ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಶತಾಯ, ಗತಾಯ ಗೆಲ್ಲಲೇಬೇಕು ಎಂದುಕೊಂಡಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ ಪರವಾದ ಅಲೆ ಸೃಷ್ಟಿಸಲು ಇದುವೇ ಮೆಟ್ಟಿಲು ಎಂದುಕೊಂಡಿದೆ. ಆದರೆ ಬಿಜೆಪಿ ಪಾಲಿಗೆ ಉತ್ತರ ಪ್ರದೇಶ ಕಬ್ಬಿಣದ ಕಡಲೆಯಾಗಿ ಪರಿಣಮಿಸುತ್ತಿದೆ. ಜೊತೆಗೆ ಉತ್ತರ ಪ್ರದೇಶದಲ್ಲಿ ಹಿಂದೂ-ಮುಸ್ಲೀಂ ಕೋಮುದಳ್ಳುರಿ ಎಬ್ಬಿಸದೆ ಗೆಲುವು ಸಾಧ್ಯವಿಲ್ಲ ಎಂಬುದು ಖಚಿತವಾಗುತ್ತಿದೆ. ಅಲ್ಲದೆ ಸಮಾಜವಾದಿ ಪಕ್ಷವನ್ನು ಕೋಮು ಅಜೆಂಡಾಕ್ಕೆ ಕೆಡವಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮಾತ್ರ ಬಿಜೆಪಿ ತಂತ್ರಕ್ಕೆ ಬಲಿಯಾಗುತ್ತಿಲ್ಲ. ಹಾಗಾಗಿ ಈಗ ಬಿಜೆಪಿ ಕೋಮು ಬೆಂಕಿ ಹಚ್ಚುವ ಹೊಸ ಅಸ್ತ್ರಗಳ ಹುಡುಕಾಟ ನಡೆಸಿದೆ.
ಮೊದಲ ಎರಡು ಹಂತದ (ಫೆಬ್ರವರಿ 10, 14ರಂದು) ಮತದಾನ ಮುಗಿಯುವವರೆಗೆ ಬಿಜೆಪಿ ಸ್ವಲ್ಪ ಕಾದುನೋಡುವ ತಂತ್ರ ಅನುಸರಿಸಿತು. ಏಕೆಂದರೆ ಮೊದಲೆರಡು ಹಂತದ ಮತದಾನ ನಡೆದದ್ದು ಪಶ್ಚಿಮ ಉತ್ತರ ಪ್ರದೇಶದ 20 ಜಿಲ್ಲೆಗಳ 113 ಕ್ಷೇತ್ರಗಳಲ್ಲಿ. ಇವು ಮುಸ್ಲಿಂ ಮತ್ತು ಜಾಟ್ ಪ್ರಾಬಲ್ಯದ ಕ್ಷೇತ್ರಗಳು. ಕಳೆದ ಬಾರಿ (2017ರಲ್ಲಿ) ಜಾಟ್ ಸಮುದಾಯದ ಪಕ್ಷ ಎಂದೇ ರಾಷ್ಟ್ರೀಯ ಲೋಕದಳದ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಈ ಭಾಗದಲ್ಲಿ 100ಕ್ಕೂ ಹೆಚ್ಚು ಸೀಟು ಗೆದ್ದಿತ್ತು. ಆದರೆ ಈ ಬಾರಿ ರಾಷ್ಟ್ರೀಯ ಲೋಕದಳವು ಬಿಜೆಪಿ ಸಖ್ಯವನ್ನು ತೊರೆದು ಸಮಾಜವಾದಿ ಪಕ್ಷದ ತೆಕ್ಕೆಯಲ್ಲಿದೆ. ಪರಿಣಾಮವಾಗಿ ಸಮಾಜವಾದಿ ಪಕ್ಷಕ್ಕೆ ಇಲ್ಲಿನ ಎರಡೂ ಪ್ರಮುಖ ಸಮುದಾಯಗಳಾದ ಜಾಟ್ ಮತ್ತು ಮುಸ್ಲೀಮರ ಬೆಂಬಲ ಸಿಗುತ್ತಿದೆ. ಇದು ಬಿಜೆಪಿ ಚಿಂತೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ.
ಅಸಲೀ ವಿಷಯ ಏನೆಂದರೆ, ಒಂದೊಮ್ಮೆ ಈ ಹಂತದಲ್ಲಿ ಹಿಂದೂ-ಮುಸ್ಲೀಂ ವಿವಾದ ಚರ್ಚೆಯ ಮುನ್ನೆಲೆಗೆ ಬಂದಿದ್ದರೆ ಮುಸ್ಲಿಂ ಮತಗಳು ಇನ್ನಷ್ಟು ದಂಡಿಯಾಗಿ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳದ ಮೈತ್ರಿಕೂಟಕ್ಕೆ ಹೋಗುತ್ತಿದ್ದವು. ಈಗ ಇಲ್ಲಿ ಬಹುಜನ ಸಮಾಜವಾದಿ ಪಕ್ಷ ಅತಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ‘ಆಟ ಕೆಡಿಸುವ’ ತಂತ್ರ ಹೂಡಿದೆ. ಬಿಎಸ್ಪಿಯ ಮುಸ್ಲಿಂ ಅಭ್ಯರ್ಥಿಗಳು ಒಂದಿಷ್ಟು ಮತ ಪಡೆದಿರಲೂಬಹುದು. ಇದೇ ಕಾರಣಕ್ಕೆ ಬಿಜೆಪಿ ‘ಹಿಂದೂ-ಮುಸ್ಲೀಂ’ ವಿವಾದದ ಕಿಚ್ಚು ಹೊತ್ತಿಸಲು ಕೊಂಚ ಹಿಂಜರಿದಿತ್ತು. ಈಗ ಹೊಸ ಹತಾರುಗಳೊಂದಿಗೆ ಅಣಿಯಾಗಿದೆ.

ಸದ್ಯ ಬಿಜೆಪಿ ಮುಸ್ಲಿಂ ಸಮುದಾಯದಲ್ಲಿರುವ 4 ಮದುವೆಗಳ ಸಮಸ್ಯೆ ಬಗ್ಗೆ ಮಾತನಾಡಲು ಮುಂದಾಗಿದೆ. ಅಲ್ಲದೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ದೊರಕಿಸಿಕೊಡುವ, ದತ್ತು ಸ್ವೀಕಾರಕ್ಕೆ ಅವಕಾಶ ಕಲ್ಪಿಸಿಕೊಡುವ ಕೌಟುಂಬಿಕ ಕಾನೂನುಗಳನ್ನು ತರುವುದಾಗಿ ಹೇಳಲು ಮುಂದಾಗಿದೆ. ತ್ರಿಬಲ್ ತಲಾಖ್ ಕಾನೂನು ತಂದು ಮುಸ್ಲಿಂ ಮಹಿಳೆಯರ ಮತ ಪಡೆಯಲು ಮಾಡಿದಂತಹ ಪ್ರಯತ್ನ ಇದಲ್ಲ. ಇಂಥ ಕಾನೂನು ತರಲು ಮುಂದಾದರೆ ಮುಸ್ಲಿಂ ನಾಯಕರು (ಪುರುಷರು) ಬಿಜೆಪಿಯನ್ನು ವಿರೋಧಿಸುತ್ತಾರೆ. ಬಿಜೆಪಿಗೂ ಅದೇ ಬೇಕು.
ಏಕೆಂದರೆ ಒಮ್ಮೆ ಮುಸ್ಲಿಂ ನಾಯಕರು ಬಿಜೆಪಿ ವಿರುದ್ಧ ಮಾತನಾಡಲು ಶುರುಮಾಡಿದರೆ ಹಿಂದೂ ಮತಗಳ ಧ್ರುವೀಕರಣ ಆಗುತ್ತದೆ. ಅದರಲ್ಲೂ ಮುಂದಿನ ಹಂತಗಳಲ್ಲಿ ಚುನಾವಣೆ ನಡೆಯುವ ಅವಧ್ ಮತ್ತು ಪೂರ್ವಾಂಚಲದಲ್ಲಿ ಹಿಂದು ಮತಗಳು ಹೆಚ್ಚಿರುವುದರಿಂದ ಹಿಂದೂ ಧ್ರುವೀಕರಣದ ನೇರ ಲಾಭ ಬಿಜೆಪಿಗೆ ಆಗಲಿದೆ. ಇದರಿಂದ ಮೊದಲೆರಡು ಹಂತಗಳಲ್ಲಿ ಆಗಿರುವ ನಷ್ಟವನ್ನೂ ತುಂಬಿಕೊಳ್ಳಬಹುದು ಎನ್ನುವ ಲೆಕ್ಕಾಚಾರದ ಮೇರೆಗೆ ಹೊಸ ಹತಾರುಗಳಿಗೆ ಜೀವ ತುಂಬಲಾಗುತ್ತಿದೆ.
ಇದಲ್ಲದೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ‘ಬಿಜೆಪಿ ಅಧಿಕಾರಕ್ಕೆ ಬಂದರೆ, ಏಕರೂಪ ನಾಗರಿಕ ಸಂಹಿತೆಯ ಕರಡು ರಚಿಸಲು ಸಮಿತಿಯನ್ನು ರಚಿಸಲಾಗುವುದು’ ಎಂದು ಹೇಳಿದ್ದಾರೆ. ಬಹಿರಂಗ ಪ್ರಚಾರಕ್ಕೆ ಕಡೆಯ ದಿನ ಧಮಿ ಈ ಬಗ್ಗೆ ಮಾತನಾಡಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಒಂದೊಮ್ಮೆ ಬಿಜೆಪಿಗೆ ಈ ಬಗ್ಗೆ ಅಷ್ಟೊಂದು ‘ಕಾಳಜಿ’ ಇದ್ದರೆ ಉತ್ತರ ಪ್ರದೇಶದ ಚುನಾವಣಾ ಕಣದಲ್ಲೂ ವಿಷಯ ಪ್ರಸ್ತಾಪಿಸಬಹುದಿತ್ತು. ಮೊದಲ ಎರಡು ಹಂತಗಳ ದೃಷ್ಟಿಯಿಂದ ಬಿಜೆಪಿ ಯುಪಿಯಲ್ಲಿ ಈ ಬಗ್ಗೆ ಸೊಲ್ಲೆತ್ತಿರಲಿಲ್ಲ. ಈಗ ಅಗ್ರೆಸೀವ್ ಆಗಿ ‘ಕೋಮು ಕೆಣಕುವಿಕೆ’ಗೆ ತಯಾರಿಗಳಾಗಿವೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ ಚುನಾವಣಾ ಕಣದಲ್ಲಿ, ಅದೂ ಬಿಜೆಪಿಯೇ ಪ್ರಮುಖ ಪಕ್ಷವಾಗಿರುವ ಕಡೆ ಕೋಮು ವಿಷಯ ಚರ್ಚೆ ಆಗದಿರಲು ಹೇಗೆ ಸಾಧ್ಯ? ಈಗಾಗಲೇ ‘80% V/ 20%’ (80% ಹಿಂದುಗಳು-20% ಮುಸ್ಲಿಮರು), ಜಿನ್ನಾ ಮತ್ತು ಹಿಜಾಬ್ ವಿವಾದಗಳ ಬಗ್ಗೆ ಚರ್ಚೆಗಳು ನಡೆದಿವೆ. ಅದ್ಯಾಕೋ ಏನೋ ಬಿಜೆಪಿಗೆ ಇವುಗಳಿಂದ ಅದು ನಿರೀಕ್ಷಿಸಿದಷ್ಟು ಲಾಭವಾಗಿಲ್ಲ. ಜೊತೆಗೆ ಬಿಜೆಪಿ ಕೂಡ ಮೊದಲ ಎರಡು ಹಂತಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಹಳ ತೀಕ್ಷ್ಣವಾದ ಪ್ರಯತ್ನವನ್ನೇನೂ ಮಾಡಿಲ್ಲ. ಈಗ ಏಕರೂಪ ನಾಗರಿಕ ಸಂಹಿತೆ, ಬಹುಪತ್ನಿತ್, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಹಕ್ಕುಗಳ ವಿಷಯ ಪ್ರಖರವಾಗಿ ಚರ್ಚೆ ಆಗಲಿದೆ. ಕರ್ನಾಟಕದಲ್ಲಿ ಹಿಜಾಬ್ ವಿಷಯ ಹೆಚ್ಚು ಚರ್ಚೆಯಾದರೆ ಉತ್ತರ ಪ್ರದೇಶದಲ್ಲೂ ಕಾವು ಹೆಚ್ಚಿಸಲು ಪ್ರಯತ್ನಿಸಲಾಗುತ್ತದೆ. ಹೊಸ ಅಸ್ತ್ರಗಳು ಬಿಜೆಪಿಗೆ ಎಷ್ಟರಮಟ್ಟಿಗೆ ಉಪಯೋಗಕ್ಕೆ ಬರುತ್ತವೆ ಎಂಬುದನ್ನು ಕಾದುನೋಡಬೇಕು.






