ಯುವಸಮೂಹ ಬೌದ್ಧಿಕ ಸಂವಾದದ ಸಾರ್ವಜನಿಕ ವೇದಿಕೆಗಳು ಕಿರಿದಾಗುತ್ತಿರುವುದು ವಾಸ್ತವ

ಸಾಹಿತ್ಯ ಮತ್ತು ಕಲೆ ಶೂನ್ಯದಲ್ಲಿ ಉದ್ಭವಿಸುವುದಿಲ್ಲ ಎನ್ನುವುದು ಸಾರ್ವತ್ರಿಕ-ಸಾರ್ವಕಾಲಿಕ ನಿರೂಪಿತ ಸತ್ಯ. ಸಮಾಜವು ತನ್ನ ಮುನ್ನಡೆಯ ಹಾದಿಯಲ್ಲಿ ಕಂಡುಕೊಳ್ಳುವ ಕಾಣ್ಕೆಗಳನ್ನು ಕಲೆ ಮತ್ತು ಸಾಹಿತ್ಯಾಭಿವ್ಯಕ್ತಿಯ ಮೂಲಕ ಇಡೀ ಸಮಾಜಕ್ಕೆ ತಲುಪಿಸುವ ಕೆಲಸವನ್ನು ಸಾಹಿತ್ಯಿಕ ಕೃತಿಗಳು, ನಾಟಕಗಳು, ಕಲಾಕೃತಿಗಳು ಮಾಡುತ್ತಿರುತ್ತವೆ. ತನ್ನ ಸುತ್ತಲಿನ ಸಾಮಾಜಿಕ-ಸಾಂಸ್ಕೃತಿಕ ಪರಿಸರದಿಂದ ಪ್ರಭಾವಿತವಾಗದೆ ರಚನೆಯಾಗುವ ಯಾವುದೇ ಸಾಂಸ್ಕೃತಿಕ ಅಭಿವ್ಯಕ್ತಿಯೂ ಪರಿಪೂರ್ಣ ಎನಿಸಿಕೊಳ್ಳುವುದಿಲ್ಲ. ಹಾಗಾಗಿಯೇ ಕಾಲದಿಂದ ಕಾಲಕ್ಕೆ ಮನುಷ್ಯ ಸಮಾಜವು ತನ್ನ ಹಳತನ್ನು ಕಳಚಿಕೊಂಡು, ಹೊಸತರ ಅನ್ವೇಷಣೆಯಲ್ಲಿ ಸಾಗುತ್ತಾ, ಭವಿಷ್ಕಕ್ಕೆ ಅವಶ್ಯವಾದ ಕಾಣ್ಕೆಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ. ಇಲ್ಲಿ ಸಾಂಸ್ಕೃತಿಕ ಅಭಿವ್ಯಕ್ತಿ ಸಾಧನಗಳನ್ನು ಪ್ರಭಾವಿಸುವ ಮೂಲ ಶಕ್ತಿ ಯಾವುದು ?
ಮೊದಲನೆಯದು ಸಾಮಾಜಿಕವಾಗಿ ಪ್ರಾಬಲ್ಯ ಸಾಧಿಸುವ ಒಂದು ವರ್ಗ, ಎರಡನೆಯದು ಆರ್ಥಿಕವಾಗಿ ಸುಸ್ಥಿರತೆಯನ್ನು ಪಡೆದುಕೊಳ್ಳುವ ಮತ್ತೊಂದು ವರ್ಗ. ಇವೆರಡರ ನಡುವೆ ಮೂಡುವ ಯಾವುದೇ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ತುಲನಾತ್ಮಕವಾಗಿ ನೋಡುವ ಒಂದು ಪರಿಪಾಠ ನಮ್ಮನಡುವೆ ಬೆಳೆದುಬಂದಿದೆ. ಇದನ್ನು ನಾವು ತಳಸಮುದಾಯಗಳಲ್ಲಿ ಗುರುತಿಸುವಂತೆಯೇ, ಮೇಲ್ಪದರದ ಅಲಕ್ಷಿತ ಸಮುದಾಯಗಳ ನಡುವೆಯೂ ಗುರುತಿಸಬಹುದು. ಉದಾಹರಣೆಗೆ ಮಹಿಳೆಯರು-ಅಲ್ಪಸಂಖ್ಯಾತರು-ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಸ್ಥಾಪಿತ ವ್ಯವಸ್ಥೆಯಲ್ಲಿ ಹೊರಗಿನವರೆಂದು ಪರಿಭಾವಿಸಲ್ಪಡುವ ಜನಸಮುದಾಯಗಳು. ಬುಡಕಟ್ಟು-ಆದಿವಾಸಿ ಸಮುದಾಯಗಳನ್ನು ಇಲ್ಲಿ ಗುರುತಿಸಬಹುದು.
ಹಾಗಾಗಿ ಉತ್ತಮ ಬರಹ ದ ನಿರ್ವಚನೆಯೂ ಸಹ ಇದೇ ಸಾಂಸ್ಕೃತಿಕ ವಾತಾವರಣದಲ್ಲಿ ನಿರ್ಧಾರವಾಗುತ್ತದೆ. ಮತ್ತೊಂದು ಮಜಲಿನಲ್ಲಿ ನೋಡಿದಾಗ ʼಉತ್ತಮ ಅಥವಾ ಸಾಧಾರಣʼ ಎಂಬ ನಿರ್ವಚನೆ ಸಾಮಾನ್ಯವಾಗಿ ವ್ಯಕ್ತಿನಿಷ್ಠ ನೆಲೆಯಲ್ಲೇ ವ್ಯಕ್ತವಾಗುತ್ತದೆ. ಎರಡೂ ಸಾಪೇಕ್ಷ ನೆಲೆಯಲ್ಲಿ ವ್ಯಾಖ್ಯಾನಿಸಲ್ಪಡುವುದರಿಂದ, ಇಲ್ಲಿ ವ್ಯಕ್ತಿವಾದ ಮತ್ತು ಸಮಷ್ಟಿವಾದದ ನಡುವೆ ಸಂಘರ್ಷ ಏರ್ಪಡುತ್ತದೆ. ಈ ಸಮಸ್ಯೆ ಅಂತರ್ಜಾಲ ಯುಗದ ಅವಿಷ್ಕಾರವೇನೂ ಅಲ್ಲ. ಡಿಜಿಟಲ್ ಸಂವಹನ ಯುಗದಲ್ಲಿ ಇದು ವ್ಯಾಪಕ ನೆಲೆಯಲ್ಲಿ ಕಂಡುಬರುತ್ತದೆ. ಮುದ್ರಣ ಯುಗ ಬಂದಾಗಲೂ ಇದೇ ಸಂಘರ್ಷ ಏರ್ಪಟ್ಟಿದ್ದನ್ನು ಇತಿಹಾಸದ ಕಾಲಘಟ್ಟಗಳಲ್ಲಿ ಗುರುತಿಸಬಹುದು. ವ್ಯಕ್ತಿ ಅಥವಾ ಸಮಾಜ ತಾನು ನಿಂತ ನೆಲೆಯಲ್ಲೇ ಸಾಂಸ್ಕೃತಿಕ ಅಭಿವ್ಯಕ್ತಿಯ ಬೇಕುಬೇಡಗಳನ್ನು, ಮಾನದಂಡಗಳನ್ನು, ಮಾಪನ ಮೌಲ್ಯಗಳನ್ನು ನಿರ್ಧರಿಸುವುದರಿಂದ ಅಕ್ಷರ ಸಾಹಿತ್ಯವೂ ಸಹ ಪಠ್ಯಕೇಂದ್ರದ ನೆಲೆಯಿಂದ ವ್ಯಕ್ತಿ ಕೇಂದ್ರದ ನೆಲೆಗೆ ಶಿಫ್ಟ್ ಆಗುವ ಸಾಧ್ಯತೆಗಳಿರುತ್ತವೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನವೋದಯ, ಪ್ರಗತಿಶೀಲ, ಪುರೋಗಾಮಿ, ನವ್ಯ, ಬಂಡಾಯ, ದಲಿತ ಹಾಗೂ ಈಗಿನ ಸತ್ಯೋತ್ತರ ಕಾಲದಲ್ಲಿ ಇದರ ವಿವಿಧ ಆಯಾಮಗಳನ್ನು ಕಾಣುತ್ತಲೇ ಬಂದಿದ್ದೇವೆ.
ಮೊದಲನೆಯದಾಗಿ ನಾವು ಗಮನಿಸಬೇಕಾದ ಅಂಶ ಎಂದರೆ ಸಾಹಿತ್ಯ ಅಥವಾ ಕಲೆ ಸೃಷ್ಟಿಯಾಗುವುದು ವಿಶಾಲ ಸಮಾಜದ ನಡುವಿನಲ್ಲಿಯೇ ಆದರೂ ಅದರ ಹೊರಚಾಚುಗಳು ಅಷ್ಟ ದಿಕ್ಕುಗಳನ್ನೂ ತಲುಪಿರುತ್ತವೆ. ಕಲ್ಪನಾವಿಹಾರದಲ್ಲಿದ್ದ ಕನ್ನಡದ ಕಾವ್ಯಲೋಕ ನವ್ಯರ ಕಾಲದಲ್ಲಿ, ಅದಕ್ಕೂ ಮಿಗಿಲಾಗಿ ಬಂಡಾಯ-ದಲಿತ ಉತ್ಕರ್ಷದ ಕಾಲದಲ್ಲಿ ಹೇಗೆ ನೆಲದ ಸುಡುವಾಸ್ತವಗಳತ್ತ ಹೊರಳಿತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಅಂದರೆ ಸಾಮಾಜಿಕ ಉತ್ಕರ್ಷಗಳು ಮತ್ತು ಸಾಂಸ್ಕೃತಿಕ ಪಲ್ಲಟಗಳು ಅಕ್ಷರ ಲೋಕದ ದಿಕ್ಕನ್ನೇ ಬದಲಿಸಿದ್ದವು. ಈ ದಿಕ್ಕಿಗೆ ವಿರುದ್ಧವಾಗಿ ಸಾಗುವ ಯಾವುದೇ ಅಭಿವ್ಯಕ್ತಿ ತನ್ನ ಮೊನಚು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾದವು. ಇದನ್ನು ನಾವು ʼ ಪ್ರಜ್ಞೆ ʼ ಯ ರೂಪದಲ್ಲಿ ಗುರುತಿಸಲು ಯತ್ನಿಸುತ್ತೇವೆ. ದಲಿತ ಪ್ರಜ್ಞೆ, ಮತ ಪ್ರಜ್ಞೆ ಅಥವಾ ಸೆಕ್ಯುಲರ್ ಪ್ರಜ್ಞೆ ಇತ್ಯಾದಿ.
ಅಂದರೆ ದಲಿತ ಪ್ರಜ್ಞೆ, ಸ್ತ್ರೀ ಸಂವೇದನೆ, ಮಹಿಳಾ ಸೂಕ್ಷ್ಮತೆ ಅಥವಾ ತಳಸ್ತರದ ಸಮಾಜಕ್ಕೆ ಸ್ಪಂದಿಸುವಂತಹ ಮನುಜ ಪ್ರಜ್ಞೆಯನ್ನು ಸಾಹಿತ್ಯಿಕ ಅಭಿವ್ಯಕ್ತಿಯಲ್ಲಿ ಗುರುತಿಸಲಾರಂಭಿಸುತ್ತೇವೆ. ವಿಶಾಲ ಸಮಾಜ ಅಥವಾ ಆ ಸಮಾಜದ ನಿರೂಪಣೆಗಳನ್ನು (narratives) ಕಟ್ಟುವ ಮತ್ತು ಪ್ರಸರಣ ಮಾಡುವ ಒಂದು ಪ್ರಭಾವಿ ಸಾಹಿತ್ಯಿಕ ವಲಯದಲ್ಲಿ ಈ ʼ ಪ್ರಜ್ಞೆಗಳನ್ನು ʼಅಸ್ಮಿತೆಯ ʼ ರೂಪದಲ್ಲಿ ಶೋಧಿಸುವ ಪ್ರಯತ್ನಗಳು ನಡೆಯುತ್ತವೆ. ಇಲ್ಲಿ ಸಾಹಿತ್ಯಿಕ ಅಭಿವ್ಯಕ್ತಿ ಎನ್ನುವುದು ಪಠ್ಯದಿಂದ ವ್ಯಕ್ತಿಗೆ ಹೊರಳುವ ಸಾಧ್ಯತೆಗಳಿರುತ್ತವೆ. ಭಾರತದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಸಾಮಾಜಿಕ-ಸಾಂಸ್ಕೃತಿಕ ಪಾರಮ್ಯ ಹೊಂದಿರುವಂತಹ ಒಂದು ಸೀಮಿತ ವಲಯ ಇಲ್ಲಿ ಮೇಲುಗೈ ಸಾಧಿಸುತ್ತದೆ. ಇದನ್ನು ನಾವು ನವ್ಯರ ಕಾಲದಲ್ಲೂ ಕಂಡಿದ್ದೇವೆ, ನವೋದಯದಲ್ಲೂ ಕಂಡಿದ್ದೇವೆ. ಸತ್ಯೋತ್ತರ ಎನ್ನಲಾಗುವ ಡಿಜಿಟಲ್ ಯುಗದಲ್ಲೂ ಇದರ ಛಾಯೆಯಿಂದ ನಾವು ಮುಕ್ತರಾಗಿಲ್ಲ ಎನ್ನುವುದು ಯೋಚಿಸಬೇಕಾದ ವಿಚಾರ.
ಮಿಲೆನಿಯಂ ಯುಗದ ನೆಲೆಯಲ್ಲಿ ನಿಂತು ನೋಡಿದಾಗ ʼವ್ಯಕ್ತಿ ಕೇಂದ್ರಿತʼ ಅಥವಾ ʼಸಾಹಿತಿ ಕೆಂದ್ರಿತʼ ಸಾಹಿತ್ಯ ವಿಮರ್ಶೆ ಅಥವಾ ಪರಾಮರ್ಶೆಯ ಮಾದರಿಯಿಂದ ಹೊರಬರಬೇಕಾದ ಅವಶ್ಯಕತೆ ಇದೆ ಎನಿಸುತ್ತದೆ. ಕನ್ನಡ ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ ನವೋದಯ ಕಾಲದಿಂದಲೂ ರೂಢಿಗತವಾಗಿ ಬಂದಿರುವ ಒಂದು ʼ ಸಾಹಿತ್ಯಿಕ ಕೂಟ ʼಗಳ ಪರಂಪರೆಯಿಂದ ನಾವು ಹೊರಬರಬೇಕಿದೆ. ಕನ್ನಡ ಸಾಹಿತ್ಯದಲ್ಲಿ ವಿಮರ್ಶಾ ಸಾಹಿತ್ಯ ಹಿನ್ನೆಲೆಗೆ ಸರಿಯುತ್ತಿರುವುದಕ್ಕೂ ಈ ಒಂದು ಪರಂಪರೆಯೇ ಕಾರಣ ಎನ್ನುವುದು ದಿಟ. ʼಯಾವುದನ್ನುʼ ವಿಮರ್ಶಿಸಬೇಕು, ನಿಕಶಕ್ಕೊಳಪಡಿಸಬೇಕು ಎನ್ನುವುದನ್ನೂ ಸಹ ವರ್ತಮಾನದ ಸಮಾಜದ ನಡುವಿನಿಂದಲೇ ಆಯ್ದುಕೊಂಡಾಗ ಮಾತ್ರ ಸಾಹಿತ್ಯಿಕ ಸಂವಾದವು ವ್ಯಕ್ತಿ ನೆಲೆಯಿಂದ ಪಠ್ಯ ನೆಲೆಗೆ ಹೊರಳಿಕೊಳ್ಳಲು ಸಾಧ್ಯ. ʼ ಯಾರನ್ನು ʼ ಎಂಬ ಪ್ರಶ್ನೆ ಬಂದಾಗ ಅದು ವ್ಯಕ್ತಿ ಕೇಂದ್ರಿತವಾಗಿಬಿಡುತ್ತದೆ. ಸಾಹಿತ್ಯ ಅಥವಾ ಇತರ ಯಾವುದೇ ಸಾಂಸ್ಕೃತಿಕ ನೆಲೆಗಳಲ್ಲಿ ಸೃಷ್ಟಿಯಾಗುವ ಪ್ರಭಾವಳಿಗಳು ಅಥವಾ ಸಾಮಾಜಿಕ ಅಂತಸ್ತು ಇಲ್ಲಿ ಅಡ್ಡಿಯಾಗುವ ಸಾಧ್ಯತೆಗಳೂ ಇರುತ್ತವೆ. ಇದನ್ನು ಮೀರಿ ಯೋಚಿಸುವ ವ್ಯವಧಾನವನ್ನು ಸಾಂಸ್ಕೃತಿಕ ಲೋಕ ಬೆಳೆಸಿಕೊಳ್ಳಬೇಕಿದೆ.
ಡಿಜಿಟಲ್ ಯುಗದಲ್ಲಿ ನಿಂತು ನೋಡಿದಾಗ, ಅಂತರ್ಜಾಲ ಎಂಬ ಒಂದು ಮಾಯಾಜಾ ನಮಗೆ ಎದುರಾಗುತ್ತದೆ. ಮಾಯಾಜಾಲ ಏಕೆಂದರೆ ಅಲ್ಲಿ ಕಾಣಸಿಗುವ ದೃಶ್ಯ ಅಥವಾ ಮಾಹಿತಿಗಳು ನಮ್ಮ ಸುತ್ತಲ ಸಮಾಜದಲ್ಲಿ ಸುಲಭವಾಗಿ ಎಟುಕುವಂತಹುದಲ್ಲ. ಡಿಜಿಟಲ್ ಯುಗದಲ್ಲಿ ಈ ಒಂದು ಜಾಲವು ನಮ್ಮ ಮನಸ್ಸುಗಳನ್ನು, ಕೆಲವೊಮ್ಮೆ ಮಿದುಳುಗಳನ್ನೂ, ಎಷ್ಟರ ಮಟ್ಟಿಗೆ ಆವರಿಸಿದೆ ಎಂದರೆ ಅದರಿಂದ ಹೊರನಿಂತು ಆಲೋಚನೆ ಮಾಡುವ ವ್ಯವಧಾನವನ್ನೇ ಸಮಾಜ, ವಿಶೇಷವಾಗಿ ಯುವಸಮಾಜ, ಕಳೆದುಕೊಂಡಿದೆ. ಇಲ್ಲಿ ಕವಿ ಸಮಯ ಅಥವಾ ಬರವಣಿಗೆಯ ಸೃಷ್ಟಿಶೀಲತೆಯೂ ಸಹ ಇದರ ಪ್ರಭಾವಿ ವಲಯದಿಂದ ಹೊರಬಂದು ಅಭಿವ್ಯಕ್ತಗೊಳ್ಳುವುದು ಅನಿವಾರ್ಯ. ಆದರೆ ಹಾಗಾಗುತ್ತಿಲ್ಲ. ಅಂಗೈಯಗಲದ ಆಂಡ್ರಾಯ್ಡ್ ನೀಡುವ ಮಾಹಿತಿ-ದತ್ತಾಂಶಗಳನ್ನು ಅಂತಿಮ ಸತ್ಯ ಎಂದು ಭಾವಿಸುವ ಬೃಹತ್ ಜನಸಂಖ್ಯೆ ನಮ್ಮ ನಡುವೆ ಇದೆ. ಇದನ್ನೂ ದಾಟಿದ ನೆಲದ ವಾಸ್ತವಗಳನ್ನು ಶೋಧಿಸುವ, ಪರಿಶೋಧಿಸುವ ಅಥವಾ ಮರು ವ್ಯಾಖ್ಯಾನಕ್ಕೊಳಪಡಿಸುವ ತಾಳ್ಮೆ ಯುವ ಸಮೂಹದಲ್ಲಿ ಕಳೆದುಹೋಗುತ್ತಿದೆ.
ಇಲ್ಲಿ ಸೃಷ್ಟಿಶೀಲತೆಯ ಕಾರ್ಯವನ್ನು ಲಘುಗೊಳಿಸುವುದಕ್ಕಿಂತಲೂ ಹೆಚ್ಚಾಗಿ ನಾವು ಗಮನಿಸಬೇಕಿರುವುದು ಜಟಿಲಗೊಳಿಸಿರುವ ಪ್ರಕ್ರಿಯೆಯನ್ನು. ಸಾಹಿತ್ಯಿಕ ಅಭಿವ್ಯಕ್ತಿ ಸೃಷ್ಟಿಯಾಗಬೇಕಿರುವುದು ಸುತ್ತಲಿನ ಸಮಾಜದ ಒಡಲಿನಿಂದಲೋ ಅಥವಾ ಬಾಹ್ಯ ಜಗತ್ತಿನ ಅಂತರ್ಜಾಲದ ಲೋಕದಲ್ಲೋ ಎನ್ನುವ ಜಿಜ್ಞಾಸೆಯನ್ನು ನಿವಾರಿಸಿಕೊಳ್ಳಬೇಕಿದೆ. “ ಕಂಡ ಸತ್ಯ ಮತ್ತು ಕೇಳಲ್ಪಟ್ಟ ವಾಸ್ತವ “ ಇವರೆಡರ ನಡುವೆ ಇರುವ ಸೂಕ್ಷ್ಮಾತಿಸೂಕ್ಷ್ಮ ಎಳೆಯ ಜಾಡನ್ನು ಹಿಡಿದು ಹೋದಾಗ, ಸಾಹಿತ್ಯಿಕ ರಚನೆಗಳು ನೆಲದ ವಾಸ್ತವಗಳನ್ನು ಅರಿತೇ ಮುಂದುವರೆಯಬೇಕಾಗುತ್ತದೆ. ಆದರೆ ಅಂತರ್ಜಾಲ ಅಥವಾ ಡಿಜಿಟಲ್ ಯುಗ ಸೃಷ್ಟಿಸುತ್ತಿರುವ ಮನಸ್ಥಿತಿಯು ಈ ಸಂಕೀರ್ಣ ಪ್ರಕ್ರಿಯೆಯನ್ನು ಸರಳೀಕರಿಸುವ ಹಾದಿಗಳನ್ನು ತೋರಿಸುತ್ತದೆ. ಹಾಗಾಗಿಯೇ ಸಾಹಿತ್ಯಿಕ ಸಂಶೋಧನೆಗಳೂ ಸಹ ಎಷ್ಟೋ ಬಾರಿ ಕಟ್ ಅಂಡ್ ಪೇಸ್ಟ್ ಮಾದರಿಗೆ ಒಳಗಾಗುತ್ತದೆ. ಇದನ್ನು ದಾಟಿ ನಡೆಯುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.
ಮತ್ತೊಂದು ಬಹಳ ಮುಖ್ಯವಾದ, ಮೂರ್ತ ಪ್ರಶ್ನೆಯನ್ನು ಕೈಗೆತ್ತಿಕೊಂಡರೆ,, ಬರಹ ಮಾಡುವವರ ವ್ಯಕ್ತಿತ್ವ ಮತ್ತು ಸಾಹಿತ್ಯಿಕ ವಾತಾವರಣವನ್ನು ಕುರಿತಾಗಿ ಯೋಚಿಸಬೇಕಾಗುತ್ತದೆ. ಮನುಷ್ಯರ ವ್ಯಕ್ತಿತ್ವವನ್ನು ರೂಪಿಸುವುದು ಮೂಲತಃ ಆತ/ಆಕೆ ಬದುಕುವ ಸಾಮಾಜಿಕ ಪರಿಸರ, ಸಾಂಸ್ಕೃತಿಕ ವಾತಾವರಣ ಮತ್ತು ಅಲ್ಲಿ ನಿರ್ಮಾಣವಾಗುವ ಸನ್ನಿವೇಶಗಳು. ಸಾಹಿತ್ಯದಲ್ಲಿ ತೊಡಗಿರುವ ಯಾವುದೇ ವ್ಯಕ್ತಿಗೆ ಮೂರು ಅಂಶಗಳು ಪ್ರಧಾನವಾಗಿ ಕಾಣುತ್ತವೆ. ಮೊದಲನೆಯದು ತನ್ನನ್ನು ಪ್ರಭಾವಿಸುತ್ತಿರುವ ಸಮಾಜ ಮತ್ತು ಸಂಸ್ಕೃತಿ ಎಂತಹುದು. ಎರಡನೆಯದು ತಾನು ಅಭಿವ್ಯಕ್ತಿ-ಸ್ವಂತಿಕೆಯನ್ನು ರೂಢಿಸಿಕೊಳ್ಳಲು ಅವಲಂಬಿಸಬೇಕಾದ ಅದೇ ಸಮಾಜದ ವಾಸ್ತವ ನೆಲೆಗಟ್ಟುಗಳು. ಮೂರನೆಯದು ತಾನು ಸಾಹಿತ್ಯ ಮುಖೇನ ಪ್ರಭಾವಿಸಲು ಯೋಚಿಸಿರುವ ಒಂದು ಸಮಾಜ ಅಥವಾ ಸಂಸ್ಕೃತಿ. ಈ ಮೂರೂ ಆಯಾಮಗಳಲ್ಲಿ ಯೋಚಿಸುತ್ತಲೇ ಬರಹ ಲೋಕ ಪ್ರವೇಶಿಸುವ ವ್ಯಕ್ತಿಯ ಅಂತಿಮ ಗುರಿ ಯಾವುದಿರಬೇಕು ? ಸಮಾಜ ತನ್ನಿಂದ ಏನನ್ನು ಬಯಸುತ್ತಿದೆ ಎಂದು ನೋಡುವುದೋ ಅಥವಾ ಸಮಾಜಕ್ಕೆ ತಾನು ಏನನ್ನು ಕೊಡಬೇಕಿದೆ ಎಂದು ಯೋಚಿಸುವುದೋ ?
ಸಾಹಿತಿ, ನಾಟಕಕಾರ, ಕಲಾವಿದ ಹೀಗೆ ಯಾವುದೇ ಸಾಂಸ್ಕೃತಿಕ ಅಭಿವ್ಯಕ್ತಿಯ ಪರಿಚಾರಕರಾದರೂ ತಮ್ಮನ್ನು ಸಮಷ್ಟಿಯ ಒಂದು ಭಾಗ ಎಂದು ಭಾವಿಸಿ ತಮ್ಮ ಆಲೋಚನೆಗಳನ್ನು ಹೊರಗೆಡಹುವುದು ಅಗತ್ಯ. ಆಗ ಮಾತ್ರ ತನ್ನ ಸ್ವಂತ ವ್ಯಕ್ತಿತ್ವವನ್ನು ಸಮಾಜದೊಳಗೆ ಅಂತರ್ಗತಗೊಳಿಸಿ, ಅಲ್ಲಿರಬಹುದಾದಂತಹ ವ್ಯತ್ಯಯಗಳನ್ನು ಗ್ರಹಿಸಲು ಮತ್ತು ಅರ್ಥೈಸಿ ವ್ಯಾಖ್ಯಾನಿಸಿ ನಿಕಶಕ್ಕೊಳಪಡಿಸಲು ಸಾಧ್ಯವಾಗುತ್ತದೆ. ಇಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಾಗಲೂ ಸಹ ತಾವು ಬಿಂಬಿಸುವ ಸಮಾಜದ ಚೌಕಟ್ಟಿನೊಳಗೇ ಮುನ್ನಡೆದಾಗ, ಅಂತಹ ಸಾಹಿತ್ಯಿಕ ಅಭಿವ್ಯಕ್ತಿ ಮತ್ತು ಸಾಹಿತ್ಯಿಕ ವ್ಯಕ್ತಿತ್ವ ಎರಡೂ ಸಮಾನ ನೆಲೆಯಲ್ಲಿ ಕಾಣಲು ಸಾಧ್ಯ. ಸಾಹಿತ್ಯಿಕ ವಾತಾವರಣಕ್ಕೆ ಕಾರಣವಾಗುವ ಸಾಮಾಜಿಕ-ಸಾಂಸ್ಕೃತಿಕ ಸ್ಥಿತ್ಯಂತರಗಳೇ ವ್ಯಕ್ತಿತ್ವ ನಿರ್ಮಾಣದಲ್ಲೂ ಪ್ರಭಾವ ಬೀರುತ್ತವೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗಾಗಿ ಸಾಹಿತ್ಯಿಕ ವ್ಯಕ್ತಿಯು ತನ್ನನ್ನು ಸಮಾಜದ ಪ್ರತಿನಿಧಿ ಎಂದು ಭಾವಿಸುವುದಕ್ಕಿಂತಲೂ ಹೆಚ್ಚಾಗಿ, ತನ್ನ ಸುತ್ತಲಿನ ವಿಶಾಲ ಸಮಾಜದಲ್ಲಿ ತಾನು ಓರ್ವ ಸ್ವಾಯತ್ತ ನೆಲೆಯುಳ್ಳ, ಸ್ವತಂತ್ರ ಆಲೋಚನೆ ಇರುವ ಬೌದ್ಧಿಕ ಅಂಶ ಎಂದು ಭಾವಿಸಿದಾಗ, ಅಲ್ಲಿ ರೂಪುಗೊಳ್ಳುವ ವ್ಯಕ್ತಿತ್ವವು ಹೆಚ್ಚು ಕ್ರಿಯಾಶೀಲವಾಗಿ ಕಾಣುತ್ತದೆ.
ಇದು ಸಾಹಿತಿ ಕಲಾವಿದರಲ್ಲಿ ಇರಬೇಕಾದ ಗುಣ. ಹೀಗಿರುವಾಗ, ವರ್ತಮಾನದ ಸಂದರ್ಭದಲ್ಲಿ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯಿಕ ವಾತಾವರಣ ಮತ್ತು ಅದರ ಕ್ರಿಯಾಶೀಲತೆಯತ್ತ ನೋಡುವುದಕ್ಕಿಂತಲೂ ಹೆಚ್ಚಾಗಿ ನಾವು, ಸಾಹಿತ್ಯಿಕ ಪರಿಚಾರಕರಲ್ಲಿ ಈ ವಾತಾವರಣ ಮೂಡಿಸುವ ಬದ್ಧತೆ ಮತ್ತು ಕ್ಷಮತೆ ಎಷ್ಟಿದೆ ಎಂದು ನೋಡಬೇಕಿದೆ. ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯಿಕ ಅಭಿವ್ಯಕ್ತಿಗಳಲ್ಲಿ ತೊಡಗಿರುವವರಿಗೆ ಈ ಅರಿವು ಅತ್ಯವಶ್ಯ. “ ಸಾಹಿತ್ಯಿಕ ವಾತಾವರಣ ಬರಹ ಮಾಡುವವರ ವ್ಯಕ್ತಿತ್ವವನ್ನು ರೂಪಿಸುತ್ತದೆ ” ಎಂಬ ಕಲ್ಪನೆಯೇ ಕೆಲವೊಮ್ಮೆ ಸಂಕೀರ್ಣ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಬದಲಾಗಿ ಕ್ರಿಯಾಶೀಲ-ಸೃಜನಶೀಲ ಬರಹಗಳು ಎಂತಹ ಸಾಹಿತ್ಯಿಕ ವಾತಾವರಣವನ್ನು ಸೃಷ್ಟಿಸಲು ಸಾಧ್ಯ ಎಂದು ಯೋಚಿಸುವುದು ಸೂಕ್ತ. ಇದನ್ನು ಸಾಧ್ಯವಾಗಿಸುವ ಜವಾಬ್ದಾರಿ ಸಾಹಿತ್ಯ ಲೋಕದ ಮೇಲಿದೆ.
(ಅಕ್ಷರ ಸಂಗಾತ ಮಾಸಿಕ – ಸೆಪ್ಟಂಬರ್ 2024 ಸಂಚಿಕೆ- ರೂಪಿಸಿದ್ದ ಸಾಹಿತ್ಯಕ ಸಂವಾದದಲ್ಲಿ ಮೂಡಿಬಂದ ಲೇಖನ. ಸೂಕ್ತವಾಗಿ ಪರಿಷ್ಕರಿಸಲಾಗಿದೆ. )