ದಲಿತ ಮುಖ್ಯಮಂತ್ರಿ ಆಗ್ರಹ-ವಾಸ್ತವ
ದಲಿತ ಚಳುವಳಿಯಲ್ಲಿ ʼ ರಾಜಕೀಯ ಪ್ರಜ್ಞೆ ʼ ಯ ವಿಚಾರ ಎದುರಾದಾಗ ತಳಮಟ್ಟದ ಸಾಮಾಜಿಕ ಜೀವನದಲ್ಲಿ ಈ ಅಂಶಗಳನ್ನು ಗಂಭೀರವಾಗಿ ಪರಾಮರ್ಶಿಸಬೇಕಾಗುತ್ತದೆ. ಈ ಜಟಿಲ ಸಿಕ್ಕುಗಳ ನಡುವೆ ʼ ದಲಿತ ಮುಖ್ಯಮಂತ್ರಿ ʼಯ ಕೂಗು ಆಗಾಗ್ಗೆ ಕೇಳಿಬರುತ್ತಿರುತ್ತದೆ. ಕರ್ನಾಟಕದ ರಾಜಕಾರಣದಲ್ಲಿ ಬಹುಶಃ 1980-90ರ ಮುನ್ನ ಈ ಆಗ್ರಹ ಕೇಳಿಬರುತ್ತಿರಲಿಲ್ಲ. 80ರ ದಶಕದಲ್ಲಿ ದಲಿತ ಚಳುವಳಿಯ ವಿಘಟನೆಯೂ ಇದಕ್ಕೆ ಒಂದು ಕಾರಣ ಇರಬಹುದು. ಈ ವಿಘಟನೆ ಕೇವಲ ಚಳುವಳಿಯನ್ನು ಶಿಥಿಲಗೊಳಿಸಲಿಲ್ಲ, ಬದಲಾಗಿ ದಲಿತ ಸಮುದಾಯಗಳನ್ನು ಎಡ-ಬಲ ಅಸ್ಮಿತೆಗಳಿಂದಾಚೆ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ಆವರಣದೊಳಗೆ ಸೇರಿಸಲಾಯಿತು. ತತ್ಪರಿಣಾಮವಾಗಿ, ದಲಿತ ಮುಖ್ಯಮಂತ್ರಿಯ ಕೂಗು ಪಕ್ಷದ ಆಂತರಿಕ ವಿಷಯವಾಯಿತೇ ಹೊರತು, ಸಮಸ್ತ ದಲಿತ ಸಮಾಜದ ಪ್ರಶ್ನೆಯಾಗಿ ಪರಿಣಮಿಸಲೇ ಇಲ್ಲ.

ಈಗಲೂ ಸಹ ಕಾಂಗ್ರೆಸ್ ಪಕ್ಷದೊಳಗೆ ಮಾತ್ರ ಈ ಕೂಗು ಕೇಳಿಬರುತ್ತದೆ. ವಿಚಿತ್ರ ಎಂದರೆ ಇತ್ತೀಚೆಗೆ ಮುಖ್ಯಮಂತ್ರಿಯ ಬದಲಾವಣೆಯಾದ ಸಂದರ್ಭದಲ್ಲಿ ಬಿಜೆಪಿ ನಾಯಕ, ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಪದಚ್ಯುತರಾದ ನಂತರ ಕಾಂಗ್ರೆಸ್ ಹೈಕಮಾಂಡ್ ದಲಿತರನ್ನು ಮುಖ್ಯಮಂತ್ರಿ ಮಾಡದಿದ್ದರೆ, ಪಕ್ಷದ ದಲಿತ ಶಾಸಕರು ಸಚಿವ ಪದವಿಯನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದ್ದಾರೆ. ಇದೇ ಆಗ್ರಹವನ್ನು ಬಿಜೆಪಿ ಆಳ್ವಿಕೆಯ ಸಂದರ್ಭದಲ್ಲಿ ಮಾಡಿದ್ದರೇ ? ಅಲ್ಲಿ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಜೆಡಿಎಸ್ ಪಕ್ಷದಲ್ಲೂ ಸಹ ಈ ಧ್ವನಿ ಕೇಳಿಬರುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷದೊಳಗೆ ಪ್ರತಿಧ್ವನಿಸುವ ʼ ದಲಿತ ಮುಖ್ಯಮಂತ್ರಿ ʼಯ ಕೂಗು ಚುನಾಯಿತ ಶಾಸಕರಿಗಿಂತಲೂ ಹೊರಗಿನ ದಲಿತ ಚಳುವಳಿಗಳಿಂದ ಕೇಳಿಬರುತ್ತದೆ. ರಾಜಕೀಯವಾಗಿ ಅಂಚಿಗೆ ತಳ್ಳಲ್ಪಟ್ಟಿರುವ (Marginalised) ದಲಿತ ಸಮುದಾಯಗಳು ಇದಕ್ಕೆ ಧ್ವನಿಗೂಡಿಸುತ್ತವೆ.

ಈ ಬೇಡಿಕೆಯ ಹಿಂದೆ ಕೇಳಿಬರುವ ʼ ದಲಿತ ʼ ಕಲ್ಪನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಎಡ-ಬಲದ ಪ್ರಶ್ನೆ ಪ್ರಧಾನವಾಗಿರುತ್ತದೆ. ಕೆಲವು ದಲಿತ ಶಾಸಕರ ಸ್ಥಳೀಯ ಸಾಮಾಜಿಕ ಪ್ರಾಬಲ್ಯ, ರಾಜಕೀಯ ಪ್ರಾಬಲ್ಯ ಮತ್ತು ಸಾಮುದಾಯಿಕ ಬೆಂಬಲ ಇಲ್ಲಿ ಪ್ರಧಾನವಾಗಿ ಕಾಣುತ್ತದೆ. ಹಾಗಾಗಿ ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಜಿ. ಪರಮೇಶ್ವರ್ ಹೀಗೆ ಕೆಲವೇ ನಾಯಕರ ಹೆಸರುಗಳು ಮುನ್ನಲೆಗೆ ಬರುತ್ತವೆ. ಇಲ್ಲಿ ಗ್ರಹಿಸಬೇಕಾದ ಸೂಕ್ಷ್ಮ ಸಂಗತಿ ಎಂದರೆ, ಈ ನಾಯಕರ ಸಂಭಾವ್ಯ ಅರ್ಹತೆಯ ಮಾನದಂಡಗಳು ʼ ದಲಿತ ಅಸ್ಮಿತೆ ʼಯನ್ನು ಮೀರಿರುತ್ತದೆ. ಸಾಮಾಜಿಕ ಅಂತಸ್ತು ಮತ್ತು ಪ್ರಭಾವಿ ವಲಯ, ಹಿಂಬಾಲಕರ ಸಂಖ್ಯೆ, ಪಕ್ಷಕ್ಕೆ ನೆರವಾಗುವಷ್ಟು ಹಣಕಾಸಿನ ಬಲ (ಮಾರುಕಟ್ಟೆ ಪರಿಭಾಷೆಯಲ್ಲಿ ಬಂಡವಾಳ) ಮತ್ತು ದಲಿತ ಸಮುದಾಯಗಳ ನಡುವೆ ಜನಪ್ರಿಯತೆ.

ಈ ಪ್ರಕ್ರಿಯೆಯಲ್ಲಿ ವ್ಯಕ್ತಿಯ ʼ ದಲಿತ ಪ್ರಜ್ಞೆ ʼ ನಗಣ್ಯವಾಗಿರುತ್ತದೆ. ಏಕೆಂದರೆ ಅಧಿಕಾರ ರಾಜಕಾರಣವನ್ನು ನಿಯಂತ್ರಿಸುವುದು ಪಕ್ಷದ ತಾತ್ವಿಕ ನೆಲೆಗಳು, ಉದ್ದೇಶಗಳು, ಅಂತಿಮ ಗುರಿ ಮತ್ತು ಸ್ಥಳೀಯ ರಾಜಕೀಯ ಸನ್ನಿವೇಶದ ಅನಿವಾರ್ಯತೆಗಳು. ದಲಿತ ಚಳುವಳಿಗಳ ವಿಘಟನೆಯಾಗಿರುವುದು ಕೇವಲ ಎಡ-ಬಲ ನಡುವೆ ಅಲ್ಲ, ಆಂತರಿಕವಾಗಿ ರಾಜಕೀಯ ಒಲವು-ನಿಲುವು ಸಹ ಇಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ದಲಿತ ಮುಖ್ಯಮಂತ್ರಿಯ ಆಯ್ಕೆಯ ಪ್ರಶ್ನೆ ಬಂದಾಗ ವಿಭಿನ್ನ ಅಭಿಪ್ರಾಯಗಳು, ಒತ್ತಾಯಗಳು ಕೇಳಿಬರುತ್ತವೆ. ವಿವಿಧ ದಲಿತ ನಾಯಕರ ಪರ-ವಿರೋಧ ಇಲ್ಲಿ ಮುನ್ನಲೆಗೆ ಬರುತ್ತದೆ. ಪುನಃ ಇಲ್ಲಿ ʼ ದಲಿತ ʼ ಅಸ್ಮಿತೆಯೇ ವಿಘಟನೆಗೊಳಗಾಗುತ್ತದೆ. ಈ ರೇಸ್ನಲ್ಲಿ ವಿಜಯಿಯಾಗುವ ನಾಯಕರಿಗೆ ರಾಜಕೀಯ ಪ್ರಾಬಲ್ಯದೊಂದಿಗೆ ಆರ್ಥಿಕ ಶಕ್ತಿಯೂ ಇರಬೇಕಾಗುತ್ತದೆ.

ಬಂಡವಾಳಶಾಹಿ ಮತ್ತು ದಲಿತಪ್ರಜ್ಞೆ
ಈ ಆರ್ಥಿಕ ಶಕ್ತಿ ನಿರ್ಧಾರವಾಗುವುದು ಮಾರುಕಟ್ಟೆಯ ಅಂಗಳದಲ್ಲಿ. ದಲಿತ ನಾಯಕರ ಸಾಂಸ್ಥಿಕ ಶಕ್ತಿ (Institutional Poweŗ) ಮತ್ತು ಸಂಘಟನಾ ಸಾಮರ್ಥ್ಯ (Organising Ability) ಇಲ್ಲಿ ಮುಖ್ಯವಾಗುತ್ತದೆ. ಡಿಜಿಟಲ್ ಯುಗದ ರಾಜಕೀಯ ಚಿತ್ರಣವನ್ನು ನೋಡಿದಾಗ, ಸಾಂಸ್ಥಿಕ ಶಕ್ತಿ ಎನ್ನುವುದು ಶಿಕ್ಷಣ ಸಂಸ್ಥೆಗಳ ಒಡೆತನ, ಆಸ್ಪತ್ರೆ ವಗೈರೆಗಳ ಮಾಲೀಕತ್ವ, ರಿಯಲ್ ಎಸ್ಟೇಟ್ ಬಲ ಮತ್ತು ಒಟ್ಟಾರೆ ಸಂಚಿತ ಬಂಡವಾಳದ (Accumulated Capital) ಶಕ್ತಿ ಇವುಗಳ ಮೂಲಕ ನಿರ್ಧಾರವಾಗುತ್ತದೆ. ಈ ಸಾಂಸ್ಥಿಕ ಬಲವೇ ರಾಜಕೀಯ ನಾಯಕರ ಸಂಘಟನಾ ಸಾಮರ್ಥ್ಯವನ್ನೂ ನಿರ್ಧರಿಸುತ್ತದೆ. ಇದು ಬಿ. ಬಸವಲಿಂಗಪ್ಪ ಅವರ ಯುಗ ಅಲ್ಲ ಎನ್ನುವುದನ್ನು ಗಮನದಲ್ಲಿಡಬೇಕು. ತತ್ವ ಸಿದ್ದಾಂತಗಳು ರಾಜಕೀಯ ನಾಯಕರನ್ನು ಒಂದು ಹಂತದವರೆಗೆ ನಡೆಸುತ್ತವೆ ಆದರೆ ರಾಜಕೀಯ ವಲಯದಲ್ಲಿ ಸ್ಥಾಪಿಸಲು ನೆರವಾಗುವುದಿಲ್ಲ. ಅಲ್ಲಿ ಬಂಡವಾಳ ಬೇಕಾಗುತ್ತದೆ. ಜಿ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿರುವುದನ್ನು ಈ ದೃಷ್ಟಿಯಿಂದಲೂ ನೋಡಬಹುದು.

ತಾತ್ವಿಕವಾಗಿ ದಲಿತ ಮುಖ್ಯಮಂತ್ರಿಯ ಕಲ್ಪನೆಯನ್ನು ಹೀಗೆ ವಿಶ್ಲೇಷಿಸಬಹುದು. ಅಧಿಕಾರ ರಾಜಕಾರಣದ ದೃಷ್ಟಿಯಿಂದ ನೋಡಿದಾಗ, ದಲಿತ ವ್ಯಕ್ತಿ ಮುಖ್ಯಮಂತ್ರಿಯಾದರೆ, ದಲಿತ ಸಮುದಾಯಗಳಿಗೆ ಯಾವ ಯಾವ ರೀತಿಯಲ್ಲಿ ಅನುಕೂಲವಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸ್ವತಂತ್ರ ಭಾರತದ 80 ವರ್ಷಗಳಲ್ಲಿ ಎಂಟು ದಲಿತ ನಾಯಕರು ಮಾತ್ರ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರ ಪೈಕಿ ಎಕೈಕ ಮಹಿಳೆ ಮಾಯಾವತಿ. (ಬಾಕ್ಸ್ ನೋಡಿ). ಈ ಎಂಟು ಮುಖ್ಯಮಂತ್ರಿಗಳ ಆಡಳಿತಾವಧಿಯಲ್ಲಿ ದಲಿತ ಸಬಲೀಕರಣ ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ ? ದಲಿತರಲ್ಲೇ ಅಂಚಿನಲ್ಲಿರುವ (Marginalised) ಮತ್ತು ಅವಕಾಶವಂಚಿತರಾಗಿರುವ ಕೆಳಸ್ತರದ ಜಾತಿ ಗುಂಪುಗಳು ಎಷ್ಟು ಪ್ರಗತಿ ಸಾಧಿಸಿವೆ ? ದಲಿತ ಸಮಾಜಗಳಲ್ಲಿ ಮಹಿಳೆ ಇಂದಿಗೂ ಎದುರಿಸುತ್ತಿರುವ ಪುರುಷಾಧಿಪತ್ಯ ಮತ್ತು ಯಜಮಾನಿಕೆಯ ಸಂಸ್ಕೃತಿ ಎಷ್ಟು ನಿಯಂತ್ರಿಸಲ್ಪಟ್ಟಿದೆ ಅಥವಾ ಹೋಗಲಾಡಿಸಲಾಗಿದೆ ?

ಸ್ವತಂತ್ರ ಭಾರತದ ದಲಿತ ಮುಖ್ಯಮಂತ್ರಿಗಳು
· ದಾಮೋದರಮ್ ಸಂಜೀವಯ್ಯ –ಭಾರತದ ಮೊಟ್ಟಮೊದಲ ದಲಿತ ಮುಖ್ಯಮಂತ್ರಿ ಆಂಧ್ರ ಪ್ರದೇಶ 1960-62
· ಮಾಯಾವತಿ – ಮೊಟ್ಟಮೊದಲ ದಲಿತ ಮಹಿಳಾ ಮುಖ್ಯಮಂತ್ರಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. 1995-1997-2002-2007
· ಭೋಲಾ ಪಾಸ್ವಾನ್ ಶಾಸ್ತ್ರಿ -–ಬಿಹಾರ ಮೂರು ಬಾರಿ ಅಲ್ಪಾವಧಿ ಮುಖ್ಯಮಂತ್ರಿಯಾಗಿದ್ದರು. 1968- 1969 -1971
· ರಾಮಸುಂದರ್ ದಾಸ್ – ಬಿಹಾರ 1979
· ಜಗನ್ನಾಥ್ ಪಹಾಡಿಯಾ –ರಾಜಸ್ಥಾನ (ಮೊದಲನೆಯವರು) 1980-81
· ಸುಶಿಲ್ ಕುಮಾರ್ ಶಿಂಧೆ – ಮಹಾರಾಷ್ಟ್ರ (ಮೊದಲನೆಯವರು)2003-04
· ಜೀತನ್ ರಾಮ್ ಮಾಂಜಿ – ಬಿಹಾರ 2014-15
· ಚರಣ್ಜಿತ್ ಸಿಂಗ್ ಚನ್ನಿ -–ಪಂಜಾಬ್ (ಮೊದಲನೆಯವರು) 2021-22
ಇವರ ಪೈಕಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು ಮಾಯಾವತಿ ಮಾತ್ರ 2007-12.

ರಾಜಕೀಯ ಅಧಿಕಾರದ ನೆಲೆಯಲ್ಲಿ
ಹಸಿವು, ಬಡತನ, ನಿರ್ವಸತಿ, ನಿರುದ್ಯೋಗ ಮತ್ತು ಸಾಮಾಜಿಕ ಅಸಮಾನತೆ-ತಾರತಮ್ಯಗಳಿಗೆ ಗುರಿಯಾಗಿರುವ ಕೆಳಸ್ತರದ ದಲಿತ ಸಮುದಾಯಗಳ ಈ ಸಮಸ್ಯೆಗಳು ಎಷ್ಟು ಬಗೆಹರಿಸಲು ಸಾಧ್ಯವಾಗಿದೆ ? ಆಂಧ್ರ ಪ್ರದೇಶ ಮತ್ತು ಬಿಹಾರದಲ್ಲಿ ದಲಿತ ಮುಖ್ಯಮಂತ್ರಿ ಇದ್ದಾಗಲೂ ಸಹ, ಮಾವೋವಾದಿಗಳನ್ನು ಹತ್ತಿಕ್ಕುವ ಹಾದಿಯಲ್ಲಿ ಅತಿಹೆಚ್ಚು ಸಾವು ನೋವುಗಳನ್ನು ಅನುಭವಿಸಿರುವುದು ದಲಿತರೇ ಎನ್ನುವುದನ್ನೂ ಗಮನಿಸಬೇಕಿದೆ. ಆಂಧ್ರದಲ್ಲಿ ಮಾಲ-ಮಾದಿಗ ಮತ್ತು ಬಿಹಾರದಲ್ಲಿ ಮುಸಾಹರ, ಚಮ್ಮಾರ ಮತ್ತು ದುಸ್ಸಾದ್ (ಪಾಸ್ವಾನ್) ಸಮುದಾಯಗಳು ಒಂದೆಡೆ ರಜಪೂತ ಭೂಮಿಹಾರ್ ಭೂಮಾಲೀಕರಿಂದ ಮತ್ತೊಂದೆಡೆ ಪ್ರಭುತ್ವದಿಂದ ಸಾವು ನೋವುಗಳನ್ನು ಅನುಭವಿಸಿದ್ದಾರೆ. ಭೋಜ್ಪುರ ಒಂದು ಉದಾಹರಣೆ. ಶೋಷಿತರ ವಿರುದ್ಧ ಈ ದಮನಕಾರಿ ನೀತಿಗಳನ್ನು ಅನುಸರಿಸುವಾಗ, ದಲಿತ ಮುಖ್ಯಮಂತ್ರಿಗಳೂ ಸಹ ಇತರೆ ಮೇಲ್ಜಾತಿ ನಾಯಕರಂತೆಯೇ ವರ್ತಿಸಿರುವುದು ಚಾರಿತ್ರಿಕ ಸತ್ಯ.

ಉತ್ತರ ಪ್ರದೇಶದಲ್ಲಿ ಮಾಯಾವತಿ ತಮ್ಮದೇ ಆದ ದಲಿತರ ಪಕ್ಷವನ್ನು ʼ ಬಹುಜನ ಸಮಾಜವಾದಿ ʼ ಎಂದು ಗುರುತಿಸಿಕೊಂಡಿದ್ದಾರೆ. ರಾಜ್ಯದ ಪ್ರಧಾನ ದಲಿತ ಸಮುದಾಯ ಜಾಟವ್ಗಳ ಅಭೂತಪೂರ್ವ ಬೆಂಬಲ ಮಾಯಾವತಿಯವರನ್ನು ನಾಲ್ಕು ಬಾರಿ ಮುಖ್ಯಮಂತ್ರಿಯ ಗದ್ದುಗೆಯಲ್ಲಿ ಕೂಡಿಸಿದೆ. ಸ್ವತಂತ್ರ ಭಾರತದ ಏಕಮಾತ್ರ ಮಹಿಳಾ ದಲಿತ ಮುಖ್ಯಮಂತ್ರಿಯಾಗಿ ಮಾಯಾವತಿ ಕಂಡರೂ, ಅದನ್ನು ಸಾಧನೆ ಅಥವಾ ದಾಖಲೆ ಎಂದು ನೋಡದೆ, ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಹೇಗೆ ದಲಿತರ ಜೊತೆಗೆ ಮಹಿಳೆಯನ್ನೂ ರಾಜಕೀಯವಾಗಿ ಕಡೆಗಣಿಸಿದೆ ಎಂದು ನೋಡಬೇಕಿದೆ. ಮಾಯಾವತಿಯವರ ಆಳ್ವಿಕೆಯಲ್ಲಿ ಜಾರಿಗೊಳಿಸಿದ ಜನಕಲ್ಯಾಣ ಯೋಜನೆಗಳು (Welfare Schemes) ಉತ್ತರಪ್ರದೇಶದ ದಲಿತರಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೌಕರ್ಯಗಳನ್ನು ಕಲ್ಪಿಸಿರುವುದು ವಾಸ್ತವ. ವಾಲ್ಮೀಕಿ ಸಮುದಾಯದ ಯುವ ಜನರಿಗೆ ಅನುಕೂಲಕರವಾದ ನೀತಿಗಳನ್ನೂ ಮಾಯಾವತಿ ಜಾರಿಗೊಳಿಸಿದ್ದರು. ಬಹುಮುಖ್ಯವಾಗಿ ಭೂ ಸುಧಾರಣಾ ಕ್ರಮಗಳ ಮೂಲಕ ಭೂರಹಿತ ದಲಿತ ಕುಟುಂಬಗಳಿಗೆ ಭೂಮಿಯನ್ನು ವಿತರಿಸಿರುವುದು ಪ್ರಶಂಸಾರ್ಹ ಸಾಧನೆ. ಆದರೆ ಈ ಜನಪರ ಉಪಕ್ರಮಗಳಿಗಿಂತಲೂ ಮಾಯಾವತಿಯವರು ಪಕ್ಷದ ಚಿಹ್ನೆಯಾದ ಆನೆಯ ಪ್ರತಿಮೆಗಳನ್ನು ರಾಜ್ಯಾದ್ಯಂತ ಸ್ಥಾಪಿಸುವುದಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೂ ಸಹ ಟೀಕೆಗೊಳಗಾಗಿದೆ.

ಏನೇ ಆದರೂ ತಮ್ಮ ವಿವಿಧ ಅವಧಿಯ ಆಳ್ವಿಕೆಯಲ್ಲಿ ಆ ರಾಜ್ಯದ ದಲಿತರನ್ನು, ಅದರಲ್ಲೂ ಅತ್ಯಂತ ಕೆಳಸ್ತರದ ಜಾತಿ ಸಮುದಾಯಗಳನ್ನು ಇಂದಿಗೂ ಕಾಡುತ್ತಿರುವ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ, ಮೇಲ್ಜಾತಿಗಳ ಹಿಂಸಾತ್ಮಕ ದೌರ್ಜನ್ಯ, ಆರ್ಥಿಕ ಅಸಮಾನತೆ, ಮಹಿಳೆಯರ ಸಮಸ್ಯೆಗಳು ಇವೆಲ್ಲವೂ ಬಗೆಹರಿಯದೆ ಉಳಿದಿವೆ. 2007ರಲ್ಲಿ ಮಾಯಾವತಿ ಬಹುಮತ ಸರ್ಕಾರ ಹೊಂದಿದ್ದಾಗ, ದಲಿತ ಸಮುದಾಯದ ಘನತೆಯ ದೃಷ್ಟಿಯಿಂದ ಅದೊಂದು ಚಾರಿತ್ರಿಕ ಸಂದರ್ಭವಾಗಿತ್ತು. ಇಲ್ಲಿ ಪುನಃ ವೈಫಲ್ಯ ಕಾಣುವುದು ರಾಜಕೀಯ ಅರ್ಥಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಇರುವಲ್ಲಿ. ಇಂದಿಗೂ ಸಹ ಮಾಯಾವತಿ ನವ ಉದಾರವಾದದ ವಿರುದ್ಧ ರಾಜಕೀಯವಾಗಿ ದನಿ ಎತ್ತುವುದಿಲ್ಲ.
ಹಾಗಾಗಿಯೇ ಕರ್ನಾಟಕದಲ್ಲಿ ಪಕ್ಷದ ಸಾವಿರಾರು ಸದಸ್ಯರಿದ್ದರೂ ಬಹುಜನ ಸಮಾಜ ಪಕ್ಷ ಒಂದು ಪ್ರಬಲ ಪಕ್ಷವಾಗಿ ಬೆಳೆದಿಲ್ಲ. ಸ್ಥಳೀಯ ದಲಿತ ಚಳುವಳಿಗಳಲ್ಲೂ ಬಿಎಸ್ಪಿ ಪಕ್ಷದೊಡನೆ ಭಿನ್ನಾಭಿಪ್ರಾಯಗಳಿವೆ. ಇದಕ್ಕೆ ಕಾರಣ, ಪ್ರಾದೇಶಿಕ ಸಾಮಾಜಿಕ ಲಕ್ಷಣಗಳನ್ನು, ರಾಜಕೀಯ ಅರ್ಥಶಾಸ್ತ್ರವನ್ನು ಹಾಗೂ ಶೋಷಣೆಯ ಭಿನ್ನ ಸ್ವರೂಪಗಳನ್ನು ಗುರುತಿಸುವಲ್ಲಿ ಪಕ್ಷ ಸೋತಿದೆ. ಉತ್ತರಪ್ರದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಕಾಣುವ ಜಾತಿ ದೌರ್ಜನ್ಯಗಳ ರೂಪದಲ್ಲಿ ಸೂಕ್ಷ್ಮ ವ್ಯತ್ಯಾಸವಿದೆ. ಇದನ್ನು ಗ್ರಹಿಸದೆ ಹೋದರೆ, ಉತ್ತರಪ್ರದೇಶ ಮಾದರಿಯ ಅಧಿಕಾರ ರಾಜಕಾರಣಕ್ಕೆ ಕರ್ನಾಟಕದಲ್ಲಿ ಮನ್ನಣೆ ದೊರೆಯುವುದಿಲ್ಲ. ʼದಲಿತ ಮುಖ್ಯಮಂತ್ರಿ ʼಯ ಪ್ರಶ್ನೆ ಎದುರಾದಾಗ, ಭಾರತದ ಈ ಪ್ರಾದೇಶಿಕ ವೈವಿಧ್ಯತೆಯನ್ನೂ ಗಮನದಲ್ಲಿಡಬೇಕು.

ಚಳುವಳಿ ಹೋರಾಟ ಮತ್ತು ದಲಿತಪ್ರಜ್ಞೆ
ಕರ್ನಾಟಕದಲ್ಲಿ ʼ ದಲಿತ ಪ್ರಜ್ಞೆ ʼ ಮೂಡಿರುವುದು ಚಳುವಳಿ, ಹೋರಾಟಗಳ ಆವರಣದಲ್ಲಿ. ಇಲ್ಲಿಂದ ಉತ್ಪಾದನೆಯಾಗುವ ನಿರೂಪಣೆಗಳೇ (Narratives) ದಲಿತ ರಾಜಕಾರಣವನ್ನೂ ಇಂದಿಗೂ ವಿವಿಧ ಬಣಗಳ ರೂಪದಲ್ಲಿ ನಿರ್ದೇಶಿಸಬೇಕಿದೆ. ಆದರೆ ಈ ನಿರೂಪಣೆಗಳಲ್ಲಿ ರಾಜಕೀಯ ದೃಷ್ಟಿಕೋನ ಕಾಣದಿರಲು ಕಾರಣ, ಇಲ್ಲಿ ʼ ದಲಿತ ರಾಜಕೀಯ ʼ ತಾತ್ವಿಕ ನೆಲೆಯನ್ನು ಕಂಡುಕೊಳ್ಳದೆ ಇರುವುದು. 1970ರ ದಶಕದಲ್ಲಿ ಹುಟ್ಟಿಕೊಂಡ ದಲಿತ ಚಳುವಳಿ ಸೈದ್ಧಾಂತಿಕವಾಗಿ ಗಟ್ಟಿ ಅಡಿಪಾಯ ಹೊಂದಿತ್ತು. ಆದರೆ ಕೇವಲ 20 ವರ್ಷಗಳಲ್ಲಿ ಈ ಅಡಿಪಾಯದ ಅಡಿಗಲ್ಲುಗಳು ಸಡಿಲವಾಗುತ್ತಾ ಹೋದವು. ಯಾವುದೇ ಸಾಮುದಾಯಿಕ ಚಳುವಳಿಗಳು ಸಡಿಲ ತಳಪಾಯದ ಮೇಲೆ ರಾಜಕೀಯ ನಾಯಕತ್ವವನ್ನು ಸೃಷ್ಟಿಸುವುದಿಲ್ಲ. (ಕರ್ನಾಟಕದ ಮುಸ್ಲಿಂ ರಾಜಕಾರಣದಲ್ಲೂ ಇದೇ ಲಕ್ಷಣವನ್ನು ಕಾಣಬಹುದು.) ಕಾನ್ಷೀರಾಮ್ ಅವರಂತಹ ಒಬ್ಬ ರಾಜಕೀಯ ನಾಯಕನನ್ನು ಕರ್ನಾಟಕದ ದಲಿತ ಚಳುವಳಿ ಸೃಷ್ಟಿಸಲಿಲ್ಲ.
ದಲಿತ ಮುಖ್ಯಮಂತ್ರಿಯ ಕಲ್ಪನೆ ಗರಿಮೂಡುವ ಮುನ್ನವೇ ಕರ್ನಾಟಕ ಕಂಡ ಧೀಮಂತ, ಪ್ರಾಮಾಣಿಕ ದಲಿತ ನಾಯಕ ಬಿ. ಬಸವಲಿಂಗಪ್ಪ ಇಲ್ಲವಾಗಿದ್ದರು (1992). ಚಳುವಳಿಯ ಒಳಗಿಂದ ರಾಜಕೀಯ ನಾಯಕತ್ವವನ್ನು ಹುಟ್ಟುಹಾಕುವ ಸಾಧ್ಯತೆಗಳಿದ್ದವು. ಆದರೆ ದಲಿತ ಸಂಘಟನೆಗಳ ಎಲ್ಲ ಬಣಗಳೂ ಸ್ಥಾಪಿತ ಮುಖ್ಯವಾಹಿನಿ ರಾಜಕೀಯ ಪಕ್ಷಗಳ ಹಿಂಬಾಲಕರಾಗಿ ಗುರುತಿಸಿಕೊಂಡವೇ ಹೊರತು, ಸ್ವಂತಿಕೆಯಿಂದ ರಾಜಕೀಯ ಅಸ್ತಿತ್ವವನ್ನು ಕಂಡುಕೊಳ್ಳುವ ಆಲೋಚನೆ ಮಾಡಲೇ ಇಲ್ಲ. ಈ ಸಂದಿಗ್ಧತೆಯಲ್ಲಿ ಚಳುವಳಿಯ ಒಳಗಿಂದ ರಾಜಕೀಯ ನಾಯಕತ್ವ ರೂಪುಗೊಳ್ಳಬೇಕಾಗಿದ್ದಲ್ಲಿ ಅಂದಿನ ಯುವ ಪೀಳಿಗೆಯಲ್ಲಾದರೂ ʼ ರಾಜಕೀಯ ಪ್ರಜ್ಞೆ ʼ ಬೆಳೆಸುವ ಪ್ರಯತ್ನಗಳು ನಡೆಯಬೇಕಿತ್ತು.

ಈ ಪ್ರಯತ್ನಗಳು ನಡೆಯಲೇ ಇಲ್ಲ. ಇಂದಿಗೂ ಸಹ ನಡೆಯುತ್ತಿಲ್ಲ. ಬಹುಜನ ಸಮಾಜ ಪಕ್ಷದಂತಹ ಏಕನಾಯಕತ್ವದ ಸಂಸ್ಕೃತಿ ಕರ್ನಾಟಕಕ್ಕೆ ಒಗ್ಗುವುದಿಲ್ಲ. ಏಕೆಂದರೆ ರಾಜ್ಯದ ದಲಿತ ಸಮಾಜಗಳಲ್ಲಿ ಶಿಕ್ಷಣ, ಆರೋಗ್ಯ, ಜೀವನಮಟ್ಟ ಮತ್ತು ಜೀವನಶೈಲಿಯಲ್ಲೂ ಮುಂದುವರೆದ ಒಂದು ವರ್ಗ (Class) ಇಲ್ಲಿ ಪ್ರಬಲವಾಗಿದೆ. ಒಂದು ರೀತಿಯಲ್ಲಿ ಇದು ವರ್ಗವಾಗಿಯೇ ಮಾರ್ಪಾಡಾಗಿದೆ. ಈ ವರ್ಗ ರಾಜಕೀಯವನ್ನು ನೋಡುವ ದೃಷ್ಟಿಯೇ ಭಿನ್ನವಾಗಿದೆ. ಸಾಂವಿಧಾನಿಕ ಸೌಲಭ್ಯಗಳ ಈ ಫಲಾನುಭವಿ ವರ್ಗಗಳೇ ರಾಜ್ಯದ ರಾಜಕೀಯ ನಿರೂಪಣೆಗಳನ್ನೂ (Political Narratives) ನಿರ್ಧರಿಸುತ್ತವೆ. ಹಾಗಾಗಿ ಯಾವ ಪಕ್ಷಕ್ಕೆ ಬೆಂಬಲಿಸಿದರೆ ದಲಿತರಿಗೆ ಅನುಕೂಲಕರ ಎಂಬ ಆಲೋಚನೆಯೇ ಪ್ರಧಾನವಾಗುತ್ತದೆ. 2023ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಎಲ್ಲ ದಲಿತ ಸಂಘಟನೆಗಳೂ ಒಮ್ಮತದಿಂದ ನಿರ್ಧರಿಸಿದ್ದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ.

ಹೀಗೆ ಸ್ಥಾಪಿತ ಮುಖ್ಯವಾಹಿನಿ ಪಕ್ಷಗಳ ಸಹಭಾಗಿಗಳಾಗಿ ಅಥವಾ ಸಹವರ್ತಿಗಳಾಗಿ ಅಥವಾ ಹಿಂಬಾಲಕರಾಗಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವುದರಿಂದ ರಾಜ್ಯದಲ್ಲಿ ʼ ದಲಿತ ರಾಜಕೀಯ ʼ ಒಂದು ಸಾರ್ವಜನಿಕ ಚರ್ಚೆಯ ವಿಷಯವೇ ಆಗಿಲ್ಲ. ಯುವ ಪೀಳಿಗೆಯಲ್ಲಿ ʼ ದಲಿತ ಪ್ರಜ್ಞೆ ʼ ಸಾಮಾಜಿಕ ಚೌಕಟ್ಟಿನಿಂದಾಚೆಗೆ ಯಾವ ಮಗ್ಗುಲಿನಿಂದಲೂ ಕಾಣುವುದಿಲ್ಲ. ಹಾಗಾಗಿ ʼ ದಲಿತ ಮುಖ್ಯಮಂತ್ರಿ ʼಯ ಕೂಗು ಒಂದು ರೀತಿಯಲ್ಲಿ ಅರಣ್ಯರೋದನವಾಗುತ್ತದೆ. ಚಳುವಳಿ, ಹೋರಾಟ, ಸಂಘಟನೆ ಈ ಹಂತಗಳನ್ನು ದಾಟಿ ನಮ್ಮದೇ ಆದ ರಾಜಕೀಯ ಚಿಂತನೆಗಳನ್ನು ಹುಟ್ಟುಹಾಕುವ ಪ್ರಯತ್ನಗಳಿಗೆ ಇನ್ನಾದರೂ ನಾವು ಮುಂದಾಗಬೇಕಿದೆ. ವಿಘಟಿತ ದಲಿತ ಸಂಘಟನೆಗಳು ಈ ನಿಟ್ಟಿನಲ್ಲಾದರೂ ಸಂಘಟಿತವಾಗಿ ಆಲೋಚನೆ ಮಾಡುವುದಾದರೆ, ಮುಂದೊಂದು ದಿನ ʼ ದಲಿತ ಮುಖ್ಯಮಂತ್ರಿ ʼ ಯ ಕೂಗು ರಾಜಕೀಯ ರೂಪ ಪಡೆದುಕೊಳ್ಳಲು ಸಾಧ್ಯ.






