ಕರ್ನಾಟಕ ಶಿಕ್ಷಣ ಇಲಾಖೆಯು ಪ್ರಸ್ತುತ ಜಾರಿಯಲ್ಲಿರುವ 46 ದಿನಗಳ ಬದಲಿಗೆ 80 ದಿನಗಳವರೆಗೆ ಮತ್ತು 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪಿಸಿದೆ ಎಂದು ವರದಿಯಾಗಿವೆ. ಕಳೆದ ಬಾರಿ ಶಾಲೆಗಳಲ್ಲಿ ಮೊಟ್ಟೆ ವಿತರಿಸಬಾರದೆಂದು ವಿವಾದವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಈ ಪ್ರಸ್ತಾಪವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಅದೇ ರೀತಿ ಈ ವರ್ಷವನ್ನು ‘ಅಂತರ ರಾಷ್ಟ್ರೀಯ ರಾಗಿ ವರ್ಷ’ ಎಂದು ಘೋಷಿಸಲು ಎಲ್ಲಾ ತಯಾರಿಗಳು ಕೇಂದ್ರ ಸರ್ಕಾರಿ ಮಟ್ಟದಲ್ಲಿ ನಡೆಯುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರಕ್ಕೂ ಈ ಪ್ರಸ್ತಾಪನೆಯನ್ನು ಸಲ್ಲಿಸಲಾಗಿದೆ. “ಈ ವರ್ಷದ ಮಾರ್ಚ್‌ನಲ್ಲಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ, ಆದರೆ ಕಳೆದ ಮೂರು ತಿಂಗಳಿಂದಲೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 2023ನ್ನು ಅಂತರರಾಷ್ಟ್ರೀಯ ‘ರಾಗಿ ವರ್ಷ’ ಎಂದು ಘೋಷಿಸಲು ಕೇಂದ್ರ ತಯಾರಿ ನಡೆಸುತ್ತಿದೆ. ಜೂನ್ 9 ರವರೆಗೂ ಶಿಕ್ಷಣ ಇಲಾಖೆಯ ಪ್ರಸ್ತಾಪನೆಗೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಕರ್ನಾಟಕದಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಮತ್ತು ಪೋ಼ಷಣೆಯನ್ನು ಸುಧಾರಿಸಲು ರಾಜ್ಯ ಸರ್ಕಾರ ಮಧ್ಯಾಹ್ನದ ಊಟವನ್ನು ಒದಗಿಸುತ್ತಿದೆ. 2021 ರಲ್ಲಿ ಎಂಟು ಜಿಲ್ಲೆಗಳಲ್ಲಿ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ಪ್ರಾಯೋಗಿಕವಾಗಿ ಪ್ರಯೋಗಿಸಲಾಯಿತು.

ಮಕ್ಕಳಿಗೆ ಮೊಟ್ಟೆ ನೀಡುವುದನ್ನು ಈ ನಾಡಿನ ಪ್ರಜ್ಞಾವಂತರು ಮತ್ತು ಪೋಷಕಾಂಶ ತಜ್ಞರು ಪ್ರೋತ್ಸಾಹಿಸಿದ್ದರೂ ಸಹ ಅನೇಕ ಧಾರ್ಮಿಕ ಮುಖಂಡರಿಂದ ಮತ್ತು ಸಂಘಟನೆಗಳಿಂದ ವಿರೋಧ ಎದುರಾಗಿತ್ತು. ಆದರೆ ಈ ರಾಜ್ಯದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಬಹುಪಾಲು ಮಕ್ಕಳು ದಲಿತ, ಆದಿವಾಸಿ, ಒಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವಿಭಾಗಕ್ಕೆ ಸೇರಿದವರಾಗಿರುವುದರಿಂದ ಮತ್ತು ಅವರೆಲ್ಲ ಮನೆಯಲ್ಲಿ ಮೊಟ್ಟೆ ಸೇವಿಸುವವರೇ ಆಗಿರುವುದರಿಂದ ವಿರೋಧಗಳನ್ನು ಮೀರಿಯೂ ಯೋಜನೆ ಮುಂದುವರಿದಿತ್ತು.
ಈ ಪ್ರಾಯೋಗಿಕ ಯೋಜನೆಯಿಂದ ಮಕ್ಕಳ ಪೌಷ್ಟಿಕಾಂಶ ಸುಧಾರಿಸಿದೆ ಎಂದು ಹಲವಾರು ಅಧ್ಯಯನಗಳು ವರದಿ ಸಲ್ಲಿಸಿವೆ. ಮೊಟ್ಟೆಗಳ ಜೊತೆಗೆ ಮೊಳಕೆ ಬರಿಸಿದ ಕಾಳುಗಳನ್ನೂ ಶಾಲೆಗಳಲ್ಲಿ ನೀಡಲಾಗುತ್ತದೆ. ಇದರಿಂದ ಮಕ್ಕಳಲ್ಲಿ ರಕ್ತಹೀನತೆಯ ಮಟ್ಟ ಕಡಿನೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು “ಹಾಲು ಸಂಪೂರ್ಣವಾಗಿ ಪ್ರೋಟೀನ್ ಅಲ್ಲ. ಆದ್ದರಿಂದ ನಾವು ಮೊಳಕೆ ಬರಿಸಿದ ಕಾಳುಗಳನ್ನು ಪರಿಚಯಿಸಬಯಸುತ್ತೇವೆ, ಇದು ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತದೆ ಮತ್ತು ರಕ್ತಹೀನತೆ ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇವುಗಳನ್ನು ಪರಿಚಯಿಸಲು ತಗುಲುವ ವೆಚ್ಚವನ್ನು ಸರಿದೂಗಿಸಲು ನಾವು ಯೋಜನೆಗಳನ್ನು ರೂಪಿಸಬೇಕಾಗಿದೆ ಮತ್ತು ಅವುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಸಬೇಕಾಗಿದೆ” ಎಂದು ಹೇಳಿದ್ದಾರೆ.