ಮೋದಿ-ಯೋಗಿ ನಡುವಿನ ಭಿನ್ನಮತಕ್ಕೆ ಕದನ ವಿರಾಮ, ಮತ್ತೊಂದು ಸುತ್ತಿನ ಪ್ರಹಸನ ಸಾಧ್ಯತೆ

ಕಳೆದ ವಾರ ಉತ್ತರ ಪ್ರದೇಶದ ರಾಜಕಾರಣದಲ್ಲಿ ದೊಡ್ಡ ಸಂಚಲನ‌ ಸೃಷ್ಟಿಯಾಗಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಡುವೆ ಭಾರೀ ಬಿರುಕು ಮೂಡಿದೆ. ತಕ್ಷಣವೇ ಅದನ್ನು ಸರಿಪಡಿಸದಿದ್ದರೆ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಬೇಕಾಗುತ್ತದೆ ಎಂಬ ಕಾರಣಕ್ಕೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರು ಮೋದಿ ಮತ್ತು ಯೋಗಿ ನಡುವಿನ‌ ಕಂದಕ ಮುಚ್ಚಲು ಸಾಕಷ್ಟು ಬೆವರು ಹರಿಸಿದರು. ಇಷ್ಟೆಲ್ಲಾ ಕಸರತ್ತಿನ ಬಳಿಕ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಯೋಗಿ ಆದಿತ್ಯನಾಥ್ ‘ಬಿಜೆಪಿಯಲ್ಲಿ ಬಿರುಕು ಉಂಟಾಗಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿ’ ಎಂದು ಹೇಳಿದ್ದರು. ಇತರೆ ಬಿಜೆಪಿ ನಾಯಕರು ‘ಇದು ಮುಗಿದ ಅಧ್ಯಾಯ, ಎಲ್ಲವೂ ಸರಿಹೋಯಿತು’ ಎಂದು ಹೇಳಿ ಉತ್ತರ ಪ್ರದೇಶದ ಪ್ರಹಸನಕ್ಕೆ ಇತಿಶ್ರೀ ಹಾಡಲು ಯತ್ನಿಸಿದರು.

ಆದರೆ, ದೆಹಲಿ ಮತ್ತು ಉತ್ತರ ಪ್ರದೇಶ ಬಿಜೆಪಿ ನಾಯಕರ ಪ್ರಕಾರ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಬೆಂಕಿ‌ ಸಂಪೂರ್ಣವಾಗಿ ಆರಿಲ್ಲ. ಸದ್ಯ ಆರ್‌ಎಸ್‌ಎಸ್ ನಾಯಕರ ಮಧ್ಯ ಪ್ರವೇಶದಿಂದ ಕದನ ವಿರಾಮ ಘೋಷಿಸಲಾಗಿದೆಯಷ್ಟೇ. ಮೋದಿ ಮತ್ತು ಯೋಗಿ ನಡುವಿನ ಭಿನ್ನಮತ ಭುಗಿಲೇಳಲು ಕಾರಣವಾಗಿದ್ದ ಉತ್ತರ ಪ್ರದೇಶ ಸಂಪುಟ ಪುನರ್ರಚನೆ ಬಿಕ್ಕಟ್ಟು ಕೂಡ ಬಗೆಹರಿದಿಲ್ಲ.

ಸಮಸ್ಯೆ ಬಗೆಹರಿಸಲು ದೆಹಲಿಯ ಬಿಜೆಪಿ ನಾಯಕರು ಮತ್ತು ನಾಗಪುರದ ಆರ್‌ಎಸ್‌ಎಸ್ ಮುಖಂಡರು ಇನ್ನಷ್ಟು ಕಸರತ್ತು ನಡೆಸಬೇಕಾಗುತ್ತದೆ. ಆದರಿದು ಸೂಕ್ತ ಸಮಯವಲ್ಲ. ಈಗಾಗಲೇ ಬಿಜೆಪಿ ಮೇಲೆ ‘ಕರೋನಾದಿಂದ ಜನ ಸಾಯುತ್ತಿದ್ದರೂ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ’ ಎಂಬ ಆರೋಪ ಕೇಳಿಬರುತ್ತಿದೆ. ಆದುದರಿಂದ ಸಾಧ್ಯವಾದಷ್ಟು ಸಮಸ್ಯೆಯನ್ನು ಸದ್ದಿಲ್ಲದಂತೆ ಬಗೆಹರಿಸಬೇಕು ಮತ್ತು ಕರೋನಾ ಬಗೆಗಿನ ಚರ್ಚೆ ಕಡಿಮೆ ಆಗುವವರೆಗೆ ಕಾಯಬೇಕು ಎಂದು ಕದನ ವಿರಾಮ ಘೋಷಿಸಲಾಗಿದೆಯಂತೆ.

ಉದಾಹರಣೆಗೆ ಉತ್ತರ ಪ್ರದೇಶದ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಸಿಂಗ್ ವಾರಾಂತ್ಯದಲ್ಲಿ ಯೂಪಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಅವರು ರಾಜ್ಯಪಾಲರಿಗೆ ಲಕೋಟೆಯೊಂದನ್ನು ನೀಡಿದ್ದಾರೆ. ಅದು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಶಾಸಕರಿಂದ ನಡೆಸಿರುವ ಸಹಿ ಸಂಗ್ರಹದ ವಿವರ ಎಂದು ಹೇಳಲಾಗುತ್ತಿದೆ. ಇದರಿಂದ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗೆ ಇಳಿಸುವ ಪ್ರಯತ್ನಗಳು ನಡೆಯುತ್ತಿರಬಹುದು ಎಂಬ ಸುದ್ದಿಗಳು ಸರಿದಾಡುತ್ತಿವೆ.‌ ಆದರೆ ಅಭಿವೃದ್ಧಿ ಅಜೆಂಡಾವನ್ನು ಗಂಗಾ ನದಿಯಲ್ಲಿ ತೇಲಿ ಬಿಟ್ಟಿರುವ (ಬೇಕಿದ್ದರೆ ಶವಗಳ ಜೊತೆ ಎಂದು ಸೇರಿಸಿಕೊಳ್ಳಬಹುದು) ಬಿಜೆಪಿಗೆ ಈಗ ಉತ್ತರ ಪ್ರದೇಶದಲ್ಲಿ ಮತ್ತೆ ಜನರ ಮುಂದೆ ಹೋಗಲು ಉಳಿದಿರುವುದು ಅವರ ಅದೇ ಹಳೆಯ ಹಿಂದುತ್ವದ ಅಜೆಂಡಾ. ಯೋಗಿ ಆದಿತ್ಯನಾಥ್ ಬಿಜೆಪಿ ಹಿಂದುತ್ವದ ಐಕಾನ್. ಆದುದರಿಂದ ಏನೇ ಸಮಸ್ಯೆಯಾದರೂ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗಿ ಮುಂದುವರೆಯುವುದು ಬಹುತೇಕ ನಿಶ್ಚಿತವಾಗಿದೆ.

ವೆರೈಟಿ ವೆರೈಟಿ ವದಂತಿಗಳು

ಯೋಗಿ-ಮೋದಿ ನಡುವೆ ಮುನಿಸು ಇದೆ, ಯೋಗಿ ಬದಲಾಗುತ್ತಾರೆ, ಬದಲಾಗಲ್ಲ ಎಂದಷ್ಟೇಯಲ್ಲ ಇನ್ನೂ ಹತ್ತು ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಉತ್ತರಪ್ರದೇಶದ ಸಂಪುಟ ಪುನರ್ರಚನೆ ಆಗಲಿದೆ. ಮೋದಿಯವರ ಆಪ್ತ ಮಾಜಿ ಅಧಿಕಾರಿ ಎ.ಕೆ. ಶರ್ಮಾ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಮೋದಿ-ಯೋಗಿ ನಡುವೆ ವಿರಸ ಉಂಟಾಗುತ್ತದೆ. ಮೋದಿ ತಮ್ಮ ಪ್ರಭಾವ ಬಳಸಿ ಎ.ಕೆ. ಶರ್ಮಾ ಅವರನ್ನು ಸಂಪುಟಕ್ಕೆ ಸೇರಿಸಬಹುದು. ಆದರೆ ಸೋಷಿಯಲ್ ಮೀಡಿಯಾ ವೆಬ್ ಸೈಟ್ ಗಳಿಂದ ಮೋದಿ ಫೋಟೋವನ್ನೇ ತೆಗಸಿದ ಯೋಗಿ ಸುಲಭದಲ್ಲಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಒತ್ತಡಕ್ಕೆ ಮಣಿದು ಎ‌.ಕೆ. ಶರ್ಮಾ ಅವರನ್ನು ಮಂತ್ರಿಯನ್ನಾಗಿ ನೇಮಿಸಿಕೊಂಡರೂ ಅಧಿಕಾರ ಕೊಡುವುದಿಲ್ಲ. ಇನ್ನೊಂದೆಡೆ ಪ್ರಮುಖ ಖಾತೆ ಪಡೆದು ಪರೋಕ್ಷವಾಗಿ ಎ.ಕೆ. ಶರ್ಮಾ ಅವರನ್ನು ಮುನ್ನಲೆಗೆ ತರಲು ಮೋದಿ-ಶಾ ಜೋಡಿ ಯತ್ನಿಸುತ್ತಾರೆ. ಈ ಮೂಲಕ ಬಿಜೆಪಿಯ ಆಂತರಿಕ ಕಲಹ ಮುಂದುವರೆಯಬಹುದು. ಹೀಗೆ ನಾನಾ ರೀತಿಯ ವದಂತಿಗಳಿವೆ ವಾಸ್ತವ ಏನೆಂದು ಗೊತ್ತಾಗಲು ಸ್ವಲ್ಪ ಸಮಯ ಬೇಕಾಗುತ್ತದೆ.

ಮುಂದಿನ ಸುತ್ತಿನಲ್ಲಿ ಸಮಸ್ಯೆ ಬಗೆಹರಿಯುವ ಸಾಧ್ಯತೆ

ಕರೋನಾ ಕಷ್ಟ ಪ್ರಧಾನಿ ಮೋದಿ ಮತ್ತು ಯೋಗಿ ಇಬ್ಬರನ್ನೂ ಸಮಾನವಾಗಿ ಕಾಡುತ್ತಿದೆ. ಸದ್ಯ ಮೋದಿ-ಯೋಗಿ ಸಮಾನ ಸಾಮರ್ಥ್ಯ ಉಳ್ಳವರು ಎಂದು ಹೇಳಲಾಗುತ್ತಿದೆ. ಬಿಜೆಪಿಯ ಮಾರ್ಗದರ್ಶಕ ಸಂಸ್ಥೆ ಆರ್‌ಎಸ್‌ಎಸ್ ಗೆ 2022ರಲ್ಲಿ ಉತ್ತರ ಪ್ರದೇಶ ಗೆಲ್ಲಲು ಯೋಗಿ ಆದಿತ್ಯನಾಥ್ ಬೇಕು. 2024ರಲ್ಲಿ ದೆಹಲಿಯಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಮೋದಿಯೂ ಬೇಕಾಗಿದೆ.‌ ಇದೇ ಕಾರಣಕ್ಕೆ ದತ್ತಾತ್ರೇಯ ಹೊಸಬಾಳೆ ಅವರೇ ಖುದ್ದು ಅಖಾಡಕ್ಕಿಳಿದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ‌‌. ಆದರೂ ಪ್ರಯೋಜನ ಆಗುತ್ತಿಲ್ಲ. ಕರೋನಾ ಕಡಿಮೆ ಆದ ಮೇಲೆ, ಎಲ್ಲಕ್ಕಿಂತ ಹೆಚ್ಚಾಗಿ ಚುನಾವಣೆ ಸಮೀಪಿಸುತ್ತಿದಂತೆ ಅನಿವಾರ್ಯವಾಗಿ ಮೋದಿ-ಯೋಗಿ ರಾಜಿ ಆಗಬಹುದು ಎಂಬ ನಿರೀಕ್ಷೆ ಬೆಳಸಿಕೊಂಡಿದೆ‌. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ನಿರೀಕ್ಷೆಯಂತೆ ಉತ್ತರ ಪ್ರದೇಶ ಬಿಜೆಪಿ ಬಿಕ್ಕಟ್ಟಿನ ಬಗ್ಗೆ ಅಥವಾ ಮೋದಿ-ಯೋಗಿ ನಡುವಿನ ಭಿನ್ನತದ ಬಗ್ಗೆ ಕಾಲವೇ ನಿರ್ಧರಿಸಬೇಕಾಗಿದೆ‌

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...