ಐದು ಮತ್ತು ಎಂಟನೇ ತರಗತಿಯಲ್ಲಿ ಕಲಿಯುವ ಮಕ್ಕಳನ್ನು ಅನುತ್ತೀರ್ಣಗೊಳಿಸದಂತೆ ತಡೆ ನೀಡಿದ್ದ ‘ಅನುತ್ತೀರ್ಣರಹಿತ ನೀತಿ’ಯನ್ನು (ನೋ ಡಿಟೆನ್ಷನ್ ಪಾಲಿಸಿ) ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಇದರಿಂದ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾಗದ 5 ಮತ್ತು 8ನೇ ತರಗತಿ ಮಕ್ಕಳನ್ನು ಇನ್ನು ಮುಂದೆ ಅನುತ್ತೀರ್ಣಗೊಳಿಸಬಹುದು.
ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ವಿವೇಕಶೂನ್ಯ, ವಂಚಿತ ಸಮುದಾಯದ ಮಕ್ಕಳ ಕಲಿಕೆ ವಿರೋಧಿ ಎಂದು ಹೇಳಬಯಸುತ್ತೇನೆ. ಇದು ವಂಚಿತ ಸಮುದಾಯಗಳ ಮಕ್ಕಳನ್ನು ಶಿಕ್ಷಣದಿಂದ ಹೊರಗುಳಿಸುವ ಹುನ್ನಾರ ಎನ್ನುವುದರಲ್ಲಿ ಅನುಮಾನವಿಲ್ಲ.
ಮಕ್ಕಳು ಉತ್ತೀರ್ಣರಾಗುವಂತಹ ಶೈಕ್ಷಣಿಕ ವ್ಯವಸ್ಥೆ ರೂಪಿಸುವುದು ಇಲಾಖೆ, ಶಿಕ್ಷಕರ ಜವಾಬ್ದಾರಿ. ಅವರ ವೈಫಲ್ಯಕ್ಕೆ ಮಕ್ಕಳನ್ನು ಶಿಕ್ಷಿಸುವುದು ಎಷ್ಟು ಸರಿ?
ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಮಕ್ಕಳು ಪ್ರತಿಭಾವಂತರು ಎನ್ನಲಾಗುತ್ತಿದೆ. ಮಕ್ಕಳ ಕಲಿಕೆಯನ್ನು ಅಥವಾ ಪ್ರತಿಭೆಯನ್ನು ಪರೀಕ್ಷೆ ಎಂಬ ಮಾನದಂಡದಿಂದ ಮಾತ್ರ ಅಳೆಯಲಾಗುತ್ತಿದೆ. ಈ ಪರೀಕ್ಷೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಇದು ಶ್ರೇಷ್ಠತೆಯ ಅಹಮಿಕೆ.
ಪ್ರಸ್ತುತ ಇರುವ ಪರೀಕ್ಷಾ ವಿಧಾನಗಳೂ ಸರಿಯಿಲ್ಲ. ವಾರ್ಷಿಕ ಪರೀಕ್ಷೆಯಲ್ಲಿ ಮಕ್ಕಳು ಅಂಕ ಪಡೆಯದಿದ್ದರೆ, ಅವರು ಅನರ್ಹರು ಎಂದು ಪರಿಗಣಿಸಲಾಗುತ್ತಿದೆ. ಶೈಕ್ಷಣಿಕ ವರ್ಷದ ಕೊನೆಯಲ್ಲಿ ನಡೆಯುವ ಒಂದು ಪರೀಕ್ಷೆಯಿಂದ ಮಕ್ಕಳನ್ನು ಅಳೆಯುವುದು ಸರಿಯಾದ, ವೈಜ್ಞಾನಿಕ ವಿಧಾನವಲ್ಲ.
ನಿಜದಲ್ಲಿ ಮಕ್ಕಳ ಕಲಿಕೆಯ ಕುರಿತು ಪ್ರತಿದಿನ, ಪ್ರತಿ ತಿಂಗಳು ಮೌಲ್ಯ ಮಾಪನ ಮಾಡಬೇಕು. ಸಿಸಿಎ ಪದ್ಧತಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು. ಇದರಲ್ಲಿ ವಿಫಲವಾದ ಇಲಾಖೆಯು ಮಕ್ಕಳನ್ನು ವಾರ್ಷಿಕ ಪರೀಕ್ಷೆ ನೆಪದಲ್ಲಿ ಶಿಕ್ಷಿಸುತ್ತಿದೆ.
ಪ್ರಸ್ತುತ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸುತ್ತಾ ಅದರಲ್ಲಿ ಒಂದು ಪರೀಕ್ಷೆಯನ್ನು ಪಬ್ಲಿಕ್ ಪರೀಕ್ಷೆ ಮಾದರಿಯಲ್ಲಿ ಮೌಲ್ಯ ಮಾಪನ ಮಾಡುತ್ತಾ(ಒಂದು ಶಾಲೆಯ ಉತ್ತರ ಪತ್ರಿಕೆಗಳನ್ನು ಮತ್ತೊಂದು ಶಾಲೆಯವರು ಮಾಡುವುದು) ಇದನ್ನು ಸಿಸಿಎ ಎಂದು ಕರೆದು ಅಪವ್ಯಾಖ್ಯಾನಗೊಳಿಸಿದ್ದಾರೆ. ಇಂತಹ ಕಳಪೆ ಶಿಕ್ಷಣ ಪದ್ಧತಿ ಬೇರೆ ಎಲ್ಲಿಯೂ ಸಿಗಲಿಕ್ಕಿಲ್ಲ.
ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ ಅವರನ್ನು ಅದೇ ತರಗತಿಯಲ್ಲಿ ಇನ್ನೊಂದು ವರ್ಷ ಕೂರಿಸಲು ಸರ್ಕಾರ ಮುಂದಾಗಿದೆ. ಆದರೆ ಮಕ್ಕಳು ಏಕೆ ಅನುತ್ತೀರ್ಣಗೊಳ್ಳುತ್ತಾರೆ ಎಂಬುವುದರ ಕುರಿತು ಸರ್ಕಾರ ಅಥವಾ ಸಂಬಂಧಪಟ್ಟವರು ಕಂಡು ಹಿಡಿಯುತ್ತಿಲ್ಲ. ಮಕ್ಕಳ ವೈಯಕ್ತಿಕ ಪ್ರತಿಭೆಯನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಆದರೆ ಅವರ ಕಲಿಕೆಗೆ ಅಡ್ಡಿಯಾಗುವ ಸಂಗತಿಗಳನ್ನು, ವಿಚಾರಗಳ ಬಗ್ಗೆ ಪರಿಶೀಲನೆ ನಡೆಸುತ್ತಿಲ್ಲ.
ಪ್ರಸ್ತುತ ಶಾಲೆಗಳಲ್ಲಿ ಹಲವಾರು ಸಮಸ್ಯೆಗಳಿವೆ. ಹೆಚ್ಚಿನ ಶಾಲೆಗಳಲ್ಲಿ ಅಗತ್ಯವಿರುವ ಶಿಕ್ಷಕರಿಲ್ಲ. ಶಿಕ್ಷಣ ಸಚಿವರು ಹೇಳಿದಂತೆ 50,000 ಶಿಕ್ಷಕರ ಹುದ್ದೆಗಳು ಖಾಲಿಯಿವೆ, ನೇಮಕಾತಿ ಆಗುತ್ತಿಲ್ಲ.
ಅನೇಕ ಏಕೋಪಾಧ್ಯಾಯ ಶಾಲೆಗಳಿವೆ.
ಅನೇಕ ಶಾಲೆಗಳಿಗೆ ಸೂಕ್ತವಾದ ತರಗತಿ ಕೊಠಡಿಗಳಿಲ್ಲ. ಇದ್ದರೂ, ಅವುಗಳ ಮೇಲ್ಚಾವಣಿ ಸೋರುತ್ತಿದೆ.
ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್, ಡೆಸ್ಕ್‌ಗಳ ವ್ಯವಸ್ಥೆಗಳಿಲ್ಲ. ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆಯಾಗುತ್ತಿಲ್ಲ.
ಆಧುನಿಕ, ಸುಸಜ್ಜಿತ ಗ್ರಂಥಾಲಯಗಳಿಲ್ಲ.
ಅತಿಥಿ ಶಿಕ್ಷಕರಿದ್ದಾರೆ.
ಅವರು 10 ಸಾವಿರ ರೂ. ವೇತನ ಪಡೆದುಕೊಂಡು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪಾಠ ಮಾಡಲು ಸಾಧ್ಯವಿಲ್ಲ.
ಈ ಸಮಸ್ಯೆಗಳ ಬಗ್ಗೆ ಗಮನಹರಿಸುವವರು ಯಾರು ಇಲ್ಲ.
ಕೆಲವೊಂದು ಶಾಲೆಗಳಲ್ಲಿ ಶಿಕ್ಷಕರಿದ್ದರೂ ಅವರು ಸರಿಯಾದ ಕ್ರಮದಲ್ಲಿ, ಬದ್ಧತೆಯಿಂದ ಪಾಠ ಮಾಡುತ್ತಿಲ್ಲ. ಶಾಲಾ ಅವಧಿಯಲ್ಲಿ ಹೊರಗಡೆ ಸುತ್ತಾಡುವ ಶಿಕ್ಷಕರಿದ್ದಾರೆ. ಇತರೇ ವ್ಯವಹಾರಗಳನ್ನು ಮಾಡುವವರೂ ಇದ್ದಾರೆ.
ಶಾಲೆಗೆ ಬರುವ ಮಕ್ಕಳ ಹಿನ್ನೆಲೆಯೂ ಭಿನ್ನವಾಗಿರುತ್ತದೆ. ಮನೆಯಲ್ಲಿ, ಪೋಷಕರಲ್ಲಿ ಕೌಟುಂಬಿಕ ಸಮಸ್ಯೆಗಳಿರುವ ಮಕ್ಕಳು ಇದ್ದಾರೆ. ವಾಸಲು ಯೋಗ್ಯವಲ್ಲದ ಮನೆಯಿರುವವರು, ಮನೆಯೇ ಇಲ್ಲದವರು ಇದ್ದಾರೆ. ಮೂಲಭೂತ ವ್ಯವಸ್ಥೆಗಳಾದ ಆಹಾರ, ವಸತಿ, ನೀರು, ವಿದ್ಯುತ್ ಇವುಗಳು ದೊರಕದ ಮಕ್ಕಳಿದ್ದಾರೆ. ಕಡು ಬಡತನದ ಹಿನ್ನೆಲೆಯ ಮಕ್ಕಳಿದ್ದಾರೆ. ಒಂದು ಕಡೆ ದುಡಿಯುತ್ತಾ ಮತ್ತೊಂದು ಕಡೆ ತರಗತಿಗೆ ಹಾಜರಾಗುವವರಿದ್ದಾರೆ. ಜಾತಿ ತಾರತಮ್ಯಕ್ಕೆ , ಧಾರ್ಮಿಕ ಮತಾಂಧತೆಗೆ ಗುರಿಯಾಗುವ ಮಕ್ಕಳಿಗೆ ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅವರು ವಾಸಿಸುವ ಪ್ರದೇಶ, ಅಲ್ಲಿನ ವಾತಾವರಣ ಕಲಿಗೆ ಅಡ್ಡಿಯಾಗಬಹುದು. ಇದು ಅವರು ಕಲಿಕೆಯಲ್ಲಿ ಹಿಂದೆ ಉಳಿಯಲು ಕಾರಣವಾಗಿರಬಹುದು. ಹೆಣ್ಣು ಮಕ್ಕಳಿಗೆ ಋತುಸ್ರಾವದ ಅವಧಿಯ, ಮನೆಗೆಲಸದ ಸಮಸ್ಯೆ ಇರಬಹುದು.
ಕೆಲವೊಂದು ಕಡೆಗಳಲ್ಲಿ ಮಕ್ಕಳಿಗೆ ಶಾಲೆಗೆ ತೆರಳಲು ದಾರಿಯೇ ಇಲ್ಲ. ಎರಡು, ಮೂರು ಕಿಮೀ ನಡೆದುಕೊಂಡು ಹೋಗುತ್ತಾರೆ
ಈ ಸಮಾಜೋ-ಆರ್ಥಿಕ ಬಿಕ್ಕಟ್ಟುಗಳಿಗೂ ಮಕ್ಕಳ ಕಲಿಕೆಯ ಪ್ರಗತಿಗೂ ನೇರ ಸಂಬಂಧವಿದೆ. ಆದರೆ ಈ ಬಗ್ಗೆ ಯೋಚನೆ ಮಾಡುವವರು ಯಾರು? ಇಲಾಖೆಯ ಉತ್ತರದಾಯಿತ್ವವೇನು?
ಈ ಸಮಸ್ಯೆಗಳು, ಬಿಕ್ಕಟ್ಟುಗಳ ಕುರಿತು ಯೋಚನೆ ಮಾಡದೆ, ಪರಿಹಾರ ಕಂಡುಕೊಳ್ಳದೆ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದು ಕೇವಲ ಒಂದು ಪರೀಕ್ಷೆಯನ್ನು ಮಾನದಂಡವಾಗಿಸಿ ಅನುತ್ತೀರ್ಣ ಮಾಡುವುದು ಎಷ್ಟು ಸರಿ? ಇದು ಅಮಾನವೀಯವಾಗಿದೆ.
ಮುಖ್ಯವಾಗಿ ಪರೀಕ್ಷೆಯಿಂದ ಮಕ್ಕಳ ಪ್ರತಿಭೆಯನ್ನು ನಿರ್ಧರಿಸುವುದು ಸಮಂಜಸವಲ್ಲ. ನಿಜದಲ್ಲಿ ಪ್ರತಿಭೆ ನಿರ್ಧರಿಸಲು ಮಾನದಂಡವೇ ಇಲ್ಲ. ಕಂಠಪಾಠ ಮಾಡಿಕೊಂಡು ಬರೆದ ತಕ್ಷಣ ಮಕ್ಕಳು ಪ್ರತಿಭಾವಂತರೆನಿಸುವುದಿಲ್ಲ. ಪ್ರತಿಯೊಂದು ಮಗುವಿನ ಕಲಿಕೆಯು ಭಿನ್ನವಾಗಿರುತ್ತದೆ. ಹಾಗಾಗಿ ಪ್ರತಿಭೆ ನಿರ್ಧರಿಸಲು ಮಾನದಂಡಗಳೇ ಇಲ್ಲ.
ಆದ್ದರಿಂದ ಮಕ್ಕಳನ್ನು ಏಕೆ ಅನುತ್ತೀರ್ಣಗೊಳಿಸಬೇಕು ಎನ್ನುವುದಕ್ಕೆ ಸರ್ಕಾರದ ಬಳಿ ಸ್ಪಷ್ಟನೆಯೇ ಇಲ್ಲ.
ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಎರಡು ತಿಂಗಳಲ್ಲಿ ಮರು ಪರೀಕ್ಷೆ ಮಾಡಬೇಕು. ಅದರಲ್ಲೂ ಅನುತ್ತೀರ್ಣಗೊಂಡರೆ ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಕೂರಿಸಬೇಕು ಎಂದು ಸರ್ಕಾರ ಹೇಳಿದೆ. ಒಂದು ವರ್ಷ ಕಲಿತು ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಮಕ್ಕಳು ಎರಡು ತಿಂಗಳಲ್ಲಿ ಕಲಿತು ಮರು ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಹೇಗೆ ಸಾಧ್ಯ? ಅವರೇನು ಯಂತ್ರಗಳೇ? ಒಂದು ವೇಳೆ ಉತ್ತೀರ್ಣಗೊಂಡರೂ, ಅವರ ಮೇಲೆ ಅಷ್ಟೇ ಒತ್ತಡ ಬಿದ್ದಿರುತ್ತದೆ. ಮಕ್ಕಳನ್ನು ಪಾಸ್ ಮಾಡಬೇಕು ಎಂದು ಹಠಕ್ಕೆ ಬೀಳುವ ಶಿಕ್ಷಕರು, ಪೋಷಕರು ಅವರ ಮೇಲೆ ವಯಸ್ಸಿಗೆ ಮೀರಿದ ಒತ್ತಡ ಹೇರುತ್ತಾರೆ. ಇದು ಮಾನಸಿಕವಾಗಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ.
5 ಮತ್ತು 8 ನೇ ತರಗತಿಯಲ್ಲಿ ಮಕ್ಕಳನ್ನು ಅನುತ್ತೀರ್ಣಗೊಳಿಸಿದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಬಾಲ ಕಾರ್ಮಿಕರ ಸಂಖ್ಯೆಯೂ ಹೆಚ್ಚಳವಾಗುತ್ತದೆ.
ಏಕೆಂದರೆ, ಸಾಮಾಜಿಕ, ಕೌಟುಂಬಿಕ, ಪ್ರಾದೇಶಿಕ, ಆರ್ಥಿಕ ಸಮಸ್ಯೆಗಳ ಹಿನ್ನೆಲೆಯಿಂದ ಬರುವ ವಂಚಿತ ಸಮುದಾಯಗಳ ಮಕ್ಕಳು ಇಂದಿಗೂ ಶಾಲೆಯ ಮೆಟ್ಟಿಲು ಹತ್ತುವುದೇ ಸವಾಲಾಗಿದೆ. ಹೀಗಿರುವಾಗ ಅವರು ಇನ್ನೊಂದು ವರ್ಷ ಅದೇ ತರಗತಿಯಲ್ಲಿ ಕೂರಿಸಿದರೆ ಕಲಿಕೆ ಮುಂದುವರೆಸಲು ಸಾಧ್ಯವೇ?
ಸರ್ಕಾರ ತನ್ನ ವೈಫಲ್ಯಗಳನ್ನು ತಿದ್ದಿಕೊಳ್ಳದೆ, ತನ್ನೊಳಗಿನ ಅವ್ಯವಸ್ಥೆ ಬಗ್ಗೆ ಗಮನಹರಿಸದೆ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದು ಅವರನ್ನು ಬಲಿಪಶು ಮಾಡುವುದು ಎಷ್ಟು ಸರಿ?
ಶಿಕ್ಷಣ ಎನ್ನುವುದು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಕೇಂದ್ರ ಸರ್ಕಾರ ಮಾತ್ರ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ರೀತಿಯ ವಿಚಾರಗಳು ರಾಜ್ಯ ಸರ್ಕಾರಕ್ಕೆ ಬಿಟ್ಟು ಬಿಡಬೇಕು. ಶಿಕ್ಷಣ ವ್ಯವಸ್ಥೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಹೀಗಿರುವಾಗ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದುಮುಂದು ನೋಡದೆ ಈ ಪ್ರಸ್ತಾಪವನ್ನು ತಿರಸ್ಕರಿಸಬೇಕು
ಮುಖ್ಯವಾಗಿ ಮಕ್ಕಳು ಉತ್ತೀರ್ಣರಾಗುವಂತಹ ಕಲಿಕೆಯ ವಾತಾವರಣ ನಿರ್ಮಿಸಬೇಕು
— ಬಿ. ಶ್ರೀಪಾದ ಭಟ್