ಯುವರತ್ನ ಪುನೀತ್ ರಾಜ್ ಕುಮಾರ್ ಸಾವು ಕರುನಾಡಿಗೆ ತುಂಬಲಾರದ ನಷ್ಟ. ಇಂದಿಗೆ ಅಪ್ಪು ಅಗಲಿ ಹತ್ತು ದಿನಗಳು ಕಳೆದಿವೆ. ಇದರ ನಡುವೆ ತಮ್ಮ ನೆಚ್ಚಿನ ನಟನನ್ನು ಪ್ರತಿಮೆಯ ಮೂಲಕ ಜೀವಂತವಿಡಲು ಅಭಿಮಾನಿಗಳು ಮುಂದಾಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಅಪ್ಪು ಪುತ್ಥಳಿ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿದೆ.
ನಗರದ ಹಲವು ಶಿಲ್ಪಿಗಳಿಗೆ ಅಪ್ಪು ಪ್ರತಿಮೆ ನಿರ್ಮಿಸಿಕೊಡುವಂತೆ ಮನವಿ!
ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎನ್ನುವುದನ್ನು ಈಗಲೂ ಅರಗಿಸಿಕೊಳ್ಳಲು ಅಭಿಮಾನಿಗಳಿಂದ ಸಾಧ್ಯವಿಲ್ಲ. ಹೀಗಾಗಿ ಅಪ್ಪುವನ್ನು ಪ್ರತಿಮೆಯ ಮೂಲಕ ಇನ್ನುಳಿದ ಕಾಲ ಬದುಕಿಸಲು ಅಭಿಮಾನಿಗಳು ನಿರ್ಧರಿಸಿದಂತಿದೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಅಪ್ಪು ಪುತ್ಥಳಿ ನಿರ್ಮಾಣಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೌದು, ಬೆಂಗಳೂರಿನಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ಬೇಡಿಕೆ ಹೆಚ್ಚಿದೆ. ಪುನೀತ್ ಅಗಲಿ ಒಂದು ವಾರದಲ್ಲೇ ಅಪ್ಪು ಪ್ರತಿಮೆಗೆ ನಗರದಲ್ಲಿ ಬಹು ಬೇಡಿಕೆ ಶುರುವಾಗಿದೆ. ಅಪ್ಪು ನಿಧನದ ಒಂದೇ ವಾರದಲ್ಲಿ ನಗರದಲ್ಲಿ 100ಕ್ಕೂ ಅಧಿಕ ಪುತ್ಥಳಿಗೆ ಕೋರಿಕೆ ಹೆಚ್ಚಾಗಿದೆ. ಬಿಬಿಎಂಪಿ ಆವರಣದಲ್ಲೂ ಯುವರತ್ನ ಪುನೀತ್ ರಾಜ್ ಕುಮಾರ್ ಪುತ್ಥಳಿ ಸ್ಥಾಪನೆಗೆ ಮನವಿ ಮಾಡಿಕೊಳ್ಳಲಾಗಿದೆ. ಬಿಬಿಎಂಪಿ ಕಾರ್ಮಿಕರ ಸಂಘಟನೆಯಿಂದ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾಗೆ ಮನವಿ ಮಾಡಲಾಗಿದೆ. ಡಾ. ರಾಜ್ ಕುಮಾರ್ ಪ್ರತಿಮೆ ಪಕ್ಕದಲ್ಲೇ ಇರುವ ಜಾಗದಲ್ಲಿ ಮೂರು ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲು ಒತ್ತಾಯ ಕೇಳಿ ಬಂದಿದೆ.

ಬೆಂಗಳೂರಿನಲ್ಲಿ ಹಲವು ಸಂಘ ಸಂಸ್ಥೆಗಳಿಂದ ಹೆಚ್ಚಿದ ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ಬೇಡಿಕೆ!
ಇನ್ನು ಬೆಂಗಳೂರಿನ ಹೆಸರಾಂತ ಶಿಲ್ಪಿ ಶಿವದತ್ತ ಎಂಬವರಿಗೆ 20ಕ್ಕೂ ಹೆಚ್ಚು ಪ್ರತಿಮೆ ನಿರ್ಮಿಸುವಂತೆ ಆರ್ಡರ್ ಬಂದಿದೆಯಂತೆ. ನಗರದ ಕತ್ರಿಗುಪ್ಪೆಯಲ್ಲಿರುವ ಸ್ತಪತಿ ಕ್ರಿಯೇಷನ್ಸ್ ನ ಮಾಲೀಕ ಶಿವದತ್ತ ಅವರಿಗೆ ಈಗಾಗಲೇ 20ಕ್ಕೂ ಅಧಿಕ ಪುನೀತ್ ರಾಜ್ ಕುಮಾರ್ ಪ್ರತಿಮೆಗೆ ಬೇಡಿಕೆ ಬಂದಿದೆ. ಇದರ ಜೊತೆಗೆ ಆರ್ ಆರ್ ನಗರದ ಆಕಾರದ ಮಾಲೀಕ ಶಿಲ್ಪಿ ಶಿವಕುಮಾರ್ ಗೂ 60 ಪುತ್ಥಳಿ ನಿರ್ಮಿಸುವಂತೆ ಬೇಡಿಕೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪೋಟ್ರಯೇಟ್ ಬಸ್ಟ್ ಕಲಾವಿದ ಶಿವಕುಮಾರ್, ನನಗೆ 60ಕ್ಕೂ ಅಧಿಕ ಪ್ರತಿಮೆ ನಿರ್ಮಿಸುವಂತೆ ಹಲವರು ಕೇಳಿಕೊಂಡಿದ್ದಾರೆ. ಈ ಅಲ್ಪವಾಧಿಯಲ್ಲಿ ಅಷ್ಟು ಪ್ರತಿಮೆ ತಯಾರಿಸುವುದು ಸಾಧ್ಯವೇ ಎಂಬುವುದು ಗೊತ್ತಿಲ್ಲ. ಆದರೆ ಆದಷ್ಟು ಪ್ರತಿಮೆ ತಯಾರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಒಟ್ಟಾರೆ ಪುನೀತ್ ರಾಜ್ ಕುಮಾರ್ ಅಗಲಿ ಒಂದು ವಾರ ದಾಟುತ್ತಿದ್ದಂತೆ ಅವರ ಪ್ರತಿಮೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಚ್ಚು ಕಮ್ಮಿ ಈಗಾಗಲೇ ನಗರದಲ್ಲಿ ನೂರಕ್ಕೂ ಅಧಿಕ ಪುತ್ಥಳಿಗೆ ಬೇಡಿಕೆ ಬಂದಿದೆ. ಆದರೆ ಪ್ರತಿಮೆ ಸ್ಥಾಪನೆಗೆ ವಿಘ್ನ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಹೈ ಕೋರ್ಟ್ ಅನಧಿಕೃತ ಜಾಗದಲ್ಲಿ ಇರುವ ಇತರರ ಪ್ರತಿಮೆಯನ್ನು ತೆರವು ಮಾಡಲು ಸೂಚಿಸಿದೆ. ಆದರೆ ಈಗ ಅಪ್ಪು ಪ್ರತಿಮೆ ಪ್ರತಿಷ್ಠಾಪನೆ ವಿಚಾರ ಮುನ್ನಲೆಗೆ ಬಂದಿತ್ತು, ಏನಾಗುತ್ತೆ ಎಂಬುವುದನ್ನು ಕಾದು ನೋಡಬೇಕಿದೆ.






