ಚುನಾವಣೆ ನಂತರ ಎಲ್ಲರೂ ಒಟ್ಟಾಗಿ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಸುದ್ದಿಗೋಷ್ಠಿ ನಡೆಸಿ ಎಂ ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಎಂ ಬಿ ಪಾಟೀಲ್ ಹೇಳಿಕೆ ಕಾಂಗ್ರೆಸ್ಗೆ ಮುಜುಗರ ತರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ನಾನು ಡಿಕೆಶಿ, ಸಿದ್ದರಾಮಯ್ಯನವರ ಜೊತೆ ಮಾತನಾಡಿದ್ದೇನೆ. ಎಂ ಬಿ ಪಾಟೀಲ್ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ ಎಂದಿರುವುದರಲ್ಲಿ ತಪ್ಪೇನೂ ಇಲ್ಲ’ ಎಂದು ಸಮರ್ಥನೆ ನೀಡಿದ್ದಾರೆ.
‘ಈ ಹಿಂದೆ ವೀರಶೈವ ಲಿಂಗಾಯತ ಡಿವೈಡ್ ಮಾಡಲು ಹೊರಟಿದ್ದಾರೆ ಅಂತ ನನ್ನ ಮೇಲೆ ಆರೋಪ ಮಾಡಿದ್ದರು. ವೀರಶೈವ, ಲಿಂಗಾಯತ ಎಲ್ಲರು ಒಟ್ಟಾಗಿ ಹೋಗಿ ನಾವು ಮುನ್ನಡೆಯಬೇಕು ಎಂದು ನಾನು ಹೇಳಿದ್ದೇನೆ. ವೀರಶೈವ ಲಿಂಗಾಯತ ಒಟ್ಟಾಗಬಾರದಾ..? ಎಂದು ಅವರು ಪ್ರಶ್ನಿಸಿದ್ದಾರೆ. ೯೯ ಉಪಪಂಗಡ ಹಾಗೂ ವೀರಶೈವರನ್ನು ಸೇರಿಸಿ ಹೋಗುತ್ತಿದ್ದೇವೆ. ನಾವು ಕೂಡುವುದರಲ್ಲಿ ಸಮಸ್ಯೆ ಏನಿದೆ? ಎಂದು ಪ್ರಶ್ನಿಸಿದ ಅವರು, ಮುಕ್ತ ಹಾಗೂ ಶಾಂತ ಮನಸ್ಸಿನಿಂದ ಕುಳಿತುಕೊಂಡು ಸಮಯ ತೆಗೆದುಕೊಂಡು ಯಾವ ರೀತಿ ಮುನ್ನಡೆಯಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಆದರೆ ಈ ವಿಚಾರವಾಗಿ ನಾನು ನಾಯಕತ್ವವನ್ನು ವಹಿಸಲ್ಲ, ಎಲ್ಲರ ಜೊತೆ ನಾನಿದ್ದೇನೆ ಎಂದಿದ್ದೆ ಎಂದ ಎಂಬಿ ಪಾಟೀಲ, ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದಲ್ಲಿ ೨ ಎ ಮೀಸಲಾತಿ ಹೋರಾಟಕ್ಕೆ ಪಾದಯಾತ್ರೆ ಮಾಡುವ ಅಗತ್ಯ ಬರುತ್ತಿರಲಿಲ್ಲ. ಆದೂ ನಾನು ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ವೀರಶೈವ ಮಹಾಸಭಾ, ಜಾಗತಿಕ ವೀರಶೈವ ಮಹಾಸಭಾ, ವಿರಕ್ತ ಸ್ವಾಮೀಜಿ, ಪಂಚಪೀಠ ಶ್ರೀಗಳು ಸೇರಿದಂತೆ ಎಲ್ಲರ ಅಭಿಪ್ರಾಯದಂತೆ ಮುಂದೆ ನಡೆಯುತ್ತೇವೆ. ಒಂದು ಚರ್ಚೆ ಪ್ರಾರಂಭ ಮಾಡುತ್ತೇವೆ ಹಾಗೂ ಭಿನ್ನಾಭಿಪ್ರಾಯ ತೊಡೆದು ಹಾಕಿ ಅಂತಿಮ ಸ್ವರೂಪ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ, ಉದ್ಯೋಗ, ಮಠ ಮಾನ್ಯಗಳಿಗೆ ನೆರವು ಸಿಗುವಂತಾಗಬೇಕು ಎಂಬುವುದು ನಮ್ಮ ಗುರಿ. ಆದರೆ ಈ ಹೋರಾಟಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಚುನಾವಣೆ ನಂತರ ಎಲ್ಲ ಪ್ರತಿಷ್ಠೆ ಬದಿಗೊತ್ತಿ ಮಾತುಕತೆ ನಡೆಸುತ್ತೇನೆ ಎಂದಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಸುಳಿವು ನೀಡಿದ್ದ ಎಂಬಿ ಪಾಟೀಲ್ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಕಾಂಗ್ರೆಸ್ಗೆ ಹಿನ್ನೆಡೆ ಉಂಟುಮಾಡಿತ್ತು. ಇದಾದ ಬಳಿಕ ಈ ವಿಚಾರವಾಗಿ ಕಾಂಗ್ರೆಸ್ ಅಂತರ ಕಾಯ್ದುಕೊಂಡಿತ್ತು. ಆದರೆ ಇದೀಗ ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ವಿಚಾರ ಮುನ್ನೆಲೆಗೆ ಬಂದಿದೆ. ಆದರೆ ಇದರ ಸ್ವರೂಪ ಬೇರೆ ಇರಲಿದೆ ಎಂಬುವುದನ್ನು ಮಾಜಿ ಸಚಿವ ಎಂಬಿ ಪಾಟೀಲ ಸುದ್ಧಿಘೋಷ್ಠಿಯಲ್ಲಿ ತಿಳಿಸಿದ್ದಾರೆ.