ಪಿರಿಯಾಪಟ್ಟಣ: ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೇಂಟ್ ಮೇರಿ ಚರ್ಚ್ ಒಳ ನುಗ್ಗಿ ಆವರಣದಲ್ಲಿನ ಬಾಲ ಯೇಸುವಿನ ಪ್ರತಿಮೆ ಹಾಗೂ ಪೀಠೋಪಕರಣ ದ್ವಂಸಗೊಳಿಸಿ ಮೈಕ್ ಹಾಗೂ ಹುಂಡಿ ಕಳವು ಮಾಡಿರುವ ಘಟನೆ ಜರುಗಿದೆ.
ಮಂಗಳವಾರ ಬೆಳಗಿನ ಪೂಜೆಯ ನಂತರ ಚರ್ಚ್ ಫಾದರ್ ಜಾನ್ ಪೌಲ್ ಕರ್ತವ್ಯ ನಿಮಿತ್ತ ಮೈಸೂರಿಗೆ ತೆರಳಿದ್ದರು, ಚರ್ಚ್ ನಲ್ಲಿ ಕೆಲಸಕ್ಕೆ ಇದ್ದ ಮಹಿಳೆಯು ಸಹ ರಜೆ ನಿಮಿತ್ತ ಮನೆಗೆ ತೆರಳಿದ್ದರು ಸಂಜೆ 6 ಸಮಯದಲ್ಲಿ ಚರ್ಚ್ ನ ಸಿಬ್ಬಂದಿ ರಾಜಣ್ಣ ಎಂಬುವವರು ಚರ್ಚ್ ಗೆ ಲೈಟ್ ಹಾಕಲು ಬಂದಾಗ ಚರ್ಚ್ ಹಿಂಭಾಗದ ಬಾಗಿಲು ತೆರೆದಿರುವುದು ಹಾಗೂ ಹೂ ಕುಂಡ ಒಡೆದು ಹಾಕಿರುವುದು ಗಮನಕ್ಕೆ ಬಂದಿದೆ, ಆತಂಕಗೊಂಡ ರಾಜಣ್ಣ ಕೂಡಲೇ ಚರ್ಚ್ ನ ಲೈಟ್ ಹಾಕಿ ಗಮನಿಸಿದಾಗ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಚರ್ಚ್ ನ ಒಳಭಾಗದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ಬಾಲ ಯೇಸುವಿನ ತೊಟ್ಟಿಲು ಮತ್ತು ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ಬಾಲಯೇಸುವಿನ ತೊಟ್ಟಿಲನ್ನು ವೇದಿಕೆಯ ಮೇಲಿಂದ ಮುಂಭಾಗಕ್ಕೆ ಬಿಸಾಕಿರುವುದು ಕಂಡುಬಂದಿದೆ, ಬಾಲ ಯೇಸುವಿನ ಪ್ರತಿಮೆಯೊಂದಿಗೆ ಅಲಂಕಾರಕ್ಕೆ ಜೋಡಿಸಲ್ಪಟ್ಟಿದ್ದ ಗಾಜಿನ ಪದಾರ್ಥಗಳನ್ನು ಸಹ ಎಲ್ಲೆಂದರಲ್ಲಿ ಎಸೆದು ಹೋಗಿದ್ದಾರೆ, ಕಿಡಿಗೇಡಿಗಳು ಚರ್ಚ್ ನ ಹೊರಭಾಗದಲ್ಲಿ ನಿರ್ಮಿಸಲಾಗಿರುವ ಬಾಲ ಯೇಸುವಿನ ಪ್ರತಿಮೆ ಮುಂಭಾಗದಲ್ಲಿದ್ದ ಹೂ ಕುಂಡ ಗಳನ್ನು ಒಡೆದು ಹಾಕಿ ಸಮೀಪದಲ್ಲಿಯೇ ಇದ್ದ ಹಣದ 3 ಹುಂಡಿಯನ್ನು ಕದ್ದೋಯ್ದಿದ್ದಾರೆ, ಚರ್ಚ್ ಮತ್ತೊಂದು ಬದಿಯ ಬಾಗಿಲನ್ನು ತೆರೆಯಲು ಪ್ರಯತ್ನಿಸಿರುವ ದುಷ್ಕರ್ಮಿಗಳು ದೊಡ್ಡ ಇಟ್ಟಿಗೆಯಿಂದ ಬಾಗಿಲನ್ನು ಒಡೆಯುವ ಪ್ರಯತ್ನ ಮಾಡಿರುವುದು ಕಂಡು ಬಂದಿದೆ.
ಘಟನೆ ಸಂಭಂದ ಚರ್ಚ್ ಫಾದರ್ ಜಾನ್ ಪೌಲ್ ಅವರು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಘಟನಾ ಸ್ಥಳಕ್ಕೆ ಇನ್ಸ್ಪೆಕ್ಟರ್ ಶ್ರೀಧರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.








