿಸಿತ್ತು.
ಟ್ರಂಪ್ ಸೋತು ಡೆಮಾಕ್ರಟಿಕ್ ಪಕ್ಷದ ಜೊ ಬಿಡೆನ್ ಅಧಿಕಾರಕ್ಕೆ ಬಂದ ಮೇಲೂ ಅಫ್ಘನ್ ನಿಂದ ಸೇನೆಯನ್ನು ಹಿಂಪಡೆಯುವ ನಿಲುವಿನಿಂದ ಅಮೆರಿಕಾ ಹಿಂದೆ ಸರಿಯಲಿಲ್ಲ. ಅದರಂತೆ, ಸೇನೆ ನಿಯೋಜಿಸಿ ಎರಡು ದಶಕ ಪೂರ್ತಿಯಾಗುತ್ತಿದ್ದಂತೆಯೇ ಸೇನೆಯನ್ನು ಅಮೆರಿಕಾ ಹಿಂಪಡೆದಿದೆ. ತಾಲಿಬಾನ್ ಶಾಂತಿ ಸ್ಥಾಪಿಸುತ್ತದೆ ಎಂಬ ವಿಶ್ವಾಸದಿಂದಲ್ಲ, ಅಫ್ಘನ್ ಪಡೆ ತಾಲಿಬಾನನ್ನು ನಿಯಂತ್ರಿಸುತ್ತೆದೆಂಬ ವಿಶ್ವಾಸದಿಂದ ತನ್ನ ಸೇನೆಯನ್ನು ಹಿಂಪಡೆಯುತ್ತಿರುವುದಾಗಿ ಬಿಡೆನ್ ಘೋಷಿಸಿಕೊಂಡಿದ್ದರು. ಅದರಂತೆ ಸೇನೆಯನ್ನು ಹಿಂಪಡೆಯಲು ಶುರು ಮಾಡಿತ್ತು.
ಆದರೆ, ಅಮೆರಿಕಾ ಸಂಪೂರ್ಣ ತನ್ನ ಸೇನೆಯನ್ನು ಹಿಂಪಡೆಯುವ ಮೊದಲೇ ತಾಲಿಬಾನ್ ಅಫ್ಘನ್ನಿನ ಮೇಲೆ ತನ್ನ ನಿಯಂತ್ರಣ ಸಾಧಿಸಿಕೊಂಡಿದೆ. ಆರಂಭದಲ್ಲಿ ಬಹುತೇಕ 90 ರಷ್ಟು ಅಫ್ಘನ್ ಗಡಿ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್ ರಾಜಧಾನಿ ಕಾಬೂಲನ್ನೂ ವಶಪಡಿಸಿಕೊಂಡು, ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಓಡುವಂತೆ ನೋಡಿಕೊಂಡಿದೆ. ಸದ್ಯ, ತಾಲಿಬಾನ್ ಸರ್ಕಾರ ಸ್ಥಾಪಿಸಿದರೆ ಅದಕ್ಕೆ ಮಾನ್ಯತೆ ನೀಡುವುದಾಗಿ ಚೀನಾ ಘೋಷಿಸಿಕೊಂಡಿದೆ. ಅಫ್ಘನ್ ನಿಂದ ಸೇನೆಯನ್ನು ಹಿಂತೆಗೆದ ಅಮೆರಿಕಾ ನಿರ್ಧಾರದ ವಿರುದ್ಧ ಅಫ್ಘನ್ನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಪ್ರಜಾತಾಂತ್ರಿಕ ದೇಶವೊಂದು ಮತಾಂಧರ ಪಾಲಾಗಿದೆ.