ಬೆಂಗಳೂರು: ಮಾ.28: ಕಾಂಗ್ರೆಸ್ನಿಂದ ಗೆದ್ದು ಶಾಸಕರಾಗಿದ್ದ ಹಲವಾರು ಮಂದಿ ಸಚಿವ ಸ್ಥಾನ ಸಿಗದಿದ್ದರಿಂದ ಬೇಸತ್ತು ಕಾಂಗ್ರೆಸ್ ಬಿಟ್ಟು ಬಿಜೆಪಿ ಕಡೆಗೆ ಹಾರಿದ್ದರು. ಅಂದುಕೊಂಡಂತೆ ಬಿಜೆಪಿಯಲ್ಲಿ ಗೆದ್ದು ಸಚಿವರಾಗಿ ಅಧಿಕಾರವನ್ನೂ ಅನುಭವಿಸಿದರು. ಇದೀಗ ಮತ್ತೆ ತವರು ಪಕ್ಷಕ್ಕೆ ವಾಪಸ್ ಆಗುವುದಕ್ಕೆ ತಯಾರಿ ನಡೆಸಿದ್ದಾರೆ. ಚುನಾವಣೆ ದಿನಾಂಕ ಘೋಷಣೆ ಆದ ಬಳಿಕ ಎಲ್ಲಾ ಸಚಿವರು ಸರ್ಕಾರಿ ಸೌಲತ್ತುಗಳನ್ನು ವಾಪಸ್ ಕೊಡಬೇಕಿದೆ. ಆಗ ಸಚಿವರು ತನ್ನಿಂದ ತಾನೇ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಸಚಿವ ಸ್ಥಾನ ಕಳೆದುಕೊಳ್ತಿದ್ದ ಹಾಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಚಿವರು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಸಚಿವ ಎನ್ ಚಲುವರಾಯಸ್ವಾಮಿ (ಸ್ವಾಮಿಗೌಡ) ಕೂಡ ಸುಳಿವು ನೀಡಿದ್ದಾರೆ. ಎಸ್.ಟಿ ಸೋಮಶೇಖರ್ ಹಾಗು ಬೈರತಿ ಬಸವರಾಜು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಕೂಡ ಖಾಲಿ ಇಟ್ಟುಕೊಂಡು ಕಾಯುತ್ತಿದೆ..!

ಸಿದ್ದರಾಮಯ್ಯ ಸೂಚನೆ ಪಡೆದ ಬಳಿಕವೇ ಕಾಂಗ್ರೆಸ್ ಶಾಸಕರು ಬಿಜೆಪಿ ಕಡೆಗೆ ಹೋದರು ಎನ್ನುವ ಆರೋಪವೂ ಇದೆ. ಆದರೆ ಎಲ್ಲಾ ಸಚಿವರು ವಾಪಸ್ ಬರುವ ಸಾಧ್ಯತೆ ಕಡಿಮೆ ಇದೆ. ಆದರೆ ಮೂರ್ನಾಲ್ಕು ಮಂದಿ ಬಿಜೆಪಿಯಲ್ಲಿ ಇರುವುದಕ್ಕೆ ಸಾಧ್ಯವಾಗದೆ ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ ಎನ್ನಲಾಗ್ತಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆ ಪಟ್ಟಿಯಲ್ಲಿ ಕೆ.ಆರ್ ಪೇಟೆ, ಯಶವಂತಪುರ, ಕೆ.ಆರ್ ಪುರ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿಲ್ಲ. ಪ್ರಮುಖವಾಗಿ ಈ ಕ್ಷೇತ್ರದ ಹಾಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎನ್ನುವುದು ಕಾಂಗ್ರೆಸ್ ಮೂಲಗಳ ಮಾಹಿತಿ. ಇದೇ ಕಾರಣಕ್ಕಾಗಿ ಚುನಾವಣೆ ಘೋಷಣೆ ಆದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಆ ಬಳಿಕ ಟಿಕೆಟ್ ಘೋಷಣೆಗೆ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ಯಶವಂತಪುರ, ಕೆ.ಆರ್ ಪುರದಲ್ಲಿ ಬಿಜೆಪಿ ಗೆಲ್ಲಲ್ಲ..!!

ಯಶವಂತಪುರದಲ್ಲಿ ಕಾಂಗ್ರೆಸ್ ಪಕ್ಷದಿಂದ ಭರ್ಜರಿ ಗೆಲುವು ಕಂಡಿದ್ದ ಎಸ್.ಟಿ ಸೋಮಶೇಖರ್ ರಾಜೀನಾಮೆ ನೀಡಿ ಉಪಚುನಾವಣೆಗೆ ಸ್ಪರ್ಧೆ ಮಾಡಿದಾಗ ಕಾಂಗ್ರೆಸ್ನಿಂದ ಅಭ್ಯರ್ಥಿಗಳೇ ಇರಲಿಲ್ಲ. ಆದರೆ ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಜೆಡಿಎಸ್ ನೇರ ಎದುರಾಳಿ. ಬಿಜೆಪಿ ಅಸ್ತಿತ್ವದಲ್ಲಿ ಇಲ್ಲದಿದ್ದರೂ ಸರ್ಕಾರ ಇದ್ದ ಕಾರಣಕ್ಕೆ ದಡ ಮುಟ್ಟಿದ್ದರು. ಇದೀಗ ಸಾವತ್ರಿಕ ಚುನಾವಣೆ ಆಗಿರುವ ಕಾರಣಕ್ಕೆ ಪಕ್ಷದ ಮತಗಳು ಪ್ರಮುಖ ಪಾತ್ರ ವಹಿಸುತ್ತವೆ. ಒಂದು ವೇಳೆ ಎಸ್.ಟಿ ಸೋಮಶೇಖರ್ ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಪಕ್ಷದ ಮತಗಳು ಸಿಗುವುದಿಲ್ಲ. ಬಿಜೆಪಿ ಪಕ್ಷದ ಮತಗಳು ಅಧಿಕ ಪ್ರಮಾಣದಲ್ಲಿ ಇಲ್ಲ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಸುಲಭ ಗೆಲುವು ಸಾಧಿಸಲಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಮತ್ತೆ ಕಾಂಗ್ರೆಸ್ ಸೇರಿ ಗೆಲುವುದು ಸಾಧಿಸುವುದು ಎಸ್.ಟಿ ಸೋಮಶೇಖರ್ ಲೆಕ್ಕಾಚಾರ.
ಕೆ.ಆರ್ ಪುರದಲ್ಲಿ ಎದುರಾಳಿ ಜೊತೆ ರಾಜಕೀಯ ಕಷ್ಟ ಕಷ್ಟ..!
ಕೆ.ಆರ್ ಪುರದಲ್ಲಿ ಬೈರತಿ ಬಸವರಾಜು ಬಿಜೆಪಿ ಪಕ್ಷದ ನಂದೀಶ್ ರೆಡ್ಡಿ ಜೊತೆಗೆ ರಾಜಕೀಯ ಜಿದ್ದಾಜಿದ್ದಿಯಲ್ಲಿ ಗೆದ್ದು ಬಂದಿದ್ದರು. ಆದರೆ ಬಿಜೆಪಿ ಸೇರ್ಪಡೆ ಆದ ಬಳಿಕವೂ ಇಬ್ಬರ ನಡುವೆ ಅಷ್ಟೊಂದು ಸಾಮರಸ್ಯವಿಲ್ಲ. ಬೈರತಿ ಬಸವರಾಜು ಭಾಗಿಯಾದ ಕಾರ್ಯಕ್ರಮಗಳಲ್ಲಿ ನಂದೀಶ್ ರೆಡ್ಡಿ ಗೈರು. ನಂದೀಶ್ ರೆಡ್ಡಿ ಭಾಗಿಯಾದ ಕಾರ್ಯಕ್ರಮಕ್ಕೆ ಬೈರತಿ ಬಸವರಾಜು ಗೈರು ಆಗುತ್ತಿದ್ದಾರೆ. ಇದೀಗ ಮೂಲ ಬಿಜೆಪಿಗ ನಂದೀಶ್ ರೆಡ್ಡಿ ಕೂಡ ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಒಂದು ವೇಳೆ ಬೈರತಿ ಬಸವರಾಜ್ಗೆ ಟಿಕೆಟ್ ಸಿಕ್ಕರೂ ನಂದೀಶ್ ರೆಡ್ಡಿ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರಸ್ ಪಕ್ಷಕ್ಕೆ ವಾಪಸ್ ಆಗುವುದು ಮೇಲು ಎನ್ನುವ ಲೆಕ್ಕಾಚಾರದಲ್ಲಿ ಬೈರತಿ ಬಸವರಾಜು ಇದ್ದಾರೆ ಎನ್ನುವುದು ಪ್ರತಿಧ್ವನಿಗೆ ಸಿಕ್ಕಿರುವ ಮಾಹಿತಿ.
ಕೆ.ಆರ್ ಪೇಟೆ ಹಾಗು ಮಹಾಲಕ್ಷ್ಮೀ ಲೇಔಟ್ ಅತಂತ್ರ..!

ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಈ ಬಾರಿ ಬಿಜೆಪಿ ಇಂದ ಸ್ಪರ್ಧೆ ಮಾಡಿದರು ಸೋಲುವುದು ಗ್ಯಾರಂಟಿ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸೇರುವ ಮನಸ್ಸು ಮಾಡಿದ್ದರು. ಆದರೆ ಅಮಿತ್ ಷಾ ದೆಹಲಿಗೆ ಬುಲಾವ್ ಕೊಟ್ಟು ಕರೆಸಿಕೊಂಡು ವಾರ್ನ್ ಮಾಡಿದ್ದಾರೆ ಎನ್ನಲಾಗ್ತಿದೆ. ಅಮಿತ್ ಷಾ ಮಾತಿಗೆ ಬೆಚ್ಚಿರುವ ನಾರಾಯಣಗೌಡ ಸೋತರು ಪರವಾಗಿಲ್ಲ ಬಿಜೆಪಿಯಿಂದಲೇ ಸ್ಪರ್ಧೆ ಮಾಡೋಣ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಇನ್ನು ಜೆಡಿಎಸ್ನಿಂದ ಬಿಜೆಪಿಗೆ ಹೋಗಿದ್ದ ಶಾಸಕ ಗೋಪಾಲಯ್ಯ, ಪಕ್ಷೇತರ ಅಭ್ಯರ್ಥಿ ಆಗಿ ಆದರೂ ಗೆಲುವು ಸಾಧಿಸ್ತೇನೆ ಎನ್ನುವ ಛಲದಲ್ಲಿದ್ದಾರೆ. ಗೋಪಾಲಯ್ಯಗೆ ಟಿಕೆಟ್ ಹಾಗು ಪಕ್ಷ ಯಾವುದು ಅವಶ್ಯಕತೆ ಇಲ್ಲ. ಜನರ ಜೊತೆಗೆ ಒಟನಾಟ ಚನ್ನಾಗಿದ್ದು, ಗೆಲುವು ಸಾಧಿಸುತ್ತೇನೆ ಎನ್ನುವ ಕಾರಣಕ್ಕೆ ಬೇರೆ ಪಕ್ಷಕ್ಕೆ ಹೋಗಬೇಕಾ..? ಬಿಜೆಪಿಯಲ್ಲೇ ಉಳಿಯಬೇಕಾ ಅನ್ನೋ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅನ್ನೋದು ಪಕ್ಕಾ ಮಾಹಿತಿ.
ಕೃಷ್ಣಮಣಿ