ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಖುದ್ದಾಗಿ ಕಾಂಗ್ರೆಸ್ ಸೇರಲ್ಲ ಅಂತಾ ಹೇಳಿದ ಮೇಲೂ ಅವರ ರಾಜಕೀಯ ನಡೆಗಳ ಬಗ್ಗೆ ರಾಷ್ಟ್ರ ರಾಜಕಾರಣದ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಲೇ ಇದೆ. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರದೇ ಇದ್ದುದು ಒಳ್ಳೆಯದೇ ಆಯಿತು. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷದ ಸಿದ್ದಾಂತಕ್ಕೆ ಸೂಕ್ತವಾದಂತಹವರಲ್ಲ. ಪ್ರಶಾಂತ್ ಕಿಶೋರ್ ಒಬ್ಬ ಅವಕಾಶವಾದಿ, ನಂಬಿಕೆಗೆ ಅರ್ಹವಲ್ಲ. ಕಾಂಗ್ರೆಸ್ ಪಕ್ಷದ ಪುನಶ್ಚೇತನ ಮಾಡುವುದಕ್ಕಾಗಿ ನೀಡಿದ್ದ ಅವರ ಪವರ್ ಪಾಯಿಂಟ್ ಪ್ರೆಸೆಂಟೇಷನ್ ನಲ್ಲಿ ‘ಗೆಲ್ಲುವ ಗುಟ್ಟುಗಳು’ ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಂತಹ ನಾಯಕರು ಪ್ರಶಾಂತ್ ಕಿಶೋರ್ ಭೇಟಿಗೆ ಸಮಾಯವಕಾಶವನ್ನೇ ಕೊಡಬಾರದು ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನೊಂದೆಡೆ ಸದ್ಯ ಸಂಕಷ್ಟದಲ್ಲಿರುವ ಕಾಂಗ್ರೆಸ್ ಪಕ್ಷ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಬಳಸಿಕೊಂಡು ಪುಟಿದೇಳಬೇಕಿತ್ತು. 2022 ಮತ್ತು 2023ರಲ್ಲಿ ಸಾಲು ಸಾಲು ವಿಧಾನಸಭಾ ಚುನಾವಣೆಗಳಿವೆ. 2024ರಲ್ಲಿ ಲೋಕಸಭಾ ಚುನಾವಣೆ ಇದೆ. ಇಂತಹ ಸಂದರ್ಭದಲ್ಲಿ ಪ್ರಶಾಂತ್ ಕಿಶೋರ್ ಪಕ್ಷ ಸೇರಿದ್ದರೆ ಚೆನ್ನಾಗಿರುತ್ತಿತ್ತು. ಕಡೆಪಕ್ಷ ಹೊರಗಿನಿಂದಾದರೂ ಪ್ರಶಾಂತ್ ಕಿಶೋರ್ ತಂತ್ರಗಾರಿಕೆಯನ್ನು ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಬೇಕು ಎನ್ನುವವರಿಗಿಂತ ಬೇಡ ಎನ್ನುವವರು ಜಾಸ್ತಿ ಇದ್ದಾರೆ. ಮೊದಲ ದಿನವೇ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲ್ಲ ಎಂಬುದನ್ನು ಗುರುತಿಸಿದ್ದ ರಾಹುಲ್ ಗಾಂಧಿ ಅವರ ದೂರದೃಷ್ಟಿ ತಡವಾಗಿ ಬೆಳಕಿಗೆ ಬಂದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಪ್ರಶಾಂತ್ ಕಿಶೋರ್ ‘ಆಜ್ ತಕ್’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ‘ಕಾಂಗ್ರೆಸ್ ಪಕ್ಷಕ್ಕೆ ನನ್ನ ಅನಿವಾರ್ಯತೆ ಇಲ್ಲ’ ಎಂದು ಹೇಳಿದ್ದಾರೆ. ಅಷ್ಟೇಯಲ್ಲ, ‘ಕಾಂಗ್ರೆಸ್ ಪಕ್ಷ ತಾನಾಗಿಯೇ ಪುನಶ್ಚೇತನಗೊಳ್ಳುವ ಸಮರ್ಥ್ಯ ಹೊಂದಿದೆ’ ಎಂದು ಪ್ರತಿಪಾದಿಸಿದ್ದಾರೆ. ಇತ್ತೀಚೆಗೆ ಐದು ರಾಜ್ಯಗಳ ಫಲಿತಾಂಶದ ಬಳಿಕ ‘ಇಂಡಿಯಾ ಟುಡೆ’ ಜೊತೆ ಮಾತನಾಡಿದ್ದ ಪ್ರಶಾಂತ್ ಕಿಶೋರ್ ಹೀಗೆ ಕಾಂಗ್ರೆಸ್ ಬಗ್ಗೆ ಬಹಳ Positive ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ‘ಈಗಲೂ ಕಾಂಗ್ರೆಸ್ ಪಕ್ಷ ಸವಾಲು ಸ್ವೀಕರಿಸಿ, ಸೂಕ್ತ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದರೆ 2024ರಲ್ಲಿ ಬಿಜೆಪಿಯನ್ನು ಸೋಲಿಸಬಹುದು’ ಎಂದು ಹೇಳಿದ್ದರು.
“ಕಾಂಗ್ರೆಸ್ ನಾಯಕರು ಮತ್ತು ನಾನು ಪಕ್ಷದ ಭವಿಷ್ಯದ ಯೋಜನೆಗೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅವೆಲ್ಲವುಗಳನ್ನು ಅವರು ಸ್ವಂತವಾಗಿ ಕೂಡ ಮಾಡಬಹುದು. ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ನಾಯಕರಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ನನ್ನ ಅಗತ್ಯವಿಲ್ಲ. ಆದರೂ ನನಗೆ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದರು, ನಾನು ನಿರಾಕರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲು ಕಾರ್ಯಾಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆಗಳಿಗೆ ಬೇಡಿಕೆ ಇಟ್ಟರು. ಅದರಿಂದಾಗಿಯೇ ಅವರು ಕಾಂಗ್ರೆಸ್ ಸೇರುವ ಮಾತುಕತೆ ಮುರಿದುಬಿತ್ತು ಎಂಬ ಚರ್ಚೆಗಳೂ ನಡೆಯುತ್ತಿವೆ. ಈ ಬಗ್ಗೆ ಮಾತನಾಡಿರುವ ಪ್ರಶಾಂತ್ ಕಿಶೋರ್, ‘ನಾನು ಪಕ್ಷದಲ್ಲಿ ಯಾವುದೇ ಪಾತ್ರವನ್ನು ಬಯಸಿರಲಿಲ್ಲ. ಭವಿಷ್ಯದ ನೀಲನಕ್ಷೆಯನ್ನು ಒಪ್ಪಿಕೊಂಡು ಅದನ್ನು ಕಾರ್ಯಗತಗೊಳಿಸಬೇಕು ಎನ್ನುವುದು ಮಾತ್ರ ನನ್ನ ಉದ್ದೇಶವಾಗಿತ್ತು. ನಾನು ನನ್ನ ಈ ಉದ್ದೇಶವನ್ನು ತಿಳಿಸಬೇಕಾಗಿತ್ತು. ತಿಳಿಸಿದ್ದೇನೆ. 2014ರಿಂದ ಇಚೆಗೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವು ತನ್ನ ಭವಿಷ್ಯದ ಬಗ್ಗೆ ಇಷ್ಟು ರಚನಾತ್ಮಕವಾದ ಚರ್ಚೆಯನ್ನು ಮಾಡಿದೆ. ಅವರು ನಾನು ಪಕ್ಷದ ಭಾಗವಾಗಲು ಬಯಸಿದ್ದರು. ಆದರೆ ಬದಲಾವಣೆಗಳನ್ನು ಕಾರ್ಯಗತಗೊಳಿಸುವ ಉಸ್ತುವಾರಿ ನೀಡಿದ್ದರೆ ಮಾತ್ರ ಅದು ಸಾಧ್ಯವಾಗುತ್ತಿತ್ತು. ಅದನ್ನೂ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ ಆಗಬೇಕು ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಿಗೆ ನೀಡಲಿಲ್ಲ. ಆದುದರಿಂದ ವಾರದ ಹಿಂದೆಯೇ ಮಾತುಕತೆ ಮುರಿದು ಬಿದ್ದಿತ್ತು ಎಂಬ ಚರ್ಚೆಗಳೂ ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಶೋರ್, ‘ಪಕ್ಷಕ್ಕೆ ನೀಡಿರುವ ನಾಯಕತ್ವದ ಸೂತ್ರದಲ್ಲಿ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅವರ ಹೆಸರುಗಳು ಇರಲಿಲ್ಲ. ಕಾಂಗ್ರೆಸ್ ನಾಯಕರ ನಡುವಿನ ಮಾತುಕತೆ ವೇಳೆ ಖಾಸಗಿಯಾಗಿ ಏನು ಪ್ರಸ್ತಾಪಿಸಲಾಗಿದೆ ಎಂಬುದನ್ನು ಇಲ್ಲಿ ಹೇಳಲಾರೆ’ ಎಂದಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಅವರನ್ನು ‘ನನ್ನ ಸ್ನೇಹಿತ’ ಎಂದು ಹೇಳಿರುವ ಪ್ರಶಾಂತ್ ಕಿಶೋರ್, ‘ರಾಹುಲ್ ಗಾಂಧಿ ಅವರ ಸ್ಥಾನವನ್ನು ನಿರ್ಧರಿಸಲು ನಾನು ಯಾರು?’ ಎಂದು ಪ್ರಶ್ನಿಸಿದ್ದಾರೆ. ಇದರ ಜೊತೆಜೊತೆಗೆ ಬಿಜೆಪಿಯವರು ವ್ಯವಸ್ಥಿತವಾಗಿ ರಾಹುಲ್ ಗಾಂಧಿ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ. ಮತ್ತೆ ರಾಹುಲ್ ಗಾಂಧಿ ಅವರ ಚಿತ್ರಣವನ್ನು ಕಟ್ಟಬಹುದು ಎಂದು ಹೇಳಿದ್ದಾರೆ. ‘2002ರಿಂದ ಇಲ್ಲಿಯವರೆಗೆ ಪ್ರಧಾನಿ ಮೋದಿಯವರ ಚಿತ್ರಣದಲ್ಲಿನ ಬದಲಾವಣೆಯನ್ನು ನೋಡಿ’ ಎಂಬ ಉದಾಹರಣೆ ನೀಡಿ, ‘ಇದು ಖಂಡಿತ ಸಾಧ್ಯ’ ಎಂದು ಪ್ರತಿಪಾದಿಸಿದ್ದಾರೆ. ಭವಿಷ್ಯದ ಯೋಜನೆ ಸಿದ್ಧಪಡಿಸಲು ಕಾಂಗ್ರೆಸ್ ಪಕ್ಷದಿಂದ ಯಾವುದೇ ಹಣವನ್ನು ತೆಗೆದುಕೊಂಡಿಲ್ಲ ಎಂಬುದನ್ನೂ ಪ್ರಶಾಂತ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ಕಾಂಗ್ರೆಸ್ ಗೆಲ್ಲುವ ಸಾಧ್ಯತೆಗಳ ಕುರಿತು ಮಾತನಾಡಿರುವ ಪ್ರಶಾಂತ್ ಕಿಶೋರ್, ‘ಕಾಂಗ್ರೆಸ್ ದೇಶದಲ್ಲಿ ತುಂಬಾ ಆಳವಾಗಿ ಬೇರು ಬಿಟ್ಟಿರುವ ಪಕ್ಷ. ಅವರಿಗೆ ಅವಕಾಶವಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಆದರೆ ಅವರು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ.









