• Home
  • About Us
  • ಕರ್ನಾಟಕ
Friday, December 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅಸ್ತಿತ್ವವಾದಿ ರಾಜಕೀಯವೂ..ಪ್ರಜಾಸತ್ತೆಯ ಮೌಲ್ಯಗಳೂ

ಪ್ರಜಾಪ್ರಭುತ್ವದಲ್ಲಿ ನಾಯಕತ್ವದ ಹಂಬಲ ಎಂತಹ ದಕ್ಷ ಆಡಳಿತವನ್ನೂ ಹದಗೆಡಿಸಿಬಿಡುತ್ತದೆ

ನಾ ದಿವಾಕರ by ನಾ ದಿವಾಕರ
December 8, 2025
in Top Story, ಕರ್ನಾಟಕ, ರಾಜಕೀಯ, ವಿಶೇಷ
0
ಅಸ್ತಿತ್ವವಾದಿ ರಾಜಕೀಯವೂ..ಪ್ರಜಾಸತ್ತೆಯ ಮೌಲ್ಯಗಳೂ
Share on WhatsAppShare on FacebookShare on Telegram

2023ರ ಚುನಾವಣೆಗಳಲ್ಲಿ ಕರ್ನಾಟಕದ ಜನತೆ ಕಾಂಗ್ರೆಸ್‌ ಸರ್ಕಾರವನ್ನು ಆಯ್ಕೆ ಮಾಡಲು ಹಲವು ಕಾರಣಗಳಿದ್ದವು. ಮೊದಲನೆಯದು ಐದು ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಕಂಡಂತಹ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು 40% ಕಮಿಷನ್‌ ಆರೋಪಗಳು. ಎರಡನೆಯದು ಕರಾವಳಿ ಕರ್ನಾಟಕದಲ್ಲಿ ತೀವ್ರವಾಗಿದ್ದ ಮತಾಂಧರ ದಾಳಿಗಳು, ಗೋ ರಕ್ಷಕ ಪಡೆಗಳ ಉಪಟಳ, ಶಾಸಕರ ಕೋಮುವಾದಿ ದ್ವೇಷ ಭಾಷಣಗಳು ಹಾಗೂ ಅಲ್ಪಸಂಖ್ಯಾತರ ಮೇಲೆ ಮತೀಯವಾದಿ ತುಡುಗು ಪಡೆಗಳ (Fringe elements) ನಿರಂತರ ದಾಳಿ, ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೇ ಸಂಚಕಾರ ಉಂಟುಮಾಡಿದ ಹಿಜಾಬ್‌ ವಿವಾದ ಹಾಗೂ ದ್ವೇಷಾಧಾರಿತ ರಾಜಕಾರಣದಲ್ಲಿ ಸಂಭವಿಸಿದ ಪರಸ್ಪರ ಹಿಂದೂ-ಮುಸ್ಲಿಂ ಯುವಕರ ಹತ್ಯೆಗಳು. ಮೂರನೆಯದು ಐದು ವರ್ಷದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳ ಬದಲಾವಣೆ ಅದರಿಂದ ಉಂಟಾದ ರಾಜಕೀಯ ಅಸ್ಥಿರತೆ.

ADVERTISEMENT
Karnataka Power Tussle: ಸಿದ್ದು ಕೊಟ್ಟ ಮಾತು, ಬಂಡೆ ಹೊಸ ಪರ್ವ ನಿಲ್ಲದ ಮಾರ್ಮಿಕ  #pratidhvani

ಈ ಬೆಳವಣಿಗೆಗಳು ಜನಸಾಮಾನ್ಯರಲ್ಲಿ ಹತಾಶೆ ಮೂಡಿಸಿದ್ದುದೇ ಅಲ್ಲದೆ, ಕರ್ನಾಟಕದ ಬಹುತ್ವ ಸಮನ್ವಯ ಸಂಸ್ಕೃತಿಯೇ ವಿನಾಶವಾಗುವ ಆತಂಕವೂ ರಾಜ್ಯ ಜನತೆಯಲ್ಲಿ ಮಡುಗಟ್ಟಿತ್ತು. ಸ್ವತಂತ್ರ ಭಾರತದ ರಾಜಕಾರಣದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಒದಗಿದ ಸಂದರ್ಭದಲ್ಲೆಲ್ಲಾ, ಮತದಾರರು ತಮ್ಮ ನಿರ್ಣಾಯಕ ಮತಗಳನ್ನು ಬದಲಾವಣೆಗಾಗಿ ಚಲಾಯಿಸಿದ್ದಾರೆ. ಕರ್ನಾಟಕದಲ್ಲಿ ಆದದ್ದೂ ಇದೇ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವು ನೀಡಿದ ಗ್ಯಾರಂಟಿ ಯೋಜನೆಗಳ ಭರವಸೆಗಳು, ದಕ್ಷ ಆಡಳಿತದ ಆಶ್ವಾಸನೆ ಹಾಗೂ ಸಮಾಜಮುಖಿ ನೀತಿ-ಯೋಜನೆಗಳು ಸಹಜವಾಗಿ ಮತದಾರರನ್ನು ಪಕ್ಷದ ಪರವಾಗಿ ಮತ ನೀಡುವಂತೆ ಮಾಡಿದ್ದವು. ವಿಶೇಷವಾಗಿ ಬಿಜೆಪಿ ಆಳ್ವಿಕೆಯಲ್ಲಿ ಅಪಾರ ನೋವು ಅನುಭವಿಸಿದ್ದ ದಲಿತ, ಅಲ್ಪಸಂಖ್ಯಾತ ಸಮುದಾಯಗಳು ಹಾಗೂ ಮಹಿಳೆಯರು ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಕಾರಣರಾಗಿದ್ದರು.

Darshan Fans ; ಡೆವಿಲ್‌ ರಿಲೀಸ್‌ ದಿನ ನಮಗೆ ತುಂಬಾ ಜವಾಬ್ದಾರಿ ಇದೆ..! #pratidhvani #darshanthoogudeepa

ತಳಸಮಾಜದ ಆಶಯಗಳ ನಡುವೆ

ಇಂತಹ ಸನ್ನಿವೇಶದಲ್ಲಿ ನಡೆದ ಚುನಾವಣೆಗಳಲ್ಲಿ ಸಹಜವಾಗಿಯೇ ಅಲ್ಪಸಂಖ್ಯಾತರು, ದಲಿತ ಸಮುದಾಯ, ಮಹಿಳೆಯರು ಹಾಗೂ ಪುರೋಗಾಮಿ ಹೋರಾಟಗಳು ಬಿಜೆಪಿಯನ್ನು ಪರಾಭವಗೊಳಿಸಿ, ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವುದರಲ್ಲಿ ಅಪಾರ ಶ್ರಮ ವಹಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಇದೇ ಸಮಯದಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಅವರ ವರ್ಚಸ್ಸಿನ ಛಾಯೆ ಇದ್ದರೂ, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನವ ಉದಾರವಾದಿ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯ ಚಿಂತನೆಗಳಿಗೇನೂ ಧಕ್ಕೆಯಾಗಲಿಲ್ಲ. ಶಿಕ್ಷಣ ನೀತಿ, ಕೃಷಿ ನೀತಿಯ ಬಗ್ಗೆ ಭಿನ್ನ ನಿಲುವುಗಳನ್ನು ನಿರೀಕ್ಷಿಸಿದ್ದರೂ, ಈವರೆಗಿನ ಆಡಳಿತ ಗಮನಿಸಿದರೆ, ಯಾವುದೇ ಬದಲಾವಣೆಗಳು ಸಂಭವಿಸಿಲ್ಲ.

ಕೇಂದ್ರ ಸರ್ಕಾರ ಹಿಂಪಡೆದಿರುವ ಕರಾಳ ಕೃಷಿ ಕಾಯ್ದೆಗಳು, ರಾಜ್ಯದಲ್ಲಿ ಜಾರಿಯಲ್ಲಿರುವ ರೈತ ವಿರೋಧಿ ಭೂ ಸ್ವಾಧೀನ ಕಾಯ್ದೆ ಇವೆಲ್ಲವೂ ಯಥಾವತ್ತಾಗಿ ಮುಂದುವರೆದಿದೆ. ಆದರೆ ಈ ನೀತಿಗಳಲ್ಲಿ ಬದಲಾವಣೆಯಾಗುವ ಆಶಯ ಹೊತ್ತು ಮತದಾರರು ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ನೀಡಿ ಆಯ್ಕೆ ಮಾಡಿದ್ದು ವಾಸ್ತವ. ಪ್ರಜಾತಂತ್ರದಲ್ಲಿ ಒಂದು ಸರ್ಕಾರ ತನ್ನ ಅರ್ಧ ಅವಧಿಯನ್ನು ಪೂರೈಸಿದರೆ, ನಾಗರಿಕರು ಸರ್ಕಾರದ ಸಾಧನೆ, ಸಾಫಲ್ಯ ವೈಫಲ್ಯಗಳನ್ನು ಪರಾಮರ್ಶಿಸುವುದು ಸಹಜವಾದ ಪ್ರಕ್ರಿಯೆ.

Yatnal : ಡಿಕೆ ಶಿವಕುಮಾರ್ ಆ... ಜನ್ಮದ ಭ್ರಷ್ಟ #pratidhvani #yatnal #siddaramaiah #dkshivakumar #jds

ಈ ದೃಷ್ಟಿಯಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ತನ್ನ ಬಂಡವಾಳಶಾಹಿ ಆರ್ಥಿಕ ನೀತಿಗಳನ್ನು ಅನುಸರಿಸುತ್ತಲೇ, ತಳಮಟ್ಟದ ಸಾಮಾಜಿಕ-ಆರ್ಥಿಕ ಜಟಿಲ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಶಮನಗೊಳಿಸುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಮಾರುಕಟ್ಟೆ ಪ್ರಹಾರದಿಂದ ತತ್ತರಿಸುತ್ತಿದ್ದ, ತಮ್ಮ ಕೊಳ್ಳುವ ಶಕ್ತಿಯನ್ನೇ (Purchasing Power) ಕಳೆದುಕೋಂಡಿದ್ದ ತಳಸಮಾಜದ ಜನತೆಗೆ , ಉಸಿರಾಡುವಂತೆ ಮಾಡಿದ್ದು ಪ್ರಶಂಸನಾರ್ಹ. ಮಾರುಕಟ್ಟೆ ಆರ್ಥಿಕತೆಯ ಆರಾಧಕರು ಈ ಯೋಜನೆಗಳನ್ನು ಅಭಿವೃದ್ಧಿ ವಿರೋಧಿ, ಬೊಕ್ಕಸಕ್ಕೆ ಹೊರೆ , ವ್ಯರ್ಥ ವೆಚ್ಚ ಎಂದು ಹೀಗಳೆಯುತ್ತಲೇ ಇದ್ದರೂ, ಈ ಯೋಜನೆಗಳ ಫಲಾನುಭವಿಗಳ ದೃಷ್ಟಿಯಿಂದ ಈ ಆರೋಪಗಳು ನಿರಾಧಾರ ಎಂದು ನಿಸ್ಸಂಶಯವಾಗಿ ಹೇಳಬಹುದು. ನವ ಭಾರತದ ಆರ್ಥಿಕ ಅಭಿವೃದ್ಧಿ ರಾಜಕಾರಣದಲ್ಲಿ ಕರ್ನಾಟಕದ ಈ ಮಾದರಿ ಈಗ ದೇಶವ್ಯಾಪಿಯಾಗಿ ವಿಸ್ತರಿಸಿದ್ದು, ಎಲ್ಲ ರಾಜಕೀಯ ಪಕ್ಷಗಳೂ ಇದನ್ನೇ ಅನುಸರಿಸುತ್ತಿವೆ.

ಈ ಯೋಜನೆಗಳು ಜಾರಿಯಾಗಲು ಮೂಲ ಕಾರಣ ಸಿದ್ದರಾಮಯ್ಯ ಎನ್ನುವುದು ವಾಸ್ತವ. ಕಾಂಗ್ರೆಸ್‌ ಪಕ್ಷಕ್ಕೂ ಸಹ ತನ್ನ ಬಂಡವಾಳಶಾಹಿ ಆರ್ಥಿಕ ಆಳ್ವಿಕೆಯ ದುಷ್ಪರಿಣಾಮಗಳಿಂದ ತಳಸಮಾಜದ ಅವಕಾಶವಂಚಿತರನ್ನು ರಕ್ಷಿಸಲು ಗ್ಯಾರಂಟಿ ಯೋಜನೆಗಳು ಒಂದು ಶಮನಕಾರಿ ನೀತಿಗಳಾಗಿ ಪರಿಣಮಿಸಿದವು. ನವ ಭಾರತದ ಡಿಜಿಟಲ್‌ ಯುಗದಲ್ಲಿ ಎಲ್ಲ ಸರ್ಕಾರಗಳಿಗೂ ಇದು ಅನಿವಾರ್ಯವಾಗಿದ್ದು, ಚುನಾವಣೆಗಳಲ್ಲಿ ನಿರ್ಣಾಯಕವಾಗುತ್ತಿವೆ. ಇತ್ತೀಚಿನ ಬಿಹಾರ ಚುನಾವಣೆಗಳು ಸ್ಪಷ್ಟ ನಿದರ್ಶನ. ಇದನ್ನು ಜನಕಲ್ಯಾಣ ನೀತಿಯ ವಿಸ್ತರಣೆ ಅಥವಾ ನಾವೀನ್ಯತೆ ಎನ್ನಬಹುದೇ ಹೊರತು, ಸಮಾಜವಾದ ಎಂದು ನಿರ್ವಚಿಸಲಾಗುವುದಿಲ್ಲ. ಈ ಯೋಜನೆಗಳ ಯಶಸ್ಸನ್ನು ಬದಿಗಿಟ್ಟು ನೋಡಿದಾಗ, ರಾಜ್ಯದ ಹಣಕಾಸು ಪರಿಸ್ಥಿತಿ ಡೋಲಾಯಮಾನವಾಗಿರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ. ಸರ್ಕಾರಿ ನೌಕರರ ವೇತನ, ಶಿಕ್ಷಕರ ವೇತನ, ಆರೋಗ್ಯ ವಲಯದ ಮೂಲ ಸೌಕರ್ಯಗಳು ಅವಗಣನೆಗೆ ಒಳಗಾಗಿರುವುದನ್ನು ನಿರ್ಲಕ್ಷಿಸಲೂ ಆಗುವುದಿಲ್ಲ.

Siddaramaiah :  ಏನು ಎಂದು ಪ್ರಶ್ನಿಸಿದ್ದ HDK ವಿರುದ್ಧ ಸಿದ್ದು ಗರಂ #pratidhvani

ಬಂಡವಾಳಶಾಹಿ ಆರ್ಥಿಕತೆಯ ಪರಿಣಾಮ

ಇದರ ಕಾರಣಗಳನ್ನು ರಾಜ್ಯದ ಜಿಎಸ್‌ಟಿ ಸಂಗ್ರಹದ ಪಾಲು ನೀಡುವಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ತಾರತಮ್ಯಗಳಲ್ಲಿ ಗುರುತಿಸಬಹುದು. ಮತ್ತೊಂದೆಡೆ ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯು ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸಲು ಅವಕಾಶ ನೀಡುವುದಿಲ್ಲ. ಕಾರ್ಪೋರೇಟ್‌ ಔದ್ಯಮಿಕ ವಲಯ ರಾಜಕೀಯವಾಗಿಯೂ ತನ್ನದೇ ಆದ ಪ್ರಭಾವ ಹೊಂದಿರುವುದರಿಂದ , ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯಗಳೂ ಸಹ ಶ್ರೀಮಂತರ ಆದಾಯ ಮತ್ತು ಸಂಪತ್ತಿಗೆ ಅನುಗುಣವಾಗಿ ತೆರಿಗೆ ವಿಧಿಸುವುದಿಲ್ಲ. ವಿಡಂಬನೆ ಎಂದರೆ ಇದೇ ಶ್ರೀಮಂತ, ಮೇಲ್‌ ಮಧ್ಯಮ ವರ್ಗ ಮತ್ತು ಮೇಲ್ಪದರದ ಸಮಾಜವೇ, ತಳಮಟ್ಟದ ಸಮಾಜಕ್ಕೆ ನೆರವಾಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದೆ. ನರೇಂದ್ರ ಮೋದಿ ಸರ್ಕಾರ ಸಂಪತ್ತಿನ ಮೇಲೆ ತೆರಿಗೆಯನ್ನು ರದ್ದುಪಡಿಸಿದ್ದು, ಇದರಿಂದ ದೇಶದ ಬೊಕ್ಕಸಕ್ಕೆ ಅಪಾರ ಮೊತ್ತದ ಆದಾಯ ಅಲಭ್ಯವಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿ ತಳಸಮುದಾಯಗಳು, ದುಡಿಯುವ ವರ್ಗಗಳೇ ರಾಜ್ಯ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆ ಪಾವತಿಸುತ್ತಿರುವುದು ಕಟು ವಾಸ್ತವ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈ ಸಕಾರಾತ್ಮಕ ನೀತಿಗಳನ್ನು ಜಾರಿಗೊಳಿಸಿರುವುದಷ್ಟೇ ಅಲ್ಲದೆ, ಕರಾವಳಿಯಲ್ಲಿ ಕೋಮುವಾದವನ್ನು ನಿಗ್ರಹಿಸಲು ಶಾಸನಾತ್ಮಕ ಕ್ರಮಗಳನ್ನು ಕೈಗೊಂಡಿರುವುದು, ಗುರುತಿಸಲ್ಪಟ್ಟ ದುಷ್ಕರ್ಮಿಗಳ ಮೇಲೆ ನಿರ್ಬಂಧ ಹೇರಿರುವುದು ಆ ಪ್ರದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಮಾಡಿದೆ. ಆದರೆ ರಾಜ್ಯವ್ಯಾಪಿಯಾಗಿ ನೋಡಿದಾಗ, ಮಹಿಳಾ ದೌರ್ಜನ್ಯಗಳು, ಕೊಲೆಗಳು , ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಗಳು ಕಡಿಮೆಯಾಗಿದೆ ಎಂದು ಹೇಳಲಾಗುವುದಿಲ್ಲ. ರಾಜ್ಯದ ಮಹಿಳಾ ಸಂಘಟನೆಗಳು-ಪುರೋಗಾಮಿ ಹೋರಾಟಗಳು ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಹತ್ಯೆಗಳ ಬಗ್ಗೆ ʼಕೊಂದವರು ಯಾರು ?ʼ ಎಂದು ಕೇಳುತ್ತಲೇ ಇದ್ದರೂ, ಇದಕ್ಕೆ ನೇರವಾಗಿ ಉತ್ತರಿಸುವ ಉತ್ತರದಾಯಿತ್ವದಿಂದ ಸರ್ಕಾರ ನುಣುಚಿಕೊಳ್ಳುತ್ತಿದೆ.

KJ George : ಯಾವುದೇ ಕಾರಣಕ್ಕೂ ಈ ತರ ಮುಂದೆ ಹಾಗಬಾರದು. ಕೆಜೆ ಜಾರ್ಜ್‌ #pratidhvani #kjgeorge #chikamagaluru

ಮತ್ತೊಂದೆಡೆ ರಾಜ್ಯ ಸರ್ಕಾರದ ಶಿಕ್ಷಣ ನೀತಿಗಳೂ ಸಹ ಕಾರ್ಪೋರೇಟ್‌ ಪರವಾಗಿಯೇ ಜಾರಿಯಾಗುತ್ತಿದ್ದು, ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. ಕಡಿಮೆ ಶಿಕ್ಷಣಾರ್ಥಿಗಳಿರುವ ಸರ್ಕಾರಿ ಶಾಲೆಗಳನ್ನು ಸಮೀಪದ ಶಾಲೆಯೊಡನೆ ವಿಲೀನಗೊಳಿಸುವ ಪ್ರಕ್ರಿಯೆ ಸಾವಿರಾರು ಗ್ರಾಮೀಣ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುತ್ತದೆ. ಸ್ಪಷ್ಟ ಭಾಷಾ ನೀತಿ ಮತ್ತು ಶಿಕ್ಷಣ ನೀತಿಯನ್ನು ರೂಪಿಸುವ ನಿಟ್ಟಿನಲ್ಲಿ ಆಲೋಚನೆಯನ್ನೂ ಮಾಡದ ಸರ್ಕಾರ, ಅತಿಥಿ ಬೋಧಕರನ್ನು ಮತ್ತು ಶೈಕ್ಷಣಿಕ ವಲಯವನ್ನು ಕಾರ್ಪೋರೇಟ್‌ ಔದ್ಯಮಿಕ ಹಿತಾಸಕ್ತಿಗಳಿಗೆ ಧಾರೆ ಎರೆದುಕೊಡುತ್ತಿರುವುದು, ಸಮಾಜವಾದದ ಪರಿಕಲ್ಪನೆಯನ್ನೇ ಅಣಕಿಸುವ ಒಂದು ವಿದ್ಯಮಾನ. ಎರಡೂವರೆ ವರ್ಷದ ಆಳ್ವಿಕೆಯಲ್ಲಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಜನಪರ ಕಾಯಕಲ್ಪ ನೀಡುವ ಅವಕಾಶ ಇದ್ದರೂ ಸಹ ವಿಫಲವಾಗಿರುವುದು ಖಂಡನೀಯ ಎಂದೇ ಹೇಳಬಹುದು.

ಇತ್ತೀಚೆಗೆ ರಾಜ್ಯ ಸರ್ಕಾರ ಮಂಡಿಸಿರುವ ದ್ವೇಷ ಭಾಷಣ ನಿಯಂತ್ರಣ, ಸಾಮಾಜಿಕ ಬಹಿಷ್ಕಾರ ತಡೆ ವಿಧೇಯಕವು ಮತ್ತೊಂದು ಸಕಾರಾತ್ಮಕ ಕ್ರಮವಾಗಿದ್ದು, ಈ ಕಾಯ್ದೆಯಡಿ ದ್ವೇಷ ಭಾಷಣಗಳಿಗೆ ಮತ್ತು ವ್ಯಾಪಕವಾಗಿ ಹಿಂದುಳಿದ ಜಾತಿಗಳಲ್ಲೂ ಜಾರಿಯಲ್ಲಿರುವ ಸಾಮಾಜಿಕ ಬಹಿಷ್ಕಾರದಂತಹ ಅಮಾನುಷ ಪದ್ಧತಿಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ. ಇಂತಹ ಕಾಯ್ದೆಗಳನ್ನು ಸರ್ಕಾರ ವಿರೋಧಿಗಳನ್ನು ಮಣಿಸುವ ಅಸ್ತ್ರವಾಗಿ ಬಳಸುವ ಅಪಾಯ ಖಂಡಿತವಾಗಿಯೂ ಇದೆ. ಭಾರತದ ಸಾಂಪ್ರದಾಯಿಕ ಸಮಾಜವನ್ನು ನಿರ್ದೇಶಿಸುವ, ಭೌತಿಕವಾಗಿ-ಬೌದ್ಧಿಕವಾಗಿ ನಿಯಂತ್ರಿಸುವ ಹಾಗೂ ಕಟ್ಟುಪಾಡುಗಳಲ್ಲಿ ಬಂಧಿಸುವ ಎಲ್ಲ ಧರ್ಮಗಳ ನೇತಾರರು, ತಮ್ಮ ಸಮಾಜದ ಸಾಮಾನ್ಯ ಜನತೆಯಲ್ಲಿ ಸಮನ್ವಯ-ಸೌಹಾರ್ದತೆ-ಕೂಡುಬಾಳ್ವೆಯ ಅರಿವನ್ನು ಮೂಡಿಸುವ ಪ್ರಯತ್ನ ಮಾಡಿದ್ದಲ್ಲಿ, ಇಂತಹ ಕಾಯ್ದೆಗಳು ಅನವಶ್ಯಕ ಎನಿಸುತ್ತವೆ. ಆದರೆ ಯಾವುದೇ ಧರ್ಮಗಳಲ್ಲಿ ಇಂತಹ ಪ್ರಯತ್ನಗಳೂ ನಡೆಯುತ್ತಿಲ್ಲ ಎನ್ನುವುದು ವಾಸ್ತವ.

C. N. Balakrishna : ಕಾಂಗ್ರೆಸ್ ಗಟಾನುಗಟ ನಾಯಕರ ಮುಂದೆ ರೊಚ್ಚಿಗೆದ್ದ ಜೆಡಿಎಸ್‌ ನಾಯಕ #pratidhvani

ಅಧಿಕಾರ ಮೋಹದ ಪರಿಣಾಮಗಳು

ಈ ಸಾಧನೆ, ಸಾಫಲ್ಯ, ವೈಫಲ್ಯ, ಹಿನ್ನಡೆಗಳ ನಡುವೆ ಈಗ ಅಧಿಕಾರ ಹಸ್ತಾಂತರದ ಅವಾಂತರ ರಾಜ್ಯ ಸರ್ಕಾರದ ಆಳ್ವಿಕೆಯನ್ನೇ ಅಸ್ಥಿರಗೊಳಿಸಿದೆ. 2023ರಲ್ಲಿ ಸರ್ಕಾರ ರಚನೆಯ ಸಂದರ್ಭದಲ್ಲಿ ಎರಡೂವರೆ ವರ್ಷದ ನಂತರ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಧಾನವನ್ನು ಡಿ ಕೆ ಶಿವಕುಮಾರ್‌ ಅವರಿಗೆ ಬಿಟ್ಟುಕೊಡುವ ಜಂಟಲ್‌ಮ್ಯಾನ್‌ ಒಪ್ಪಂದ, ಈಗ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಭಾರತದ ರಾಜಕಾರಣದಲ್ಲಿ ʼ ಜಂಟಲ್‌ಮ್ಯಾನ್‌ ʼ ಎಂಬ ಪದ ಅಪ್ರಸ್ತುತವಾಗಿ ಹಲವು ವರ್ಷಗಳೇ ಕಳೆದಿದ್ದರೂ, ಈ ಅಘೋಷಿತ ಒಪ್ಪಂದವೇ ರಾಜ್ಯ ಸರ್ಕಾರವನ್ನು ಬಹುತೇಕ ಅರಾಜಕತೆಯೆಡೆಗೆ ಕೊಂಡೊಯ್ದಿದೆ. 2023ರಲ್ಲಿ ಕರ್ನಾಟಕದ ಮತದಾರರು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು, ಈ ಅಧಿಕಾರ ಹಸ್ತಾಂತರ ಅಥವಾ ಜಂಟಲ್‌ಮ್ಯಾನ್‌ ಒಪ್ಪಂದಗಳಿಗಾಗಿ ಅಲ್ಲ ಎನ್ನುವುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ.

ಅಧಿಕಾರ ರಾಜಕಾರಣ ಉಂಟುಮಾಡುವ ಪೀಠ ವ್ಯಾಮೋಹ ಮತ್ತು ಅಧಿಕಾರ ಮೋಹ ಭಾರತದ ರಾಜಕೀಯ ಚಿತ್ರಣವನ್ನೇ ಬದಲಿಸಿರುವುದನ್ನು ದೆಹಲಿಯಿಂದ ಕರ್ನಾಟಕದವರೆಗೂ ನೋಡಬಹುದು. ಐದು ವರ್ಷಗಳ ಅಧಿಕಾರಾವಧಿಯಲ್ಲಿ ಇಬ್ಬರು, ಮೂವರು ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವುದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಬೇನೆಯಾಗಿ ಪರಿಣಮಿಸಿದೆ. ಸಚಿವ ಸಂಪುಟ ರಚನೆಯಿಂದ, ನಿಗಮ ಮಂಡಲಿಗಳ ನೇಮಕಗಳವರೆಗೂ, ಸಾಂಸ್ಕೃತಿಕ ಅಕಾಡೆಮಿಗಳ ನೇಮಕಾತಿಗಳನ್ನೂ ಒಳಗೊಂಡಂತೆ, ಸರ್ಕಾರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಕ್ತಿಗಳನ್ನು ನೇಮಿಸುವ ಪರಂಪರೆಯನ್ನು ಕಾಂಗ್ರೆಸ್‌ ಪಕ್ಷವೂ ಅನುಸರಿಸುತ್ತಲೇ ಬಂದಿದೆ. ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಇದೇ ಹಾದಿಯಲ್ಲಿ ಮುಂದುವರೆದಿದೆ. ಅಧಿಕಾರ ಮೋಹ ಮತ್ತು ಪೀಠ ವ್ಯಾಮೋಹದ ಆದಿಯನ್ನು ಈ ಪ್ರಕ್ರಿಯೆಯಲ್ಲೇ ಗುರುತಿಸಬಹುದು.

ಇದೇ ಪ್ರಕ್ರಿಯೆಯ ಉನ್ನತ ಹಂತವನ್ನು ಮುಖ್ಯಮಂತ್ರಿಗಳ ಬದಲಾವಣೆಯಲ್ಲಿ ಕಾಣಬಹುದು. ಒಂದು ವೇಳೆ ಜಂಟಲ್‌ ಮ್ಯಾನ್‌ ಒಪ್ಪಂದ ವಾಸ್ತವವೇ ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಪಾಲಿಸಬೇಕಾಗುತ್ತದೆ. ಇಲ್ಲವಾದರೂ ಸಹ, ʼ ಯಾವುದೇ ಕಾರಣಕ್ಕೂ ಪದತ್ಯಾಗ ಮಾಡುವುದಿಲ್ಲ ʼ ಎಂಬ ದಾರ್ಷ್ಟ್ಯ ಪ್ರಜಾಪ್ರಭುತ್ವವದ ಬುನಾದಿಯನ್ನೇ ಅಲುಗಾಡಿಸುತ್ತದೆ ಎಂಬ ಅರಿವು ಎಲ್ಲ ನಾಯಕರಿಗೂ ಇರಬೇಕಲ್ಲವೇ ? ಡಿ. ಕೆ. ಶಿವಕುಮಾರ್‌ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರೆ ರಾಜ್ಯದ ಆಳ್ವಿಕೆಯ ಮಾದರಿಯೇ ಬದಲಾಗುತ್ತದೆ ಎನ್ನುವುದು ಸತ್ಯ. ಸರ್ಕಾರ ರಚಿಸಿದಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗದೆ ಹೋಗಿದ್ದರೆ, ಗ್ಯಾರಂಟಿ ಯೋಜನೆಗಳೂ ಸಹ ಪರಿಣಾಮಕಾರಿಯಾಗಿ ಜಾರಿಯಾಗುತ್ತಿರಲಿಲ್ಲ ಎನ್ನುವುದೂ ಸತ್ಯ. ಆದರೆ ಈ ಕಾರಣಗಳಿಗಾಗಿ, ಅಧಿಕಾರ ಬಿಟ್ಟುಕೊಡುವುದಿಲ್ಲ ಎಂಬ ನಿಲುವು ತಳೆಯುವುದು ತರವೇ ?

Siddaramaiah : ನಾನು ಮಾತು ಕೊಡಲ್ಲ, ಮಾತು ಕೊಟ್ರೆ ಮಾಡೇ ಮಾಡ್ತೀನಿ' #pratidhvani

ಉತ್ತಮ ಆಳ್ವಿಕೆಯ ಆದ್ಯತೆ

ಇದು ತಾತ್ವಿಕ ಮತ್ತು ತಾರ್ಕಿಕ ಪ್ರಶ್ನೆಯೂ ಹೌದು. ವಾಸ್ತವಿಕವಾಗಿ ಈಗ ಆಗಬೇಕಿರುವುದು ಅಧಿಕಾರ ಹಸ್ತಾಂತರ ಅಲ್ಲ. ಅಧಿಕಾರ ರಾಜಕಾರಣದ ದುರಸ್ತಿ. ಚುನಾಯಿತ ಪ್ರತಿನಿಧಿಗಳ ರಾಜಕೀಯ ಮಹತ್ವಾಕಾಂಕ್ಷೆಗಳು ಮತ್ತು ಜಾತಿ ಸಮೀಕರಣಗಳು, ರಾಜ್ಯದ ಆಡಳಿತ ವ್ಯವಸ್ಥೆಯನ್ನು ಅರಾಜಕತೆಯತ್ತ ದೂಡುವುದು ರಾಜ್ಯದ ಮತದಾರರನ್ನು ಅವಮಾನಿಸಿದಂತಾಗುವುದಿಲ್ಲವೇ ? ಮುಖ್ಯಮಂತ್ರಿ ಯಾರೇ ಆದರೂ ಬದಲಾಗಬೇಕಿರುವುದು ಕಾಂಗ್ರೆಸ್‌ ಸರ್ಕಾರದ ಆರ್ಥಿಕ ಧೋರಣೆ, ಕೃಷಿ ನೀತಿ, ಕಾರ್ಮಿಕ ನೀತಿ ಮತ್ತು ಶೈಕ್ಷಣಿಕ ಸುಧಾರಣಾ ಕ್ರಮಗಳು. ಕರ್ನಾಟಕದ ಮತದಾರರು 2023ರಲ್ಲಿ ಆಯ್ಕೆ ಮಾಡಿದ್ದು ಬಿಜೆಪಿ ಆಳ್ವಿಕೆಯ ದುರಾಡಳಿತಕ್ಕೆ ಪರ್ಯಾಯವಾಗಿ ಉತ್ತಮ, ಸ್ವಚ್ಛ, ಪ್ರಾಮಾಣಿಕ, ಸಂವಿಧಾನಬದ್ಧ ಆಡಳಿತವನ್ನು ನೀಡುವ ಸರ್ಕಾರವನ್ನು. ಮತದಾರರ ಈ ಅಪೇಕ್ಷೆ ಮತ್ತು ನಿರೀಕ್ಷೆಯನ್ನು ಸಾಕಾರಗೊಳಿಸುವುದು ಸಿದ್ದರಾಮಯ್ಯ ಮತ್ತು ಅವರ ಸಹವರ್ತಿಗಳ ಆದ್ಯತೆಯಾಗಬೇಕಲ್ಲವೇ ?̤

ಈ ದೃಷ್ಟಿಯಿಂದ ಕಾಂಗ್ರೆಸ್‌ ಶಾಸಕರು, ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ ಸಕಾರಾತ್ಮಕವಾಗಿ ಯೋಚಿಸಬೇಕಿದೆ. ಜನರು ತಮಗೆ ಅಧಿಕಾರ ನೀಡಿರುವುದು ವೈಯುಕ್ತಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಅಲ್ಲ, ರಾಜ್ಯದ ಸಮಸ್ತ ಜನತೆಯ ಒಳಿತು, ಏಳಿಗೆ ಮತ್ತು ಉನ್ನತಿಗಾಗಿ ಎಂಬ ಅರಿವು ಎಲ್ಲರಲ್ಲೂ ಇರುವುದು ಅತ್ಯವಶ್ಯ. ಇದಕ್ಕೆ ಅಡ್ಡಿಯಾಗಬಹುದಾದ ಪೀಠ ಮೋಹ ಮತ್ತು ಅಧಿಕಾರ ವ್ಯಾಮೋಹ ಪ್ರಜಾಪ್ರಭುತ್ವದ ಮೂಲ ತಳಪಾಯವನ್ನೇ ದುರ್ಬಲಗೊಳಿಸುತ್ತದೆ. ಇಲ್ಲಿ ಪಕ್ಷಗಳಿಗೆ ಆಗುವ ನಷ್ಟಗಳಿಗಿಂತಲೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ, ಸಾಂವಿಧಾನಿಕ ಆಶಯಗಳಿಗೆ ಉಂಟಾಗುವ ಹಾನಿಯನ್ನು ಗಂಭೀರವಾಗಿ ಪರಾಮರ್ಶಿಸಬೇಕಿದೆ. ವ್ಯಕ್ತಿ ಪ್ರತಿಷ್ಠೆ ಮತ್ತು ವೈಯುಕ್ತಿಕ ಅಸ್ತಿತ್ವಗಳನ್ನು ಬದಿಗೊತ್ತಿ ರಾಜ್ಯದ ಜನತೆಗೆ ಸುಸ್ಥಿರ, ಸ್ವಸ್ಥ ಆಳ್ವಿಕೆಯನ್ನು ನೀಡುವುದು ಕಾಂಗ್ರೆಸ್‌ ಪಕ್ಷದ ಆದ್ಯತೆ ಮತ್ತು ನೈತಿಕ ಕರ್ತವ್ಯ. ಈ ದೃಷ್ಟಿಯಿಂದ ಸರ್ಕಾರದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಪರಿಹರಿಸಬೇಕಿದೆ.

 

Tags: BJPcongressJDSKarnatakaKarnatka PoliticsPolitics
Previous Post

Daily Horoscope: ಇಂದು ಅದೃಷ್ಟ ಕೈ ಹಿಡಿಯುವ ರಾಶಿಗಳಿವು..!

Next Post

ಇಂದಿನಿಂದ ಚಳಿಗಾಲ ಅಧಿವೇಶನ: ಸದನ-ಕದನಕ್ಕೆ ಸಜ್ಜಾದ ಕುಂದಾನಗರಿ

Related Posts

“ಚಿನ್ನಸ್ವಾಮಿ”ಯಲ್ಲಿ ಕ್ರಿಕೆಟ್ ಪಂದ್ಯಕ್ಕೆ ರಾಜ್ಯ ಸರ್ಕಾರ ಅಸ್ತು
ಇದೀಗ

“ಚಿನ್ನಸ್ವಾಮಿ”ಯಲ್ಲಿ ಕ್ರಿಕೆಟ್ ಪಂದ್ಯಕ್ಕೆ ರಾಜ್ಯ ಸರ್ಕಾರ ಅಸ್ತು

by ಪ್ರತಿಧ್ವನಿ
December 11, 2025
0

ಬೆಳಗಾವಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಥಗಿತಗೊಂಡಿದ್ದ ಕ್ರಿಕೆಟ್ ಪಂದ್ಯಾವಳಿಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್‌ ನೀಡಿದೆ. ಇಂದು ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ...

Read moreDetails
ಸೂರಿ ಅಣ್ಣ ಚಿತ್ರದ ʼನೀ ನನ್ನ ದೇವತೆʼ ಸಾಂಗ್ ರಿಲೀಸ್‌

ಸೂರಿ ಅಣ್ಣ ಚಿತ್ರದ ʼನೀ ನನ್ನ ದೇವತೆʼ ಸಾಂಗ್ ರಿಲೀಸ್‌

December 11, 2025
ಕೈ ಪಾಳಯದಲ್ಲಿ ಬಂಡಾಯ ಸ್ಫೋಟಕ್ಕೆ ಕಾರಣವಾಗ್ತಿದ್ದಾರಾ ಯತೀಂದ್ರ..?

ಕೈ ಪಾಳಯದಲ್ಲಿ ಬಂಡಾಯ ಸ್ಫೋಟಕ್ಕೆ ಕಾರಣವಾಗ್ತಿದ್ದಾರಾ ಯತೀಂದ್ರ..?

December 11, 2025
ದರ್ಶನ್‌ ಡೆವಿಲ್‌ ಸಿನಿಮಾಗೆ ರೇಟಿಂಗ್‌ ಕೊಡಲು ಕೋರ್ಟ್‌ ತಡೆ: ಯಾಕೆ ಗೊತ್ತಾ..?

ದರ್ಶನ್‌ ಡೆವಿಲ್‌ ಸಿನಿಮಾಗೆ ರೇಟಿಂಗ್‌ ಕೊಡಲು ಕೋರ್ಟ್‌ ತಡೆ: ಯಾಕೆ ಗೊತ್ತಾ..?

December 11, 2025
ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನೆಡೆ

ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನೆಡೆ

December 11, 2025
Next Post
ಇಂದಿನಿಂದ ಚಳಿಗಾಲ ಅಧಿವೇಶನ: ಸದನ-ಕದನಕ್ಕೆ ಸಜ್ಜಾದ ಕುಂದಾನಗರಿ

ಇಂದಿನಿಂದ ಚಳಿಗಾಲ ಅಧಿವೇಶನ: ಸದನ-ಕದನಕ್ಕೆ ಸಜ್ಜಾದ ಕುಂದಾನಗರಿ

Recent News

ಸೂರಿ ಅಣ್ಣ ಚಿತ್ರದ ʼನೀ ನನ್ನ ದೇವತೆʼ ಸಾಂಗ್ ರಿಲೀಸ್‌
Top Story

ಸೂರಿ ಅಣ್ಣ ಚಿತ್ರದ ʼನೀ ನನ್ನ ದೇವತೆʼ ಸಾಂಗ್ ರಿಲೀಸ್‌

by ಪ್ರತಿಧ್ವನಿ
December 11, 2025
ಕೈ ಪಾಳಯದಲ್ಲಿ ಬಂಡಾಯ ಸ್ಫೋಟಕ್ಕೆ ಕಾರಣವಾಗ್ತಿದ್ದಾರಾ ಯತೀಂದ್ರ..?
Top Story

ಕೈ ಪಾಳಯದಲ್ಲಿ ಬಂಡಾಯ ಸ್ಫೋಟಕ್ಕೆ ಕಾರಣವಾಗ್ತಿದ್ದಾರಾ ಯತೀಂದ್ರ..?

by ಪ್ರತಿಧ್ವನಿ
December 11, 2025
ದರ್ಶನ್‌ ಡೆವಿಲ್‌ ಸಿನಿಮಾಗೆ ರೇಟಿಂಗ್‌ ಕೊಡಲು ಕೋರ್ಟ್‌ ತಡೆ: ಯಾಕೆ ಗೊತ್ತಾ..?
Top Story

ದರ್ಶನ್‌ ಡೆವಿಲ್‌ ಸಿನಿಮಾಗೆ ರೇಟಿಂಗ್‌ ಕೊಡಲು ಕೋರ್ಟ್‌ ತಡೆ: ಯಾಕೆ ಗೊತ್ತಾ..?

by ಪ್ರತಿಧ್ವನಿ
December 11, 2025
ಪಬ್, ಬಾರ್-ರೆಸ್ಟೋರೆಂಟ್ ಮಾಲೀಕರೇ ಗಮನಿಸಿ..! ಇಲ್ಲಿದೆ ಮುಖ್ಯವಾದ ಮಾಹಿತಿ
Top Story

ಪಬ್, ಬಾರ್-ರೆಸ್ಟೋರೆಂಟ್ ಮಾಲೀಕರೇ ಗಮನಿಸಿ..! ಇಲ್ಲಿದೆ ಮುಖ್ಯವಾದ ಮಾಹಿತಿ

by ಪ್ರತಿಧ್ವನಿ
December 11, 2025
ರಾಜಕೀಯಕ್ಕೆ ಬರ್ತಾರ ದರ್ಶನ್‌? ಡೆವಿಲ್‌ ಕೊಟ್ಟ ಸೂಚನೆ ಏನು?
Top Story

ರಾಜಕೀಯಕ್ಕೆ ಬರ್ತಾರ ದರ್ಶನ್‌? ಡೆವಿಲ್‌ ಕೊಟ್ಟ ಸೂಚನೆ ಏನು?

by ಪ್ರತಿಧ್ವನಿ
December 11, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಚಿನ್ನಸ್ವಾಮಿ”ಯಲ್ಲಿ ಕ್ರಿಕೆಟ್ ಪಂದ್ಯಕ್ಕೆ ರಾಜ್ಯ ಸರ್ಕಾರ ಅಸ್ತು

“ಚಿನ್ನಸ್ವಾಮಿ”ಯಲ್ಲಿ ಕ್ರಿಕೆಟ್ ಪಂದ್ಯಕ್ಕೆ ರಾಜ್ಯ ಸರ್ಕಾರ ಅಸ್ತು

December 11, 2025
ಸೂರಿ ಅಣ್ಣ ಚಿತ್ರದ ʼನೀ ನನ್ನ ದೇವತೆʼ ಸಾಂಗ್ ರಿಲೀಸ್‌

ಸೂರಿ ಅಣ್ಣ ಚಿತ್ರದ ʼನೀ ನನ್ನ ದೇವತೆʼ ಸಾಂಗ್ ರಿಲೀಸ್‌

December 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada